ರುಚಿಕರವಾದ ಮಾವಿನಹಣ್ಣಿನ ಲಾಡು ಮಾಡುವ ಸರಳ ವಿಧಾನ

By | 23/08/2018
Bisibele bath recipe kannada

ಮಾವಿನಹಣ್ಣು  ಎಂದಾಕ್ಷಣ ಕಣ್ಣುಗಳು ಅರಳುತ್ತದೆ. ಎಷ್ಟು ತಿಂದರೂ ಮತ್ತೂ ಬೇಕು ಅನಿಸುವ ಈ ಹಣ್ಣಿನ ಸ್ವಾದವೇ ಅಂತದ್ದು. ಮಕ್ಕಳಿಗಂತೂ ಮಾವಿನ ಹಣ್ಣುಗಳೆಂದರೆ ಪಂಚಪ್ರಾಣ. ಮಾವಿನ ಹಣ್ಣಿನಲ್ಲಿ ಸೀಕರಣೆ, ಜ್ಯೂಸ್, ಐಸ್ ಕ್ರೀಮ್ ಮಾಡುತ್ತಾರೆ. ಹಾಗೇ ಇನ್ನು ಕೆಲವರು ಇದರಲ್ಲಿ ಬರ್ಪಿ ಮಾಡುತ್ತಾರೆ. ನಾನಿಲ್ಲಿ ಮಾವಿನ ಹಣ್ಣಿನ ಲಾಡು ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇನೆ ನೋಡಿ. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ ಲಾಡು ಇಷ್ಟವಾಗಬಹುದು.

ಮಾವಿನಹಣ್ಣಿನ ಲಾಡು  ಮಾಡುವುದಕ್ಕೆ ಅಗತ್ಯವಾಗಿರುವ ಸಾಮಾಗ್ರಿಗಳು 

ಮಾವಿನ ಹಣ್ಣಿನ ತಿರುಳು- 1 ಕಪ್ ತಗೊಳ್ಳಿ, ಆರಿದ ಗಟ್ಟಿಯಾದ ಹಾಲು – 1ಕಪ್ ಸಾಕು. ಹಾಗೆ ಒಣ ಕೊಬ್ಬರಿಯ ತುರಿ – 1 ಕಪ್ , ಸ್ವಲ್ಪಏಲಕ್ಕಿ ಪುಡಿ, ಹಾಗೇ ಸಣ್ಣದಾಗಿ ಕತ್ತರಿಸಿಕೊಂಡ ಗೋಡಂಬಿ, ಬಾದಾಮಿ, ಪಿಸ್ತಾ ಚೂರುಗಳು ಒಂದು ಅರ್ಧ ಕಪ್ ಇದ್ದರೆ ಸಾಕು.

ಮಾವಿನಹಣ್ಣಿನ ಲಾಡು ಮಾಡುವ ವಿಧಾನ ನೋಡೋಣ

ಮೊದಲಿಗೆ  ಒಂದು ಅಗಲವಾದ ಬಾಣಲೆ ತೆಗೆದುಕೊಂಡು ಕೊಬ್ಬರಿ ತುರಿಯನ್ನು ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಅದಕ್ಕೆ ಮಾವಿನ ಹಣ್ಣಿನ ತಿರುಳನ್ನು ಹಾಕಿ. ಅದು ಸ್ವಲ್ಪ ಹದವಾದ ಮಿಶ್ರಣಕ್ಕೆ ಬಂದ ಕೂಡಲೇ  ಹಾಲು, ಡ್ರೈ ಪ್ರೂಟ್ಸ್, ಚಿಟಿಕೆಯಷ್ಟು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಗ್ಯಾಸ್ ಫ್ಲೇಮ್ ಸಣ್ಣಗೆ ಇಟ್ಟುಕೊಳ್ಳಿ. ಇಲ್ಲದಿದ್ದರೆ ತಳ ಹಿಡಿಯುವ ಸಾಧ್ಯತೆ ಇರುತ್ತದೆ. ಒಂದು ಸೌಟಿನಿಂದ  ಈ ಮಿಶ್ರಣವನ್ನು ತಿರುವುತ್ತಾ ಇರಿ. ಈ ಮಿಶ್ರಣ ಒಂದು ದಪ್ಪ ಹಿಟ್ಟಿನ ಮುದ್ದೆಯಂತೆ ಆಗುತ್ತದೆ. ಆಗ ಅದು ಲಾಡು ಕಟ್ಟುವ ಹದಕ್ಕೆ ಬಂದಿದೆ ಎಂದು ಅರ್ಥ. ಗ್ಯಾಸ ನಿಂದ ಈ ಮಿಶ್ರಣವನ್ನು ಕೆಳಗಿಳಿಸಿ, ಆರಲು ಬಿಡಿ.ಹದ ಬಿಸಿ ಇರುವಾಗ ಕೈಗೆ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆ ಕಟ್ಟಿ. ನಂತರ ಇದರ ಮೇಲೆ ತೆಂಗಿನ ತುರಿಯನ್ನು ಉದುರಿಸಿ. ಇನ್ಯಾಕೆ ತಡ ಮಾವಿನ ಹಣ್ಣಿನ ಲಡ್ಡು ಮಾಡಿಬಿಡಿ.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 

ನಮ್ಮ ಇಮೇಲ್ ವಿಳಾಸ: bpchand@gmail.com