ಈ ಗೂಗಲ್ ಟೂಲ್ ಗಳನ್ನು ನೀವು ಬಳಸುವಿರಾ?

By | July 11, 2018

ತಂತ್ರಜ್ಞಾನ ಜಗತ್ತಿನಲ್ಲಿ ಸಾಧನವೊಂದನ್ನು ಸಮಗ್ರವಾಗಿ ಬಳಕೆ ಮಾಡಿಕೊಂಡರೆ ಪ್ರಯೋಜನ ಹೆಚ್ಚು ದೊರಕುತ್ತದೆ. ನೀವು ಸ್ಮಾರ್ಟ್‍ಫೋನ್ ನಲ್ಲಿ ಕೇವಲ ಕಾಲ್ ಮತ್ತು ಮೆಸೆಜ್ ಮಾತ್ರ ಮಾಡುತ್ತೀರಿ ಎಂದಿರಲಿ. ಈ ಕೆಲಸವನ್ನು ಸಾಮಾನ್ಯ ಫೋನ್‍ನಲ್ಲಿಯೂ ಮಾಡಬಹುದಾಗಿದೆ. ಇದರ ಬದಲು ಅದರಲ್ಲಿರುವ ಆ್ಯಪ್‍ಗಳನ್ನು ಬಳಸುವುದು, ಗೂಗಲ್ ಮ್ಯಾಪ್, ಗೂಗಲ್ ಡ್ರೈವ್ ಇತ್ಯಾದಿಗಳನ್ನು ಬಳಸಿದರೆ ಹಲವು ಲಾಭವಿದೆ.

ಇದೇ ರೀತಿ ನೀವು ಉದ್ಯೋಗಕ್ಕೆ ಸಂಬಂಧಪಟ್ಟಂತೆ ಗೂಗಲ್ ಅನ್ನು ಬಳಸುವಿರಿ. ಆದರೆ, ಅದನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗುತ್ತದೆ. ಉದ್ಯೋಗಿಗಳಿಗೆ ಪೂರಕವಾದ ಹಲವು ಟೂಲ್‍ಗಳನ್ನು ಗೂಗಲ್ ನೀಡಿರುವುದರ ಪ್ರಯೋಜನ ಪಡೆದುಕೊಳ್ಳಿ. ಗೂಗಲ್ ನ ಅಂತಹ ಕೆಲವು ಟೂಲ್ ಗಳನ್ನು ಇಲ್ಲಿ ಕರ್ನಾಟಕಬೆಸ್ಟ್.ಕಾಂ ಪರಿಚಯಿಸುತ್ತಿದೆ.

ಗೂಗಲ್ ಕ್ಯಾಲೆಂಡರ್

ನಿಮ್ಮಲ್ಲಿ ಗೂಗಲ್ ಖಾತೆಯಿದ್ದರೆ ಗೂಗಲ್ ಕ್ಯಾಲೆಂಡರ್ ರಚಿಸಬಹುದು. ನೀವು ಉದ್ಯೋಗಿಯಾಗಿದ್ದರೆ ಇಂತಹ ಕ್ಯಾಲೆಂಡರ್ ರಚಿಸಬಹುದು. ಯಾವುದಾದರೂ ಇವೆಂಟ್‍ಗಳನ್ನು ಅಲ್ಲಿ ದಾಖಲಿಸಬಹುದು. ಆ ಇವೆಂಟ್‍ನಲ್ಲಿ ಪಾಲ್ಗೊಳ್ಳುವ ಇತರರ ಜೊತೆ ಮಾಹಿತಿಯನ್ನು ಹಂಚಿಕೊಳ್ಳಬಹುದು. ಗೂಗಲ್ ಕ್ಯಾಲೆಂಡರ್ ಅನ್ನು ಖಾಸಗಿಯಾಗಿ ಇಟ್ಟುಕೊಳ್ಳಬಹುದು ಅಥವಾ ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು. ಒಬ್ಬರು ಹಲವು ಕ್ಯಾಲೆಂಡರ್ ರಚಿಸಲು ಅವಕಾಶ ನೀಡಲಾಗಿದೆ. ಆಫೀಸ್ ಕೆಲಸಕ್ಕೆ ಸಂಬಂಧಪಟ್ಟ ಮಾಹಿತಿಗಳು, ಶೆಡ್ಯೂಲ್‍ಗಳು, ಮೀಟಿಂಗ್‍ಗಳು ಇತ್ಯಾದಿಗಳನ್ನು ದಾಖಲಿಸಿ ಸಮಯಕ್ಕೆ ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು.

ಗೂಗಲ್ ಡಾಕ್ಸ್

ಆಫೀಸ್ ಕೆಲಸಗಳಿಗೆ ಗೂಗಲ್ ಡಾಕ್ಸ್ ಉಪಯುಕ್ತ. ಗೂಗಲ್ ಡಾಕ್ಸ್ ಸ್ಯುಯಿಟ್‍ನಲ್ಲಿ ಒಂದು ವರ್ಡ್ ಪ್ರೆಸರ್, ಒಂದು ಸ್ಪ್ರೆಡ್‍ಶೀಟ್ ಎಡಿಟರ್ ಮತ್ತು ಒಂದು ಪ್ರಸಂಟೇಷನ್ ಅಪ್ಲಿಕೇಷನ್ ಇದೆ. ನೀವು ನಿಮ್ಮಲ್ಲಿರುವ ದಾಖಲೆಗಳನ್ನು ನಿಮ್ಮ ಕಂಪ್ಯೂಟರ್‍ನ ಹಾರ್ಡ್‍ಡ್ರೈವ್‍ನಲ್ಲಿ ಸೇವ್ ಮಾಡಿಡುವುದಕ್ಕಿಂತ ಗೂಗಲ್ ಡಾಕ್ಸ್ ನಲ್ಲಿ ಸೇವ್ ಮಾಡಬಹುದಾಗಿದೆ. ಈ ರೀತಿ ಮಾಡಿದರೆ ನೀವು ಎಲ್ಲಿ ಹೋದರೂ ಜಸ್ಟ್ ಲಾಗಿನ್ ಮಾಡುವುದರ ಮೂಲಕ ಇದನ್ನು ಸುಲಭವಾಗಿ ಬಳಕೆ ಮಾಡಬಹುದು.

ಡಾಕ್ಯುಮೆಂಟ್‍ಗಳನ್ನು ಮತ್ತೊಬ್ಬರು ಬಳಕೆದಾರರೊಂದಿಗೆ ಹಂಚಿಕೊಳ್ಳುವುದು ಮತ್ತು ಅದನ್ನು ಎಡಿಟಿಂಗ್ ಮಾಡುವ ಸೌಕರ್ಯ ಇರುವುದು ಗೂಗಲ್ ಡಾಕ್ಸ್‍ ನ ಮತ್ತೊಂದು ಸಾಮರ್ಥ್ಯವಾಗಿದೆ. ಒಂದೇ ಡಾಕ್ಯುಮೆಂಟ್ ಅನ್ನು ಹಲವು ಜನರು ಒಂದೇ ಬಾರಿ ಎಡಿಟ್ ಮಾಡಬಹುದಾಗಿದೆ. ಈ ರೀತಿ ಹಲವು ಜನರು ಎಡಿಟ್ ಮಾಡುತ್ತಿರುವಾಗ ಯಾವುದಾದರೂ ಸೆಕ್ಷನ್ ಅನ್ನು ಯಾರಾದರೂ ಗೊತ್ತಿಲ್ಲದೆ ಡಿಲೀಟ್ ಮಾಡಿಬಿಡಬಹುದೆಂಬ ಆತಂಕವೂ ಇಲ್ಲಿಲ್ಲ. ಯಾಕೆಂದರೆ, ಹಳೆಯ ವರ್ಷನ್‍ನ ಡಾಕ್ಸ್ ಸಹ ಲಭ್ಯವಿರುತ್ತದೆ. ನಿಮಗೆ ಬೇಸಿಕ್ ಆಯ್ಕೆಗಳು ಮಾತ್ರ ಸಾಕಾಗುತ್ತದೆ ಎಂದಾದಲ್ಲಿ ಗೂಗಲ್ ಡಾಕ್ಸ್ ಬಳಸಿ. ಸಂಪೂರ್ಣ ಆಯ್ಕೆಗಳು ಬೇಕಿದ್ದರೆ ಮೈಕ್ರೊಸಾಫ್ಟ್ ಆಫೀಸ್‍ನಂತಹ ಸೌಕರ್ಯವನ್ನು ಬಳಸಬೇಕಾಗುತ್ತದೆ.

ಕ್ರೋಮ್ ರಿಮೋಟ್ ಡೆಸ್ಕ್ ಟಾಪ್

ನೀವು ಎಲ್ಲಾದರೂ ವೀಕೆಂಡ್ ಎಂದು ಹೊರಗೆ ಹೋಗಿರುತ್ತೀರಿ. ನಿಮ್ಮ ಬಾಸ್ ಕಾಲ್ ಮಾಡಿ ಆದಾಯದ ಸ್ಪ್ರೆಡ್‍ಶೀಟ್ ತೋರಿಸಿ’ ಎನ್ನುತ್ತಾರೆ. ಆ ಸಮಯದಲ್ಲಿ ನಿಮ್ಮ ಬಳಿಯಲ್ಲಿ ಕಂಪ್ಯೂಟರ್ ಇರುವುದಿಲ್ಲ. ಇಂತಹ ಸಮಯದಲ್ಲಿ ನಿಮ್ಮ ಕಂಪ್ಯೂಟರ್‍ನಲ್ಲಿರುವ ಪ್ರತಿಯೊಂದನ್ನು ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಮತ್ತೊಂದು ಲ್ಯಾಪ್‍ಟಾಪ್‍ನಲ್ಲಿ  ಪಡೆಯುವ ಅವಕಾಶವಿದೆ. ಇದಕ್ಕಾಗಿ ಕ್ರೋಮ್ ರಿಮೋಟ್ ಡೆಸ್ಕ್‍ ಟಾಪ್ ಎಂಬ ಆ್ಯಪ್ ಅನ್ನು ನೀವು ಕೆಲಸ ಮಾಡುವ ಕಂಪ್ಯೂಟರ್‍ಗೆ ಅಳವಡಿಸಬೇಕು. ಎಲ್ಲಾದರೂ ಹೊರಗಡೆ ಇದ್ದಾಗ ಆ ಕಂಪ್ಯೂಟರ್‍ನಲ್ಲಿರುವ ದಾಖಲೆ ಬೇಕಿದ್ದರೆ ನಿಮ್ಮ ಫೋನ್ ನಲ್ಲಿ ರಿಮೋಟ್ ಡೆಸ್ಕ್‍ಟಾಪ್ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಿ. ಅದಕ್ಕೆ ಲಾಗಿನ್ ಆಗಿ. ಅದರೊಳಗೆ ನಿಮ್ಮ ಫೈಲ್ ಇರುತ್ತದೆ.

ಫೋಟೊ ಎಡಿಟಿಂಗ್

ಸ್ನಾಪ್‍ಸೀಡ್ ಎಂಬ ಗೂಗಲ್ ಫೋಟೊ ಎಡಿಟರ್ ಆ್ಯಪ್ ಲಭ್ಯವಿರುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.  ಗೂಗಲ್‍ನ ಅಂಗಸಂಸ್ಥೆ ನಿಕ್ ಸಾಫ್ಟ್‍ವೇರ್‍ನ ಸ್ನಾಪ್‍ಸೀಡ್‍ನ ಈ ಆ್ಯಪ್ ಅನ್ನು ಬಳಸಿ ಚಿತ್ರಗಳನ್ನು ಸರಾಗವಾಗಿ ಎಡಿಟ್ ಮಾಡಬಹುದಾಗಿದೆ. ಇದು ಅತ್ಯಕ ರೇಟಿಂಗ್ ಇರುವ ಉಚಿತ ಆ್ಯಪ್ ಆಗಿದೆ.

ಗೂಗಲ್ ಡ್ರೈವ್

ನಿಮ್ಮ ಫೋನ್ ಅಥವಾ ಕಂಪ್ಯೂಟರ್‍ನಲ್ಲಿ ಇರುವ ಅಗತ್ಯ ಮಾಹಿತಿಗಳನ್ನು ಜಿಮೇಲ್‍ಗೆ ಅಥವಾ ಗೂಗಲ್ ಡ್ರೈವ್‍ನಲ್ಲಿ ಸ್ಟೋರ್ ಮಾಡಿಡಬಹುದು. ಪ್ರಸಕ್ತ ಕ್ಲೌಡ್ ಕಂಪ್ಯೂಟಿಂಗ್‍ಗೆ ಡ್ರೈವ್ ಸೂಕ್ತವಾಗಿದೆ. ಈ ರೀತಿ ಡ್ರೈವ್‍ನಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಪಡೆಯಬಹುದಾಗಿದೆ.

ಗೂಗಲ್ ಕೀಪ್

ಇದು ಸರಳವಾಗಿದ್ದು, ಅತ್ಯಾಕರ್ಷಕ ಫೀಚರ್‍ಗಳನ್ನು ಹೊಂದಿದೆ. ಕೆಲವೊಂದು ನೊಟ್‍ಗಳನ್ನು ಇದರಲ್ಲಿ ಬರೆದಿಡಿ. ಬರೆದಿಟ್ಟಿರುವುದನ್ನು ಯಾವಾಗ ನೆನಪಿಸಬೇಕೆಂದು ಅದರಲ್ಲಿ ನಮೋದಿಸಿ. ನೋಟಿಸ್ ಬೋರ್ಡ್‍ನಲ್ಲಿ ಇಟ್ಟಂತೆ ಪಿನ್ ಮಾಡಿಡಿ. ಯಾವ ಸ್ಥಳ, ಸಮಯ ಇತ್ಯಾದಿ ಮಾಹಿತಿಗಳನ್ನು ಇದು ನೆನಪಿಸುತ್ತದೆ. ಇದರಲ್ಲಿ ವೆಬ್ ಆ್ಯಕ್ಸೆಸ್, ಹ್ಯಾಂಡ್ ರೈಟಿಂಗ್ ಮತ್ತು ವಾಯ್ಸ್ ರೆಕಾಗ್ನಿಷನ್ ಫೀಚರ್ ಸಹ ಇದೆ. ಗೂಗಲ್ ಕೀಪ್ ಅನ್ನು ನೋಡಿಲ್ಲದಿದ್ದರೆ ವೆಬ್‍ಸೈಟ್‍ಗೆ ಭೇಟಿ ನೀಡಿ.

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ  ಓದುವುದು, ಬರೆಯುವುದು ಇಷ್ಟದ ಕೆಲಸ. ಹೆಚ್ಚಿನ ವಿವರಕ್ಕೆ ನನ್ನ ಬಗ್ಗೆ ಪುಟವನ್ನು ನೋಡಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.