25ರ ಲಹರಿಯಲ್ಲಿ

By | 07/12/2010

image curtecy: internet

ಒಂದಲ್ಲ, ಎರಡಲ್ಲ, ಹತ್ತಾರು ಬಾರಿ ಲೆಕ್ಕ ಮಾಡಿ ನೋಡಿದೆ. 25ಕ್ಕಿಂತ ಕಡಿಮೆಯಾಗುವುದೇ ಇಲ್ಲ. ಮತ್ತೆ ಮತ್ತೆ ಲೆಕ್ಕ ಮಾಡಿ ಅದೇ ಉತ್ತರ ಬಂದಾಗ ಒಂದಿಷ್ಟು ಖುಷಿ ಮತ್ತು ದಿಗಿಲು ಜೊತೆಯಾಯಿತು.

ಮುಂಜಾನೆ ಎದ್ದಾಗಲೇ 4 ಮೆಸೆಜ್‌ಗಳು ಬರ್ತ್‌ಡೇ ವಿಷ್‌ ಮಾಡಲು ಕಾಯುತ್ತಿದ್ದವು. ಸ್ವಲ್ಪ ಸಮಯವಾದಾಗ ಮತ್ತೆ ಒಬ್ಬರು ಮೆಸೆಜ್‌ ಮಾಡಿದರು. ಸ್ವಲ್ಪ ಹೊತ್ತಾದಾಗ ಗೆಳೆಯ ಸೂರ್ಯ ಕಾಲ್‌ ಮಾಡಿ ವಿಷ್‌ ಮಾಡಿದ. ಮೊಬೈಲ್‌ನ ಬ್ರೌಸರ್‌ ಆನ್‌ ಮಾಡಿ ನೋಡಿದಾಗ ಸುಮಾರು ಬರ್ತ್‌ಡೇ ವಿಷ್‌ಗಳು ಬಂದಿದ್ದವು. ಆಫೀಸ್‌ಗೆ ಹೋಗಿ ನೋಡಿದಾಗ ಫೇಸ್‌ಬುಕ್‌ನಲ್ಲಿ 19 ಜನ, ಆರ್ಕುಟ್‌ನಲ್ಲಿ 32 ಜನ ಬರ್ತ್‌ಡೇ ವಿಷ್‌ ಮಾಡಿ ನನಗೆ 25 ವರ್ಷ ಮುಗೀತು ಅಂತ ಕನ್‌ಫರ್ಮ್‌ ಮಾಡಿದ್ರು. ಅದರಲ್ಲಿ ನನ್ನ ಆತ್ಮೀಯ ಸ್ನೇಹಿತರು, ನನಗಿಂತ ಹಿರಿಯರು, ಕಿರಿಯರು, ಜೀವನದಲ್ಲಿ ಬಹಳಷ್ಟು ಸಾಧಿಸಿದವರೂ ಎಲ್ಲರೂ ಇದ್ದರು. ಯಾಕೋ ತುಂಬಾ ಖುಷಿಯಾಗಿಬಿಟ್ಟಿತು. ಅಮ್ಮನಿಗೆ ಫೋನ್‌ ಮಾಡಿ ವಿಷಯ ತಿಳಿಸಿದೆ. ಇಲ್ಲಿ ನೀನು ಇರುತ್ತಿದ್ದರೆ ಪಾಯಸ ಮಾಡಬಹುದಿತ್ತು ಅಂತ ಹೇಳಿ ಅವಳೂ ಕನ್‌ಫರ್ಮ್‌ ಮಾಡಿ ಬಿಟ್ಟಳು. ಅಣ್ಣನಿಗೆ ಕಾಲ್‌ ಮಾಡಲಿಲ್ಲ. ಯಾಕೆಂದರೆ ಕಳೆದ 5ರಂದು ಆತನ ಬರ್ತ್‌ಡೇ ಮುಗಿದಿತ್ತು. ಆತನಿಗೆ ವಿಷ್‌ ಮಾಡಲು ಮರೆತಿದ್ದೆ.

ಆಫೀಸ್‌ನಲ್ಲಿ ಕೀಬೋರ್ಡ್‌ನ ಮೇಲೆ ನನಗೊಂದು ವಿಶಿಷ್ಠ ಗಿಫ್ಟ್‌ ಕಾದಿತ್ತು. ಚಂದದ ದೊಡ್ಡ ಪ್ಲಾಸ್ಟಿಕ್‌ ಕವರ್‌, ಅದರೊಳಗೆ ಎ4 ಸೈಜ್‌ ಕಾಗದದಲ್ಲಿ ಹ್ಯಾಪಿಬರ್ತ್‌ ಡೇ ಅಂತ ಪ್ರಿಂಟ್‌, ಒಳಗಡೆ ಅಚ್ಚರಿಯ ಉಡುಗರೆಗಳು. ಅಂದ್ರೆ ಇಂಕ್‌ ಖಾಲಿಯಾಗಿರುವ ಪೆನ್ನು ಇತ್ಯಾದಿ. ಅವರು ಅಂತಹ ವಿಶಿಷ್ಠ ಗಿಫ್ಟ್‌ ನೀಡಲು ಕಾರಣ ಅವರ ಬರ್ತ್‌ಡೇಗೆ ನಾನೂ ಹಾಗೇ ಮಾಡಿದ್ದೆ. ಅಂದ್ರೆ ಪುಟ್ಟ ಕಾಗದದಲ್ಲಿ ಹ್ಯಾಪಿ ಬರ್ತ್‌ಡೇ ಅಂತ ಬರೆದು `ನಿನ್ನ ಜನ್ಮದಲ್ಲಿ ಇಂತಹ ಗಿಫ್ಟ್‌ ಯಾರಾದರೂ ಕೊಟ್ಟಿದ್ದಾರಾ? ಅಂತ ಕೊಚ್ಚಿಕೊಂಡಿದ್ದೆ. ಅವರು ಅಷ್ಟೇ ನನ್ನ ಜೀವನದಲ್ಲಿ ನನಗೆ ಯಾರೂ ನೀಡದಂತಹ ವಿಶಿಷ್ಠ ಗಿಫ್ಟ್‌ ನೀಡಿ ನನ್ನನ್ನು ಆಶ್ಚರ್ಯಗೊಳಿಸಿದ್ದರು.

ಯಾಕೋ ಈ ವರ್ಷ ತುಂಬಾ ವಿಷಸ್‌ಗಳು ಬಂದವು ಅನಿಸಿತ್ತು. ಕಳೆದ ವರ್ಷ ಲೆಕ್ಕ ಮಾಡಿ ನೋಡಿದರೂ 5 ಜನರಿಗಿಂತ ಹೆಚ್ಚು ಜನರು ವಿಷ್‌ ಮಾಡಿರಲಿಲ್ಲ. ತಂತ್ರಜ್ಞಾನ ಹೆಚ್ಚು ಅಭಿವೃದ್ಧಿಯಾಗುತ್ತಿರುವ ಸೂಚನೆಯೂ ಇದಾಗಿರಬಹುದು. ಇಲ್ಲದಿದ್ದರೆ ನನ್ನ ಬಾಲ್ಯದ ಗೆಳೆಯನೊಬ್ಬ ಈಗ ಮುಂಬೈನಲ್ಲಿ ಎಲ್ಲ ಮರೆತು ಬದುಕುತ್ತಿರುವಾತ ಒಮ್ಮೆಗೆ ಹ್ಯಾಪಿ ಬರ್ತ್‌ಡೇ ಅನ್ನೋಕೆ ಫೇಸ್‌ಬುಕ್‌ನಂತಹ ನೆಟ್‌ವರ್ಕ್‌ ಕಾರಣ ಅಲ್ಲವೇ?

ಒಂದಿಷ್ಟು ಹೊತ್ತು ಕುಳಿತು ಗಾಢವಾಗಿ ಯೋಚಿಸತೊಡಗಿದರೆ `ಸುಮ್ಮಗೆ ಏನೂ ಸಾಧಿಸದೇ 25 ವರ್ಷ ಕಳೆದು ಬಿಟ್ಟೆ ಅಂತ ಬೇಜಾರಾಗುತ್ತಿದೆ. ಇಷ್ಟು ವರ್ಷಕ್ಕೆ ಎಷ್ಟೋ ಜನರು ಅಷ್ಟೊಂದು ಸಾಧಿಸಿರುವಾಗ ನಾನು ವೇಸ್ಟ್‌ ಅಂತಲೂ ಅನಿಸತೊಡಗಿದೆ. ಆದರೆ ನನ್ನನ್ನು ಇತರರಿಗೆ ಯಾವತ್ತೂ ನಾನು ಹೋಲಿಸಿಕೊಂಡವನಲ್ಲ. ನಾನು ಇಷ್ಟಾದರೂ ಇದ್ದೇನೆ ಅಂತ ಖುಷಿಪಡಬೇಕಷ್ಟೇ!ನಿಜ ಹೇಳಬೇಕೆಂದರೆ ನಾನು ಏನೂ ಬೇಕಾದರೂ ಆಗಬಹುದಿತ್ತು. ಏನೂ ಆಗದೆಯೂ ಇರಬಹುದಿತ್ತು.(ಎಲ್ಲರೂ ಅಷ್ಟೇ ಅಂತೀರಾ. ಓಕೆ)

1985ರ ಡಿಸೆಂಬರ್‌ 7ರ ಮುಂಜಾನೆ ಎಂದಿನಂತೆಯೇ ಇದ್ದಿರಬೇಕು. ನನಗೂ ಅದು ಹೊಸತು. ಕಣ್ಣರಲಿಸಿ ನೋಡಿದೆನೋ, ಅತ್ತು ಮಲಗಿದೇನೋ ನೆನಪಿಲ್ಲ. ಯಾಕೆಂದರೆ ಆಗ ನಾನು ಹುಟ್ಟಿದಷ್ಟೇ! ಒಂದಿಷ್ಟು ಬಡತನದಿಂದಲೇ ಆರಂಭವಾದ ಬದುಕು ನನಗೆ ತುಂಬಾ ಪಾಠ ಕಲಿಸಿತು. ಶಾಲೆಗೆ ರಜಾ ಸಿಕ್ಕಾಗ ಪಕ್ಕದ ಮನೆಯಲ್ಲಿ ಅಡಿಕೆ ಹೆಕ್ಕಿ ದಿನಕ್ಕೆ 15 ರೂಪಾಯಿ ಸಂಬಳ ಪಡೆಯುತ್ತಿದ್ದೆ. ಎಸ್‌ಎಸ್‌ಎಲ್‌ಸಿ ಕಳೆದ ನಂತರ ಎರಡು ತಿಂಗಳು ಬಾರ್‌ನಲ್ಲೂ ಕೆಲಸ ಮಾಡಿದ್ದೆ. ದೊಡ್ಡ ರಜೆ ಸಿಕ್ಕಾಗ ರಣ ಬಿಸಿಲಿನಲ್ಲಿ ಗೇರು ಕೂಪಿನಲ್ಲಿ ಕೆಲಸವೂ ಮಾಡುತ್ತಿದೆ. ಇಂತಹ ಅನುಭವ ಎಲ್ಲರಿಗೂ ದೊರಕದು ಅಂತ ನನ್ನ ವಾದ. ಆದರೆ ಗ್ರಾಮೀಣ ಭಾಗದಲ್ಲಿರುವ ಹೆಚ್ಚಿನ ವಿದ್ಯಾರ್ಥಿಗಳು ರಜಾ ದಿನಗಳನ್ನು ವೇಸ್ಟ್‌ ಮಾಡುವುದು ಕಡಿಮೆ. ಏನಾದರೂ ಕೆಲಸ ಮಾಡಿ ಒಂದಿಷ್ಟು ದುಡ್ಡು ಮಾಡುವುದು ಸಾಮಾನ್ಯ. ಕೆಲವರಿಗದು ಅನಿವಾರ್ಯ ಕೂಡ.

ನನಗಿಂತ 11 ಮಾರ್ಕ್ಸ್‌ ಹೆಚ್ಚು ಪಡೆದರೂ ಅಣ್ಣನಿಗೆ ಎಸ್‌ಎಸ್‌ಎಲ್‌ಸಿ ಸಾಕಾಗಿಬಿಟ್ಟಿತು. ಮುಂದೆ ಆತ ಖಾಸಗಿ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದ. ಅಣ್ಣ  ಅಂದಾಗ ಕೆಲವು ನೆನಪುಗಳನ್ನು ನಿಮ್ಮಲ್ಲಿ ಹೇಳಲೇ ಬೇಕು. ನಾವು 8ರಿಂದ 10 ರ ತನಕ ಒಂದೇ ಕಾಲೇಜ್‌ನಲ್ಲಿ ಒಂದೇ ಕ್ಲಾಸ್‌ನಲ್ಲಿದ್ದೇವು. ಆತನಿಗೆ ಮೇಸ್ಟು ಹೊಡೆದರೆ ನಾನು, ನನಗೆ ಮೇಸ್ಟ್ರು ಹೊಡೆದರೆ ಅವನು ಮನೆಯಲ್ಲಿ ಚಾಡಿ ಹೇಳುವುದು ಮಾಮೂಲಿಯಾಗಿತ್ತು. ಆಮೇಲೆ ಯಾಕೆ ಹೇಳಿದ್ದು ಅಂತ ನಮ್ಮಿಬ್ಬರಿಗೆ ಜಗಳ. ದೈಹಿಕವಾಗಿ ಒಂದಿಷ್ಟು ಬಲಿಷ್ಠವಾಗಿದ್ದರಿಂದ ಹೊಡೆದಾಟದಲ್ಲಿ ಅವನೇ ಜಯಶಾಲಿಯಾಗುತ್ತಿದ್ದ. ಅಂದೊಂದು ದಿನ ಆತ ನನ್ನನ್ನು ದೂಡಿ ಹಾಕಿದಾಗ ನನ್ನ ತಲೆ ಬಾಗಿಲಿನ ದಾರಂದಕ್ಕೆ ಬಡಿದು ತಲೆಯಲ್ಲಿ ದೊಡ್ಡ ಗಾಯವಾಗಿತ್ತು. ಇಂತಹ ಅನೇಕ ಯುದ್ಧಗಳು ನಮ್ಮಲ್ಲಿ ನಡೆದಿವೆ.ನಾವು ಹೆಚ್ಚಿನ ರಾತ್ರಿ ಚೆಸ್‌ ಆಡುತ್ತಿದ್ದೇವು. ಇಲ್ಲಿ ಹೆಚ್ಚು ಬಾರಿ ಗೆಲ್ಲೋದು ನಾನೇ. ಆದರೆ ಆತ ಸೋಲನ್ನು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಅದಕ್ಕೆ ಆತ ಸೋತರೆ ಇನ್ನೋಮ್ಮೆ ಆಡೋಣ ಅಂತ ಪೀಡಿಸುತ್ತಿದ್ದ. ನಂಗೆ ನಿದ್ರೆ ಬರುತ್ತಿದ್ದರೂ ಆತ ಬಿಡುತ್ತಿರಲಿಲ್ಲ. ನಾನು ಆಡುವುದಿಲ್ಲ ಅಂತ ಹೇಳಿದರೆ ಹೊಡೆದಾಟ ಗ್ಯಾರಂಟಿ.

10ರಲ್ಲಿ ಓದು ಮುಗಿಸಿ ಹೊರನಡೆದ ಅಣ್ಣ ಆಮೇಲೆ ನನ್ನನ್ನು ತುಂಬಾ ಪ್ರೀತಿಸತೊಡಗಿದ. ಪ್ರತಿ ತಿಂಗಳೂ ಮನೆಗೆ ಬಂದಾಗಲೂ 100-200 ಪಾಕೇಟ್‌ ಮನಿ ಕೊಡುತ್ತಿದ್ದ. ನಾನೂ ಪಿಯೂಸಿ ರಜೆ ಮುಗಿದ ಕೂಡಲೇ ಇನ್ನೂ ಕೆಲಸಕ್ಕೆ ಸೇರೋದು ಅಂತ ಮನೆ ಬಿಟ್ಟೆ. ಒಂದೆರಡು ದಿನ ಮಾರ್ಕೆಟಿಂಗ್‌ ಅಂತ ಸರ್ಫ್‌ ಮಾರಾಟ ಮಾಡುತ್ತ, ಮತ್ತೆ ಮಣಿಪಾಲದ ಪ್ರೆಸ್‌ಗೆ ಕೆಲಸಕ್ಕೆ ಸೇರಿದೆ. ಅಲ್ಲಿ ಬಿಸಿಬಿಸಿ ವ್ಯಾಕ್ಸ್‌ನಿಂದ ಕೈಸುಟ್ಟುಕೊಂಡು ವಾಪಸ್‌ ಮನೆಗೆ ಬಂದೆ.

ಊರಲ್ಲಿ ಸಿಕ್ಕ ಗೆಳೆಯನೊಬ್ಬ ಡಿಗ್ರಿಗೆ ಸೇರುವುದಾಗಿ ಹೇಳಿದಾಗ ನನಗೂ ಪದವಿ ಪಡೆಯೋ ಬಯಕೆಯಾಯಿತು. ಹೀಗೆ ಪದವಿಗೆ ಸೇರಿದೆ. ಬದುಕಿನ ದಿಕ್ಕು ಮತ್ತೊಂದು ಕಡೆ ತಿರುಗಿಕೊಂಡಿತು. ಅಲ್ಲಿ ಒಂದಿಷ್ಟು ಕಾರ್‌ಬಾರ್‌ ಮಾಡಿ ಪದವಿ ಅಂತ್ಯಕ್ಕೆ ಬಂದಾಗ ಮುಂದೇನು ಎಂಬ ಆತಂಕ ಕಾದಿತ್ತು. ಡಿಗ್ರಿ ಮುಗಿಸಿ ಎಲ್ಲೋ ಕಂಪನಿಗೆ ಸೇರಲು ಮನಸು ಒಪ್ಪಲಿಲ್ಲ. ನಾನು ಬಾಲ್ಯದಿಂದಲೇ ಹೆಚ್ಚು ಓದುತ್ತಿದ್ದೆ. ಇದೇ ಬ್ಲಾಗ್‌ನಲ್ಲಿ `ನಾನು ನನ್ನ ಬಾಲ್ಯ’ ಅಂತ ಪೋಸ್ಟ್‌ ಹಾಕಿದ್ದನ್ನು ನೀವು ಓದಿರಬಹುದು. ಡಿಗ್ರಿವರೆಗೂ ಸಿಕ್ಕ ಸಿಕ್ಕ ಬುಕ್‌ಗಳನ್ನು ಓದುತ್ತಿದ್ದೆ. ಅಂದ್ರೆ ಬಾಲಮಂಗಳ, ಚಂದಮಾಮ, ಮಂಗಳ, ಕ್ರೈಂ, ಸ್ಪೈ ಇತ್ಯಾದಿಗಳನ್ನು ಹೈಸ್ಕೂಲ್‌ ದೆಸೆಯಲ್ಲಿ ಹೆಚ್ಚು ಓದುತ್ತಿದ್ದೆ. ಆಮೇಲೆ ಪಿಯೂಸಿಯಲ್ಲಿ ಹೆಚ್ಚು ಓದಿದ್ದು ಸಾಯಿಸುತೆ, ಎಂಕೆ ಇಂದಿರಾ, ಕೌಂಡಿನ್ಯ ಇತ್ಯಾದಿ ಲೇಖಕ ಲೇಖಕಿಯರ ಬರಹಗಳು. ಆದರೆ ಪದವಿಗೆ ಬಂದ ಮೇಲೆ ಇದ್ಯಾವುದೂ ಪುಸ್ತಕಗಳು ಇಷ್ಟವಾಗಲಿಲ್ಲ. ಕುವೆಂಪು ಬರೆದ ಮಲೆಗಳಲ್ಲಿ ಮದುಮಗಳು, ಕಾನೂರ ಹೆಗ್ಗಡತಿ, ತೇಜಸ್ವಿ ಬರಹಗಳು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದವು. ಬೈರಪ್ಪನವರ ಹೆಚ್ಚಿನ ಕಾದಂಬರಿಗಳನ್ನೂ ಓದಿ ಮುಗಿಸಿದೆ.

ನನಗೆ ಹೈಸ್ಕೂಲಿನಿಂದಲೂ ಏನಾದರೂ ಬರೆಯುವ ಹುಚ್ಚಿತ್ತು. ಪದವಿಯಲ್ಲಿ ಇದಕ್ಕೆ ಸೂಕ್ತ ಬೆಂಬಲವೂ ದೊರಕಿತು. ಸುಬ್ರಹ್ಮಣ್ಯ ಭಟ್‌, ಲೊಬೊ ಮುಂತಾದ ಉಪನ್ಯಾಸಕರು ಹೆಚ್ಚು ಬೆನ್ನು ತಟ್ಟುತ್ತಿದ್ದರು. ನಾನು ಬರೆಯೋ ಹುಚ್ಚು ಕತೆ(?), ಕವಿತೆ(?)ಗಳನ್ನು ಮೆಚ್ಚುವ ಅನೇಕ ಸ್ನೇಹಿತ ಸ್ನೇಹಿತೆಯರೂ ಕಾಲೇಜ್‌ನಲ್ಲಿದ್ದರು. ಕೆಲವು ಪತ್ರಿಕೆಗಳಲ್ಲಿ ಇದು ಪ್ರಕಟಗೊಂಡಾಗ ಎಲ್ಲರೂ ಖುಷಿ ಪಡುತ್ತಿದ್ದರು. ಇದೆಲ್ಲದರ ಪರಿಣಾಮವೋ ನನಗೆ ಪತ್ರಿಕೋದ್ಯಮದ ಮೇಲೆ ಆಸಕ್ತಿ ಬೆಳೆಯಿತು. ಅದೇ ಸಮಯದಕ್ಕೆ ಡಾ. ನರೇಂದ್ರ ರೈ ದೇರ್ಲ ನಮ್ಮ ಕಾಲೇಜಿಗೆ ಟ್ರಾನ್ಸ್‌ಫರ್‌ ಆಗಿ ಬಂದರು. ಅವರೂ ದಿನಾ ಪತ್ರಿಕೋದ್ಯಮದ ಬಗ್ಗೆಯೇ ಮಾತನಾಡುತ್ತಿದ್ದರು. ನನಗೂ ಪತ್ರಿಕೋದ್ಯಮದ ಹುಚ್ಚು ಹಿಡಿಯಿತು. 300 ರೂ.ನ ಲಟ್ಟಾಸ್‌ ಕ್ಯಾಮರಾ ಹಿಡಿದುಕೊಂಡು ಕಡೆಯುವ ಕಲ್ಲು ಕೆತ್ತುವರ ಬಗ್ಗೆ ಒಂದು ನುಡಿಚಿತ್ರವನ್ನೂ ಬರೆದೆ. ಅದು ಕೆಲವು ತಿಂಗಳು ಕಳೆದು ಪತ್ರಿಕೆಯಲ್ಲಿ ಪ್ರಕಟವಾಯಿತು. ನನ್ನಲ್ಲಿ ಪತ್ರಿಕೋದ್ಯಮ ಓದುವ ಹಂಬಲ ಜಾಸ್ತಿಯಾಗತೊಡಗಿತು.

ಕನ್ನಡ ಉಪನ್ಯಾಸಕರಾದ ಡಾ. ನರೇಂದ್ರ ರೈ ದೇರ್ಲರಿಗೆ ಇಂತಹ ಡಿಗ್ರಿ ನೀಡುವ ಔಪಚಾರಿಕ ಪತ್ರಿಕೋದ್ಯಮ ತರಗತಿಗಳ ಮೇಲೆ ನಂಬಿಕೆಯಿರಲಿಲ್ಲ. ಆದರೆ ಪತ್ರಿಕೆಯೊಳಗೆ ಪ್ರವೇಶಿಸ ಬಯಸುವ ನನ್ನಂತವರಿಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅನಿವಾರ್ಯವಾಗಿತ್ತು. ಡಿಗ್ರಿ ಮುಗಿದ ನಂತರದ ಮೂರು ತಿಂಗಳ ರಜೆಯಲ್ಲಿ ಮನೆಯ ಹತ್ತಿರದ ಶಾಮಿಯಾನ ಅಂಗಡಿಯಲ್ಲಿ ಹಗಲಿರುಳು ದುಡಿದು ಒಂದಿಷ್ಟು ದುಡ್ಡು ಮಾಡಿದೆ. ಆದರೆ ಯೂನಿವರ್ಸಿಟಿಯ ಭಾರಿ ಪೀಸ್‌(ನನ್ನ ಪಾಲಿಗೆ 2 ವರ್ಷಕ್ಕೆ 50 ಸಾವಿರ ಖರ್ಚು ಎಂದರೆ ಭಾರಿಯೇ)ಗೆ ನನ್ನಲ್ಲಿರುವ ದುಡ್ಡು ಎಷ್ಟು ಸಾಲುತ್ತದೆ. ಅಣ್ಣ ಮತ್ತು ಅಪ್ಪ ಅಮ್ಮ ನನ್ನ ಕಾಲೇಜ್‌ ಖರ್ಚನ್ನು ಹಂಚಿಕೊಂಡರು.

ಅಂತೂ ಇಂತು ಮಂಗಳಗಂಗೋತ್ರಿಯಲ್ಲಿ ಎರಡು ವರ್ಷದ ಎಂಸಿಜೆ ಮುಗಿಸಿ ಟೈಮ್ಸ್‌ ಗ್ರೂಪ್‌ನ ಕನ್ನಡ ಪತ್ರಿಕೆಯೊಂದರಲ್ಲಿ ಕೆಲಸವೂ ಸಿಕ್ಕಿತ್ತು. ಮತ್ತೆ ನಾನು ಏನೂ ಸಾಧಿಸಿಲ್ಲ ಅಂತ ಅನಿಸತೊಡಗಿದೆ. ಕೆಲಸಕ್ಕೆ ಸೇರಿ ಮೂರು ವರ್ಷನೂ ಆಗಿಲ್ಲ ಆಗಲೇ 25 ಆಯ್ತು. 25ರಲ್ಲಿ ನಾನೂ ಸಾಧಿಸಿದ್ದು ಏನೂ ಇಲ್ಲ ಅಂತ ನೆನೆದಾಗ ಬರ್ತ್‌ಡೇ ಉತ್ಸಾಹ ಜರ್ರೆಂದು ನೆಲಕಚ್ಚಿದೆ.

ಯಾಕೋ ಇದನ್ನೆಲ್ಲ ನಿಮ್ಮಲ್ಲಿ ಹೇಳಿಕೊಳ್ಳಬೇಕೆನಿಸಿತು… ಕ್ಷಮಿಸಿ

old artcle: http://chukkichandira.wordpress.com/2010/07/20/%E0%B2%A8%E0%B3%86%E0%B2%A8%E0%B2%AA%E0%B2%BF%E0%B2%A8-%E0%B2%A4%E0%B3%8B%E0%B2%B0%E0%B2%A3/

Author: Rashmi Kannadathi

Profession: consultant optometrist. Hobby: Web Developer, SEO Consultaņt, Bloggȩr

6 thoughts on “25ರ ಲಹರಿಯಲ್ಲಿ

  1. Pramod

    ನಿಮ್ಮ ಲೇಖನ ನನ್ನನ್ನೂ ಬಾಲ್ಯಕ್ಕೆ ಬಲವ೦ತ ಮಾಡಿ ಎಳೆದುಕೊ೦ಡು ಹೋಯಿತು. ಜತೆಗೆ ಎರಡು ಹನಿ ಕಣ್ಣೀರು ಕೂಡ ಬ೦ತು

    Reply
  2. Rajesh

    Praveen…really good one and touching…..
    thanks for remembering me.

    Reply
  3. Pingback: ಬ್ಲಾಗ್ ಬರಹ ಕಳ್ಳ ಸಿಕ್ಕಿದ.. ಅವನನ್ನು ಏನು ಮಾಡಲಿ? « ಚುಕ್ಕಿ ಚಂದಿರ chukki chandira

  4. [email protected]

    ಸಾರಿ ಪ್ರವೀಣ ಚಂದ್ರ “ಅಮ್ಮನೂ ಕನ್ಪರ್ಮ್ ಮಾಡಿಬಿಟ್ಟಳು ಬರಹ ಡಿಲಿಟ್ ಮಾಡ್ತೀನಿ …

    Reply
  5. suresh

    ಸಾರಿ ಪ್ರವೀಣ ಚಂದ್ರ “ಅಮ್ಮನೂ ಕನ್ಪರ್ಮ್ ಮಾಡಿಬಿಟ್ಟಳು ಬರಹ ಡಿಲಿಟ್ ಮಾಡ್ತೀನಿ

    Reply

Leave a Reply

Your email address will not be published. Required fields are marked *