ಸಿಹಿ ಪ್ರಿಯರಿಗೆ ಸವಿಯಾದ ಸೌದಿ ಅರೇಬಿಯಾ ಡೆಸಾರ್ಟ್ ರೆಸಿಪಿ

By | 22/08/2018
Bisibele bath recipe kannada

ಸಿಹಿ ತಿನಿಸು ಎಂದರೆ, ಯಾರಿಗೆ ಪ್ರಿಯವಲ್ಲ ಹೇಳಿ. ಕೆಲವರಿಗೆ  ಊಟವಾದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಬಯಕೆ ಇರುತ್ತದೆ. ಇನ್ನು ಕೆಲವರಿಗೆ ಖಾರದ ಜತೆ ಏನಾದರೂ ಸಿಹಿ ಬೇಕೆ ಬೇಕು. ಅದರಲ್ಲೂ ಹಬ್ಬ ಹರಿದಿನಗಳ ದಿನದಲ್ಲಿ  ಅಥವಾ ಮಕ್ಕಳ ಹುಟ್ಟುಹಬ್ಬದ ದಿನದಲ್ಲಿ ತಾಯಂದಿರೂ ಏನಾದರು ಒಂದು ಸಿಹಿ ಖಾದ್ಯ ಮಾಡಬೇಕು ಅದರಲ್ಲೂ ಈಗಿನ ಮಕ್ಕಳ ಬಾಯಿ ರುಚಿಗಾಗಿ ವಿಭಿನ್ನವಾದದ್ದನ್ನು ಮಾಡಬೇಕು ಎಂಬ ಹಂಬಲ ತಾಯಂದಿರದ್ದಾಗಿರುತ್ತದೆ. ಹಾಗಾಗಿ ಸಮಯ ಸಿಕ್ಕಾಗ ನೀವು ಈ ರುಚಿಕರವಾದ ಸೌದಿ ಅರೇಬಿಯಾ ಡೆಸಾರ್ಟ್ ಅನ್ನು ಮಾಡಬಹುದು.

ಇದರ ಹೆಸರೇ ಹೇಳುವ ಹಾಗೇ ಇದೊಂದು ಸಿಹಿಯಾದ ತಿನಿಸು. ಒಮ್ಮೆ ತಿಂದರೆ ಬಾಯಿಚಪ್ಪರಿಸುತ್ತೀರಿ. ಅಷ್ಟೇನೂ ಕಷ್ಟವಲ್ಲದ ಈ ವಿಭಿನ್ನವಾದ ಹಾಗೇ ಅಷ್ಟೇ ರುಚಿಕರವಾದ ತಿನಿಸನ್ನು ನೀವು ಮನೆಯಲ್ಲಿಯೇ ಇರುವ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಮಾಡಬಹುದು. ದಿನಾ ಅದೇ ಜಾಮಾನು, ಪಾಯಸ ಮಾಡುವುದಕ್ಕಿಂತ ಈ ಖಾದ್ಯವನ್ನು ಮಾಡ ನೋಡಿ. ಹಾಗೇ ಇದನ್ನು 20 ನಿಮಿಷಗಳ ಕಾಲ ಪ್ರಿಜರ್ ನಲ್ಲಿಟ್ಟು  ಆಮೇಲೆ ಕೂಡ ಸವಿಯಬಹುದು. ಒಳ್ಳೆ ಐಸ್ ಕ್ರೀಮ್ ಸವಿದ ಹಾಗೇ ಆಗುತ್ತದೆ.

ಸೌದಿ ಅರೇಬಿಯಾ ಡೆಸಾರ್ಟ್ ಮಾಡಲು ಬೇಕಾಗುವ ಸಾಮಾಗ್ರಿಗಳು

  • ಮೊಸರು-ಕಾಲು ಲೀಟರ್
  • ಮೊಟ್ಟೆ-ನಾಲ್ಕು
  • ಸಕ್ಕರೆ-50 ಗ್ರಾಂ
  • ಮಿಲ್ಕ್ ಪೌಡರ್-2 ಚಿಕ್ಕ ಪ್ಯಾಕ್
  • ರೋಸ್ ಎಸೆನ್ಸ್-1 ಚಿಕ್ಕ ಚಮಚ
  • ಬಾದಾಮಿ ಚೂರು-2 ಚಮಚ
  • ಕೇಸರಿ-ಸ್ವಲ್ಪ

ಸೌದಿ ಅರೇಬಿಯಾ ಡೆಸಾರ್ಟ್ ಮಾಡುವ ವಿಧಾನ

ಒಂದು ಗ್ಲಾಸ್ ನೀರಿಗೆ 50 ಗ್ರಾಂ ಸಕ್ಕರೆ ಸೇರಿಸಿ ಒಲೆಯ ಮೇಲೆ ಇಡಿ. ಸಕ್ಕರೆ ಪಾಕ ಬರಬೇಕು ಎಂದೇನಿಲ್ಲ. ಕರಗಿದರೆ ಸಾಕು. ಇದಕ್ಕೆ ಕೇಸರಿಯನ್ನು ಸೇರಿಸಿ. ನಂತರ ಒಂದು ಮಿಕ್ಸಿ ಜಾರಿಗೆ ಕಾಲು ಲೀಟರ್ ಮೊಸರು, ಮಿಲ್ಕ್ ಪೌಡರ್, ಮೊಟ್ಟೆ ಹಾಕಿ ಎರಡು ಸುತ್ತು ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಸಕ್ಕರೆ ಪಾಕಕ್ಕೆ ಹಾಕಿ ಕುದಿಸಿ. ಒಂದು ಸಲ ಸೌಟಿನಲ್ಲಿ ಕದಡಿಸಿದರೆ ಸಾಕು. ಮತ್ತೆ ಮತ್ತೆ ಕದಡಿಸಬಾರದು. ಇದನ್ನು 5 ನಿಮಿಷಗಳ ಕಾಲ ಬೇಯಿಸಿ. ನಂತರ ಇದಕ್ಕೆ ರೋಸ್ ಎಸೆನ್ಸ್ ಹಾಕಿ. ಬಾದಾಮಿಯಿಂದ ಅಲಂಕರಿಸಿ. ಫ್ರಿಜರ್ ನಲ್ಲಿ 20 ನಿಮಿಷಗಳ ಕಾಲ ಇಟ್ಟು ತಿನ್ನಬಹುದು ಹಾಗೇನೂ ತಿನ್ನಬಹುದು.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. ನಮ್ಮ ಇಮೇಲ್ ವಿಳಾಸ: [email protected]

Leave a Reply

Your email address will not be published. Required fields are marked *