ಆರೋಗ್ಯಕ್ಕೆ ಉತ್ತಮವಾದ ಮೆಂತ್ಯಸೊಪ್ಪಿನ ಕಡುಬು

By | September 6, 2018
Bisibele bath recipe kannada
Mobile Apps Category (English)234x60

ಮೆಂತ್ಯಸೊಪ್ಪು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಮೆಂತ್ಯಸೊಪ್ಪಿನಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ಪೊಟ್ಯಾಶಿಯಂಗಳಿವೆ. ಇದು ಚರ್ಮ, ಕೂದಲು ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇಷ್ಟೊಂದು ಉಪಯೋಗಕಾರಿಯಾದ ಮೆಂತ್ಯ ಸೊಪ್ಪು ಕಹಿ ಎಂದು ಅದನ್ನು ತಿನ್ನಲು ಕೆಲವರು ಇಷ್ಟಪಡುವುದಿಲ್ಲ. ಆದಕಾರಣ ಮೆಂತ್ಯ ಸೊಪ್ಪು ಎಂದಾಕ್ಷಣ ದೂರ ಓಡಿ ಹೋಗುವವರಿಗೆ ಅದರಿಂದ ರುಚಿ ರುಚಿಯಾದ ಕಡುಬು ಮಾಡಿಕೊಡಿ. ಒಂದು ಸಾರಿ ತಿಂದರೆ ಮತ್ತೆ ಬಿಡೋದೆ ಇಲ್ಲ.

ಮೆಂತ್ಯಸೊಪ್ಪಿನ ಕಡುಬು ಮಾಡಲು ಬೇಕಾಗುವ ಸಾಮಾಗ್ರಿಗಳು 

ಮೊದಲಿಗೆ 2 ದೊಡ್ಡ ಕಪ್ ಜೋಳದ ಹಿಟ್ಟನ್ನು ತೆಗೆದುಕೊಳ್ಳಿ.( ಜೋಳದ ಹಿಟ್ಟಿನ ಬದಲು ಅಕ್ಕಿಹಿಟ್ಟನ್ನು ಸಹ ಬಳಸಬಹುದು.ಇದು ಕೂಡ ತುಂಬಾ ಚೆನ್ನಾಗಿರುತ್ತದೆ.), 2 ಟೇಬಲ್ ಸ್ಪೂನ್ ಓಂಕಾಳು, 2 ಟೇಬಲ್ ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣದಾಗಿ ಹೆಚ್ಚಿದ ಈರುಳ್ಳಿ 1/2 ಕಪ್, ½ ಕಪ್ ಮೆಂತ್ಯಸೊಪ್ಪು, 2 ಹಸಿಮೆಣಸಿನಕಾಯಿ, ಒಗ್ಗರಣೆಗೆ-ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ, ಅರಿಶಿಣ, ಕರಿಬೇವು ತೆಗೆದುಕೊಳ್ಳಿ.

ಮೆಂತ್ಯಸೊಪ್ಪಿನ ಕಡುಬು ತಯಾರಿಸುವುದು ಹೇಗೆ?

ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟನ್ನು ಹಾಕಿ ಅದಕ್ಕೆ ಓಂಕಾಳು, 2 ಟೇಬಲ್ ಸ್ಪೂನ್ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತಣ್ಣೀರು ಹಾಕಿಕೊಂಡು ಚೆನ್ನಾಗಿ ಮೆದುವಾಗುವವರೆಗೂ  ಕಲಿಸಿ. ಅದರ ಮೇಲೆ ಎಣ್ಣೆ ಸವರಿ ನಂತರ ಕೈಗೂ ಸ್ವಲ್ಪ ಎಣ್ಣೆ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಅದನ್ನು ಎಣ್ಣೆ ಸವರಿದ ಪಾತ್ರೆಯೊಂದರಲ್ಲಿ ಹಾಕಿಕೊಳ್ಳಿ. ಅದನ್ನು ಕುಕ್ಕರಿನಲ್ಲಿಟ್ಟು 2 ವಿಷಲ್ ಹೊಡಿಸಿ ಅಥವಾ ಇಡ್ಲಿ ಪಾತ್ರೆಯಲ್ಲಾದರೆ 25-30 ನಿಮಿಷ ಬೇಯಿಸಿರಿ.

ಇನ್ನೊಂದು ಕಡೆ  ಒಂದು ಪಾತ್ರೆಯಲ್ಲಿ ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಅರಿಶಿಣ, ಕರಿಬೇವು ಹಾಕಿ, ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಮೆಂತ್ಯಸೊಪ್ಪು, ಹಸಿಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ.( ನೀರು ಹಾಕಲೇಬಾರದು) ಮುಕ್ಕಾಲು ಬೆಂದ ಮೇಲೆ ಅದಕ್ಕೆ ಬೇಯಿಸಿದ ಹಿಟ್ಟಿನ ಉಂಡೆಗಳನ್ನು ಬಿಡಿ ಬಿಡಿಯಾಗಿ ಬಿಡಿಸಿ ಹಾಕಿ ಚೆನ್ನಾಗಿ ಕೈಯಾಡಿಸಿರಿ. ಸ್ವಲ್ಪ ಹೊತ್ತು ಮುಚ್ಚಿಡಿ. ನಂತರ ಆಫ್ ಮಾಡಿ. ಈಗ ಮೆಂತೆ ಕಡುಬು ತಿನ್ನಲು ರೆಡಿ. ಇದನ್ನು ಬಿಸಿ ಬಿಸಿಯಾಗಿ ತಿಂದರೆ ಚೆನ್ನಾಗಿರುತ್ತದೆ. ಗಟ್ಟಿ ಮೊಸರಿನ ಜೊತೆಗೂ ತಿಂದರೆ ತುಂಬಾ ರುಚಿಯಾಗಿರುತ್ತದೆ.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 

ನಮ್ಮ ಇಮೇಲ್ ವಿಳಾಸ: bpchand@gmail.com

Scroll To Top
Contact Us