ಪುಸ್ತಕ ಪರಿಚಯ: ಸಾಫ್ಟ್ ಮನ ಮತ್ತು ಮಹತ್ವಾಕಾಂಕ್ಷೆ

By | 26/08/2018
Kannada books

ಕಾದಂಬರಿಯಾದರೆ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದೇ ಉಸಿರಿಗೆ ಓದಬಹುದು. ಪುಟ್ಟಪುಟ್ಟ ಲೇಖನಗಳಿಗರುವ ಪುಸ್ತಕಗಳನ್ನು ಒಂದೇ ಸಾರಿ ಓದಿ ಮುಗಿಸಬೇಕಿಲ್ಲ. ಒಂದೊಂದು ಲೇಖನ ಓದಿ ವಿರಮಿಸಿ ಮತ್ತೆ ಮುಂದಿನ ಲೇಖನ ಓದಬಹುದು.

ನಾನು ಇತ್ತೀಚೆಗೆ ಒಂದೇ ಬಾರಿ ಎರಡು ಕನ್ನಡ ಪುಸ್ತಕಗಳನ್ನು ಖರೀದಿಸಿದೆ. ಸುಧಾಮೂರ್ತಿಯವರ “ಸಾಫ್ಟ್ ಮನ” ಮತ್ತು ಪರಶಿವಪ್ಪ ಅವರ “ಮಹತ್ವಾಕಾಂಕ್ಷೆ”. ಶೀರ್ಷಿಕೆ ಬೇರೆಬೇರೆಯಾಗಿ ಕಂಡರೂ ಎರಡೂ ಪುಸ್ತಕಗಳೂ ಬದುಕಿನ ಕತೆಗಳನ್ನೇ ಹೇಳಿ ಸ್ಫೂರ್ತಿ ತುಂಬುವಂತದ್ದು.

ನಾನು ಈ ಎರಡು ಪುಸ್ತಕಗಳನ್ನೂ ಒಟ್ಟಿಗೆ ಓದಿದೆ! ಅಂದರೆ, ಸಾಫ್ಟ್ ಮನದ ಕೆಲವು ಲೇಖನ ಓದಿದ ಬಳಿಕ ಮಹತ್ವಾಕಾಂಕ್ಷೆಯ ಕೆಲವು ಲೇಖನಗಳನ್ನು ಓದುವುದು. ಬಳಿಕ ಸಾಫ್ಟ್ ಮನ, ತರುವಾಯ ಮಹತ್ವಾಕಾಂಕ್ಷೆ. ಹೀಗಾಗಿ, ಕರ್ನಾಟಕ ಬೆಸ್ಟ್.ಕಾಂನ ಈ ಬಾರಿಯ ಪುಸ್ತಕ ಪರಿಚಯದಲ್ಲಿ ಎರಡೂ ಪುಸ್ತಕವನ್ನು ಒಂದೇ ಲೇಖನದಲ್ಲಿ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.

ಇವೆರಡು ಪುಸ್ತಕಗಳ ಉದ್ದೇಶ ಒಂದೇ ಆಗಿದ್ದರೂ ಇವೆರಡು ಪುಸ್ತಕಗಳ ನಡುವೆ ಸಾಕಷ್ಟು ಭಿನ್ನತೆ, ಅಂತರವೂ ಇದೆ. ಸುಧಾಮೂರ್ತಿ ಅವರು ಬರವಣಿಗೆಯಲ್ಲಿ ಈಗಾಗಲೇ ಸಾಕಷ್ಟು ಅನುಭವ ಹೊಂದಿದ್ದಾರೆ. 

ಮೊದಲನೆಯದಾಗಿ ಮಹತ್ವಾಕಾಂಕ್ಷೆಯು ಪರಶಿವಪ್ಪ ಅವರ ಮೊದಲ ಪುಸ್ತಕ. ಮೊದಲ ಪ್ರಯತ್ನ. ಮೂಲತಃ ಬರಹಗಾರರಲ್ಲ. ಆದರೆ, ಬರೆಯಲು ಅವರಲ್ಲಿ ಸಾಕಷ್ಟು ಅನುಭವಗಳಿವೆ. ತಾನು ಸಾಗಿ ಬಂದ ಹಾದಿ ಮತ್ತು ತನ್ನಂತೆಯೇ ಮಹತ್ವಾಕಾಂಕ್ಷೆಯಿಂದ ಬೆಳೆದುಬಂದವರ ಕುರಿತು ಬರೆಯುವ ಪ್ರಯತ್ನವನ್ನು ಮಹತ್ವಾಕಾಂಕ್ಷೆಯಲ್ಲಿ ಮಾಡಿದ್ದಾರೆ. ಪುಸ್ತಕದಲ್ಲಿ ಅಣ್ಣನ, ಆತ್ಮೀಯ ವ್ಯಕ್ತಿಯ ಸ್ಥಾನದಲ್ಲಿ ನಿಂತು ಓದುಗರಿಗೆ ಸ್ಪೂರ್ತಿ ತುಂಬಲು ಪ್ರಯತ್ನಿಸುತ್ತಾರೆ.

ಸುಧಾಮೂರ್ತಿ ಅವರ ಅನುಭವ, ಒಳನೋಟ, ಗ್ರಹಿಕೆಗಳು ಇನ್ನೊಂದು ರೀತಿ. ಅಮ್ಮ ಮಕ್ಕಳಿಗೆ, ಅಜ್ಜಿ ಮೊಮ್ಮಕ್ಕಳಿಗೆ ಕತೆ ಹೇಳುವ ರೀತಿ ಅವರ ನಿರೂಪಣೆ ಶೈಲಿ. ಅವರ ಬರವಣಿಗೆ ಶೈಲಿಯೂ ತುಂಬಾ ಆಪ್ತ. ದೊಡ್ಡವರ ಸಣ್ಣತನ, ಸಣ್ಣವರ ದೊಡ್ಡತನ ಸೇರಿದಂತೆ ಅವರು ಸಾಕಷ್ಟು ಸಂಗತಿಗಳನ್ನು ಹೇಳುತ್ತಾರೆ.

ಇವೆರಡೂ ಪುಸ್ತಕಗಳ ನಡುವೆ ಒಂದು ಸುಂದರ ಸಾಮ್ಯತೆ ಇದೆ

ಯಶಸ್ಸಿನ ಕತೆಗಳ ಪುಸ್ತಕಗಳಲ್ಲಿ ಹೆಚ್ಚಾಗಿ ಸ್ಟೀವ್ ಜಾಬ್ಸ್, ಬ್ರಾಡ್ ಸನ್, ಕ್ಲಿಂಟನ್, ಕೆನಡಿ… ಹೀಗೆ ಇಂಗ್ಲಿಷ್ ಹೆಸರುಗಳೇ ಕೇಳಿ ಬರುತ್ತವೆ. ಆದರೆ, ಇವೆರಡು ಪುಸ್ತಕಗಳಲ್ಲಿ ನಮ್ಮ ನಿಮ್ಮ ನಡುವೆ ಇರುವ ಸಾಮಾನ್ಯ ಜನರ ಬದುಕಿನ ಕತೆಗಳಿವೆ.

ಸಾಫ್ಟ್ ಮನದಲ್ಲಿ ಮುಕ್ತಿಸೇನಾದ ವಿನಾಯಕ, ಬಿಕ್ಷುಕರಿಗೆ ಸ್ನಾನಕ್ಕೆ ನೀರಿನ ವ್ಯವಸ್ಥೆ ಮಾಡುವ ಗಂಗಾ, ಅನಾಥೆಯಾಗಿ ಬಂದು ಅತ್ಯುತ್ತಮ ಸಾಧನೆ ಮಾಡಿದ ಚಿತ್ರಾ, ತರಕಾರಿ ಬೆಳೆದು ತನಗೆ ಬಳಸಿಕೊಳ್ಳದ ಪರಪ್ಪ, ಒಂದೇ ಮನೆಯಲ್ಲಿ ಮೆಕ್ಕಾದ ಚಿತ್ರ ಮತ್ತು ಕೊಳಲನ್ನು ಊದುವ ಗೋಪಾಲನ ಚಿತ್ರವಿರುವ ರಹಮಾನ್ ಹೀಗೆ ಅನೇಕರ ಕತೆಗಳು ಸಿಗುತ್ತವೆ.

ಮಹತ್ವಾಕಾಂಕ್ಷೆಯಲ್ಲಿ ರವಿ ಡಿ. ಚನ್ನಣ್ಣವರ್, ನವೀನ್ ರಾಮನಗರ, ವಿಜಯ ಸಂಕೇಶ್ವರ, ಸೆಕ್ಯುರಿಟಿ ಗಾರ್ಡ್ ಏಜೆನ್ಸಿ ಸ್ಥಾಪಿಸಿದ ಶಿವರಾಜ್, ಸತ್ಯನಾರಾಯಣ ವಿ.ಆರ್., ದೇವನೂರು ಮಹಾದೇವ ಸೇರಿದಂತೆ ಹಲವು ಸಾಧಕರ ಬದುಕಿನ ಕತೆಗಳೊಂದಿಗೆ ಮಹತ್ವಾಕಾಂಕ್ಷೆಯ ಅಗತ್ಯವನ್ನು ಪರಶಿವಪ್ಪ ಹೇಳುತ್ತಾರೆ.

ಸಾಫ್ಟ್ ಮನವನ್ನು ಕತೆ ಪುಸ್ತಕದಂತೆ ಓದಿ ಸ್ಪೂರ್ತಿ ಹೊಂದಬಹುದು. ಆದರೆ, ಮಹತ್ವಾಕಾಂಕ್ಷೆಯ ಕೆಲವು ಬರಹಗಳು ವ್ಯಕ್ತಿತ್ವ ಪರಿಚಯದಂತೆ ಭಾಸವಾಗುತ್ತದೆ. ಸಾಧಕರ ಪರಿಚಯವನ್ನು ವಿಸ್ತೃತವಾಗಿ ನೀಡುತ್ತಾರೆ. ಇನ್ನಷ್ಟು ಸರಳವಾಗಿ, ಕೆಲವೇ ಮಾತುಗಳಲ್ಲಿ ಹೇಳಬಹುದಾದ ವಿಷಯಗಳನ್ನು ವಿಸ್ತಾರಗೊಳಿಸಿರುವುದರಿಂದ ಕೆಲವು ಲೇಖನಗಳ ಸರಾಗ ಓದಿಗೆ ಅಡ್ಡಿಪಡಿಸುತ್ತದೆ.

ಕೇವಲ 300 ರೂಪಾಯಿ ಹಿಡಿದುಕೊಂಡು ಬೆಂಗಳೂರಿಗೆ ಬಂದು ಹಲವು ಜನರಿಗೆ ಉದ್ಯೋಗ ನೀಡಿದ ಪರಶಿವಪ್ಪ ತನ್ನ ಜೀವನಕತೆಯನ್ನು ಒಂದೆರಡು ಪುಟದಲ್ಲಿಯೇ ಮುಗಿಸಿದ್ದಾರೆ. ಇನ್ನಷ್ಟು ವಿವರವನ್ನು ಸೂಕ್ಷ್ಮವಾಗಿ ನೀಡಿದರೆ ಚೆನ್ನಾಗಿತ್ತು ಎಂದೆನಿಸುತ್ತದೆ.

ಇವೆರಡೂ ಪುಸ್ತಕಗಳೂ ಕೇವಲ ಸಾಧಕರ ಕತೆ ಹೇಳಿ ಸ್ಪೂರ್ತಿ ನೀಡಲು ಮಾತ್ರ ಸೀಮಿತವಾಗಿಲ್ಲ

ಎರಡರಲ್ಲಿಯೂ ಬೇರೆಬೇರೆ ಬಗೆಯ ವಿಶೇಷ ಲೇಖನಗಳಿವೆ. ಬದುಕಿನ ಅನುಭವಗಳಿವೆ. ಬದುಕಿನ ಬವಣೆಯನ್ನು ದಾಟಿ ಬಂದ ಸಂತೃಪ್ತಿಯಿದೆ. ನಮ್ಮಂತೆ ನೀವೂ ಪ್ರಯತ್ನಪಟ್ಟರೆ ಖಂಡಿತವಾಗಿಯೂ ಯಶಸ್ಸನ್ನು ಪಡೆದೇ ಪಡೆಯಬಹುದು ಎಂಬ ಪಾಠಗಳಿವೆ.

ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರ ಕುರಿತು ಹೆಚ್ಚು ಜನರಿಗೆ ಪರಿಚಯ ಇರಬಹುದು. ಅವರ ಬರಹಗಳು ಈಗಾಗಲೇ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಪರಶಿವಪ್ಪ ಅವರು ತಮ್ಮ ಬದುಕಿನ ಅಗಾಧ ಅನುಭವವನ್ನು ಅಕ್ಷರ ರೂಪಕ್ಕೆ ಇಳಿಸುವ ಮೊದಲ ಪ್ರಯತ್ನ ಮಾಡಿದ್ದಾರೆ. ಇತರರಿಗೆ ಒಳ್ಳೆಯ ಮಾತುಗಳನ್ನು, ಸ್ಪೂರ್ತಿದಾಯಕ ಕತೆಗಳನ್ನು ಹೇಳಬೇಕೆಂಬ ಪ್ರೀತಿ ಅವರಲ್ಲಿದೆ.

ಬರವಣಿಗೆ ಅನುಭವ ಆಧಾರದಲ್ಲಿ ಈ ಇಬ್ಬರು ಲೇಖಕರ ನಡುವೆ ಸಾಕಷ್ಟ ವ್ಯತ್ಯಾಸವಿದೆ. ಆದರೆ, ಉದ್ದೇಶದಲ್ಲಿ ಅಂತಹ ವ್ಯತ್ಯಾಸವಿಲ್ಲ. ಬದುಕಿನಲ್ಲಿ ಮಹತ್ವವಾಗಿರುವುದನ್ನು ಸಾಧಿಸಿ ಎಂದು ಬೆನ್ನುತಟ್ಟುವ ಉದ್ದೇಶ ಸಾಫ್ಟ್ ಮನ ಮತ್ತು ಮಹತ್ವಾಕಾಂಕ್ಷೆಯದ್ದು.

ಗಮನಿಸಿ: ಇದು ವಿಮರ್ಶೆಯಲ್ಲ, ನಾನು ಓದಿರುವ ಪುಸ್ತಕಗಳ ಕಿರುಪರಿಚಯವಷ್ಟೇ J

ಬದುಕಿಗೆ ಸ್ಪೂರ್ತಿ ತುಂಬುವ ಸುಧಾಮೂರ್ತಿಯವರ ಪುಸ್ತಕಗಳನ್ನು ನೀವಿನ್ನೂ ಓದಿಲ್ಲವೆಂದಾದರೆ ಈ ಲಿಂಕ್ ಕ್ಲಿಕ್ ಮಾಡಿ ಖರೀದಿಸಿ ಓದಬಹುದು. ಪರಶಿವಪ್ಪ ಅವರು ಬರೆದ ಮಹತ್ವಾಕಾಂಕ್ಷೆ ಪುಸ್ತಕ ಇಲ್ಲಿದೆ.

(ನೀವು ಇತ್ತೀಚೆಗೆ ಓದಿದ ಪುಸ್ತಕಗಳ ಕುರಿತು ನಿಮ್ಮ ಅಭಿಪ್ರಾಯವನ್ನು, ವಿಮರ್ಶೆಯನ್ನು ಈ ಬ್ಲಾಗ್ ಗೆ ಕಳುಹಿಸಬಹುದು. ವಿಳಾಸ: [email protected] )

ಇದನ್ನೂ ಓದಿ: 

ಪುಸ್ತಕ ಪರಿಚಯ: ಸೇತುರಾಮ್ ಅವರ “ನಾವಲ್ಲ” ಕಥಾ ಸಂಕಲನ

ಕನ್ನಡ ಪುಸ್ತಕ ಖರೀದಿಸಲು ಇರುವ 10+ ಆನ್ ಲೈನ್ ಪುಸ್ತಕದಂಗಡಿಗಳು

One thought on “ಪುಸ್ತಕ ಪರಿಚಯ: ಸಾಫ್ಟ್ ಮನ ಮತ್ತು ಮಹತ್ವಾಕಾಂಕ್ಷೆ

  1. Pingback: ಪುಸ್ತಕ ಪರಿಚಯ: ಮಹತ್ವಾಕಾಂಕ್ಷೆ | KarnatakaBest.Com

Leave a Reply

Your email address will not be published. Required fields are marked *