ಮಹಾಭಾರತದಿಂದ ಉದ್ಯೋಗಿಗಳು ಏನು ಕಲಿಯಬಹುದು?

By | 10/08/2018

ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸುತ್ತಿರುವಾಗ ಮಹಾಭಾರತ ಮತ್ತು ಮ್ಯಾನೇಜ್ಮೆಂಟ್ ಪಾಠಗಳ ಕುರಿತು ಒಂದು ಪುಟ್ಟ ಲೇಖನ ದೊರಕಿತು. ಅದನ್ನು ಆಧಾರವಾಗಿಟ್ಟುಕೊಂಡು ಈ ಲೇಖನವನ್ನು ವಿಸ್ತರಿಸಿ ಬರೆಯಲಾಗಿದೆ ಮತ್ತು ಒಂದಿಷ್ಟು ಹೊಸ ವಿಷಯಗಳನ್ನು ಸೇರಿಸಲಾಗಿದೆ.

ಭಾರತದ ಧಾರ್ಮಿಕ, ತಾತ್ವಿಕ, ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದಾಗಿರುವ ಮಹಾಭಾರತದಲ್ಲಿ ಹಲವು ಪಾಠಗಳು ಅಡಗಿವೆ. ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವವರು ಮಹಾಭಾರತ ಬೋಧಿಸುವ ತತ್ವಗಳನ್ನು `ಕರಿಯರ್ ಪಾಠ’ವಾಗಿ ಸ್ವೀಕರಿಸಬಹುದು. 

ಗಮನ ಕೇಂದ್ರಿಕರಿಸಿದರೆ ಯಶಸ್ಸು

ಗುರು  ದ್ರೋಣಾಚಾರ್ಯರಿಂದ ಪಾಂಡವರು ಮತ್ತು ಕೌರವವರು ಅಸ್ತ್ರ ವಿದ್ಯೆ ಅಥವಾ ಬಿಲ್ವಿದ್ಯೆ ಕಲಿಯುತ್ತಿರುತ್ತಾರೆ. ಒಂದಿನ ಗುರುಗಳಿಗೆ ತಮ್ಮ ಶಿಷ್ಯರನ್ನು ಪರೀಕ್ಷಿಸಬೇಕೆಂದೆನಿಸುತ್ತದೆ. ಎಲ್ಲರಲ್ಲಿಯೂ ದೂರದಲ್ಲಿರುವ ಹಕ್ಕಿಯ ಆಕೃತಿಯ ಕಣ್ಣಿಗೆ ಗುರಿಯಿಡುವಂತೆ ಹೇಳುತ್ತಾರೆ. ಎಲ್ಲರೂ ಗುರಿಯಿಡುವಾಗ `ನಿಮಗೆ ಏನು ಕಾಣಿಸುತ್ತದೆ ಎಂದು ಹೇಳಿ’ ಎಂದು ದ್ರೋಣಾಚಾರ್ಯರು ಪ್ರಶ್ನಿಸುತ್ತಾರೆ. ಒಬ್ಬರು ಮರವೆಂದರೆ, ಇನ್ನೊಬ್ಬರು ಹಕ್ಕಿ ಎಂದೆಲ್ಲ ಉತ್ತರಿಸುತ್ತಾರೆ. ಅರ್ಜುನ ಮಾತ್ರ ನನಗೆ ಹಕ್ಕಿಯ ಕಣ್ಣು ಮಾತ್ರ ಕಾಣಿಸುತ್ತದೆ ಎಂದು ಹೇಳಿ ಗುರಿಯಿಡುತ್ತಾನೆ. ಆತ ಬಿಟ್ಟ ಬಾಣ ಮಾತ್ರ ಗುರಿ ತಲುಪುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಅಥವಾ ಬಿಸ್ನೆಸ್‍ನಲ್ಲಿಯೂ ಯಶಸ್ವಿ ಪಡೆಯಲು ಇದನ್ನು ಆದರ್ಶವಾಗಿ ತೆಗೆದುಕೊಳ್ಳಬಹುದು. ನಿಮಗೆ ಸ್ಪಷ್ಟ ಗುರಿಯಿರಬೇಕು. ಆ ಗುರಿಯೆಡೆಗೆ ಮಾತ್ರ ಲಕ್ಷ್ಯವಿಡಬೇಕು. 

ಕಲಿಕೆಯ ಬಗ್ಗೆ ನಂಬಿಕೆ

ಹಿರಣ್ಯಧನುಷುವಿನ ಮಗನಾದ ಏಕಲವ್ಯನ ಕತೆಯಿಂದಲೂ ಉದ್ಯೋಗ ಕ್ಷೇತ್ರದಲ್ಲಿ ಸ್ಪೂರ್ತಿ ಪಡೆಯಬಹುದು. ದ್ರೋಣಾಚಾರ್ಯ ಬಿಲ್ವಿದ್ಯೆ ಕಲಿಸಲು ಒಪ್ಪದೆ ಇದ್ದರೂ ಈತ ದೃತಿಗೆಡುವುದಿಲ್ಲ. ಗುರುವಿನ ಮೂರ್ತಿ ನಿರ್ಮಿಸಿಕೊಂಡು ನಂಬಿಕೆಯಿಟ್ಟು ಏಕಾಗೃತೆಯಿಂದ ತಾನೇ ಬಿಲ್ವಿದ್ಯೆ ಕಲಿಯುತ್ತಾನೆ. ಯಶಸ್ಸು ಪಡೆಯುತ್ತಾನೆ.

ಯುಪಿಎಸ್‍ಸಿ, ಕೆಪಿಎಸ್‍ಸಿ ಇತ್ಯಾದಿ ಸರ್ಧಾತ್ಮಕ ಪರೀಕ್ಷೆ ಬರೆಯುವವರಲ್ಲಿಯೂ ಅನೇಕರು ಏಕಲವ್ಯನಂತೆ ಸಾಧನೆ ಮಾಡಬೇಕಾಗುತ್ತದೆ. ಎಲ್ಲರಿಗೂ ಕೋಚಿಂಗ್ ದೊರಕುವುದಿಲ್ಲ. ತರಬೇತಿಯ ಕೊರತೆ ಹೆಚ್ಚಿನವರಿಗೆ ಇರುತ್ತದೆ. ಆದರೆ, ಈ ಟೆಕ್ ಯುಗದಲ್ಲಿ ಚಿಂತಿಸಬೇಕಿಲ್ಲ. ಇಂಟರ್‍ನೆಟ್‍ನಲ್ಲಿ ದೊರಕುವ ವಿವಿಧ ವೆಬ್‍ಸೈಟ್‍ಗಳನ್ನೇ ಗುರುವಾಗಿ ಸ್ವೀಕರಿಸಿ ಮನೆಯಲ್ಲಿ ಕುಳಿತು ಏಕಾಗೃತೆಯಿಂದ ಅಧ್ಯಯನ ಮಾಡಿ ಯಶಸ್ಸು ಪಡೆದವರು ಸಾಕಷ್ಟು ಜನರು ಇದ್ದಾರೆ. ಇಂಟರ್‍ನೆಟ್ ಇಲ್ಲದೆ ದಿನನಿತ್ಯ ಪತ್ರಿಕೆಗಳನ್ನು, ನಿಯತಕಾಲಿಕೆಗಳನ್ನು ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆದವರು ಸಾಕಷ್ಟು ಜನರಿದ್ದಾರೆ. ಹೀಗಾಗಿ ನಿಮ್ಮ ಕಲಿಕೆಗೆ ಮಾರ್ಗದರ್ಶಕರು ಇಲ್ಲವೆಂದು ಕೊರಗಬೇಡಿ. ಏಕಲವ್ಯನಂತೆ ಏಕಾಗ್ರತೆಯಿಂದ ನೀವೇ ಅಧ್ಯಯನ ಮಾಡಿ.

ಭಾವನಾತ್ಮಕವಾಗಿರುವಾಗ ನಿರ್ಧಾರ ತೆಗೆದುಕೊಳ್ಳಬೇಡಿ

ಹಸ್ತಿನಾಪುರದ ರಾಜ ಪಾಂಡು. ಒಂದಿನ ಕಾಡಿಗೆ ಬೇಟೆಗೆಂದು ಹೋಗುತ್ತಾನೆ. ಒಂದು ಜೋಡಿ ಜಿಂಕೆಗಳಲ್ಲಿ ಒಂದು ಜಿಂಕೆಯನ್ನು ಕೊಲ್ಲುತ್ತಾನೆ. ಅಲ್ಲಿದ್ದ ಋಷಿಯು ಕೋಪಗೊಂಡು ಈತನಿಗೆ ಶಾಪ ನೀಡುತ್ತಾನೆ. ನೀನು ನಿನ್ನ ಸಂಗಾತಿಯನ್ನು ಮುಟ್ಟಿದಾಗ ನಿನ್ನ ತಲೆ ಛಿದ್ರವಾಗಲಿ ಎನ್ನುವ ಶಾಪ ಅದಾಗಿರುತ್ತಾದೆ. ದುಃಖಿತನಾದ ಪಾಂಡು ತನಗೆ ಉತ್ತರಾಕಾರಿಯೇ ಜನಿಸುವುದಿಲ್ಲವೆಂದುಕೊಂಡು ಸನ್ಯಾಸಿಯಾಗುತ್ತಾನೆ. ಬಹುಶಃ ಆತ ಈ ರೀತಿ ದುಃಖಿತನಾಗಿದ್ದಾಗ ಸನ್ಯಾಸಿಯಾಗುವ ನಿರ್ಧಾರ ತೆಗೆದುಕೊಳ್ಳದೆ ಇದ್ದರೆ ಮಹಾಭಾರತ ಯುದ್ಧವೇ ನಡೆಯುತ್ತಿರಲಿಲ್ಲವೇನೋ!

ಇದೇ ರೀತಿ ನಮ್ಮ ಕರಿಯರ್‍ನಲ್ಲಿಯೂ ಒಮ್ಮೊಮ್ಮೆ ನೋವಾದಾಗ ಏನೋ ನಿರ್ಧಾರ ತೆಗೆದುಕೊಂಡು ಬಿಡುತ್ತೇವೆ. ಯಾರೋ ಏನೋ ಅಂದರು ಎಂದು ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಬಂದು ನಂತರ ಪರಿತಪಿಸುತ್ತಾರೆ. ಉದ್ಯೋಗದಲ್ಲಿ ಲಾಸ್ ಆಯಿತೆಂದು ಕಂಪನಿಯನ್ನೇ ಮಾರಿ ಬಿಡುತ್ತಾರೆ. ನಂತರ ಆ ಕಂಪನಿಯನ್ನು ಖರೀದಿಸಿದವರು ಅದನ್ನು ಲಾಭದತ್ತ ಕೊಂಡೊಯ್ದಾಗ ಅಯ್ಯೋ ನಾನು ಮಾರಬಾರದಿತ್ತು ಎಂದುಕೊಳ್ಳುತ್ತಾರೆ. ಇಂತಹ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ ಇರುವುದು ಒಳ್ಳೆಯದು. ಭಾವನಾತ್ಮಕವಾಗಿರುವಾಗ ಯಾವ ನಿರ್ಧಾರ ತೆಗೆದುಕೊಳ್ಳಲು ಹೋಗದಿರಿ. 

ಈ ಮಾತು ಪ್ರೇಮವೈಫಲ್ಯವಾಯಿತೆಂದು, ಪರೀಕ್ಷೆಯಲ್ಲಿ ಫೇಲ್ ಆದಿವೆಂದು, ಅಮ್ಮ ಬೈದರೆಂದು ಬೇಜಾರಾಗಿ ಆತ್ಮಹತ್ಯೆ ಅಥವಾ ಮನೆಬಿಟ್ಟು ಓಡಿಹೋಗುವ ನಿರ್ಧಾರಗಳನ್ನು ಮಾಡುವವರಿಗೂ ಅನ್ವಯವಾಗುತ್ತದೆ. ಇಂತಹ ಭಾವನಾತ್ಮಕ ಸನ್ನಿವೇಶಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸ್ವಲ್ಪ ಸಮಯವನ್ನು ಕಾಲದ ಕೈಗೆ ಬಿಟ್ಟು ನೋಡಬೇಕು. ಮುಂದೊಂದು ದಿನ ನಿಮಗೆ ಹೊಸ ಬೆಳಕು ಕಾಣಿಸಿಕೊಳ್ಳಬಹುದು.

ಅರೆಬರೆ ಜ್ಞಾನ ಬೇಡ

ನಿಮಗೆ ಅಭಿಮನ್ಯುವಿನ ಕತೆ ಗೊತ್ತಿರಬಹುದು. ಆತನಿಗೆ ಚಕ್ರವ್ಯೂಹ ಪ್ರವೇಶಿಸುವ ಕಲೆ ಗೊತ್ತಿತ್ತು. ಆದರೆ, ಅಲ್ಲಿಂದ ವಾಪಸ್ ಬರುವ ಕೌಶಲ ತಿಳಿದಿರಲಿಲ್ಲ. ಹೀಗಾಗಿ ಯುದ್ಧದಲ್ಲಿ ಆತ ಮೃತನಾಗಬೇಕಾಯಿತು.. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿಯೂ ಅರೆಬರೆ ಜ್ಞಾನ ಒಳ್ಳೆಯದಲ್ಲ. ಯಾವುದಾದರೂ ಕೌಶಲವನ್ನು ಸರಿಯಾಗಿ, ಸಮರ್ಪಕವಾಗಿ ಮತ್ತು ಪೂರ್ಣವಾಗಿ ಕಲಿತುಕೊಳ್ಳಿ. ಇದರಿಂದ ಯಶಸ್ಸು ನಿಮ್ಮದಾಗಬಹುದು. ಇದು ಮಾಹಿತಿ ಜಗತ್ತು. ಸಮರ್ಪಕವಾದ ಮಾಹಿತಿಯನ್ನು ಪಡೆದೇ ನೀವು ಆ್ಯಕ್ಷನ್‍ಗೆ ಇಳಿಯಬೇಕು. ಅರೆ ಜ್ಞಾನವಿದ್ದರೆ ಪೂರ್ತಿ ಜ್ಞಾನ ಪಡೆಯುವ ಆಸಕ್ತಿ ನಿಮ್ಮಲ್ಲಿರಬೇಕು. ಸ್ವಲ್ಪ ಗೊತ್ತಿದ್ದರೆ ಪೂರ್ತಿ ಗೊತ್ತಿರುವವರ ತರಹ ನಟನೆ ಮಾಡಬೇಡಿ. ಈ ರೀತಿ ಮಾಡಿದರೆ ಮುಂದೆ ಕಷ್ಟವಾಗಬಹುದು.

ನಿಮ್ಮ ಹಕ್ಕುಗಳಿಗಾಗಿ ಹೋರಾಡಿ

ಮಹಾಭಾರತ ಯುದ್ಧದಿಂದ ನಾವು ಇದನ್ನು ಕಲಿಯಬಹುದು. ಪಾಂಡವರು ಭೂಮಿ ಕೇಳಿದಾಗ ದುಯೋಧನ ಕೊಡಲಿಲ್ಲ. ಅದಕ್ಕಾಗಿ ಮಹಾಭಾರತ ಯುದ್ಧವೇ ನಡೆಯಬೇಕಾಯಿತು. ಇದೇ ರೀತಿ ಕರಿಯರ್‍ನಲ್ಲಿ ನೀವು ಏನು ಪಡೆಯಲು ಬಯಸುವಿರೋ ಅದಕ್ಕಾಗಿ ಧರ್ಮಮಾರ್ಗದ ಯುದ್ಧನೀತಿಯನ್ನು ಅನುಸರಿಸಬಹುದು.

ಕೆಟ್ಟವರ ಸಹವಾಸ ಬೇಡ

ಮಹಾಭಾರತದಲ್ಲಿ ಶಕುನಿ ಮತ್ತು ದುಯೋಧನನ ಸ್ನೇಹದಿಂದ ನಮ್ಮ ಕರಿಯರ್‍ನಲ್ಲಿ ಮಹಾನ್ ಪಾಠವೊಂದನ್ನು ಕಲಿಯಬಹುದು. ಬಿಸ್ನೆಸ್‍ನಲ್ಲಿ ನಿಮಗೆ ಕೆಟ್ಟ ಪಾಲುದಾರ ಸಿಕ್ಕರೆ ಆತನಿಂದ ನಿಮಗೆ ಸಾಕಷ್ಟು ನಷ್ಟವಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಕಂಪನಿಯ ಕುರಿತು ನಕಾರಾತ್ಮಕವಾಗಿ ಮಾತನಾಡುವವರ ಜೊತೆಗೆ ನೀವು ಸ್ನೇಹದಿಂದ ಇದ್ದರೆ ಆತನೊಂದಿಗೆ ನಿಮಗೂ ಗೇಟ್ ಪಾಸ್ ಸಿಗಬಹುದು. ಕೆಟ್ಟ ಜೊತೆಗಾರರು ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತಾರೆ. 

ಮ್ಯಾನೇಜ್‍ಮೆಂಟ್ ಪಾಠಗಳು

  • ಕೆಲಸವನ್ನು ಹಂಚಿಕೊಳ್ಳಿ: ಕೌರವರಲ್ಲಿ 100 ಜನರಿದ್ದರು. ಆದರೆ, ನಾಯಕ ದುರ್ಯೋಧನ ಮಾತ್ರ. ಆದರೆ ಪಾಂಡವರು ಐವರು. ಅವರು ಕೆಲಸವನ್ನು ಸಮರ್ಪಕವಾಗಿ ಹಂಚಿಕೊಂಡು ಗೆಲುವು ಪಡೆದರು. ನಿಮ್ಮ ಉದ್ಯೋಗದಲ್ಲಿಯೂ ಟೀಂ ವರ್ಕ್‍ಗೆ ಮಹತ್ವ ನೀಡಿ. 
  • ಟೀಂ ಸ್ಪಿರೀಟ್: ಕೌರವರ ಸಂಖ್ಯೆ ಹೆಚ್ಚಿದ್ದರೂ ಅವರ ಸಾಮಥ್ರ್ಯ ಗೌಣ. ಪಾಂಡವರಲ್ಲಿ ತಂಡ ಸ್ಪೂರ್ತಿಯೇ ಯಶಸ್ಸಿಗೆ ಕಾರಣವಾಯಿತು. ನಿಮ್ಮ ಉದ್ಯೋಗದಲ್ಲಿಯೂ ತಂಡದಲ್ಲಿ ಹೆಚ್ಚು ಆಸಕ್ತಿಯಿಂದ ಕಾರ್ಯನಿರ್ವಹಿಸಿ. 
  • ವೈಯಕ್ತಿಕ ಗುರಿಗಳು: ಪಾಂಡವರು ಕಡೇ ತನಕ ಒಬ್ಬೊಬ್ಬರಿಗೆ ಒಂದೊಂದು ಗುರಿ ನಿಗದಿಪಡಿಸಿ ಯಶಸ್ಸು ಪಡೆದರು. ಇದೇ ರೀತಿ ಮ್ಮ ತಂಡದ ಪ್ರತಿಯೊಬ್ಬ ಸದಸ್ಯರಿಗೂ ವೈಯಕ್ತಿಕ ಗುರಿಗಳನ್ನು ನೀಡಿ.
  • ಬದ್ಧತೆ: ಕಡಿಮೆ ಸಂಖ್ಯೆಯಲ್ಲಿದ್ದರೂ ಬದ್ಧತೆಯಿಂದ ವರ್ತಿಸಿದ್ದರಿಂದ ಪಾಂಡವರಿಗೆ ಗೆಲುವಾಯಿತು. ಎಲ್ಲಾದರೂ ನೀವು ಯಾವುದಾದರೊಂದು ಸವಾಲನ್ನು ಸ್ವೀಕರಿಸಿದ್ದೀರೋ ಅದನ್ನು ಅರ್ಧದಲ್ಲಿ ಬಿಟ್ಟುಬಿಡಬೇಡಿ. ಕೊನೆಯವರೆಗೆ ಬದ್ಧತೆ ಪ್ರದರ್ಶಿಸಿ ಯಶಸ್ಸು ನಿಮ್ಮದಾಗಿಸಿಕೊಳ್ಳಿ.
  • ಪ್ರತಿಯೊಬ್ಬರ ಸಂಭಾವ್ಯ ಸಾಮರ್ಥ್ಯದ ಅರಿವು ನಿಮಗಿರಲಿ. ನೀವು ಒಂದು ತಂಡವನ್ನು ನಿರ್ವಹಿಸುವುದಾದರೆ ನಿಮ್ಮ ತಂಡದ ಪ್ರತಿಯೊಬ್ಬ ಸದಸ್ಯರ ಸಾಮರ್ಥ್ಯ ಮತ್ತು ಮಿತಿಗಳನ್ನು ತಿಳಿದುಕೊಳ್ಳಬೇಕು. ಮಹಾಭಾರತ ಯುದ್ಧದಲ್ಲಿ ಧರ್ಮರಾಯ, ಭೀಮ, ಅರ್ಜುನ, ನಕುಲ ಸಹದೇವರು ತಂಡದಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸೇನೆಯ ನೇತೃತ್ವವನ್ನು ವಹಿಸಿಕೊಂಡರು. ಅದೇ ಕ್ಷೇತ್ರದಲ್ಲಿ ಹೋರಾಡಿ ಯಶಸ್ಸು ಪಡೆದರು. 

One thought on “ಮಹಾಭಾರತದಿಂದ ಉದ್ಯೋಗಿಗಳು ಏನು ಕಲಿಯಬಹುದು?

  1. Pingback: ವರ್ಡ್ ಪ್ರೆಸ್ ವೆಬ್ ಸೈಟಿನಲ್ಲಿ ಇನ್ಮುಂದೆ ಗುಟೆನ್ ಬರ್ಗ್ ಎಡಿಟರ್ ಹವಾ | KarnatakaBest.Com

Leave a Reply

Your email address will not be published. Required fields are marked *