ಲಾವಣ್ಯ ಎಂಬ ಬಾಲ್ಯದ ಗೆಳತಿ

By | November 20, 2010
Mobile Apps Category (English)234x60

curtecy: internet, http://mi9.com/

ಮೊನ್ನೆ ನನ್ನ ರಿಲೇಷನ್‌ ಹುಡುಗಿ ಮಮತಾ ಸಿಕ್ಕಾಗ ಸುಮ್ಮಗೆ ಕೇಳಿದ್ದೆ? ಲಾವಣ್ಯ ಹೇಗಿದ್ದಾಳೆ ಅಂತ? ಅವಳಿಗೆ ಎಷ್ಟು ಅಚ್ಚರಿಯಾಯಿತೆಂದರೆ

`ನೀನಿನ್ನೂ ಅವಳನ್ನು ಮರೆತಿಲ್ವಾ? ಅಂತ ಕೇಳಿ ಆಮೇಲೆ `ಅವಳಿಗೆ ಮದುವೆಯಾಗಿದೆ. ಗಂಡ ಮಿಲಿಟರಿಯಲ್ಲಿದ್ದಾನೆ’ ಅನ್ನೋ ಬಾಂಬ್‌ ಕೂಡ ಹಾಕಿದಳು. ಆದರೆ ಆ ಬಾಂಬ್‌ ಸ್ಪೋಟಗೊಂಡಿರಲಿಲ್ಲ.

ಯಾಕೆಂದರೆ ಅದು ನನ್ನ ಐದನೇ ಕ್ಲಾಸ್‌ನಲ್ಲಿ ನಡೆದ ಲವ್‌!ಹೌದು. ಆಗ ಪ್ರೀತಿ ಪ್ರೇಮ ಪ್ರಣಯ ಅಂದ್ರೆ ಏನಂತ ಸರಿಯಾಗಿ ಗೊತ್ತಿರದ ವಯಸ್ಸು. ನನ್ನ ತಂದೆ ಮದುವೆಯಾದ ನಂತರ ಮಡಿಕೇರಿ ಎಂಬ ಊರನ್ನು ಬಿಟ್ಟು ಪುತ್ತೂರಲ್ಲಿ ನೆಲೆ ನಿಂತವರು. ಹೀಗಾಗಿ ಎಷ್ಟೋ ವರ್ಷಗಳಿಗೊಮ್ಮೆ ಅಜ್ಜಿ ಮನೆ ನೆಪದಲ್ಲಿ ಮಡಿಕೇರಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಯಾಕೋ ಗೊತ್ತಿಲ್ಲ ಮಡಿಕೇರಿಯಲ್ಲಿ ಅತ್ತೆ ಮನೆಗೆ ಹೋಗುವುದೆಂದರೆ ಭಾರಿ ಖುಷಿ. ಅಲ್ಲಿ ಮನು ಮಮತನೊಂದಿಗೆ ಆಟವಾಡುವ ಖುಷಿನೋ ಗೊತ್ತಿಲ್ಲ. ಹೀಗೆ ನಾನು ಸಣ್ಣವನಿದ್ದಾಗ ಅಂದ್ರೆ 5ನೇ ಕ್ಲಾಸ್‌ನಲ್ಲಿ ಮಡಿಕೇರಿಯ ಅಮ್ಮತಿ ಎಂಬಲ್ಲಿಗೆ ಹೋಗಿದ್ದೆ. ಅದು ನನ್ನ ಅತ್ತೆಯ ಮನೆ. ಅಂದ್ರೆ ಅಪ್ಪನ ತಂಗಿ ಮನೆ.

ಆ ಮನೆಯ ಪಕ್ಕದ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೇವು. ಆ ಮನೆಗೆ ಲಾವಣ್ಯ ಎಂಬ ಆರನೇ ಕ್ಲಾಸ್‌ನ ಹುಡುಗಿ ಕೂಡ ನಮ್ಮ ತರಹನೇ ನೆಂಟರ ಮನೆಗೆಂದು ಬಂದಿದ್ದಳು. ಮೊದಲ ದಿನವೇ ನನಗವಳು ಇಷ್ಟ(?)ವಾಗಿದ್ದಳು. ಆದರೆ ಒಂದೆರಡು ದಿನ ಸುಮ್ಮನೆ ಸೈಲೆಂಟಾಗಿ ಬಿಟ್ಟಿದಳು. ಮೊದಲು ಅವಳು ಹೇಗಿದ್ದಳು ಅಂತ ವಿವರಿಸಬೇಕು. ಅವರ ಮನೆಯವರು ಒಂದಿಷ್ಟು ಶ್ರೀಮಂತರಾಗಿರಬೇಕು. ತುಂಬಾ ಮಾಡರ್ನ್‌ ಆಗಿದ್ದಳು. ಪುಟ್ಟ ಚಡ್ಡಿ, ಕಿವಿಯಲ್ಲಿ ಪುಟ್ಟದಾದ ಎರಡು ಓಲೆಗಳು. ಬಿಳಿ ಬಣ್ಣ. ಮುದ್ದು ಮುಖ. ಕ್ಷಮಿಸಿ ಹೆಚ್ಚು ನೆನಪಿಲ್ಲ!ಒಂದೆರಡು ದಿನಗಳಲ್ಲಿ ಊರಿಂದ ಬಂದ ನನ್ನೊಂದಿಗೆ ತುಂಬಾ ಆತ್ಮೀಯಳಾಗಿಬಿಟ್ಟಳು. ಎಷ್ಟೆಂದರೆ ಉಳಿದ ಮಕ್ಕಳಿಗೆ ಅಸೂಯೆಯಾಗುವಷ್ಟು. ಆ ಗದ್ದೆ ಬದುಗಳಲ್ಲಿ, ರಸ್ತೆಯ ಬದಿಯಲ್ಲಿ ಸುಮ್ಮಗೆ ನಡೆಯುತ್ತಿದ್ದೇವು. ಆ ನಾಲ್ಕು ದಿನದಲ್ಲಿ ಎಷ್ಟು ಸುತ್ತಾಡಿದ್ದೇವೆ, ಎಷ್ಟು ಮಾತನಾಡಿದ್ದೇವೆ ಅಂದ್ರೆ ಹೇಳೋಕ್ಕಾಗಲ್ಲ.

ನಿಮಗೀಗ ಕೋಪ ಬಂದಿರಬಹುದು. ಬಾಲ್ಯದ ಮಕ್ಕಳ ಆಟವನ್ನು ಲವ್‌ ಅನ್ನೋ ಹೆಸರಿನಲ್ಲಿ ಕರೆದ ನನ್ನದ್ದು ಉದ್ದಟ್ಟತನದ ಪರಮಾವಧಿ ಅಂತ ಕರೀಬೇಡಿ. ಕತೆ ಮುಗಿದಿಲ್ಲ. ಅದೊಂದು ದಿನ ಮನೆಯಲ್ಲಿ ಯಾರಿಲ್ಲ ಅಂತ ತಿಳಿದುಕೊಂಡು ನಾವಿಬ್ಬರು ಮನೆಯ ಜಗಲಿಯಲ್ಲಿ ಕುಳಿತು ಮಾತನಾಡುತ್ತಿದ್ದೇವು. ಅದು ಏನು ಗೊತ್ತಾ? ನಮ್ಮ ಮದುವೆಯ ವಿಷ್ಯ! ನಾವು ಮದುವೆಯಾಗೋಣ. ಜೀವನ ಪೂರ್ತಿ ಒಟ್ಟಿಗೇ ಇರೋಣ, ನಾನು ನಿನ್ನನ್ನು ಕೊನೆವರೆಗೂ ಜೊತೆಯಾಗಿರ್ತಿನಿ, ಮದುವೆಯಾದ್ಮೆಲೆ ಜಗಳವಾಡಬಾರದು, ಯಾವ ಕಲ್ಯಾಣಮಂಟಪದಲ್ಲಿ ಮದುವೆಯಾಗೋದು….

ಹೀಗೆ ಒಂದಿಷ್ಟು ಕನಸು ಕಾಣುತ್ತ ಮಾತನಾಡಿದ್ದೇವು. ಆಮೇಲೆ ಏನೋ ಜ್ಞಾನೋದಯವಾದಂತೆ `ಹೇ ಬೇಡ ಇಷ್ಟು ಬೇಗ ಮದುವೆಯಾಗೋದು. ನಾವು ಚೆನ್ನಾಗಿ ಓದಿ, ಒಳ್ಳೆ ಕೆಲಸಕ್ಕೆ ಸೇರಿ, ದೊಡ್ಡ ಜನವಾಗಿ ಆಮೇಲೆ ಮದುವೆಯಾಗೋಣ. ಹೀಗೆ ತುಂಬಾ ಮುಗ್ಧವಾಗಿ ಮಾತನಾಡುತ್ತಿದ್ದೇವು.ಹೀಗೆ ಆ ಜಗಲಿಯ ಮಾತು ಮುಗಿಸಿ ಮತ್ತೆ ಆಡಲು ಗದ್ದೆ ಬದಿಗೆ ಹೋದೆವು.

ಆಮೇಲೆ ಸಂಜೆ ಮರಳಿದಾಗ ಅದೇ ಜಗಲಿಯಲ್ಲಿ ಮಾವ, ಅತ್ತೆ, ಅಜ್ಜಿ, ಅಜ್ಜ ಎಲ್ಲ ಕೂತು ನಗಾಡುತ್ತಾ ಮಾತನಾಡುತ್ತಿದ್ದರು.ಆಮೇಲೆ ಗೊತ್ತಾಯಿತು. ನಾವಿಬ್ಬರು ಮಧ್ಯಾಹ್ನ ಮದುವೆ ಮಾತುಕತೆಯಾಡುವಾಗ ಅಜ್ಜಿ ಒಳಗೆ ಮಲಗಿಕೊಂಡಿದ್ದಾರಂತೆ. ಅವರೆಲ್ಲ ನಾವು ಹೇಳಿದ ರೀತಿಯೇ ಹೇಳಿ ನಗುತ್ತಿದ್ದರು.

ಆಮೇಲೆ ಇವಳನ್ನು ಮದುವೆಯಾಗ್ತಿಯಾ? ಅಪ್ಪನಿಗೆ ಫೋನ್‌ ಮಾಡಿ ಹೇಳಬೇಕಾ? ಅಂತ ಅತ್ತೆ ತಮಾಷೆ ಮಾಡತೊಡಗಿದಾಗ ಅವಳು ಅತ್ತಳು. ಯಾಕೋ ಗೊತ್ತಿಲ್ಲ ನಾನು ಅಳಲಿಲ್ಲ.

😮

 

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ  ಓದುವುದು, ಬರೆಯುವುದು ಇಷ್ಟದ ಕೆಲಸ. ಹೆಚ್ಚಿನ ವಿವರಕ್ಕೆ ನನ್ನ ಬಗ್ಗೆ ಪುಟವನ್ನು ನೋಡಿ