ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು!

Image

ಏಕ್ ರೆಗ್ಯುಲರ್, ದೋ ಸ್ಮಾಲ್” ಧ್ವನಿ ಕೇಳಿದಾಕ್ಷಣ ಮುಖ ಮೇಲೆ ಎತ್ತದೆಯೇ ಮೂರು ಸಿಗರೇಟುಗಳನ್ನು ಮುಂದಿಟ್ಟ ಪಾನ್ ಅಂಗಡಿಯ ಹುಳುಕು ಹಲ್ಲಿನ ಹುಡುಗ.

ಸ್ಮಂಜಿಗೆ ನೋವಾಗುತ್ತೋ ಎಂಬಂತೆ ಮೆಲ್ಲಗೆ ಸಿಗರೇಟ್ ಬಾಯಿಯೊಳಗಿಟ್ಟು ಅಂಗಡಿಯ ಹರಕು ಡಬ್ಬದ ಮೇಲೆ ಇಟ್ಟಿದ್ದ ಬೆಂಕಿಪೊಟ್ಟಣವನ್ನು ಜೀವನ್ ಕೈಗೆತ್ತಿಕೊಂಡಾಗ ಕಿರಣ್ ಕೂಡ ಸಿಗರೇಟ್ ಬಾಯಲ್ಲಿಟ್ಟುಕೊಂಡು ರೆಡಿಯಾದ.

ತನ್ನ ಸಿಗರೇಟಿನ ಮುಂಭಾಗಕ್ಕೆ ಬೆಂಕಿಯಿಟ್ಟು ಕಿರಣ್ ಸಿಗರೇಟಿಗೂ ಜೀವನ್ ಬೆಂಕಿ ಕೊಟ್ಟಾಗ ಪಕ್ಕದಲ್ಲಿದ್ದ ಶ್ರಾವಣ್ ಕೂಡ ಬಾಯಲ್ಲಿ ಸಿಗರೇಟ್ ಇಟ್ಟು ಬೆಂಕಿ ಹತ್ತಿಸಿಕೊಳ್ಳಲು ನೋಡಿದ.

ಅರ್ಧ ಉರಿದ ಕಡ್ಡಿಯಲ್ಲಿ ಜೋರಾಗಿ ಪ್ರಜ್ವಲಿಸುತ್ತಿದ್ದ ಬೆಂಕಿಯನ್ನು ಜೀವನ್ ಊದಲು ಪ್ರಯತ್ನಿಸಿದಾಗ ಬಿಡದೆ ಅದೇ ಕಡ್ಡಿಯಲ್ಲಿ ಶ್ರಾವಣ್ ಸಿಗರೇಟ್ ಹಚ್ಚಿಸಿಕೊಂಡ.

ತಕ್ಷಣ ಮುಖ ಸಿಂಡರಿಸಿ ಜೀವನ್ “ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು ಕಣೋ” ಅಂದ.

ಪಕ್ಕದಲ್ಲಿದ್ದ ಕಿರಣ್ ಜೋರಾಗಿ ನಕ್ಕು “ಮೂವರು ಹೊತ್ತಿಸ್ಕೊಂಡ್ರೆ ಏನಾಗುತ್ತೆ” ಎಂದು ಪ್ರಶ್ನಿಸಿದ.

“ಮೂವರು ಒಂದೇ ಕಡ್ಡಿಯಿಂದ ಸಿಗರೇಟ್ ಹಚ್ಚಿಸ್ಕೊಂಡ್ರೆ ಅವರ ನಡುವೆ ಮನಸ್ತಾಪ ಆಗುತ್ತೆ” ವೇದಂತಿಯಂತೆ ನುಡಿದ ಜೀವನ್ ಕಡೆಗೊಮ್ಮೆ ಹೊಗೆ ಬಿಟ್ಟು ಜೋರಾಗಿ ನಕ್ಕುಬಿಟ್ಟ ಕಿರಣ್.

“ನೋಡಪ್ಪ ಕೆಲವು ನಂಬಿಕೆಗಳು ಇರುತ್ತೆ. ನಿಂಗೊತ್ತ ಲವರ್ರಿಗೆ ಪೆನ್ ಗಿಫ್ಟ್ ಕೊಡ್ಬಾರ್ದು, ಗಾಜಿನ ವಸ್ತು ಉಡುಗೊರೆ ಕೊಡ್ಬಾರ್ದು… ಹಿಂಗೆ ತುಂಬಾ ನಂಬಿಕೆಗಳು ಇದೆ. ಅದೆಲ್ಲ ಅನುಭವಕ್ಕೆ ಬಂದ್ಮೆಲೆ ಗೊತ್ತಾಗೋದು.. ” ಎಂದು ಹೇಳಿ ಜೀವನ್ ಯಾವುದೋ ಯೋಚನೆಯಲ್ಲಿ ಮುಳುಗಿದ.

“ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು ಅನ್ನೊ ಮಾತಿನ ಸತ್ಯ ಏನಂತ ನಿಂಗೊತ್ತ?” ಎಂದು ಪ್ರಶ್ನಿಸಿದ ಕಿರಣ್ ಕಡೆಗೆ ನೋಡಿ ದೀರ್ಘವಾಗಿ ಹೊಗೆ ಒಳಗೆ ಎಳೆದುಕೊಂಡು “ಏನು” ಎಂದು ಶ್ರಾವಣ್ ಪ್ರಶ್ನಿಸಿದ.

ಕಿರಣ್ ಬುದ್ದಿಜೀವಿಯಂತೆ ಮುಖಮಾಡಿ ಹೇಳತೊಡಗಿದ.

“ಈ ನಂಬಿಕೆ ಆರಂಭವಾದದ್ದು ವಿಯಟ್ನಾಂ ಯುದ್ಧಕಾಲದಲ್ಲಿ. ಆಗ ಸೈನಿಕರು ಮೂರು ಮೂರು ಜನರು ಒಟ್ಟಿಗೆ ಇರುತ್ತಿದ್ದರು. ಮೂವರು ಒಟ್ಟಿಗೆ ಒಂದೇ ಸಮಯದಲ್ಲಿ ಕಡ್ಡಿ ಹತ್ತಿಸಿಕೊಳ್ಳುವ ಸಮಯದಲ್ಲಿ ವೈರಿ ಸೈನಿಕರು ಧಾಳಿ ಮಾಡುವ ಅಪಾಯವಿದೆ ಅಲ್ವ? ಅದಕ್ಕೆ ಒಂದು ಕಡ್ಡಿಯಿಂದ ಇಬ್ರು ಮಾತ್ರ ಬೆಂಕಿ ಉರಿಸುತ್ತಿದ್ದರು. ಮತ್ತೊಬ್ಬ ಸೈನಿಕ ಸುತ್ತಮುತ್ತ ನಿಗಾವಹಿಸುತ್ತಿದ್ದ. ಅದೇ ನಂಬಿಕೆ ಈಗ ಮೂಢ ನಂಬಿಕೆಯಾಗಿದೆ.

ಇತಿಹಾಸದ ಉದಾಹರಣೆ ನೀಡಿ ಉದ್ದ ಭಾಷಣ ಬಿಗಿದ ಶ್ರಾವಣ್ ಮುಖವನ್ನೇ ಕೆಲವು ಕ್ಷಣ ನೋಡಿದ ಜೀವನ್ ತಕ್ಷಣ ಏನೋ ನೆನಪಾದಂತೆ, “ಪರ್ಸ್ ತಂದಿಲ್ಲ ಕಣೋ, ಸಿಗರೇಟ್ ದುಡ್ಡು ಕೊಡು” ಅಂತ ಹೇಳಿ ಮುಗುಳ್ನಕ್ಕ.

ಮುಗಿದ ಸಿಗರೇಟನ್ನು ನೆಲಕ್ಕೆ ಬಿಸಾಕಿ ಅದನ್ನು ಎಡಗಾಲಿನಲ್ಲಿ ಹೊಸಕಿದ ಶ್ರಾವಣ್ ಪರ್ಸಿಗೆ ಕೈ ಹಾಕಿದ. ಆಗ ಅವನ ಕಿಸೆಯಿಂದ ಬಿದ್ದ ಹುಡುಗಿಯ ಫೋಟೊವನ್ನು ಮೆಲ್ಲಗೆ ಹೆಕ್ಕಿಕೊಂಡು ನೋಡಿದ ಜೀವನ್ ಬೆಚ್ಚಿಬಿದ್ದ.

ಅಲ್ಲಿದ್ದದ್ದು ಜೀವನ್ ಮನಸ್ಸಿನಲ್ಲಿಯೇ ಪ್ರೀತಿಸುತ್ತಿದ್ದ ಹುಡುಗಿಯ ಫೋಟೊ!