ಕಥೆ: ಒಂದು ನಿದ್ದೆಯಿಲ್ಲದ ವಿರಹದ ರಾತ್ರಿ

ಮೊಬೈಲ್ ತೆರೆದು ನೋಡಿದೆ.  ಸಮಯ ರಾತ್ರಿ ಎರಡಾಗಿತ್ತು. ಥಕ್, ಇವಳ ನೆನಪಿನಿಂದ ನಿದ್ದೆ ಕಳೆದುಕೊಂಡೆ. ಕಣ್ ಮುಚ್ಚಿದರೆ ಅವಳದೇ ನೆನಪು. ಮತ್ತೆ ಮೊಬೈಲ್ ತೆರೆದು ಹಳೆಯ ಸಂದೇಶಗಳನ್ನು ಓದತೊಡಗಿದೆ. ಕಣ್ಣು ಅಸ್ಪಷ್ಟವಾಗತೊಡಗಿತು. ದೂರದಲ್ಲೊಂದು ಹಕ್ಕಿ ನನ್ನತ್ತ ವೇಗವಾಗಿ ಬರುತಿತ್ತು.

**
ದಿನಾ ಆ ಗಿಡದ ರೆಂಬೆಯಲ್ಲಿ ಕುಳಿತು ಅರಳಿ ನಿಂತ ಹೂಗಳನ್ನು ನೋಡುವುದು ನನ್ನ ಕಾಯಕ. ಅಂದು ಕೂಡ ಅಲ್ಲೇ ಇದ್ದೆ. ಕೇಳಿತು ಕೀಂವ್ ಕೀಂವ್ ಸದ್ದು. ಮೇಲ್ನೋಡಿದೆ. ಕೇದಗೆ ಗಿಡಕ್ಕೆ ಹಬ್ಬಿಕೊಂಡ ಮಲ್ಲಿಗೆ ಗಿಡದ ಮೇಲೆ ಕುಳಿತ ಪುಟ್ಟಹಕ್ಕಿ ನನ್ನನ್ನೇ ನೋಡುತಿತ್ತು.

ಅರೇ, ಯಾವೂರ ಹಕ್ಕಿಯಿದು. ನನ್ನ ಹೂದೋಟಕ್ಕೆ ಹೊಸ ಅತಿಥಿ. ಸಣ್ಣದಾಗಿದ್ದರೂ ಮುದ್ದಾಗಿದೆಯಲ್ವ. ನಾನು ಕೂಡ ಕಣ್ ಮಿಟುಕಿಸಿದೆ. “ನಾವು ಸ್ನೇಹಿತರಾಗೋಣ್ವ?” ಹಕ್ಕಿ ಮಾತನಾಡಿತು. ನನಗೆ ಅಚ್ಚರಿ. ಹೂದೋಟಕ್ಕೆ ಹೊಸ ಸಡಗರ. ನನ್ನ ಮನದಲ್ಲಿ ಕಲರವ. ಹೂಂ ಅಂದೆ.

***
ಹಕ್ಕಿ ದಿನಾ ಬರುತಿತ್ತು.  ನಾನೂ ಕಾಯುತ್ತಿದ್ದೆ. ಜಗತ್ತಿನ ಹೂ ಹಣ್ಣುಗಳ ವಿಷಯವೆಲ್ಲ ಮಾತನಾಡುತ್ತಿದ್ದೇವು. ಮುಂಜಾನೆ ಬಂದ ಹಕ್ಕಿ ಸಂಜೆವರೆಗೂ ಇರುತಿತ್ತು. ಸಂಜೆ ಹಾರಿ ಹೋಗುತಿತ್ತು.

ದಿನಗಳು ಉರುಳಿದವು. ಅದು ಹೆಣ್ಣು ಹಕ್ಕಿ. ನಾನು ಗಂಡು ಹಕ್ಕಿ. ಹೆಣ್ಣು ಹಕ್ಕಿಗಳ ಮನಸ್ಸು ಅರ್ಥ ಮಾಡಿಕೊಳ್ಳುವುದು ಕಷ್ಟವೆಂದು ಬೇರೆ ಹಕ್ಕಿಗಳು ಮಾತನಾಡುವುದನ್ನು ಕೇಳಿದ್ದೆ. ಹಾಗೆ ಒಮ್ಮೆಮ್ಮೆ ಈ ಹಕ್ಕಿ ಅರ್ಥವಾಗುತ್ತನೇ ಇರಲಿಲ್ಲ. ಹಣ್ಣು ಕೀಳಲು ಸಹಾಯ ಬೇಕಾದ್ರೆ ಮಾತ್ರ ಕಣ್ಣಲ್ಲಿ ಅತೀವ ಪ್ರೀತಿ ತುಂಬಿಕೊಂಡು ಮಾತನಾಡುತ್ತಿತ್ತು. ಒಮ್ಮೊಮ್ಮೆ ಯಾವುದೇ ಪ್ರತಿಫಲಪೇಕ್ಷೆಯಿಲ್ಲದೇ ಮನಸ್ಸು ಬಿಚ್ಚಿ ಮಾತನಾಡುತ್ತಿತ್ತು.

ತಿಂಗಳುಗಳೇ ಉರುಳಿದವು. ನಾವಿಬ್ಬರು ತುಂಬಾ ಹತ್ತಿರವಾದೆವು ಎಂದೆನಿಸತೊಡಗಿತ್ತು. ಹೂದೋಟದ ಸುತ್ತಮುತ್ತ ಜೊತೆಯಾಗಿ  ಹಾರಾಡುತ್ತಿದ್ದೇವು. ನದಿತೊರೆಗಳ ಮೇಲೆ ವಿಹಾರಿಸುತ್ತಿದ್ದೇವು. ಆ ಹಕ್ಕಿ ಕಣ್ಣಲ್ಲಿನ ಆತ್ಮೀಯತೆಯು ನನ್ನ ಹೃದಯದಲ್ಲಿ ಮಳೆಬಿಲ್ಲು ಸೃಷ್ಟಿಸುತ್ತಿತ್ತು. ಪ್ರೀತಿ ಹೇಳಲು ಮನಸ್ಸು ತಡವರಿಸುತಿತ್ತು. ಹಕ್ಕಿ ಕೋಪಮಾಡಿಕೊಂಡರೆ ಎಂಬ ಅಳುಕು ಹೃದಯಕ್ಕೆ ಕುಟ್ಟುತ್ತಿತ್ತು.

***
ಒಂದಿನ ಹಕ್ಕಿ ಸಪ್ಪೆಯಿಂದ ಕುಳಿತುಕೊಂಡಿತ್ತು. ಏನಾಯ್ತು ಅಂದೆ. ನಾನೂ ಬೇರೆ ಹೂದೋಟಕ್ಕೆ ಹೋಗುತ್ತಿದ್ದೇನೆ. ಆದರೆ ಇದನ್ನು ಬಿಡಲು ಮನಸ್ಸಿಲ್ಲ. ಆದರೆ ಹೋಗುವುದು ಅನಿವಾರ್ಯ. ರೆಕ್ಕೆ ಮುದುಡಿ ಕುಳಿತು ಅಳುಮೋರೆ ಹಾಕಿ ಹಕ್ಕಿ ಕುಳಿತುಕೊಂಡಿತು.

ಹೋಗಲು ಬಿಡಬೇಡ ಎಂದಿತು ನನ್ನ ಮನಸು. ಇಲ್ಲಿ ನಿಲ್ಲಲು ಹೇಳಿದರೆ ಅದು ನನ್ನ ಸ್ವಾರ್ಥ ಎಂದಿತು ಒಳಮನಸು. ಅಲ್ಲಿನ ತಂಗಾಳಿ ಇಲ್ಲಿಗಿಂತ ಚೆನ್ನಾಗಿದೆ. ಈ ಹಕ್ಕಿಯ ರೆಕ್ಕೆಗೆ ಒಳ್ಳೆಯದು. “ಹೋಗುವುದಾದರೆ ಹೋಗಿ ಬಿಡು, ಆದರೆ ನನ್ನ ಮರೆಯದಿರು” ಎಂದೆ. ಹಕ್ಕಿ ಅಳತೊಡಗಿತು. ಬೇಜಾರಿನಲ್ಲೇ ಹಕ್ಕಿ ಹಾರಿ ಹೋಯಿತು.

***
ಹೂದೋಟ ಸಪ್ಪೆಯೆನಿಸತೊಡಗಿತು. ಎಂದಾದರೂ ಹಕ್ಕಿ ಬಂದಿತು ಎಂದು ಅಲ್ಲೇ ಹೆಚ್ಚಿನ ದಿನ ಕಾದುಕುಳಿತುಕೊಳ್ಳತೊಡಗಿದೆ. ಅಪರೂಪಕ್ಕೊಮ್ಮೆ ಹೂದೋಟಕ್ಕೆ ಬಂದು ಕೆಲವು ನಿಮಿಷವಿದ್ದು  ಹೋಗುತ್ತಿತ್ತು. ಹಕ್ಕಿ ಬದಲಾಗಿದೆ ಎಂದೆನಿಸುತ್ತಿತ್ತು.

ಹೂದೋಟದಲ್ಲಿದ್ದ ಉಳಿದ ಹಕ್ಕಿಗಳು ನನ್ನಲ್ಲಿ ದಿನಾ ಮಾತನಾಡಿಸುತ್ತಿದ್ದವು. ಆದರೆ ಆ ಹಕ್ಕಿಯನ್ನು ಮರೆಯಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಮೇಲೆ ಅದಕ್ಕೂ ಪ್ರೀತಿಯಿರಬಹುದು ಎಂಬ ಭಾವನೆ ಬಲವಾಗತೊಡಗಿತು. ಅದರ ಜೊತೆಯಾಗಿ ಗೂಡುಕಟ್ಟುವ  ಕನಸು  ಬೀಳುತ್ತಿತ್ತು.

ಅಂದೊಂದು ದಿನ ಪ್ರೇಮದ ಹಕ್ಕಿಯ ನೆನಪು ಜೋರಾಗಿ ಕಾಡುತಿತ್ತು. “ಕ್ರೀ ಕ್ರೀ… ಏನ್ರಿ ಬೇಜಾರಲ್ಲಿದ್ದೀರಾ” ಎಂದು ಹೂದೋಟದ ನನ್ನ ಆತ್ಮೀಯ ಹಕ್ಕಿಯೊಂದು ಕ್ಷೇಮ ವಿಚಾರಿಸಿತ್ತು. “ಪ್ರೇಮದ ಹಕ್ಕಿ ನೆನಪಾಗುತ್ತಿದೆ” ಎಂದೆ.

ಅದಕ್ಕಿದು ಹೊಸ ವಿಷ್ಯ. ಯಾವ ಹಕ್ಕಿ? ಏನ್ಕತೆ? ಕುತೂಹಲದಿಂದ ಕೇಳಿತು. ಇದರಲ್ಲಿ ಹೇಳುವುದಕ್ಕೆ ಮನಸ್ಸು ಹಿಂಜರಿಯಿತು. ಯಾಕೆಂದರೆ ಇದು ಮತ್ತು ಆ ಹಕ್ಕಿ ಗೆಳತಿಯರು. ಹೇಳೋದಿಲ್ಲ ಅಂದೆ. ಹೇಳಲೇಬೇಕು ಎಂದು ಒತ್ತಾಯಿಸಿತು ಆತ್ಮೀಯ ಹಕ್ಕಿ. ಈ ಹಕ್ಕಿಯ ನಂಬಬಹುದು ಎಂದು ಮನಸ್ಸು ಹೇಳಿತು. ಈ ಹೂದೋಟಕ್ಕೆ ಬರುವ ಯಾವುದೇ ಹಕ್ಕಿ, ಚಿಟ್ಟೆಗಳಲ್ಲಿ ಹೇಳಬಾರದು ಎಂದು ಪ್ರಾಮೀಸ್ ತೆಗೆದುಕೊಂಡೆ. ಸರಿ ಎಂದಿತ್ತು ಈ ಹಕ್ಕಿ.

“ನಿನ್ನ ಆ ಗೆಳತಿಯೇ ನನ್ನ ಮನವ ಕಾಡುವ ಪ್ರೇಯಸಿ” ಎಂದೆ. ಅವಳಿಗೆ ಅಚ್ಚರಿ. “ಆ ಹಕ್ಕಿಗೆ ಪ್ರೀತಿ ವಿಷ್ಯ ಗೊತ್ತಿಲ್ವ?” ಈ ಹಕ್ಕಿ ಕೇಳಿತು. ಇಲ್ಲ ಅಂದೆ. ನೀವೆಲ್ಲ ಹೀಗೆನೆ, ಕೇಳಿಬಿಟ್ಟರೆ ಏನೂ ರೋಗ. ಯಾವ ಫಲಿತಾಂಶಕ್ಕೂ ರೆಡಿ ಇದ್ರೆ ಆಯ್ತು. ಮನಸಲ್ಲಿ ಕೊರಗೊದ್ಯಾಕೆ?” ಬುದ್ದಿ ಮಾತು ಹೇಳಿತು ಆತ್ಮೀಯ ಹಕ್ಕಿ.

“ನಾನೇನು ಮಾಡಲಿ. ಹೇಗೆ ಹೇಳಲಿ. ಸ್ನೇಹ ಕಳೆದುಕೊಂಡ್ರೆ. ಆ ಹಕ್ಕಿ ನನ್ನನ್ನು ಪ್ರೀತಿಸಬಹುದೇ?” ನನ್ನಲ್ಲಿ ನೂರಾರು ಪ್ರಶ್ನೆಗಳು. ಹಕ್ಕಿ ಗಂಭೀರವಾಗಿ ಯೋಚಿಸತೊಡಗಿತು “ನಿನಗೆ ಧೈರ್ಯವಿದ್ದರೆ ಹೇಳು, ನನಗೆ ಆಕಾಶದಲ್ಲಿ ಹಾರುವಾಗ ಆ ಹಕ್ಕಿ ದಿನಾಲೂ ಸಿಗುತ್ತೆ. ನಿನ್ನ ಬಗ್ಗೆ ಅದಕ್ಕೆ ಪ್ರೀತಿ ಇದೇನಾ ಕೇಳಿ ಹೇಳುತ್ತೇನೆ” ಎಂದು ಆ ದೈರ್ಯವಂತ ಹಕ್ಕಿ ಹೇಳುತ್ತಿದ್ದರೆ ನನ್ನ ಮನದಲ್ಲಿ ಮಲ್ಲಿಗೆ ಮೊಗ್ಗೊಂದು ಅರಳಿದಂತಾಯಿತು.

ಆ ಹಕ್ಕಿಯನ್ನು ಹುಡುಕಲು ಪ್ರಯತ್ನಿಸಿದೆ. ನನಗೆ ಸಿಗಲೇ ಇಲ್ಲ. ಆಗೋದು ಆಗಲಿ. ಅವಳಿಗೆ ನನ್ನ ಪ್ರೀತಿ ವಿಷ್ಯ ತಿಳಿಯಲೇ  ಬೇಕು. ಜೀವನ ಪೂರ್ತಿ ಕೊರಗೊದ್ಯಾಕೆ ಎಂದು ನನ್ನ ಆತ್ಮೀಯ ಹಕ್ಕಿಗೆ ಜವಬ್ದಾರಿ ವಹಿಸಿದೆ. ಹೂದೋಟದ ಮೂಲೆಯಲ್ಲಿದ್ದ ಗಣಪತಿ ವಿಗ್ರಹದ ಮುಂದಿನ ಮರದಲ್ಲಿ ಕುಳಿತು ದೇವರನ್ನು ಬೇಡತೊಡಗಿದೆ.

“ಆ ಹಕ್ಕಿಗೆ ನಿನ್ನಲ್ಲಿ ಪ್ರೀತಿ ಇರಬಹುದು ಅಥವಾ ಇಲ್ಲದೇ ಇರಬಹುದು. ಯಾವುದಕ್ಕೂ ರೆಡಿ ಇರು” ಎಂದಿತು. ಹೂಂ ಅಂದೆ. “ನಮ್ ಜೋಡಿ ಹೇಗಿರಬಹುದು” ಎಂದು ಆತ್ಮೀಯ ಹಕ್ಕಿಯಲ್ಲಿ ಕೇಳಿದೆ. “ಸೂಪರ್, ಅಗರಬತ್ತಿ ತರಹ” ಎಂದು ಹೇಳಿ ಹಕ್ಕಿ ಆಕಾಶಕ್ಕೆ ನೆಗೆಯಿತು. ನಾನು ಅದು ವಾಪಸ್ ಬರುವುದನ್ನೇ ಕಾಯತೊಡಗಿದೆ.

ಈ ಹೂದೋಟದಲ್ಲಿ ಆ ಮಲ್ಲಿಗೆ ಬಳ್ಳಿಗಳ ಸಮೀಪ ಗೂಡು ಕಟ್ಟಬೇಕು. ಮರಿ ಹಕ್ಕಿಯನ್ನು ಮುದ್ದು ಮಾಡುವಂತೆ ಆ ಹಕ್ಕಿಯೊಂದಿಗೆ ಜೀವನ ಪೂರ್ತಿ ಜೊತೆಗಿರಬೇಕು. ಅದಕ್ಕೆ ಯಾವತ್ತೂ ಕುಕ್ಕಬಾರದು. ಎಲ್ಲಾ ಹಕ್ಕಿಗಳು ಅಸೂಯೆ ಪಡುವಂತೆ ಅದನ್ನು ಪ್ರೀತಿಸಬೇಕು. ಇದೇ ಹೂದೋಟದಲ್ಲಿ ಮದುವೆ ಗ್ರಾಂಡ್ ಆಗಿಟ್ಟುಕೊಳ್ಳಬೇಕು. ಕಾಡಿನಲ್ಲಿರುವ ಎಲ್ಲಾ ಹಕ್ಕಿಗಳನ್ನು ಆಮಂತ್ರಿಸಬೇಕು” ನಾನು ಕನಸು ಕಾಣಲು ಆರಂಭಿಸಿದೆ.

ಒಂದೆರಡು ದಿನ ಕಳೆದು ಆತ್ಮೀಯ ಹಕ್ಕಿ ವಾಪಸ್ ಆಯಿತು. ಯಾಕೋ ಪಕ್ಕದ ಮರದಲ್ಲಿ ಕುಳಿತ ಮರಕುಟುಕ ಹಕ್ಕಿಯ ಸದ್ದು ಕಿರಿಕ್ ಮಾಡುತ್ತಿತ್ತು. ಸುಮ್ಮನೆ ಹಕ್ಕಿ ಮುಖ ನೋಡಿ ಏನಾಯ್ತು ಎಂದೆ. ಅದರ ಮುಖ ನೋಡಿದಾಗಲೇ ಏನೋ ಸಂಭವಿಸಿದೆ ಎಂದೆನಿಸಿತು.

“ಬೇಜಾರು ಮಾಡ್ಕೋಬೇಡ. ಅವಳು ಈಗಾಗಲೇ ಬೇರೆ ಪಾರ್ಕಿನಲ್ಲಿ ಬೇರೆ ಹಕ್ಕಿಯೊಂದಿಗೆ ಗೂಡು ಕಟ್ಟುತ್ತಿದ್ದಾಳಂತೆ. ನಿನ್ನನ್ನು ಸ್ನೇಹದ ಹಕ್ಕಿ ಎಂದುಕೊಂಡಿದ್ಲಂತೆ. ಇವ್ನು ಹೀಗೆ ಮಾಡಬಾರದಿತ್ತು ಎಂದು ತುಂಬಾ ಬಯ್ದು ಬಿಟ್ಲು. ಅವಳನ್ನು ಮರೆತುಬಿಡೋ” ಎಂದಿತು.

ನನಗೆ ಷಾಕ್. ವಾತಾವರಣ ಬದಲಾಗತೊಡಗಿತು. ಆಕಾಶದಲ್ಲಿ ಮೋಡ ಕವಿಯಿತು. ಗುಡುಗು ಸದ್ದು ಬೇರೆ. ಜೋರು ಮಳೆ ಸುರಿಯೋದು ಖಾತ್ರಿ. “ಬೇಜಾರು ಮಾಡ್ಕೋಬೇಡ. ಕೂಲ್” ಎಂದು ಆತ್ಮೀಯ ಹಕ್ಕಿ ಸಂತೈಸಿತು. ಹೂಂ ಅಂದೆ.

“ಆಗೋದೆಲ್ಲ ಒಳ್ಳೆಯದಕ್ಕೆ” ಏನೂ ಆಗದವನಂತೆ ಹೇಳಿ ಕುಳಿತುಬಿಟ್ಟೆ. ಜೋರು ಮಳೆ ಸುರಿಯತೊಡಗಿತ್ತು. ರೆಕ್ಕೆ ಪುಕ್ಕಗಳೆಲ್ಲ ಒದ್ದೆಯಾದರೂ ಅಲ್ಲೇ ಕುಳಿತೆ. ರಾತ್ರಿ ಕಳೆಯಿತು. ಹಗಲಾಯಿತು. ನನ್ನ ರೋದನವನ್ನು ಹೂದೋಟದಲ್ಲಿ ಟ್ವಿಟ್ ಮಾಡತೊಡಗಿದೆ. ಆ ಧ್ವನಿ ದೂರದಲ್ಲೆಲ್ಲೋ ಹಾರುತ್ತಿದ್ದ ಸ್ನೇಹದ ಹಕ್ಕಿಗೆ ಕೋಪತರಿಸಿತು.

ಕ್ಷಮಿಸು ಅಂದೆ ಹಕ್ಕಿ ಮಾತನಾಡಲಿಲ್ಲ. ಜೋರು ಬಯ್ದು ಬಿಡು ಎಂದೆ. ಅದಕ್ಕೂ ಪ್ರತಿಕ್ರಿಯಿಸಲಿಲ್ಲ. ಅದರ ಮೌನ ಅಸಹನೀಯವಾಗತೊಡಗಿತು. ಹುಚ್ಚು ಹಿಡಿಯುತಿತ್ತು. ಸ್ನೇಹವಾದರೂ ಉಳಿದಿದ್ದರೆ ನೆಮ್ಮದಿಯಾಗಿರಬಹುದಿತ್ತು ಎಂದು ಮನಸು ಬಯಸುತ್ತಿತ್ತು. ಹಕ್ಕಿ ಕೊಡೊ ಮೌನ ಶಿಕ್ಷೆ ನರಕಯಾತನೆ ನೀಡತೊಡಗಿತು.

ಸ್ನೇಹದ ಹಕ್ಕಿಯ ಸಾಂತ್ವನ ಪ್ರಯೋಜನವಾಗಲಿಲ್ಲ. ಯಾತನೆ ಅತೀವವಾಗತೊಡಗಿತು. ಬೇಜಾರಿನಲ್ಲಿ ಕುಳಿತಿದ್ದೆ. ಆಗ ಆಕಾಶದಲ್ಲಿ ಬಿರುಗಾಳಿ ಬೀಸಿದಂತೆ ಆಯ್ತು. ಮೇಲ್ನೋಡುತ್ತೇನೆ.

ಆ ಪ್ರೇಮದ ಹಕ್ಕಿ ನನ್ನತ್ತಲೇ ವೇಗವಾಗಿ ಬರುತ್ತಿತ್ತು. ಅದರ ಮುದ್ದು ಮುಖ ಗಂಭೀರವಾಗಿತ್ತು. ಕಣ್ಣಲ್ಲಿ ಕಿಡಿಕಾರುತ್ತಿತ್ತು. ನಾನು ಕಣ್ ಮುಚ್ಚಿದೆ. ಎದೆಗೆ ಬಲವಾಗಿ ಕುಕ್ಕಿದಂತಾಯ್ತು. ಹೃದಯದಲ್ಲಿ ಅತೀವ ವೇದನೆಯಿಂದ ನರಳಿ ಆಕಾಶ ನೋಡಿದೆ. ಹಕ್ಕಿ ಹಾರಿಯಾಗಿತ್ತು. ಮತ್ತೆ ಕಣ್ ಮುಚ್ಚಿದೆ. ಮತ್ತೊಮ್ಮೆ ಬಲವಾಗಿ ಕುಕ್ಕಿದಂತ್ತಾಯ್ತು.

****
ನೋವು ತಡೆಯಲಾರದೆ ಅಯ್ಯೋ ಎಂದೆ. ಪಕ್ಕದಲ್ಲಿ ಮಲಗಿದ್ದ ಸ್ನೇಹಿತ ಎದ್ದು ಕುಳಿತು ನನ್ನನ್ನು ಅಲುಗಾಡಿಸಿ ಎಬ್ಬಿಸಿ “ಏನಾಯ್ತು” ಅಂದ. ಏನಿಲ್ಲವೆಂದು ಹೇಳಿ ದಿಂಬಿಗೆ ಮುಖವೊತ್ತಿ ಮಕಾಡೆ ಮಲಗಿದೆ. ಇಲ್ಲಿಗೆ ನನ್ನ ಕಥೆ ಮುಗಿಯಿತು.