ಹನಿಕಥೆ: ಕೂಗು

“ಗಂಡಸ್ರನ್ನ ಯಾವತ್ತೂ ನಂಬಬಾರದು” ಮತ್ತೊಮ್ಮೆ ಗೊಣಗಿಕೊಂಡಳು.ಪ್ರೀತಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟನಲ್ಲ, ಎಷ್ಟೊಂದು ನಂಬಿಬಿಟ್ಟೆ ಅವನನ್ನು….ಹಾಗಂತ ಅವಳು ಯೋಚಿಸುತ್ತಿರುವಾಗಲೇ “ಮಹೂರ್ತಕ್ಕೆ ಹೆಚ್ಚು ಸಮಯವಿಲ್ಲ. ಹುಡುಗಿನ ಕರೆತನ್ನಿ” ಎಂಬ ಪುರೋಹಿತರ ಧ್ವನಿ ಆಕೆಯನ್ನು ಎಚ್ಚರಿಸಿತು.

ಹಿರಿಯರನ್ನು ಅನುಸರಿಸಿಕೊಂಡು ಹೋಗಿ ಹಸೆ ಮೇಲೆ ಕುಳಿತು ಮೆಲ್ಲಗೆ ಗಂಡಿನ ಮುಖ ನೋಡಿದಳು. “ತುಂಬಾ ಮುಗ್ದನಂತೆ ಕಾಣುತ್ತಾನೆ, ಎಲ್ಲಾ ಮರೆತು ಇವನ್ನೊಂದಿಗೆ ಚೆನ್ನಾಗಿ ಬಾಳಬೇಕು” ಎಂದುಕೊಂಡಳು. ಆಗ “ಅಮ್ಮಾ” ಎಂದು ಯಾರೋ ಕರೆದಂತಾಯಿತು. ಸುತ್ತಮುತ್ತ ನೋಡಿದಳು. ಯಾವುದೇ ಮಗು ಇರಲಿಲ್ಲ.

ಮತ್ತೊಮ್ಮೆ ಮಗದೊಮ್ಮೆ ಅದೇ ಧ್ವನಿ “ಅಮ್ಮಾ.. ಅಮ್ಮಾ…”. ಇದೇನು ಭ್ರಾಂತಿ ಅಂದುಕೊಂಡವಳ ಹೊಟ್ಟೆಯೊಳಗೆ ಯಾರೋ ಒದ್ದಾಂತಾಯಿತು. ಅಮ್ಮಾ..

—————

“ಪ್ರೇಮತಾಣ” ಹನಿಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಹೆಮ್ಮೆ ಈ ಪುಟ್ಟ ಕಥೆಗೆ. ಜನಪ್ರಿಯ ಕಥೆಗಾರ ಪ್ರೇಮಶೇಖರ ಈ ಕಥೆಗೆ ಬಹುಮಾನ ನೀಡಿ ವಿಮರ್ಶಿಸಿದ್ದು ಹೀಗೆ. “ಪ್ರವೀಣ ಚಂದ್ರ ಅವರ “ಕೂಗು” ಸಹಾ ಒಂದು ಒಳ್ಳೆಯ ಪ್ರಯತ್ನ.

ತನಗೆ ಮೋಸ ಮಾಡಿದವನ ಬಗ್ಗೆಅತೀವ ತಿರಸ್ಕಾರ ಕುದಿಯುತ್ತಿರುವಾಗಲೇ ತಾನೇ ಮತ್ತೊಬ್ಬನಿಗೆ ಮೋಸ ಮಾಡಹೊರಟಿರುವ ಸತ್ಯಕಥಾನಾಯಕಿಯ ಅರಿವಿಗೆ ನಿಲುಕುತ್ತದೆ.

ಇದು ಕಥಾನಾಕಿಯನ್ನಷ್ಟೇ ಅಲ್ಲ, ಓದುಗರನ್ನೂ ಬೆಚ್ಚಿಸುತ್ತದೆ.”

ಜನಪ್ರಿಯ ಕಥೆಗಾರರೊಬ್ಬರು ಬೆನ್ನುತಟ್ಟಿದಾಗ ಆಗುವ ಖುಷಿಯ ಅನುಭವ ಅನನ್ಯ ನಾನು ಪುಳಕಗೊಂಡೆ 🙂

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ  ಓದುವುದು, ಬರೆಯುವುದು ಇಷ್ಟದ ಕೆಲಸ. ಹೆಚ್ಚಿನ ವಿವರಕ್ಕೆ ನನ್ನ ಬಗ್ಗೆ ಪುಟವನ್ನು ನೋಡಿ