ಸೃಷ್ಟಿ

By | September 4, 2010
Mobile Apps Category (English)234x60

curtesy: http://www.diyanazman.com/2008/01/19/the-birth-of-our-blog-baby/

ಸೃಷ್ಟಿಕರ್ತ ತನ್ನ ಚೆಲುವಾದ ಪತ್ನಿಯೊಂದಿಗೆ ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿದ್ದ. `ಸಖ ಅಲ್ಲಿ ಕಾಣುವ ಆ ಗ್ರಹದಲ್ಲಿ ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆಯೋಣವೇ?’ ಸಖಿಯ ಬಯಕೆಯರಿತ ಸೃಷ್ಟಿಕರ್ತ ತನ್ನ ವಾಹನವನ್ನು ಆ ಗ್ರಹದಲ್ಲಿ ಇಳಿಸಿದನು. ಅವರಿಬ್ಬರು ತುಂಬಾ ಹೊತ್ತು ಅಲ್ಲಿ ವಿಶ್ರಾಂತಿ ಪಡೆದು ಇನ್ನೇನೂ ಹೋಗಬೇಕೆಂದು ಎದ್ದಾಗ ಸಖಿ ಹೇಳಿದಳು. ನಾಥ ನಾವಿಲ್ಲಿ ವಿಶ್ರಾಂತಿ ಪಡೆದ ನೆನಪಿಗೆ ಏನಾದರೂ ಮಾಡಬಾರದೇ. ಸೃಷ್ಟಿಕರ್ತನಿಗೂ ಅದು ಸರಿಯೆನಿಸಿತು. ಒಂದು ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದ. ಅವರ ವಾಸಕ್ಕೆ ಅನುಕೂಲವಾಗುವಂತಹ ವಾತಾವರಣ, ನೀರು, ಕಾಡು, ಪ್ರಾಣಿ ಪಕ್ಷಿಗಳನ್ನು ಸೃಷ್ಟಿಸಿ ತಮ್ಮ ಲೋಕಕ್ಕೆ ಮರಳಿದರು.
******

`ಯ್ಯೋ` ಈಟಿಯಂತಹ ಆಯುಧವನ್ನು ಹಿಡಿದ ಆ ವ್ಯಕ್ತಿ ಗರ್ಜಿಸಿದ. ಆಕೆ ನಿಂತಳು. ಅವಳನ್ನೇ ನೋಡುತ್ತ ನಿಂತ. ಅವಳು ಕೂಡ ಆಕ್ರಮಣಕ್ಕೆ ಸಿದ್ಧವಾಗಿಯೇ ಇದ್ದಳು. ಆತ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಏನೋ ಕಸಿವಿಸಿ ಉಂಟಾಯಿತು. ತನ್ನ ಕೈಯಲ್ಲಿದ್ದ ಈಟಿಯನ್ನು ಬಿಸಾಕಿ ಅವಳನ್ನು ನೋಡುವುದರಲ್ಲೇ ಮಗ್ನನಾದ. ತಕ್ಷಣ ಹಿಂದೆ ಹೊಂಚುಹಾಕುತ್ತಿದ್ದ ಕ್ರೂರ ಪ್ರಾಣಿಯೊಂದು ಅವಳ ಮೇಲೆರಗಿ ಇನ್ನೇನೂ ಅವಳನ್ನು ಕಚ್ಚಿ ಕೊಂಡೊಯ್ಯಬೇಕೆನ್ನುವಷ್ಟರಲ್ಲಿ.. ಆತ ಕಾಡೇ ಉರುಳಿ ಹೋಗುವಂತೆ ಕಿರುಚಿ ಅದರ ಮೇಲೆ ಆಕ್ರಮಣ ಮಾಡಿದ. ಆ ಪ್ರಾಣಿ ಸತ್ತು ನೆಲಕ್ಕೆ ಉರುಳಿತು. ಅವಳು ಕಣ್ಣಲ್ಲೆ ಧನ್ಯವಾದ ಹೇಳಿದಳು. ಅವನಿಗೆ ಅವಳ ಕಣ್ಣನ್ನೇ ನೋಡುವುದರಲ್ಲಿ ಏನೋ ಹಿತ. ಮತ್ತೆ ಮತ್ತೆ ನೋಡಿದ. ಅವಳು ಕೂಡ ನೋಡಿದಳು. ಮೈಮರೆತರು. ಅವಳನ್ನು ಎತ್ತಿಕೊಂಡು ತನ್ನ ಗುಹೆಗೆ ಹೋದ. ವರುಷಗಳು ಉರುಳಿದವು. ಅವರ ಮಿಲನವೂ ಆಯಿತು. ಹಲವು ಮಕ್ಕಳು ಜನಿಸಿದರು.

**********
ಏನೋ ಹುಡುಕಾಟ. ಎಲ್ಲರಲ್ಲೂ. ಒಬ್ಬರೊಬ್ಬರು ಒಂದೊಂದು ದಿಕ್ಕಿಗೆ ಹೋದರು. ಮತ್ತೆ ದಾರಿಯಲ್ಲಿ ಒಂದಾದರು. ತಾವು ಅಣ್ಣ ತಂಗಿ, ಅಕ್ಕ ತಮ್ಮ ಅನ್ನೋದು ತಿಳಿಯದೇ ಒಂದಾದರು. ಮತ್ತೆ ಮಕ್ಕಳಾದವು. ಹೀಗೆ ಆ ಗ್ರಹದಲ್ಲಿ ಮನುಷ್ಯರು ತುಂಬಿಕೊಂಡರು. ಅನ್ವೇಷನೆ ಆರಂಭವಾಯಿತು. ಬೆಂಕಿ ಕಬ್ಬಿಣದಿಂದ ಕಂಪ್ಯೂಟರ್‌ ಮೊಬೈಲ್‌ವರೆಗೂ ಅನ್ವೇಷನೆ ಮುಂದುವರೆಯಿತು. ಬೇರೆ ಬೇರೆ ಗ್ರಹಗಳತ್ತಲೂ ಆಸಕ್ತಿ ವಹಿಸಿದರು. ದೇಶದೇಶಗಳಾದವು. ಯುದ್ಧಗಳಾದವು. ಜಾತಿ, ವರ್ಗ, ಸಂಘರ್ಷಗಳಾದವು.
******
ಸೃಷ್ಟಿಕರ್ತ ತನ್ನ ಸಖಿಯೊಂದಿಗೆ ಮತ್ತೆ ಅದೇ ಜಾಗಕ್ಕೆ ಬಂದ. `ತುಂಬಾ ಕಿರಿಕಿರಿಯಾಗುತ್ತಿದೆ’ ಸಖಿ ಹೇಳಿದಳು. `ಹೌದು ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಮರಿಮರಿಮಕ್ಕಳು ಪರಸ್ಪರ ಹೊಡೆದಾಡುತ್ತಿದ್ದಾರೆ’ಸೃಷ್ಟಿಕರ್ತನೂ ಧ್ವನಿಗೂಡಿಸಿದ.

ಸಖ ನಾವು ಸೃಷ್ಟಿ ಮಾಡಿದ ತಪ್ಪಿಗೆ ಪ್ರಾಯಶ್ಚಿತವಿದೆಯಾ? ಸಖಿಯ ಪ್ರಶ್ನೆಗೆ ಸೃಷ್ಟಿಕರ್ತ ಗಾಢವಾದ ಚಿಂತೆಯಲ್ಲಿ ಮುಳುಗಿದ. ಏನಾದರೂ ಮಾಡಲೇಬೇಕು ಎಂದು ಇಬ್ಬರು ಮಾರುವೇಷದಲ್ಲಿ ಊರು ಊರು ಸುತ್ತಿದ್ದರು. ಹಿರಿಯರೊಂದಿಗೆ ಮಾತನಾಡಿದರು. ಸಿಕ್ಕಿದವರಿಗೆ ಬುದ್ಧಿ ಹೇಳಿದರು. ಯಾರೋ ಹುಚ್ಚರು ಎಂಬಂತೆ ಇವರನ್ನು ಎಲ್ಲರೂ ನೋಡಿದರು.
***
ಯುರೇಕಾ ಸೃಷ್ಟಿಕರ್ತ ಕೂಗಿದ. ನಾವು ಈ ಜನರನ್ನು ಟೆಕ್ನಾಲಜಿ ಮೂಲಕ ಎಚ್ಚರಿಸೋಣ ಎಂದಾಗ ಸಖಿ ಕಣ್ಣರಳಿಸಿದರು. ಸೃಷ್ಟಿಕರ್ತ ಇಂಟರ್‌ನೆಟ್‌ಕೆಪೆಗೆ ಹೋಗಿ ಸೃಷ್ಟಿಯ ಕತೆಯನ್ನು ಎಲ್ಲರಿಗೂ ತಲುಪುವಂತೆ ಪಾರ್ವಡ್‌ ಮಾಡಿದ. ಸಖಿ ಮೊಬೈಲ್‌ ತೆಗೆದುಕೊಂಡು ಎಲ್ಲರಿಗೂ ಮೆಸೆಜ್‌ ಕಳುಹಿಸಿದಳು.
****curtesy: http://www.fivetechnology.com
ನನ್ನ ಮೊಬೈಲ್‌ಗೂ ಆ ಸಂದೇಶ ಬಂದಿದೆ. ನಿಮಗೆ ಬಾರದಿದ್ದರೆ `ನಾವೆಲ್ಲ ಒಂದೇ ತಾಯಿ ಮಕ್ಕಳು’ ಎಂದು ಬರೆದು ಕಳುಹಿಸಿ’
*
ಪ್ರೀತಿಯಿಂದ
ಪ್ರವೀಣ ಚಂದ್ರ

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ  ಓದುವುದು, ಬರೆಯುವುದು ಇಷ್ಟದ ಕೆಲಸ. ಹೆಚ್ಚಿನ ವಿವರಕ್ಕೆ ನನ್ನ ಬಗ್ಗೆ ಪುಟವನ್ನು ನೋಡಿ