ಯೋಗ ಶಿಕ್ಷಣದಿಂದ ಉದ್ಯೋಗಾವಕಾಶ

By | 13/05/2018

ವಿಶ್ವಸಂಸ್ಥೆಯ ಸದಸ್ಯತ್ವ ಪಡೆದ 177 ದೇಶಗಳಲ್ಲಿ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆ `ಯೋಗ’ದ ಹವಾ ಆವರಿಸಿದೆ. ಯೋಗವನ್ನು ಕರಿಯರ್ ಆಯ್ಕೆ ಮಾಡಿಕೊಂಡವರಿಗೆ ಬೇಡಿಕೆಯೂ ಹೆಚ್ಚಾಗಿದೆ. ಯೋಗದಿಂದ ಯಾವೆಲ್ಲ ಉದ್ಯೋಗ ಪಡೆಯಬಹುದು? ಹೆಚ್ಚಿನ ಮಾಹಿತಿ ಇಲ್ಲಿದೆ.


ಹಣ, ಅಂತಸ್ತು, ಐಶ್ವರ್ಯವಿದ್ದರೂ ಮಾನಸಿಕ ನೆಮ್ಮದಿ ಇಲ್ಲವೆನ್ನುವುದು ಬಹುತೇಕರ ಅಳಲು. ಕೆಲಸದ ಒತ್ತಡ, ಸಂಸಾರದ ಜಂಜಾಟಗಳಿಂದ ಬೇಸೆತ್ತವರು ಸಾಕಷ್ಟಿದ್ದಾರೆ. ಮನಸ್ಸಿನ ಆರೋಗ್ಯ ಉತ್ತಮವಾಗಿದ್ದರೆ ಹ್ಯಾಪಿಯಾಗಿ ಇರಬಹುದು ಎಂಬುದು ಎಲ್ಲರಿಗೂ ಮನದಟ್ಟಾಗುತ್ತಿದೆ. ಈ ಒತ್ತಡ, ಜಂಜಡದ ಬದುಕಿನಲ್ಲಿ ರಿಲ್ಯಾಕ್ಸ್ ಆಗಲು ಎಲ್ಲರೂ ಯೋಗವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯೇ ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಿದೆ. ಹೀಗಾಗಿ ಯೋಗಕ್ಕೆ ಎಲ್ಲಿಲ್ಲದ ಮಹತ್ವ ಬಂದುಬಿಟ್ಟಿದೆ.

ಯೋಗವೆಂಬ ಕರಿಯರ್
ಯೋಗವನ್ನೇ ಕರಿಯರ್ ಆಗಿ ಸ್ವೀಕರಿಸಿ ಬದುಕಿನಲ್ಲಿ ಯಶಸ್ವಿಯಾದ ಅದೇಷ್ಟೋ ಜನರು ನಮ್ಮ ನಿಮ್ಮ ನಡುವೆ ಇದ್ದಾರೆ. ಕೆಲವರು ಶಾಲಾ ಕಾಲೇಜುಗಳಲ್ಲಿ ಯೋಗ ಕಲಿಸುತ್ತಿದ್ದಾರೆ. ಇನ್ನು ಕೆಲವರು ಸ್ವಂತ ಯೋಗ ತರಗತಿಗಳನ್ನು ನಡೆಸಿ ಜನರಿಗೆ ಯೋಗದ ಅರಿವು ಮೂಡಿಸುತ್ತಿದ್ದಾರೆ. ಇನ್ನು ಕೆಲವರು ಯೋಗವನ್ನೇ ಬಿಸ್ನೆಸ್ ಆಗಿಸಿ ದುಡ್ಡು ಬಾಚಿಕೊಳ್ಳುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮವನ್ನು ಜೊತೆಯಾಗಿಸಿಕೊಂಡು ಸಾಕಷ್ಟು ಆಸ್ತಿ, ಅಂತಸ್ತು ಗಳಿಸಿದವರೂ ಸಿಗುತ್ತಾರೆ. ಹೀಗೆ ಯೋಗದಿಂದ ಸಾಕಷ್ಟು ಜನರಿಗೆ ಉದ್ಯೋಗಭಾಗ್ಯ ದೊರಕಿದೆ.

ಎಲ್ಲೆಲ್ಲಿ ಕೆಲಸ ಮಾಡಬಹುದು?
* ಸ್ವಂತ ಉದ್ಯೋಗ: ಬೆಂಗಳೂರಿನಂತಹ ನಗರಗಳಲ್ಲಿ ಯೋಗ ಟೀಚರ್/ಇನ್‍ಸ್ಟ್ರಕ್ಟರ್‍ಗಳಿಗೆ ಉತ್ತಮ ಬೇಡಿಕೆಯಿದೆ. ಸ್ವಂತ ಯೋಗ ಕ್ಲಾಸ್‍ಗಳನ್ನು ನಡೆಸಿದರೆ ಉತ್ತಮ ಆದಾಯ ಗಳಿಸಬಹುದು. ಇದಕ್ಕೆ ಹೆಚ್ಚು ಹೂಡಿಕೆ ಅಗತ್ಯವಿಲ್ಲ. ಜಿಮ್ ಇತ್ಯಾದಿಗಳಿಗೆ ಕನ್ನಡಿ, ಆಧುನಿಕ ಸಲಕರಣೆಗಳ ಅಗತ್ಯವಿದೆ. ಆದರೆ, ಯೋಗ ಕ್ಲಾಸ್ ನಡೆಸಲು ಹೆಚ್ಚು ಹೂಡಿಕೆ ಬೇಕಿಲ್ಲ. ನೆಲಕ್ಕೆ ಹಾಸಲು ಕಾರ್ಪೇಟ್ ಇದ್ದರೆ ಸಾಕು. ಮನೆಯ ಟೇರಸಿಯಲ್ಲೇ ಯೋಗ ಕ್ಲಾಸ್ ನಡೆಸಿಕೊಳ್ಳಬಹುದು.
* ಟೀಚಿಂಗ್: ಸ್ವಂತ ಕಲಿಕಾ ಕೇಂದ್ರಗಳನ್ನು ತೆರೆಯಲು ಸಾಧ್ಯವಾಗದೆ ಇರುವವರು ರೆಸಾರ್ಟ್, ಜಿಮ್, ಸ್ಕೂಲ್, ಆರೋಗ್ಯ ಕೇಂದ್ರ, ಹೌಸಿಂಗ್ ಸೊಸೈಟಿಗಳು ಮತ್ತು ದೊಡ್ಡ ಸಂಸ್ಥೆಗಳಲ್ಲಿ ಯೋಗ ತರಬೇತುದಾರರಾಗಿ ಕೆಲಸ ಪಡೆಯಬಹುದು. ಈಗ ಶಾಲೆಗಳಲ್ಲಿ ಯೋಗ ಇನ್‍ಸ್ಟ್ರಕ್ಟರ್‍ಗಳನ್ನು ನೇಮಿಸುವುದು ಕಡ್ಡಾಯವೆಂದು ಸರಕಾರ ಹೇಳಿದೆ. ಹೀಗಾಗಿ ಖಾಸಗಿ, ಸರಕಾರಿ ಶಾಲೆಗಳಲ್ಲಿಯೂ ಯೋಗ ತರಬೇತುದಾರರಾಗಿ ಕೆಲಸ ಪಡೆದುಕೊಳ್ಳಬಹುದು.
* ಯೋಗದ ಉತ್ತೇಜನಕ್ಕೆ ಹಲವು ಕೇಂದ್ರಗಳನ್ನು, ಕೌನ್ಸಿಲ್‍ಗಳನ್ನು, ಸಂಶೋಧನಾ ವಿಭಾಗಗಳನ್ನು ಸರಕಾರ ತೆರೆದಿದೆ. ಇಂತಹ ವಿಭಾಗಗಳಲ್ಲಿಯೂ ಕೆಲಸ ಪಡೆಯಲು ಪ್ರಯತ್ನಿಸಬಹುದು.
* ವಿವಿಧ ಸೆಲೆಬ್ರೆಟಿಗಳು, ರಾಜಕಾರಣಿಗಳು, ವಿವಿಐಪಿಗಳು ಪರ್ಸನಲ್ ಯೋಗ ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಹೀಗೆ ಪರ್ಸನಲ್ ಟ್ರೈನರ್ ಆಗಿಯೂ ಕೆಲಸ ಮಾಡಬಹುದಾಗಿದೆ.
* ವಿವಿಧ ಕಾಯಿಲೆಗಳಿಗೆ ನೀಡುವ ಯೋಗ ಥೆರಪಿಯೂ ಜನಪ್ರಿಯತೆ ಪಡೆದಿದೆ. ಇದು ಸಹ ಉದ್ಯೋಗಾವಕಾಶ ಹೆಚ್ಚಿಸಿದೆ.
ಹೊಸದಾಗಿ ಯೋಗ ತರಬೇತು ನೀಡುವವರಿಗೆ 10-15 ಸಾವಿರ ರೂ. ತಿಂಗಳ ವೇತನ ದೊರಕಬಹುದು. ಅನುಭವ ಹೆಚ್ಚಿದಂತೆಲ್ಲ ವೇತನ ಹೆಚ್ಚು ಸಿಗಬಹುದು. ಸ್ವಂತ ಯೋಗ ತರಗತಿ ಆರಂಭಿಸಿದವರು ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ.

ಯೋಗ ಶಿಕ್ಷಣ
ಬೆಂಗಳೂರು ವಿವಿ, ಕರ್ನಾಟಕ ವಿವಿ, ಮಂಗಳೂರು ವಿವಿ ಸೇರಿದಂತೆ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಥವಾ ವಿದ್ಯಾಸಂಸ್ಥೆಗಳಲ್ಲಿ ಯೋಗ ಕಲಿಸಲು ಪ್ರತ್ಯೇಕ ವಿಭಾಗ ಮೀಸಲಿಡಲಾಗಿದೆ. ಪಿಯುಸಿಯಲ್ಲಿ ಕನಿಷ್ಠ 50ಕ್ಕಿಂತ ಹೆಚ್ಚು ಅಂಕ ಪಡೆದವರು ಯೋಗ ಥೆರಪಿಯಲ್ಲಿ ಬಿಎ/ಬಿಎಸ್ಸಿ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಬಹುದು. ಈ ಪದವಿ ಪಡದವರು ನಂತರ ಯೋಗ ಥೆರಪಿಯಲ್ಲಿ ಎಂಎ/ಎಂಎಸ್ಸಿ ಪಡೆಯಬಹುದಾಗಿದೆ. ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ನ್ಯಾಚುರೊಪಿ ಮತ್ತು ಯೋಗಿಕ್ ಸೈನ್ಸಸ್, ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ನ್ಯಾಚೊರೊಪತಿ ಮತ್ತು ಯೋಗಿಕ್ ಸೈನ್ಸಸ್, ಬೆಳಗಾವಿಯ ಕೆಎಲ್‍ಇಎಸ್ ಕಾಲೇಜ್ ಆಫ್ ನ್ಯಾಚೊರೊಪತಿ ಮತ್ತು ಯೋಗ, ಮೈಸೂರಿನ ನೇಚರ್ ಕ್ಯೂರ್ ಮತ್ತು ಯೋಗ ಕಾಲೇಜ್, ಪಿಕೆಟಿಆರ್ ಹಾಸ್ಪಿಟಲ್‍ನಲ್ಲೂ ಯೋಗ ಶಿಕ್ಷಣ ಪಡೆಯಬಹುದಾಗಿದೆ.

ಯಾವ ಕೆಲಸ ಸಿಗುತ್ತೆ?
* ರಿಸರ್ಚ್ ಆಫೀಸರ್-ಯೋಗ ಮತ್ತು ನ್ಯಾಚೊರೊಪಥಿ
* ಯೋಗ ಏರೋಬಿಕ್ ಇನ್‍ಸ್ಟ್ರಕ್ಟರ್
* ಅಸಿಸ್ಟೆಂಟ್ ಆಯುರ್ವೇದಿಕ್ ಡಾಕ್ಟರ್
* ಕ್ಲೀನಿಕಲ್ ಸೈಕೊಲಾಜಿಸ್ಟ್
* ಯೋಗ ಥೆರಪಿಸ್ಟ್
* ಯೋಗ ಇನ್‍ಸ್ಟ್ರಕ್ಟರ್
* ಯೋಗ ಟೀಚರ್
* ಥೆರಪಿಸ್ಟ್ಸ್ ಮತ್ತು ನ್ಯಾಚುರೊಪಥಿಸ್
* ಹೆಲ್ತ್ ಕ್ಲಬ್‍ಗಳಲ್ಲಿ ಟ್ರೈನರ್/ಇನ್‍ಸ್ಟ್ರಕ್ಟರ್

ನಿಮಗಿದು ತಿಳಿದಿರಲಿ
* ಕಿ.ಪೂ. 2ನೇ ಶತಮಾನದಲ್ಲಿ ಪತಂಜಲಿ ಮುನಿ ಬರೆದ `ಯೋಗ ಸೂತ್ರಗಳು’ ಕೃತಿಯನ್ನು ಯೋಗಶಾಸ್ತ್ರದ ಮೂಲಗ್ರಂಥವೆಂದು ಪರಿಗಣಿಸಲಾಗಿದೆ.
* ಕಿ.ಶ. 15ನೇ ಶತಮಾನದಲ್ಲಿ ಸ್ವಾಮಿ ಗೋರಖನಾಥರು ಹಠ ಯೋಗ ಪ್ರದೀಪಿಕ ಎಂಬ ಕೃತಿ ಬರೆದಿದ್ದಾರೆ.

ಯೋಗದಿಂದ ಏನು ಪ್ರಯೋಜನ?
* ದೈಹಿಕ ಮತ್ತು ಮಾನಸಿಕ ಆರೋಗ್ಯ
* ಆಧುನಿಕ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಅನೇಕ ಕಾಯಿಲೆಗಳು ಯೋಗದ ಮೂಲಕ ಪರಿಹಾರವಾಗುತ್ತವೆ.

 

Leave a Reply

Your email address will not be published. Required fields are marked *