ಅವಳ ಸ್ವಗತ

ಮುಂಜಾನೆಯ ಚಳಿಯಲ್ಲಿ
ಮೈ ಬಿಸಿಯೇರುತ್ತಿದ್ದರೂ
ತಣ್ಣಗಿನ ನೀರಲ್ಲಿ ಜಳಕವ ಮಾಡಿ
ಓದುತ್ತಿದ್ದೆ….ಕನಸ ಹೆಬ್ಬಾಗಿಲಿನಲ್ಲಿ
****
ಕನ್ನಡಿ ನೋಡಿ ಕೆಂಪಾಗುತ್ತಿದ್ದೆ
ಕಾಡಿಗೆ ಕಣ್ಣಲ್ಲಿ ಕಾಡುವ ಕನಸುಗಳು
ಎಲ್ಲಿದ್ದೆ ನೀನು..? ಜೊತೆಗೆ ನಾನು,
ನಗುವ ತೊಟ್ಟಿಲಲ್ಲಿ ನೂರು ಕನಸು..
****
ಶಬರಿಯಾಗಿ ನಾ ಕಾದೆ, ಶಕುಂತಲೆ ನಾನಾದೆ
ಕೊಳಲನೂದುವ ಕೃಷ್ಣನ ಕಾಯೋ ರಾಧೆಯಾದೆ
ಬಿಂದಿಯಾಗಿ ಬಂದ, ಬಂಧಿಯಾಗಿ ಹೋದೆ
ಅಹಲ್ಯೆಯಾಗಿ ನಾನು ಸ್ವತಃ ಕಲ್ಲಾದೆ!
****
ಮಳೆಬಿಲ್ಲ ಪಡೆಯೋ ಬಯಕೆಯಿಂದ
ಗಾಳಿಪಟ ನಾನಾದೆ, ಅವನು ದಾರವಾದ
ಪಂಜರದ ಬಾಗಿಲು ತೆರೆದಿಟ್ಟರೂ,
ಹಾರಲಾಗದ ಗಿಣಿಯಾದೆ ನಾನು..
****
ನನ್ನಿ ಎದೆಯಲ್ಲಿ ಮುಟ್ಟಲಾಗದ ನೋವು
ಮುಖವಾಡದ ಮುಗುಳ್ನಗೆಯ ನೋಡಿ
ಕನಸ ಕಟ್ಟಬೇಡ ಗೆಳೆಯ
ನಗುವ ಹೂವಿನ ಹಿಂದೆ ನೋವಿದೆ
*****
ನಿರಾಶೆ, ಹತಾಶೆ, ಜೊತೆಯಾಗಿದೆ ಈಗ
ನೂರು ನೋವ ಬಿಚ್ಚಿಡಲಾರೆ ನಿನ್ನ ಕವಿತೆಗೆ
ಕ್ಷಮಿಸಿ ಬಿಡು ಗೆಳೆಯ…….ನನ್ನ
ಕನಸುಗಳು ಕರಗಿ ಹೋಗಿವೆ
*