ಟೆಸ್ಟ್ ರೈಡ್: ಜುಪೀಟರ್ ಸ್ಕೂಟರ್ ಮತ್ತು ಟಿವಿಎಸ್ “ಫ್ಯಾಕ್ಟರಿ ಟೂರ್” ಅನುಭವ

By | 11/07/2018

ವಾಹನ ವೆಬ್ ತಾಣ ಡ್ರೈವ್ ಸ್ಪಾರ್ಕ್.ಕಾಂನಲ್ಲಿ “ಕನ್ನಡ ಸಂಪಾದಕ”ನಾಗಿ ಉದ್ಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಹೊಸ ಕಾರು, ಬೈಕ್ ಬಿಡುಗಡೆ ಸಮಾರಂಭಗಳಿಗೆ ಹೋಗುವ ಅವಕಾಶ ದೊರಕುತ್ತಿತ್ತು. ನಂತರ ವಿಜಯನೆಕ್ಸ್ಟ್ ನಿಯತಕಾಲಿಕೆಯಲ್ಲಿ ವಾಹನ ಪುಟದ ಉಸ್ತುವಾರಿ ದೊರಕಿದಾಗಲೂ ಇಂತಹ ಅವಕಾಶ ಸಾಕಷ್ಟು ದೊರಕುತ್ತಿತ್ತು.

ಆದರೂ, ನನಗೊಂದು ಆಸೆಯಿತ್ತು.

ವಾಹನಗಳನ್ನು ಫ್ಯಾಕ್ಟರಿಯೊಳಗೆ ಹೇಗೆ ನಿರ್ಮಿಸುತ್ತಾರೆ? ಆಟೋಮೇಷನ್ ಇತ್ಯಾದಿ ಇತ್ತೀಚಿನ ತಂತ್ರಜ್ಞಾನಗಳೇನು? ಉದ್ಯೋಗಿಗಳು ವಾಹನ ನಿರ್ಮಾಣದ ಕೆಲಸವನ್ನು ಹೇಗೆ ಮಾಡುತ್ತಾರೆ? ಇದನ್ನೆಲ್ಲ ಕಣ್ಣಾರೆ ನೋಡಬೇಕು. ಇಂತಹ ಆಸೆಯನ್ನು ಈಡೇರಿಸಿಕೊಳ್ಳುವ ಅವಕಾಶವನ್ನು ಇಂಡಿಬ್ಲಾಗರ್ ಒದಗಿಸಿತು.

ಕನ್ನಡ, ತಮಿಳು, ಮಲಯಾಳಂ, ಹಿಂದಿ ಮುಂತಾದ ಪ್ರಾದೇಶಿಕ ಭಾಷಾ ಬ್ಲಾಗರ್ ಗಳಲ್ಲಿ ಆಯ್ದ 10 ಜನರಿಗೆ ಟಿವಿಎಸ್ ಮೋಟಾರ್ ಕಂಪನಿಗೆ ಭೇಟಿ ನೀಡುವ ಅವಕಾಶವನ್ನು ಇಂಡಿಬ್ಲಾಗರ್ ನೀಡಿತ್ತು. ಜೊತೆಗೆ, ವಾಹನ ಕಂಪನಿಯು ತನ್ನ ಹೊಸ ವಾಹನವು ಮಾರುಕಟ್ಟೆಗೆ ಹೋಗುವ ಮೊದಲು ಪರಿಣಿತರಿಂದ ಪರೀಕ್ಷೆಗೆ ಒಳಪಡಿಸುವ ಟೆಸ್ಟ್ ಟ್ರ್ಯಾಕಿನಲ್ಲಿ ತನ್ನ ಜನಪ್ರಿಯ ಸ್ಕೂಟರ್ “ಟಿವಿಎಸ್ ಜುಪೀಟರ್’’ ಅನ್ನು ಓಡಿಸುವ ಅವಕಾಶವನ್ನು ನೀಡಿತ್ತು.

ಮುಂದೆ ನಾನು ಬರೆದ ವಿಷಯಗಳ ಪರಿವಿಡಿ ಈ ಮುಂದಿನಂತೆ ಇದೆ

  • ಬ್ಲಾಗರ್ ತಂಡದ ಪರಿಚಯ
  • ಟಿವಿಎಸ್ ಕ್ಯಾಂಪಸ್ ಪ್ರವೇಶ
  • ಕ್ಯಾಂಪಸ್ ನೊಳಗೆ ಕಂಡ ಅಂಶಗಳು
  • ಟಿವಿಎಸ್ ಜುಪೀಟರ್ ಪರಿಚಯ
  • ಕಾರ್ಖಾನೆಯೊಳಗೊಂದು ಸುತ್ತು
  • ಆಟೋಮೇಷನ್ ಮತ್ತು ಯಂತ್ರದಂತೆ ಕೆಲಸ ಮಾಡುವ ಉದ್ಯೋಗಿಗಳು
  • ಟಿವಿಎಸ್ ಟೆಸ್ಟ್ ಟ್ರ್ಯಾಕ್ ನಲ್ಲಿ ಜುಪೀಟರ್ ಟೆಸ್ಟ್ ರೈಡ್
  • ನಾನು ಕಂಡಂತೆ ಟಿವಿಎಸ್ ಜುಪೀಟರ್
  • ಟಿವಿಎಸ್ ಜುಪೀಟರ್ ಗೆ ಪ್ರತಿಸ್ಪರ್ಧಿಗಳು
  • ಯಾಕೆ ಜುಪೀಟರ್ ಬೆಸ್ಟ್? ಒಳಿತು ಮತ್ತು ಕೆಡುಕು
  • ಟಿವಿಎಸ್ ಜುಪೀಟರ್ ನಲ್ಲಿ ಮಾತ್ರ ಕಾಣಬಹುದಾದ ವಿಶೇಷ ಫೀಚರ್ ಗಳು

ಬ್ಲಾಗರ್ ತಂಡದ ಪರಿಚಯ

ಕನ್ನಡ ಬ್ಲಾಗರ್ ಗಳಲ್ಲಿ ನಾನು (ಪ್ರವೀಣ್ ಚಂದ್ರ ಪುತ್ತೂರು), ಕನ್ನಡಕ್ಕೆ ಮೊದಲ ವೆಬ್ ತಾಣ ಪರಿಚಯಿಸಿದ ಮತ್ತು ವಿಕಿಪೀಡಿಯಾ ಸಂಪಾದನೆಯಲ್ಲಿ ಸಕ್ರೀಯರಾಗಿದ್ದ ಹಾಗೂ ಪ್ರಜಾವಾಣಿಯಲ್ಲಿ ಗ್ಯಾಜೆಟ್ ಲೋಕ ಅಂಕಣದ ಮೂಲಕ ಜನಪ್ರಿಯತೆ ಪಡೆದಿರುವ ಡಾ. ಯು.ಬಿ. ಪವನಜ, ತಮಿಳು ಬ್ಲಾಗರ್ ಬಾನುಮತಿ ವೆಂಕಟೇಶ್ವರನ್, ಹಿಂದಿ ಬ್ಲಾಗರ್ ಗಳಲ್ಲಿ ವಿವೇಕ್ ರೊಸ್ಟಗಿ, ಗೋವಾದ ಪಣಜಿಯಿಂದ ಶ್ರೀ ಕೃಷ್ಣಾ ಶರ್ಮಾ, ಕೊಚ್ಚಿಯಿಂದ ವಿನೋದ್ ನಾರಾಯಣ್, ಭೋಪಾಲ್ ನಿಂದ ಉಪದೇಶ್ ಅವಾಸ್ತಿ, ಗಾಜಿಯಾಬಾದ್ ನಿಂದ ವಿದ್ಯುತ್ ಅವಸ್ತಿ, ರಾಂಚಿಯಿಂದ ಮನೀಶ್ ಕುಮಾರ್ ಮುಂತಾದವರು ಇದ್ದರು. ನಮ್ಮ ಉಸ್ತುವಾರಿ ನೋಡಿಕೊಳ್ಳಲು ಇಂಡಿಬ್ಲಾಗರ್ ನಿಂದ ನಿಶ್ಚಲ್ ಕುಮಾರ್ ಜೊತೆಗಿದ್ದರು.

ಟಿವಿಎಸ್ ಕ್ಯಾಂಪಸ್ ಪ್ರವೇಶ

ಬೆಂಗಳೂರು ಗಡಿದಾಟಿ ತಮಿಳುನಾಡಿಗೆ ಪ್ರವೇಶಿಸಿದಾಗ ದೊರಕುವ ಹೊಸೂರಿನಲ್ಲಿ ಟಿವಿಎಸ್ ಮೋಟಾರ್ ಕಂಪನಿಯ ವಿಶಾಲವಾದ(ಬರೋಬ್ಬರಿ 405 ಎಕರೆಯ) ಕ್ಯಾಂಪಸ್ ಇದೆ. ಇಲ್ಲಿ ತನ್ನೆಲ್ಲ ವಾಹನಗಳ ನಿರ್ಮಾಣ/ಜೋಡಣೆ ಕಾರ್ಯಗಳನ್ನು ಮಾಡುತ್ತಿದೆ. ಉದ್ಯಾನವನದಂತೆ ಹಚ್ಚಹಸಿರಿನಿಂದ ಕೂಡಿದ ಫ್ಯಾಕ್ಟರಿಯ ಹುಲ್ಲು ಹಾಸುಗಳ ಮೈದಾನದ ನಡುವೆ ಸಾವಿರಾರು ಬೈಕ್ ಗಳನ್ನು ಜೋಡಿಸಿಡಲಾಗಿತ್ತು. ಫೋಟೊ ತೆಗೆಯಬೇಕೆಂದಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಫೋಟೊ ತೆಗೆಯಲು ಅವಕಾಶ ಇರಲಿಲ್ಲ. ಕಾಲೇಜು ಹುಡುಗರಂತೆ ಟಿವಿಎಸ್ ಉದ್ಯೋಗಿಗಳು ಲವಲವಿಕೆಯಿಂದ ಓಡಾಡುತ್ತಿದ್ದರು.

ಟಿವಿಎಸ್ ಜುಪೀಟರ್ ಪರಿಚಯ

ಕಾರ್ಯಕ್ರಮದ ಆರಂಭದಲ್ಲಿ ನಮಗೆ ಟಿವಿಎಸ್ ಜುಪೀಟರ್ ಬಗ್ಗೆ ಪರಿಚಯ ಮತ್ತು ಅದರ ವಿನ್ಯಾಸದ ಕುರಿತು ಮಾಹಿತಿ ನೀಡಲಾಯಿತು. ಬಳಿಕ ಟಿವಿಎಸ್ ಬೈಕ್/ ಸ್ಕೂಟರ್ ನಿರ್ಮಾಣವನ್ನು ಕಣ್ಣಾರೆ ನೋಡುವ ಅವಕಾಶವನ್ನು ನೀಡಲಾಯಿತು. (ಈ ಕತೆ ಇಂಟ್ರೆಸ್ಟಿಂಗ್ ಆಗಿದೆ. ಅದನ್ನು ಆಮೇಲೆ ಹೇಳುತ್ತೇನೆ). ಈಗ ಆರಂಭದ ಔಪಚಾರಿಕ ಪರಿಚಯ ಕಾರ್ಯಕ್ರಮದ ವಿವರ ತಿಳಿದುಕೊಳ್ಳೋಣ.

ಮೊದಲಿಗೆ ಜುಪೀಟರ್ ಬ್ರಾಂಡ್ ಕತೆಯನ್ನು ಟಿವಿಎಸ್ ನ ಬೆನೊಯ್ ಅಂಟೋನಿ ವಿವರಿಸಿದರು. ಅವರು ಹೇಳಿದ ವಿಷಯಗಳನ್ನು ಮತ್ತು ಅದರ ನಡುವೆ ನನ್ನ ಅಭಿಪ್ರಾಯಗಳನ್ನು ಈ ಮುಂದಿನಂತೆ ಓದಿಕೊಳ್ಳಬಹುದು.

TVS Jupiter Design and Overview

  • ಟಿವಿಎಸ್ ಜುಪೀಟರ್ ಗೆ ದೇಶದ ಅತ್ಯಂತ ಆಕರ್ಷಕ ಸ್ಕೂಟರ್ ಎಂಬ ಪ್ರಶಸ್ತಿಯನ್ನು ಜೆಡಿ ಪವರ್ 2018 ಟುವೀಲ್ಹರ್ ಆಟೋಮೋಟಿವ್‍ ಪ್ರಾಡಕ್ಟ್ ಎಕ್ಸಿಕ್ಯೂಷನ್ ಆಂಡ್ ಲೇಯೌಟ್(2ಡಬ್ಲ್ಯುಎಪಿಇಎಎಲ್) ಅಧ್ಯಯನದಲ್ಲಿ ನೀಡಲಾಗಿದೆ.
  • ಮಾರುಕಟ್ಟೆಗೆ ಬಂದ ಐದು ವರ್ಷದೊಳಗೆ 25 ಲಕ್ಷ ಟಿವಿಎಸ್ ಜುಪೀಟರ್ ಸ್ಕೂಟರ್ ಗಳು ಮಾರಾಟವಾಗಿವೆ. ಇಷ್ಟೊಂದು ವೇಗವಾಗಿ ದೇಶದಲ್ಲಿ ಯಾವುದೇ ಸ್ಕೂಟರ್ ಗಳು ಮಾರಾಟಗೊಂಡಿರಲಿಲ್ಲ. ವಿಶೇಷವೆಂದರೆ ಇದು ಲಾಂಚ್ ಆದ ಮೊದಲ 30 ತಿಂಗಳಿನಲ್ಲಿಯೇ 10 ಲಕ್ಷ ಸ್ಕೂಟರ್ ಗಳು ಮಾರಾಟವಾಗಿತ್ತು. ಹೀಗಾಗಿ ಇದನ್ನು ಮಾರಾಟದಲ್ಲಿ ಹೈ ಸ್ಪೀಡ್ ಸ್ಕೂಟರ್ ಎನ್ನಬಹುದು.
  • ಮೊದಲ ಬಾರಿಗೆ 2013ರಲ್ಲಿ ಪರಿಚಯಿಸಲಾಯಿತು. ಪುರುಷ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊರತರಲಾಯಿತು ಎಂದು ಬೆನೊಯ್ ಹೇಳಿದರು.. ಆದರೆ, ಸಾಕಷ್ಟು ಮಹಿಳೆಯರು ಜುಪೀಟರ್ ನಲ್ಲಿ ಕುಳಿತು ಜುಂಯ್… ಎಂದು ಹೋಗುವುದನ್ನು ನಾನು ನನ್ನ ಕಣ‍್ಣಾರೆ ದಿನನಿತ್ಯ ನೋಡುತ್ತಿದ್ದೇನೆ 🙂
  • ಜುಪೀಟರ್ ಗೆ ಬ್ರಾಂಡ್ ರಾಯಭಾರಿ ಅಮಿತಾಬ್ ಬಚ್ಚನ್. ಜೈದಾಕಾಫೈದಾ ಎನ್ನುವುದು ಇದರ ಸ್ಲೋಗನ್. ಇದರ ಅರ್ಥ ಕನ್ನಡದಲ್ಲಿ ಏನು ಎಂದು ನಾನು ಇಲ್ಲಿಯವರೆಗೆ ಯೋಚಿಸಲು ಹೋಗಿಲ್ಲ. ಕನ್ನಡದಲ್ಲಿಯೂ ಚಂದದ ಸ್ಲೋಗನ್ ನೀಡಬಾರದಿತ್ತೇ ಎಂದು ನನಗೆ ಅನಿಸಿದ್ದು ಸುಳ್ಳಲ್ಲ.
  • 2017ರಲ್ಲಿ ಟಿವಿಎಸ್ ಕ್ಲಾಸಿಕ್ ಜುಪೀಟರ್ ಆವೃತ್ತಿಯನ್ನು ಪರಿಚಯಿಸಿತ್ತು. ಇದು ನನಗೆ ಇಷ್ಟವಾಯಿತು. ಯಾಕೆಂದರೆ, ಇದು ಸುಮಾರು 10 ಬಣ್ಣಗಳಲ್ಲಿ ದೊರಕುತ್ತದೆ. ನಿಮಗೆ ಯಾವ ಬಣ್ಣ ಇಷ್ಟವೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಪೂರ್ತಿ ಕ್ರೋಮ್ ಆವೃತ್ತ ಕನ್ನಡಿಗಳು, ಚಂದದ ವಿಂಡ್ ಶೀಲ್ಡ್, ಹಿಂಬದಿ ಸವಾರರಿಗೆ ಒರಗಲು ಮೆತ್ತನೆಯ ಬ್ಯಾಕ್ ರೆಸ್ಟ್, ಸ್ಮಾರ್ಟ್ ಯುಎಸ್ಬಿ ಚಾರ್ಜರ್ ಇತ್ಯಾದಿಗಳಿವೆ. ಇದರ ಲೊಗೊವನ್ನು ಸುಂದರ ವಿನ್ಯಾಸದಲ್ಲಿ ಜುಪೀಟರ್ ಕ್ಲಾಸಿಕ್ ಎಂದು ಚಿತ್ರಿಸಲಾಗಿದೆ. ಇದು ಆಕರ್ಷಕವಾಗಿ ಕಾಣುತ್ತದೆ. ಜೊತೆಗೆ ಸೀಟು ಮತ್ತು ಹ್ಯಾಂಡಲ್ ನಡುವಿನ ಖಾಲಿ ಜಾಗದಲ್ಲಿ ಕಾರಿನೊಳಗಿನ ವಿನ್ಯಾಸ ನೆನಪಿಸುವಂತೆ ಡ್ಯೂಯಲ್ ಟೋನ್ ವಿನ್ಯಾಸ ಮಾಡಲಾಗಿದೆ.

TVS Jupiter Scooter

ನಂತರ ಮಾತನಾಡಿದ್ದು ಅಮಿತ್ ರಾಜ್ ವಾಡೆ. ಇವರು ಮುಂಬೈ ಐಐಟಿ ಮಾಜಿ ವಿದ್ಯಾರ್ಥಿ. ಟಿವಿಎಸ್ ನಲ್ಲಿ ವಿನ್ಯಾಸ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಂದದ ಜುಪೀಟರ್ ವಿನ್ಯಾಸದ ಹಿಂದಿನ ಕೈಚಳಕವೂ ಇವರದ್ದು. “ಈಗಾಗಲೇ ಮಾರುಕಟ್ಟೆಯಲ್ಲಿರುವ ಡಿಯೋ  ಹರೆಯದ ಯುವಕ, ಯುವತಿಗೆ ಸೂಕ್ತವಾಗಿದೆ. ಇದಕ್ಕಿಂತ ತುಸು ಹೆಚ್ಚು ವಯಸ್ಸಿನ ಕುಟುಂಬಕ್ಕೆ ಸೂಕ್ತವಾದ ಸ್ಕೂಟರ್ ವಿನ್ಯಾಸ ಮಾಡುವ ಸವಾಲು ನನ್ನ ಮುಂದಿತ್ತು. ಜೊತೆಗೆ ಹೆಚ್ಚಿನ ಜನರು ಬೈಕ್ ನಿಂದ ಸ್ಕೂಟರ್ ನತ್ತ ವಲಸೆ ಬರುತ್ತಿದ್ದಾರೆ. ಇದಕ್ಕಾಗಿ ಹಲವು ಸುತ್ತಿನಲ್ಲಿ ಮಾರುಕಟ್ಟೆ ಅಧ್ಯಯನ ಮಾಡಿದೆವು. ನಂತರ ಈಗಾಗಲೇ ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿಗಳಿಗಿಂತ ಅಂದದ, ಅತ್ಯುತ್ತಮ ಮೈಲೇಜ್ ನೀಡುವ ಮತ್ತು ಸುಂದರ ಸ್ಕೂಟರ್ ವಿನ್ಯಾಸ ಮಾಡಿದೆವು. ನಮ್ಮ ಪ್ರಯತ್ನಕ್ಕೆ ಜೆಡಿ ಪವರ್ “ಆಕರ್ಷಕ ವಿನ್ಯಾಸದ ಸ್ಕೂಟರ್’’ ಪ್ರಶಸ್ತಿಯನ್ನು ನೀಡಿದೆ’’ ಇತ್ಯಾದಿ ಹಲವು ವಿಷಯಗಳ ಕುರಿತು ಮಾತನಾಡಿದರು.

ಟಿವಿಎಸ್ ಜುಪೀಟರ್ ಸಿದ್ಧವಾಗುವುದು ಹೇಗೆ? ಪ್ರತ್ಯಕ್ಷ ದರ್ಶನ ( ಟಿವಿಎಸ್ ಫ್ಯಾಕ್ಟರಿ ಪ್ರವಾಸ)

ಒಂದೆಡೆ ಟಿವಿಎಸ್ ಬಿಡಿಭಾಗಗಳು, ಎಂಜಿನ್ ಭಾಗಗಳು ಸಿದ್ಧಗೊಳ್ಳುತ್ತಿದ್ದವು. ಮತ್ತೊಂದೆಡೆ ಬಿಡಿಭಾಗಗಳು ಯಾಂತ್ರಿಕವಾಗಿ ಬೆಲ್ಟ್ ಮೂಲಕ ಸಾಗುತ್ತಿದ್ದವು. ಇನ್ನೊಂದೆಡೆ ರೋಬೊಟಿಕ್ ಆರ್ಮ್‍ ಗಳು ಯಾವುದೋ ನಿರ್ಮಾಣದ ಕಾರ್ಯದಲ್ಲಿ ಮಗ್ನವಾಗಿದ್ದವು. ರೊಬೊಟಿಕ್ ಪೇಂಟಿಂಗ್ ಕೈಯು ಪೇಂಟಿಂಗ್ ಮಾಡುತ್ತಿತ್ತು. ಇನ್ನಷ್ಟು ವಿಸ್ತರಿಸಿ ಹೇಳಬೇಕೆ?

ಟಿವಿಎಸ್ ಜುಪೀಟರ್ ಜೋಡಣೆ ಮತ್ತು ನಿರ್ಮಾಣ ವಿಭಾಗಕ್ಕೆ ಪ್ರವೇಶಿಸಿದಾಗ ಪ್ರವೇಶ ದ್ವಾರದಲ್ಲಿ ಟಿವಿಎಸ್ ನ ವಿವಿಧ ವಾಹನಗಳನ್ನು ಪ್ರದರ್ಶಿಸಡಲಾಗಿತ್ತು. ಅಲ್ಲಿ ಗೋಡೆಯ ಮೇಲಿದ್ದ ಒಂದು ಮಾಹಿತಿ ಗಮನ ಸೆಳೆಯಿತು. ಅದೇನೆಂದರೆ ಟಿವಿಎಸ್ ಮೊದಲ ಬಾರಿಗೆ ಉತ್ಪಾದಿಸಿದ ವಾಹನ “ಒಂದು ಬಸ್”. ನೆನಪಿಡಿ ಈ ಮಾಹಿತಿಯನ್ನು ನಿಮಗೆ ಫಸ್ಟ್ ನೀಡಿದ್ದು ಕರ್ನಾಟಕಬೆಸ್ಟ್ J

ವಿವಿಧ ಯಂತ್ರಗಳು, ಅದರ ಮುಂದೆ ನಿಂತ ಕಾಲೇಜು ವಿದ್ಯಾರ್ಥಿಗಳಂತೆ ಕಾಣುವ ತರುಣತರುಣಿ ಟಿವಿಎಸ್ ಉದ್ಯೋಗಿಗಳು ತಮ್ಮದೇ ಲೋಕದಲ್ಲಿ ನಿರತರಾಗಿದ್ದರು. ನನಗೆ ಪ್ರಮುಖವಾಗಿ ಗಮನ ಸೆಳೆದದ್ದು ಎರಡು ಅಂಶಗಳು.

  1. ರೋಬೊಟಿಕ್ ಆರ್ಮ್ ಕಾರ್ಯಾಚರಣೆ
  2. ಸಂಪೂರ್ಣ ಮಹಿಳಾ ಉದ್ಯೋಗಿಗಳೇ ಕಾರ್ಯನಿರ್ವಹಿಸುವ ಒಂದು ವಿಭಾಗ

ಆಟೋಮೇಷನ್/ ರೊಬೊಟಿಕ್ ಆರ್ಮ್

ದೇಶದ ವಾಹನೋದ್ಯಮವು ಆಟೋಮೇಷನ್ ಅಳವಡಿಸಿಕೊಳ್ಳುತ್ತಿವೆ. ಟಿವಿಎಸ್ ಫ್ಯಾಕ್ಟರಿಯಲ್ಲಿಯೂ ಹಲವು ರೋಬೊ ಕೈಗಳು ಸಾಲಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ಇವುಗಳ ಕಾರ್ಯವನ್ನು ನೋಡುವುದೇ ಕಣ್ಣಿಗೆ ಆನಂದ. ಭವಿಷ್ಯದಲ್ಲಿ ಸಂಪೂರ್ಣ ಉದ್ಯೋಗ ಕ್ಷೇತ್ರವು ಆಟೋಮೇಷನ್ ಆಗಬಹುದೇ? ಎಂಬ ಪ್ರಶ್ನೆಯೂ ಮನಸ್ಸಿನಲ್ಲಿ ಸುಳಿಯಿತು.

ಶೇಕಡ 100 ಮಹಿಳಾ ಉದ್ಯೋಗಿಗಳ ವಿಭಾಗ

ಬೈಕ್/ಸ್ಕೂಟರ್ ಎಂಜಿನ್ ಗೆ ಅಂತಿಮ ರೂಪ ನೀಡುವ ವಿಭಾಗವೊಂದು ಅಲ್ಲಿತ್ತು. ಎಂಜಿನ್ ಗೆ ಒಂದು ಪುಟ್ಟ ಧೂಳಿನ ಕಣವೂ ಒಳಗೆ ಹೋಗಬಾರದು. ಇದಕ್ಕಾಗಿ ಸಂಪೂರ್ಣ ಧೂಳುರಹಿತ ವಿಭಾಗವನ್ನು ರಚಿಸಲಾಗಿದೆ. ಅಲ್ಲಿ ಇರುವ ಶೇಕಡ 100 ಸಿಬ್ಬಂದಿಗಳು ಯುವತಿಯರು(ಒಂದಿಬ್ಬರು ಪುರುಷ ಸಿಬ್ಬಂದಿಗಳನ್ನು ಹೊರತುಪಡಿಸಿ). ಈ ಮೂಲಕ ಟಿವಿಎಸ್ ಕಂಪನಿಯು ತನ್ನ ಉದ್ಯೋಗ ಸ್ಥಳದಲ್ಲಿ ಪುರುಷ ಮತ್ತು ಮಹಿಳಾ ಲಿಂಗಾನುಪಾತವನ್ನು ತಗ್ಗಿಸಲು ಯತ್ನಿಸುತ್ತಿದೆ. ಕಂಪನಿಯ ಈ ಪ್ರಯತ್ನಕ್ಕೆ ಶಹಬ್ಬಾಸ್ ಹೇಳಬೇಕು.

ಇನ್ನುಳಿದಂತೆ ಯಂತ್ರದೊಂದಿಗೆ ಯಂತ್ರವಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಉದ್ಯೋಗಿಗಳು, ಪೇಂಟಿಂಗ್ ಮಾಡುವ ವಿಭಾಗ ಇತ್ಯಾದಿ ಹಲವು ವಿಭಾಗಗಳು ಅಲ್ಲಿದ್ದವು. ಒಟ್ಟಾರೆ ದ್ವಿಚಕ್ರ ವಾಹನ ತಯಾರಿಕೆ/ಜೋಡಣೆ ಕಣ್ಣಾರೆ ಕಾಣಿಸಿದ ಟಿವಿಎಸ್ ಮೋಟಾರ್ಸ್ ಗೆ ಮತ್ತು ಇಂತಹ ವೇದಿಕೆ ಒದಗಿಸಿದ ಇಂಡಿಬ್ಲಾಗರ್ ಗೆ ಧನ್ಯವಾದ.

ಟಿವಿಎಸ್ ಮೋಟಾರ್ ಕಂಪನಿಯ ಕ್ಯಾಂಟಿನ್ ನಲ್ಲಿ ಭರ್ಜರಿ ಊಟ ಮಾಡಿದೆವು. ಅಲ್ಲಿ ಪ್ಲೇಟ್ ತೊಳೆಯುವ ಯಂತ್ರವನ್ನು ಒಂದೆರಡು ನಿಮಿಷ ಆಸಕ್ತಿಯಿಂದ ನೋಡುತ್ತ ನಿಂತೆ. ಇಲ್ಲಿಯವರೆಗೆ ಭದ್ರತೆಯ ದೃಷ್ಟಿಯಿಂದ ಫೋಟೊಗ್ರಫಿಗೆ ಅವಕಾಶವಿರಲಿಲ್ಲ. ಆದರೆ, ಮುಂದಿನ ಟೆಸ್ಟ್ ಟ್ರ್ಯಾಕ್  ನಲ್ಲಿ ಟಿವಿಎಸ್ ಜುಪೀಟರ್ ರೈಡಿಗೆ ಅಂತಹ ನಿಯಮ ಇರಲಿಲ್ಲ  J

ಟಿವಿಎಸ್ ಟೆಸ್ಟ್ ಟ್ರ್ಯಾಕ್ ನಲ್ಲಿ ಜುಪೀಟರ್ ರೈಡಿಂಗ್

ತುಂಬಾ ವಿಶಾಲವಾದ ಸ್ಥಳದಲ್ಲಿ ಟಿವಿಎಸ್ ಟೆಸ್ಟಿಂಗ್ ಟ್ರ್ಯಾಕ್ ಇದೆ. ವಿವಿಧ ಸ್ಪೋರ್ಟ್ಸ್ ಬೈಕ್ ಗಳ ಟೆಸ್ಟ್ ಗೆ ಸೂಕ್ತವಾದ ವಿವಿಧ ಬಗೆಯ ಆನ್ ರೋಡ್ ಮತ್ತು ಆಫ್ ರೋಡ್ ಟ್ರ್ಯಾಕ್ ಗಳಿವೆ. ನಮ್ಮ ಟಿವಿಎಸ್ ಜುಪೀಟರ್ ಗೆ ಆನ್ ರೋಡ್ ಟ್ರ್ಯಾಕ್ ಗೆ ಸೀಮಿತವಾಗಿತ್ತು. ಸಾಮಾನ್ಯ ಸ್ಕೂಟರ್ ರೈಡಿಂಗ್ ಆಗಿದ್ದರೂ ಟಿವಿಎಸ್ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಿತ್ತು. ಬ್ಲಾಗರ್ ಗಳ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಿತ್ತು. ಹೆಲ್ಮೆಟ್ ಮಾತ್ರವಲ್ಲದೆ ಬಿದ್ದರೆ ಏಟಾಗದ ಜಾಕೆಟ್ ಗಳನ್ನು, ಮೊಣಕಾಲಿಗೆ ರಕ್ಷಣಾ ಕವಚಗಳನ್ನು ನೀಡಿತ್ತು.

ಮೊದಲ ಸುತ್ತಿನಲ್ಲಿ ನಾನೂ ಟಿವಿಎಸ್ ಜುಪೀಟರ್ ರೈಡಿಂಗ್ ಮಾಡಿದೆ. ಕಳೆದ 5-6 ವರ್ಷದಿಂದ ಬೈಕ್ ಓಡಿಸಿ ಅನುಭವವಿದ್ದ ನನಗೆ ಸ್ಕೂಟರ್ ಚಾಲನೆ ಕಷ್ಟವಾಗಲಿಲ್ಲ. ನಾನು ಈ ಹಿಂದೆ ಡಿಯೊ, ಆಕ್ಟಿವಾ ಸ್ಕೂಟರ್ ರೈಡ್ ಮಾಡಿದ್ದೆ. ನಾನು ಗಮನಿಸಿದ ಕೆಲವು ಸಂಗತಿಗಳು ಇಲ್ಲಿವೆ.

TVS Jupiter Scooter test ride

  • ಸ್ಕೂಟರ್ ಅಷ್ಟೇನೂ ಭಾರವಿಲ್ಲ, ಹಗುರವೂ ಅಲ್ಲ!

ನೋಡಲು ಪ್ರತಿಸ್ಪರ್ಧಿ ಸ್ಕೂಟರ್ ನಂತೆ ಭಾರವಾಗಿರಬಹುದು ಎಂದೆನಿಸಿದರೂ ಇದು ಅಂದುಕೊಂಡಷ್ಟು ಭಾರವಾಗಿಲ್ಲ. ನನಗಂತೂ ಇದು ಹಗುರ ಸ್ಕೂಟರ್ ನಂತೆ ಭಾಸವಾಯಿತು. ಈಗಾಗಲೇ ಜುಪೀಟರ್ ಸ್ಕೂಟರ್ ಹೊಂದಿರುವ ನನ್ನ ಪರಿಚಯದ ಮಹಿಳೆಯರೊಬ್ಬರಲ್ಲಿ ಕೇಳಿದ್ದಾಗ ತುಸು ಭಾರ ಇದೆ. ಆದರೆ, ರೈಡ್ ಮಾಡಲು ಸ್ಮೂತಾಗಿದೆ ಎಂಬ ಅಭಿಪ್ರಾಯ ನೀಡಿದ್ದರು. ನನಗೆ ಸ್ಮೂತ್ ರೈಡಿಂಗ್ ನ ಅನುಭವವಾಯಿತು. ಆದರೆ, ಭಾರವೆನಿಸಲಿಲ್ಲ.

  • ಸ್ಮೂತಾಗಿ ಚಾಲನೆ ಮಾಡಬಹುದು. ಪವರ್ ಉತ್ತಮ

ಆಕ್ಸಿಲರೇಟರ್ ಕೊಟ್ಟಾಗ ತಕ್ಷಣ ವೇಗ ಪಡೆದುಕೊಳ್ಳುವುದರಲ್ಲಿ ಹಿಂದೆ ಬೀಳುವುದಿಲ್ಲ. ಇದು 110 ಸಿಸಿ ಎಂಜಿನ್ ಹೊಂದಿದ್ದು, 5.88 ಕಿ.ವ್ಯಾ(7.88 ಅಶ್ವಶಕ್ತಿ) ಇದೆ. 11.2 ಸೆಕೆಂಡಿನಲ್ಲಿ 0-60 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ.
  • ಇದರ ಹೊರವಿನ್ಯಾಸ ಹೆಚ್ಚು ಇಷ್ಟವಾಗುತ್ತದೆ. ಇದರ ಸ್ಪೀಡೋಮೀಟರ್, ಟ್ರಾಫಿಕ್ ನಲ್ಲಿ ಆಫ್ ಮಾಡಿ ಪೆಟ್ರೋಲ್ ಉಳಿಸಿ ಎಂದು ಸೂಚಿಸುವ ದೀಪ, ಕಾಲಿಡುವ ಸ್ಥಳ ಸೇರಿದಂತೆ ಸೀಟು ಮತ್ತು ಹ್ಯಾಂಡಲ್ ನಡುವಿನ ಸ್ಥಳದ ಅಂದದ ವಿನ್ಯಾಸ ಇಷ್ಟವಾಗುತ್ತದೆ. ಯಾವುದಾದರೂ ಬ್ಯಾಗ್ ನೇತಾಡಿಸಲು ಸೂಕ್ತವಾಗುವಂತೆ ಕಾಲಿಡುವ ಸ್ಥಳದ ಮುಂದೆ, ಹ್ಯಾಂಡಲ್ ಕೆಳಗೆ ಹುಕ್ಸ್ ಇದೆ.

TVS Jupiter Scooter

  • ಈ ಸ್ಕೂಟರ್ ನಲ್ಲಿ ಇನ್ನೊಂದು ಗಮನ ಸೆಳೆಯುವ ವಿಷಯ ಪೆಟ್ರೋಲ್ ಟ್ಯಾಂಕ್ ನಳಿಕೆ ಹಿಂದೆ ಇರುವುದು. ಹೀಗಾಗಿ ಸ್ಕೂಟರ್ ನಿಂದ ಇಳಿಯದೇ ಬಂಕ್ ನಲ್ಲಿ ಇಂಧನ ತುಂಬಿಸಬಹುದು.
  • ಇದು 8 ಬಣ್ಣಗಳಲ್ಲಿ ದೊರಕುತ್ತದೆ.
  • ಮೊಬೈಲ್ ಚಾರ್ಜ್ ಮಾಡಲು ಸೀಟಿನಡಿಯಲ್ಲಿ ಚಾರ್ಜಿಂಗ್ ಪಾಯಿಂಟ್ ಇದೆ.

  • ಸೀಟಿನಡಿಯಲ್ಲಿ (17 ಲೀಟರ್) ಸ್ಥಳಾವಕಾಶವೂ ಉತ್ತಮವಾಗಿದೆ.
  • ಮೆಟಲ್ ಬಾಡಿ, ಎಕೊನೊಮೀಟರ್, ಪಾಸ್ ಬೈ ಸ್ವಿಚ್, ಟ್ಯೂಬ್‍ರಹಿತ ಟೈರ್‍ಗಳ ಜೊತೆಗೆ ಅಲಾಯ್ ವೀಲ್‍ಗಳು, ಪಾರ್ಕಿಂಗ್ ಬ್ರೇಕ್, ಇ-ಝಡ್ ಸೆಂಟರ್ ಸ್ಟ್ಯಾಂಡ್, ಬಾಹ್ಯಾ ಇಂಧನ ತುಂಬುವ ವ್ಯವಸ್ಥೆ, ಇಂಧನ ಕಡಿಮೆಯಾದರೆ ಸೂಚಿಸುವ ಇಂಡಿಕೇಟರ್, ಎಲ್‍ಇಡಿ ಟೇಲ್ ಲೈಟ್‍ಗಳು ಇದೆ. ಪ್ರತಿಲೀಟರ್‍ಗೆ ಸುಮಾರು 62 ಕಿ.ಮೀ. ಇಂಧನ ಕ್ಷಮತೆಯನ್ನೂ ನೀಡುತ್ತದೆ

ಕರ್ನಾಟಕ ಬೆಸ್ಟ್ ಶಿಫಾರಸು

ನೋಡಲು ಅಂದವಾಗಿರಬೇಕು. ಒಂದಿಷ್ಟು ಅತ್ಯುತ್ತಮ ಫೀಚರ್ಸ್ ಇರಬೇಕು ಎಂದೆಲ್ಲ ಬಯಸುವವರು ಟಿವಿಎಸ್ ಜುಪೀಟರ್ ಟೆಸ್ಟ್ ರೈಡ್ ಮಾಡಿ ನೋಡಬಹುದು. ಒಬ್ಬರಿಗೆ ಇಷ್ಟವಾದ ವಾಹನ ಇನ್ನೊಬ್ಬರಿಗೆ ಇಷ್ಟವಾಗಬೇಕೆಂದಿಲ್ಲ. ಹೀಗಾಗಿ, ಇತರೆ ಸ್ಕೂಟರ್ ಗಳನ್ನೂ ಒಮ್ಮೆ ರೈಡ್ ಮಾಡಿ ನೋಡಿ. ದರ, ಇಂಧನ ಕ್ಷಮತೆ, ವಿನ್ಯಾಸ, ಫೀಚರ್ ಗಳು, ನಿಮಗೆ ರೈಡ್ ಮಾಡಲು ಆರಾಮದಾಯಕತೆ ಒದಗಿಸುವುದು ಸೇರಿದಂತೆ ಸಾಕಷ್ಟು ಅಂಶಗಳನ್ನು ಹೋಲಿಕೆ ಮಾಡಿ ನೋಡಿ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಜುಪೀಟರ್ ಗಳು ರಸ್ತೆಯಲ್ಲಿವೆ. ನಿಮ್ಮ ಪರಿಚಯಸ್ಥರು, ಸ್ನೇಹಿತರು, ಬಂಧುಗಳು ಜುಪೀಟರ್ ಬಳಸುತ್ತಿದ್ದರೆ ಅಭಿಪ್ರಾಯ ಕೇಳಿರಿ. ಖರೀದಿಸಿರಿ.

TVS Jupiter Scooter Test Ride By Indiblogger Bloggers

ಟಿವಿಎಸ್ ಜುಪೀಟರ್ ವೆಬ್ ಸೈಟ್ ವಿಳಾಸ

[P_REVIEW]

Read This: How Car Engine Works?