ವ್ಯಕ್ತಿತ್ವ ವಿಕಸನ: ಕೆಲಸದ ಕೊನೆಯ ಹತ್ತು ನಿಮಿಷ ಏನು ಮಾಡುವಿರಿ?

By | 21/06/2018

ಕರಿಯರ್‍ ನಲ್ಲಿ ಯಶಸ್ವಿಯಾದವರ ಪ್ರತಿ ನಡೆನುಡಿಯಲ್ಲಿಯೂ ಕಲಿಯಲು ಸಾಕಷ್ಟಿರುತ್ತದೆ. ಇಂತಹ ಉದ್ಯೋಗಿಗಳು ಕೆಲಸ ಹೇಗೆ ಆರಂಭಿಸುತ್ತಾರೆ? ಹೇಗೆ ಮುಗಿಸುತ್ತಾರೆ? ಟೀ ಬ್ರೇಕ್/ಊಟದ ಸಮಯದಲ್ಲಿ ಹೇಗಿರುತ್ತಾರೆ? ಹೀಗೆ ಅವರಿಂದ ನಾವು ಸಾಕಷ್ಟು ಸಂಗತಿಗಳನ್ನು ಕಲಿಯಬಹುದು. ಕಚೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ಹತ್ತು ನಿಮಿಷ ಇದೆ ಎಂದುಕೊಳ್ಳೋಣ. ಆ ಸಮಯವನ್ನು ಇವರು ಹೇಗೆ ಸದುಪಯೋಗ ಮಾಡಿಕೊಳ್ಳುತ್ತಾರೆ ಗೊತ್ತೆ? ಇವುಗಳಲ್ಲಿ ಕೆಲವು ಅಂಶಗಳನ್ನಾದರೂ ನಾವು ಪಾಲಿಸಬಹುದು.

  • ಈ ದಿನ ಮಾಡಿರುವ ಕಾರ್ಯಗಳನ್ನೆಲ್ಲ ಪರಿಶೀಲಿಸುತ್ತಾರೆ. ನಾಳೆ ಬಂದು ಏನು ಮಾಡಬೇಕು ಎಂದು ಕೆಲವು ಸೆಕೆಂಡ್ ಯೋಚಿಸುತ್ತಾರೆ. ಮಾಡಬೇಕಾದ ಕೆಲಸಗಳ ಕುರಿತು ಒಂದಿಷ್ಟು ಹೊತ್ತು ಯೋಚಿಸಿ ಕಂಪ್ಯೂಟರ್ ಆಫ್ ಮಾಡಿ ಮನೆಗೆ ತೆರಳುತ್ತಾರೆ.
  • ತಮ್ಮ ಡೆಸ್ಕ್ ಮತ್ತು ಡೆಸ್ಕ್‍ಟಾಪ್ ಅನ್ನು ಆಗೈನೈಜ್ ಮಾಡುತ್ತಾರೆ. ತಮ್ಮ ಡೆಸ್ಕ್ ಅನ್ನು ಸ್ವಚ್ಛಗೊಳಿಸುತ್ತಾರೆ. ಎಲ್ಲವನ್ನೂ ನೀಟಾಗಿ ಇಡುತ್ತಾರೆ. ಕಂಪ್ಯೂಟರ್ ಡೆಸ್ಕ್‍ಟಾಪ್‍ನಲ್ಲಿ ಅನಗತ್ಯವಾಗಿ ತುಂಬಿರುವುದನ್ನೆಲ್ಲ ಡಿಲೀಟ್ ಮಾಡುತ್ತಾರೆ. ಇವತ್ತು ಮಾಡಿರುವ ಕೆಲಸದ ಫೈಲ್‍ಗಳನ್ನೆಲ್ಲ ಮುಂದೆ ಸುಲಭವಾಗಿ ಸಿಗುವಂತೆ ಕಂಪ್ಯೂಟರ್‍ನಲ್ಲಿ ಫೈಲ್ ರಚಿಸಿ ಇಡುತ್ತಾರೆ.
  • ಇವತ್ತಿನ ಸಾಧನೆ ಏನು ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುತ್ತಾರೆ. ಇವತ್ತು ಮಾಡಿದ್ದೇನು? ಏನಾದರೂ ತಪ್ಪು ನಡೆದಿದೆಯೇ? ಇತ್ಯಾದಿಗಳ ಕುರಿತು ಅವಲೋಕನ ಮಾಡುತ್ತಾರೆ. ಇವತ್ತು ಮಾಡಿರುವ ಕೆಲಸಗಳಲ್ಲಿ ಯಾವಾಗ ಸರಿಯಾಗಿತ್ತು? ಯಾವಾಗ ಸರಿಯಾಗಿರಲಿಲ್ಲ? ಯಾಕೆ ಕೆಲಸದಲ್ಲಿ ವಿಫಲತೆ ಕಂಡುಬಂತು ಇತ್ಯಾದಿಗಳ ಕುರಿತು ಪರಿಶೀಲಿಸುತ್ತಾರೆ. ಇವತ್ತು ತಾನು ಕರಿಯರ್‍ನಲ್ಲಿ ಎಷ್ಟು ಪ್ರಗತಿ ಕಂಡಿರುವೆ ಎಂದು ಆಲೋಚಿಸುತ್ತಾರೆ.
  •  ತಮ್ಮ ಫೋನ್ ಅನ್ನು ನೋಡುತ್ತಾರೆ. ಇವತ್ತು ತಾವು ಕಡೆಗಣಿಸಿದ ಫೋನ್ ಕಾಲ್‍ಗಳಲ್ಲಿ ಯಾವುದಕ್ಕಾದರೂ ಮತ್ತೆ ಕಾಲ್ ಮಾಡುತ್ತಾರೆ. ಕಂಪನಿ ಸಂಬಂತ ತುರ್ತು ಕರೆಗಳನ್ನು ಮಾಡಿ ಮುಗಿಸುತ್ತಾರೆ.
  •  ಯಶಸ್ವಿ ಉದ್ಯೋಗಿಯು ಮನೆಗೆ ಹೊರಡುವ ಮುನ್ನ ತಂಡದ ಸದಸ್ಯರಿಗೆ ನಾಳೆಯ ಕೆಲಸಗಳನ್ನು ನೆನಪಿಸುತ್ತಾರೆ. ಯಾರಿಗೆ ಯಾವ ಕೆಲಸ ನೀಡಬೇಕೋ ಅದನ್ನು ಸಮರ್ಪಕವಾಗಿ ಹಂಚುತ್ತಾರೆ. ಜೊತೆಗೆ, ಇವತ್ತು ಉತ್ತಮ ಕೆಲಸ ಮಾಡಿದ ತಂಡದ ಸದಸ್ಯರಿಗೆ ಮೆಚ್ಚುಗೆ ವ್ಯಕ್ತಪಡಿಸಲು ಯಶಸ್ವಿ ಉದ್ಯೋಗಿಗಳು ಮರೆಯುವುದಿಲ್ಲ.
  • ಮನೆಗೆ ಹೊರಡುವ ಹತ್ತು ನಿಮಿಷ ಮೊದಲು ನಿಮ್ಮ ಮಿದುಳು ತುಂಬಾ ಆ್ಯಕ್ಟೀವ್ ಆಗುತ್ತದೆ. ಉದ್ಯೋಗಕ್ಕೆ ಸಂಬಂಸಿದ ಅಥವಾ ಸಂಬಂಧಪಡದ ಸಂಗತಿಗಳು ನಿಮ್ಮ ತಲೆಯಲ್ಲಿ ಓಡಾಡುತ್ತದೆ. ಬಾಸ್‍ಗೆ ಏನೋ ಹೇಳಬೇಕಿತ್ತು ಎನ್ನುವುದರ ಜೊತೆಗೆ ಮನೆಯಲ್ಲಿ ಹೆಂಡತಿ/ಗಂಡ ಕೊತ್ತಂಬರಿ ಸೊಪ್ಪು ತರಲು ಹೇಳಿದ್ದು ಸಹ ನೆನಪಾಗುತ್ತದೆ. ಇಂತಹ ಸಮಯದಲ್ಲಿ ಹೆಚ್ಚು ಡಿಸ್ಟರ್ಬ್ ಆಗದೆ ಸಾವಧಾನವಾಗಿ ಕೆಲಸ ಮುಗಿಸುವುದು ವೃತ್ತಿಪರರ ಲಕ್ಷಣವಾಗಿದೆ.
  • ಕೆಲಸದ ಅವಧಿಯ ಕೊನೆಯ ಹತ್ತು ನಿಮಿಷ ಯಶಸ್ವಿ ಉದ್ಯೋಗಿಗಳು ನಾಳೆಯ ಪ್ರಾಥಮಿಕ ಗೋಲ್ ಕುರಿತು ಆಲೋಚಿಸುತ್ತಾರೆ. ಈ ಕುರಿತು ನೋಟ್ ಮಾಡಿಟ್ಟುಕೊಳ್ಳುವವರೂ ಇದ್ದಾರೆ. ಅವರು ಮರುದಿನ ಬಂದಾಕ್ಷಣ ಈ ಕೆಲಸಗಳಿಗೆ ಚಾಲನೆ ನೀಡಲು ಸುಲಭವಾಗುತ್ತದೆ. ಇಂತಹ ಉದ್ಯೋಗಿಗಿಳು ನಾಳೆಯ ಶೆಡ್ಯೂಲ್‍ಗಳಿಗೆ ಸಿದ್ಧತೆ ನಡೆಸಲು ಮರೆಯುವುದಿಲ್ಲ.
  • ಈ ಉದ್ಯೋಗಿಗಳು ತಮ್ಮ ಕೆಲಸದ ದಿನದ ಅಂತ್ಯದ ಕೊನೆಯ ನಿಮಿಷಗಳಲ್ಲೂ ಯಾವುದೇ ಉದ್ವೇಗವಿಲ್ಲದೆ ಸಕಾರಾತ್ಮಕ ಮನೋಭಾವದಿಂದ ಇರುತ್ತಾರೆ. ಥ್ಯಾಂಕ್ಸ್ ಹೇಳಬೇಕಾದವರಿಗೆ ಥ್ಯಾಂಕ್ಸ್ ಹೇಳುತ್ತಾರೆ. ಕೊನೆಗೆ ಎಲ್ಲರಿಗೂ ಬಾಯ್, ಗುಡ್‍ಬಾಯ್ ಹೇಳಿ ನಿಶ್ಚಿಂತೆಯಿಂದ ಮನೆಗೆ ಹೊರಡುತ್ತಾರೆ. ನಾವೆಲ್ಲ ಗುಡ್‍ಬಾಯ್ ಹೇಳಿಯೂ ಮತ್ತೆ ಹಲವು ಹೊತ್ತು ಆಫೀಸ್‍ನಲ್ಲೇ ಇರುವುದು ಸಾಮಾನ್ಯ. ಆದರೆ, ಯಶಸ್ವಿ ಉದ್ಯೋಗಿಗಳು ಗುಡ್‍ಬಾಯ್ ಹೇಳಿ ನಿಲ್ಲುವುದಿಲ್ಲ. ವಿಳಂಬ ಮಾಡದೆ ಮನೆಗೆ ಹೊರಡುತ್ತಾರೆ.

Leave a Reply

Your email address will not be published. Required fields are marked *