ನೆನಪಿನ ತೋರಣ- ನಾನು ನನ್ನ ಬಾಲ್ಯ

By | December 1, 2019
ನಿನಗೆ ಶೇಷಮ್ಮ ಟೀಚರ್‌ನ ನಂಬರ್‌ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್‌ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್‌, ಮೇಸ್ಟ್ರು, ಊರು, ಕಾಡುಗುಡ್ಡ,  ಅಮ್ಮನ ಪ್ರೀತಿ, ಗುರುಗಳು ನೀಡಿದ್ದ ಬೆತ್ತದ ಏಟು, ಸ್ನೇಹಿತನ ಮುನಿಸು, ತಂಟೆ, ತಕರಾರು ಹೀಗೆ ನೆನಪುಗಳ ಜಾತ್ರೆ. ಎಲ್ಲರ ಭೀತಿಯಂತೆ ನನಗೆ ನನ್ನೂರು ಏನೋ ಕಳೆದುಕೊಂಡಂತೆ ಅನಿಸುತ್ತಿಲ್ಲ. ಊರು ವೃದ್ಧಾಶ್ರಮವೂ ಆಗಿಲ್ಲ. ಒಂದಿಷ್ಟು ಅಭಿವೃದ್ಧಿ ಬಿಟ್ಟರೆ ಹಿಂದಿನ ಹಾಗೇ ಇದೆ.
ಬಾಲ್ಯದ ಕನವರಿಕೆಯಿಂದ ಶೇಷಮ್ಮ ಟೀಚರ್‌ಗೆ ಫೋನ್‌ ಮಾಡಿದೆ. ಮನಸಿನ ತುಂಬಾ ಬಾಲ್ಯದ ಪ್ರವೀಣನೇ ತುಂಬಿಕೊಂಡಿದ್ದ. ಹೆಸರು ಹೇಳಿದಾಕ್ಷಣ ಗುರುತು ಹಿಡಿದು ಮಾತನಾಡಿದ್ದೇ ಮಾತನಾಡಿದ್ದು. ಅಮ್ಮ ಹೇಗಿದ್ದಾರೆ? ಅವರು ಹೇಗಿದ್ದಾರೆ? ಇವರು ಹೇಗಿದ್ದಾರೆ ಅಂತ ಇಡೀ ನನ್ನೂರಿನ ಆರೋಗ್ಯ ವಿಚಾರಿಸಿಕೊಂಡರು. ನಾನು ತಲುಪಿದ ನೆಲೆಯನ್ನು ಕೇಳಿ ಸಂತೋಷ ಪಟ್ಟರು. ಎಲ್ಲ ಅಬ್ಬೆಪಾರಿಯಾಗುತ್ತನೆಂದುಕೊಂಡಿದ್ದ  ಹುಡುಗ ಇವನೇನಾ ಅಂತ ಅನಿಸಿರಬೇಕು.
ಶೇಷಮ್ಮ ಟೀಚರ್‌ ಎಂದರೆ ಮನದಲ್ಲಿ ಮೂಡುವುದು ಹಲವು ಮುಖಗಳು. ಕೋಪಗೊಂಡಾಗ ದುರ್ಗೆ. ಪ್ರೀತಿಯಿಂದ ಮಾತನಾಡುವಾಗ ಅಮ್ಮ. ಲೆಕ್ಕ ಹೇಳಿಕೊಡುವುದರಲ್ಲಿ ಸರಸ್ವತಿ. ಕ್ಲಾಸ್‌ನಲ್ಲಿ ನಾನು ಏನು ತಪ್ಪು ಮಾಡಿದರೂ ಮನೆಗೆ ಬಂದು ದೂರು ಹೇಳುತ್ತಿದ್ದರು. ನಾನು ಏಳನೇ ತರಗತಿ ಮುಗಿಸೋವರೆಗೂ ಅವರಿಗೆ ಮದುವೆಯಾಗಿರಲ್ಲಿಲ್ಲ. ನಂತರ ಮದುವೆಯಾಗಿ ದೂರದೂರಿಗೆ ಟ್ರಾನ್ಸ್‌ಫಾರ್‌ ಆಗಿದ್ದರು.  ಇನ್ನು ಇವರು ನೋಡಲು ಸಿಗಲಾರರು ಅಂತ ಅಂದುಕೊಂಡಿದ್ದೆ. 10-12 ವರ್ಷಗಳ ನಂತರ ಮಾತನಾಡುವ ಅವಕಾಶ ಒದಗಿ ಬಂದಿತ್ತು. ಹೊಡೆಯುವುದನ್ನು ಹೊರತು ಪಡಿಸಿದರೆ  ಶೇಷಮ್ಮ ಟೀಚರ್‌ ಕೆಟ್ಟವರಾಗಿರಲ್ಲಿಲ್ಲ. ಶಾರದ ಪೂಜೆಯಂದು ಅವರ ಮಡಿಲಲ್ಲಿ ಕುಳಿತುಕೊಂಡು ಅಕ್ಕಿಯ ಮೇಲೆ ಮೊದಲಾಕ್ಷರ ಕಲಿತಿದ್ದೆ. ಪ್ರವೀಣ್‌ ಅನ್ನೋ ಹೆಸರಿಗೆ ಚಂದ್ರನನ್ನು ಸೇರಿಸಿದ್ದು ಕೂಡ ಇವರೇ.
ನನಗಿನ್ನೂ ನೆನಪಿದೆ. ನಾನು ಶಾಲೆಗೆ ಹೋಗುವಾಗ ಬ್ಯಾಗ್‌ನಲ್ಲಿ ಪಾಠ ಪುಸ್ತಕಕ್ಕಿಂತ ಚಂದಮಾಮ, ಬಾಲಮಂಗಳ ಮತ್ತು ಒಂದಿಷ್ಟು ಕಸ ಯಾವತ್ತೂ ಇರುತ್ತಿತ್ತು. ಟೀಚರ್‌ ನನ್ನ ಬ್ಯಾಗನ್ನು ಮೇಜಿನ ಮೇಲೆ ಸುರಿದು ಅದರಲ್ಲಿದ್ದ ಹರಿದ ಕತೆ ಪುಸ್ತಕಗಳನ್ನು ಎಲ್ಲರಿಗೆ ತೋರಿಸಿ ಅಪಹಾಸ್ಯ ಮಾಡುತ್ತಿದ್ದರು.  `ಇವನ ಚೀಲದಲ್ಲಿ ಪಾಠ ಪುಸ್ತಕಕ್ಕಿಂತ ಬಾಲಮಂಗಳ, ಚಂದಮಾಮ, ಕಸವೇ ಜಾಸ್ತಿ’ ಅಂತ ದಿನಾ ಅಮ್ಮನ ಬಳಿ ಬಂದು ದೂರು ಹೇಳುತ್ತಿದ್ದಳು. ಅಮ್ಮ ಇಂತಹ ದೂರುಗಳಿಗೆ ಕಿವುಡಿಯಾಗುತ್ತಿದ್ದಳು. ಪಕ್ಕದ ಮನೆಯ ರಶ್ಮಿಗೆ ಹೋಲಿಸಿ `ಅವಳು ನೋಡು ಎಷ್ಟು ಜಾಣ ಹುಡುಗಿ. ಕ್ಲಾಸ್‌ಗೆ ಯಾವಾಗಲೂ ಫಸ್ಟ್‌. ಇವನನ್ನು ಕೂಡ ಅದೇರೀತಿ ಕುಳಿತು ಓದೋಕೆ ಹೇಳಿ ಅಂತ’ ಅಮ್ಮನಿಗೆ ಹೇಳುತ್ತಿದ್ದರು. ರಶ್ಮಿಗೆ ನನ್ನನ್ನು ಹೋಲಿಸುವಾಗ ಅಮ್ಮ ಕೋಪಗೊಳ್ಳುತ್ತಿದ್ದಳು. ಅವಳಿಗೇನು ಅಪ್ಪ  ಸರ್ಕಾರಿ ಕೆಲಸದಲ್ಲಿದ್ದಾರೆ. ದುಡ್ಡು ವಿದ್ಯೆ ಎರಡೂ ಇದೆ. ಹೇಳಿ ಕೊಡ್ತಾರೆ’ ಅಂತ ಅಮ್ಮ ಸುಮ್ಮನಾಗುತ್ತಿದ್ದಳು.
ಇಷ್ಟಕ್ಕೂ ನನಗೆ ಕಥೆ ಪುಸ್ತಕ ಓದುವ ಹುಚ್ಚು ಹಿಡಿಸಿದೇ ಅಮ್ಮ. `ಒಂದು ಗೋಣಿ ತುಂಬಾ ಚಂದಮಾಮ ಇಟ್ಟಿದೆ. ಹಾಳಾದ ಗೆದ್ದಲು ತಿಂದು ಬಿಡ್ತು’ ಹಾಗಂತ ನಾನು ಹೈಸ್ಕೂಲ್‌ನಲ್ಲಿರುವಾಗ ಅವ್ಯಕ್ತ ನೋವಿನಿಂದ ಹೇಳುತ್ತಿದ್ದಳು. ಓದಿರುವುದು ನಾಲ್ಕನೇ ತರಗತಿಯಾದರೂ ರಾಮಾಯಣ, ಮಹಾಭಾರತ ಅಂತ ಅವಳು ಓದದ ಪುಸ್ತಕವಿಲ್ಲ. ನಾನು ಎಂಎ ಮುಗಿಸುವರೆಗೂ ಅವಳಿಗಾಗಿ ಲೈಬ್ರೆರಿಯಿಂದ ಪುಸ್ತಕ ತರುತ್ತಿದ್ದೆ. ಚಿಕ್ಕವರಿದ್ದಾಗ ನಾನು ಮತ್ತು ನನ್ಣಣ್ಣ ನಿದ್ರೆಗೆ ಮುನ್ನ ಅಮ್ಮನ ಅಕ್ಕ ಪಕ್ಕ ಮಲಗಿ ಕತೆ ಹೇಳುವಂತೆ ಪೀಡಿಸುತ್ತಿದ್ದೇವು. ಪಂಚತಂತ್ರ, ನರಿ, ರಾಜರಾಣಿ, ಹುಲಿ ತೋಳ ರಾಕ್ಷಸ ಅಂತ ಅವಳಲ್ಲಿ ಕಥೆಗಳೆಂದೂ ಮುಗಿಯುತ್ತಿರಲ್ಲಿಲ್ಲ. ಏನೋ ತಪ್ಪು ಮಾಡಿದಕ್ಕೆ ತಡೆಯಾಲಾರದೇ ಅಮ್ಮ ಒಂದು ದಿನ ಚಾಟಿಯಿಂದ ಹೊಡೆದಿದ್ದಳು. ಆ ಏಟಿಗೆ ನಾನು ಅಮ್ಮ ಅಂತ ಕಿರುಚಿ ದೂರಕ್ಕೆ ಓಡಿದ್ದೆ. ಮತ್ತೆ ಬಂದು ನೋಡಿದಾಗ ಅಮ್ಮ ಅಳುತ್ತಿದ್ದಳು.
ಚಂದಮಾಮ ಅಂದಾಗ ನನಗೆ ನೆನಪಾಗುವುದು ಮಳಿಯ ವೆಂಕಟಕೃಷ್ಣ ಭಟ್ರು. ಪ್ರತಿವಾರ(ಗುರುವಾರ ಅಂತ ನೆನಪು) ತಪ್ಪದೇ ಮನೆಗೆ ಚಂದಮಾಮ ತರುತ್ತಿದ್ದರು. ಅಮ್ಮ ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಭಟ್ರು ಸೈಕಲ್‌ ಮೂಲಕ ಮನೆ ಮನೆಗೆ ಚಂದಮಾಮ, ಪತ್ರಿಕೆಗಳನ್ನು ಹಂಚುತ್ತಿದ್ದರು. ಅವರಿಗೆ ಆಗಲೇ ಜೇನು ಸಾಕುವ ಹುಚ್ಚು ಕೂಡ ವಿಪರಿತವಾಗಿತ್ತು. ಇದೆಲ್ಲವುದರ ಪರಿಣಾಮ ಎಂಬಂತೆ ಅವರೀಗ `ಮಧು ಮಲ್ಟಿಪಲ್ಸ್‌’ ಎನ್ನುವ ಉದ್ಯಮ ಮಾಲೀಕ. ಸುಮಾರು ನೂರೈವತ್ತು ಜನರಿಗೆ ಉದ್ಯೋಗದಾತ. ಚಂದಮಾಮ ಮಾರುತ್ತಿದ್ದ ಭಟ್ರು ಈಗ ಯಶಸ್ವಿ ಉದ್ಯಮಿಯಾಗಲು ಎಷ್ಟು ಶ್ರಮ ಪಟ್ಟಿದ್ದಾರೋ? ಅವರಿಗೇ ಗೊತ್ತು. (http://madhumultiples.com).
ನನ್ನಣ್ಣ ನನಗಿಂತ ಎರಡು ಕ್ಲಾಸ್‌ ಮುಂದಿದ್ದ. ಸೈಕಲ್‌ ಕಲಿತದ್ದು ಅವನು ಫಸ್ಟ್‌. ಸೈಕಲ್‌ ಕಲಿತ ಖುಷಿಯಲ್ಲಿ ನನ್ನನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ಹೋಗಿದ್ದ. ಆಗ ಸೋಡದಂಗಡಿಯ ಮಮ್ಮದೆ ಬಳಿ ಗಂಟೆಗೆ 2 ರೂಪಾಯಿಗೆ ಸೈಕಲ್‌ ಬಾಡಿಗೆಗೆ ಸಿಗುತ್ತಿತ್ತು.  ತುಂಬಾ ವೇಗವಾಗಿ ಹೋಗುತ್ತಿದ್ದ. ಅದು ನಮ್ಮೂರಿನ ದೊಡ್ಡ ತಿರುವು. ಅಲ್ಲಿ ಸಾಮಾನ್ಯ ಸೈಕಲ್‌ಗಳಿಗೆ ಬ್ರೇಕ್‌ ಹಿಡಿತಾ ಇರಲ್ಲಿಲ್ಲ. ಅತೀ ವೇಗದಿಂದ ಕೆಳಗಿಳಿಯುತ್ತಿರುವಾಗ ಎದುರಿನಿಂದ ಬಸ್‌ ಬರುತ್ತಿತ್ತು. ಅಣ್ಣ ಬ್ರೇಕ್‌ ಹಿಡಿಯೋಕೆ ನೋಡ್ತನೆ. ನಿಲ್ಲೋದೆ ಇಲ್ಲ. ಎದುರಿನಿಂದ ಯಮನಂತೆ ಬರುವ ಬಸ್ಸು. ಏನಾಯಿತು ಅಂತ ಗೊತ್ತಾಗಲ್ಲಿಲ್ಲ. ನಾವಿಬ್ಬರು ಮಾರ್ಗದಲ್ಲಿ ಬಿದ್ದಿದ್ದೇವು. ಬಸ್‌ ನಿಂತಿತು. ಅದರಲ್ಲಿದ್ದವರು ನಮ್ಮನ್ನು ಎಬ್ಬಿಸಿದರು. ಅಣ್ಣ ಎದುರಿನ ಮೋರಿಗೆ ಸೈಕಲ್‌ನ್ನು ಗುದ್ದಿಸಿದ. ಸ್ವಲ್ಪ ಎಚ್ಚರ ತಪ್ಪಿದರೆ ಕೆಳಗಿನ ದೊಡ್ಡ ಗುಂಡಿಗೆ ಬೀಳುತ್ತಿದ್ದೇವು. ಸೈಕಲ್‌ನ ಎದುರಿನ ಟೈರ್‌ ಎಂಟು ಆಕಾರಕ್ಕೆ ತಿರುಗಿತ್ತು. ಅದೇ ಕೊನೆ ಮತ್ತೆ ನಾನು ಅವನೊಂದಿಗೆ ಸೈಕಲ್‌ನಲ್ಲಿ ಹೋಗಿಲ್ಲ.
ಶಾರದ ಪೂಜೆ, ಸ್ವಾತಂತ್ರೋತ್ಸವ ಸೇರಿದಂತೆ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ. ಕಾಗದ ಕೊಡೊಕೆ ನಾನು ಮತ್ತು ಸುನಿಲನೇ ಆಗಬೇಕು. ಕ್ಲಾಸ್‌ ಇಲ್ಲದೇ ಊರು ಸುತ್ತುವುದೆಂದರೆ ನಮಗೂ ಎಲ್ಲಿಲ್ಲದ ಖುಷಿ. ಕಾಡಿನೆಡೆಯಲ್ಲಿರುವ ಮನೆಗಳಿಗೆ, ಗುಡ್ಡದಾಚೆ ಹೋಗೊದಂದ್ರೆ ಮಜಾನೇ ಮಜಾ.
ಕಾಡಿನಲ್ಲಿ ಯಾವುದೋ ದೊಡ್ಡ ಬಂಡೆಯನ್ನು ತೋರಿಸಿ ಸುನಿಲ ‘ಇದು ಹುಲಿಯ ಗುಹೆಯಾಗಿತ್ತು’ ಅಂದ್ರೆ ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಈ ಮರದಲ್ಲಿ ಮೋಹಿನಿ ದೆವ್ವ ಇದೆ ಅಂತಲೂ ಹೆದರಿಸುತ್ತಿದ್ದ. ಕ್ಲಾಸ್‌ ಮುಗಿದ ಕ್ಷಣ ನಾನು ಮತ್ತು ಸುನಿಲ ಕಾಡಿಗೆ ಓಡುತ್ತಿದ್ದೇವು. ಅಲ್ಲಿ ನೆಲ್ಲಿಕಾಯಿ ಕಾರೆಕಾಯಿ ಅಂತ ಸಿಕ್ಕಿಸಿಕ್ಕಿದನ್ನು ತಿನ್ನುತ್ತಿದ್ದೇವು. ಕಾಡಿನಲ್ಲಿ ಜೇನು ಹಿಡಿಯೋ ನಾರ್ಣ ಸಿಕ್ಕದರೆ ಮುಗೀತು.ಮತ್ತೆ ಅವನೊಂದಿಗೆ ಕತ್ತಲಾಗುವ ತನಕ ಕಾಡು ಸುತ್ತುತ್ತಿದ್ದೇವು.
ನಾರ್ಣನಿಗೆ ಒಂದು ಜೇನು ಹುಳ ಕಣ್ಣಿಗೆ ಬಿದ್ದರೆ ಸಾಕು. ಅದರ ಹಿಂದೆಯೇ ಸಾಗಿ ಜೇನು ಗೂಡಿನ ಜಾಡು ಹಿಡಿಯುತ್ತಿದ್ದ. ಇವನ ತಾಯಿ ಅಯ್ತೆ ತೋಡಿನ ಬದಿಯಲ್ಲಿ ಕುಳಿತುಕೊಂಡು ಏಡಿಯ ಪುಟ್ಟ ಗುಹೆಯೊಳಗೆ ಕೈಹಾಕಿ ಏಡಿ ಹಿಡಿಯುವುದನ್ನು ನಾವು ನೋಡಿ ಆಶ್ಚರ್ಯಗೊಳ್ಳುತ್ತಿದ್ದೇವು. ಕಾಡಿನಲ್ಲಿ ಸಂಗ್ರಹಿಸಿದ ಸೀಗೆಕಾಯಿಗಳನ್ನು ನನ್ನ ಮನೆಯ ಪಕ್ಕದಲ್ಲಿದ್ದ ಅಜ್ಮೀರ್‌ನ ಅಂಗಡಿಗೆ ಮಾರುತ್ತಿದ್ದೇವು. ಆತ ನೀಡಿದ ಚಿಲ್ಲರೆ ಹಣದಲ್ಲಿ ತಪ್ಪದೆ ತಿಂಡಿ, ಐಸ್‌ಕ್ಯಾಂಡಿ ತಿನ್ನುತ್ತಿದ್ದೇವು.
ಅಜ್ಮೀರ್‌ ಅಂದಾಗ ನೆನಪಾಯಿತು. ನಾನು ಚಿಕ್ಕದಾಗಿರುವಾಗ ಕಿಸೆಯಲ್ಲಿ ಅಡಕೆ ತುಂಬಿಸಿಕೊಂಡು ಬಂದು ಇವನಿಗೆ ಮಾರುತ್ತಿದ್ದೆ. ಆತ ಒಂದೆರಡು ದಿನ ಸುಮ್ಮನಿದ್ದ. ಕೊನೆಗೆ ಅಜ್ಜನಿಗೆ ಕಂಪ್ಲೇಟ್‌ ಕೊಡೋದ?. ಅಜ್ಜ ಬೈರವನಂತೆ ದೊಣ್ಣೆ ಹಿಡಿದು ಬಂದಿದ್ದರು. ಮನೆಗೆ ಕರೆದುಕೊಂಡು ಹೋಗಿ ಕಳ್ಳತನ ಮಾಡಬಾರದೆಂದು ತುಂಬಾ ಬುದ್ದಿವಾದ ಹೇಳಿದ್ದರು. ಅಜ್ಜ ಅಂದರೆ ಅಜಾನುಬಾಹು ವ್ಯಕ್ತಿತ್ವ. ಹಳ್ಳಿ ಮದ್ದು ಕೊಡುವುದರಲ್ಲಿ ಹೆಸರುವಾಸಿಯಾಗಿದ್ದರು. ಪಾಡ್ದನ, ಸಂದಿ ಅಂತ ಅವರಿಗೆ ತಿಳಿಯದ ವಿಷಯವಿರಲ್ಲಿಲ್ಲ. ಅಜ್ಜ ನಮಗೊಂದು ಅಚ್ಚರಿಯಾಗಿದ್ದರು.
ಚಂದದ ಚಂದಮಾಮ ಹುಡುಕಿದರೂ ಸಿಗುತ್ತ್ತಿಲ್ಲ. ಈಗೀಗ ನನಗೆ ಗೆದ್ದಲು ಹುಳುಗಳ ಮೇಲೆ ವಿಪರೀತ ಸಿಟ್ಟು ಬರುತ್ತಿದೆ. ನನ್ನ ಅಜ್ಜನಂತೆ ದೊಡ್ಡ ನೆಲ್ಲಿಕಾಯಿ ಮರ ಕೂಡ ಧರೆಗುರುಳಿದೆ. ಊರಿಗೆ ಹೋದಾಗ ಪ್ರೈಮರಿಯ ಮಕ್ಕಳು ನಮ್ಮನ್ನು ಅಚ್ಚರಿಗಣ್ಣಿನಿಂದ ನೋಡುತ್ತಾರೆ. ನನಗೆ ಅವರನ್ನು ನೋಡುವಾಗ ಅಸೂಯೆಯಾಗುತ್ತದೆ. ಬಾಲ್ಯವೆಂಬುದು ನೆನಪುಗಳ ಅಕ್ಷಯ ಪಾತ್ರೆ. ಅದು ಖಾಲಿಯಾಗುವುದೇ ಇಲ್ಲ. ದೊಡ್ಡಾದಾಗುತ್ತ ಬಂದಂತೆ ಊರು ಅಚ್ಚರಿಯಾಗಿ ಉಳಿಯಲ್ಲಿಲ್ಲ. ಪ್ರತಿಯೊಬ್ಬರಲ್ಲೂ ಬಾಲ್ಯದ ಅಕ್ಕರೆಯ ಸಕ್ಕರೆಯ ನೆನಪಿರುತ್ತದೆ. ಯಾಕೋ ಶೇಷಮ್ಮ ಟೀಚರ್‌ನಲ್ಲಿ ಮಾತನಾಡಿದ ನಂತರ ಮನದ ಮೂಲೆಯಲ್ಲಿ ಬೆಚ್ಚಗೆ ಮಲಗಿದ್ದ ನೆನಪುಗಳು ಮತ್ತೆ ಕಾಡತೊಡಗಿವೆ.
ಪ್ರವೀಣ ಚಂದ್ರ ಪುತ್ತೂರು

13 thoughts on “ನೆನಪಿನ ತೋರಣ- ನಾನು ನನ್ನ ಬಾಲ್ಯ

 1. ವಜ್ರೋತ್ತಮ

  ಹುಣ್ಣೆಮೆ ಚಂದಿರನ ಗೆಳೆಯ,
  ನೆನಪಿನ ತೋರಣವನ್ನು ಇನ್ನೂ ಹಸಿಹಸಿಯಾಗಿರುವಂಥ ಎಲೆಗಳಿಂದ ಕಟ್ಟಿದ್ದೀಯ…. ನಾನು ಹೇಗೆ ನೆನಪಿನ ತೋರಣವನ್ನ ಕಟ್ಟ್ಟಲಿ ಎಂಬ ಯೋಚನೆ ನನ್ನ ಮನಸ್ಸಲ್ಲಿ ಮೂಡುವಂತೆ ಮಾಡಿದೆ ನಿನ್ನ ಲೇಖನ..
  ಚೆನ್ನಾಗಿದೆ…. ಹೀಗೆ ಬರೆಯುತ್ತಿರು…..
  ನಿನ್ನವ
  -ಸೂರ್ಯ…

  Reply
 2. praveen chandra

  ಪ್ರೀತಿಯ ಸೂರ್ಯ.
  ನನ್ನ ಲೇಖನ ನಿನ್ನ ಬಾಲ್ಯವನ್ನು ನೆನಪಿಸಿದೆ ಅಂದ್ರೆ ನಿನ್ನ ಬಾಲ್ಯದಲ್ಲೂ ಥೇಟ್‌ ಇಂತದ್ದೇ ಅಥವಾ ಇದಕ್ಕಿಂತ ಮಿಗಿಲಾದ ನೆನಪಿರಬಹುದು ಅಲ್ವ. ಯಾಕೆ ಅದನ್ನು ನೆನಪಿಸಿಕೊಳ್ಳಬಾರದು. ಥ್ಯಾಂಕ್ಸ್‌
  – ಪ್ರವೀಣ ಚಂದ್ರ

  Reply
 3. Rajesh Rai

  “Praveen good one. U never told me this story before”

  Reply
 4. praveen chandra

  ya raju i never told u. dz is chance for me remembering my moments. thank u

  Reply
 5. Nagaraj Hegde

  ha ha. super article. halliya ella hudugarallu entaha obba praveen irtane. adanna vishleshisi , bareyuvudu ideyall, adu great. neevu anta prayatna madiddira. oodidaga , nanna balyada nenapu agade iralilla. adake kaddu mariddu, cycle savari, bagalli na kasa, ohooom, ella nanna balyadallo agittu. nimma article a drashyagalanno kanmunde tantu. thanks. very good job.

  Reply
  1. chukkichandira

   ಪ್ರೀತಿಯ ನಾಗರಾಜು ಹೆಗಡೆ
   ನನ್ನ ಬ್ಲಾಗ್‌ಗೆ ಸ್ವಾಗತ

   ಪ್ರಾದೇಶಿಕವಾಗಿ ಒಂದಿಷ್ಟು ಭಿನ್ನತೆ, ವ್ಯತ್ಯಾಸ ಇದ್ದರೂ ಪ್ರತಿಯೊಬ್ಬರ ಬಾಲ್ಯದಲ್ಲೂ ಅಕ್ಕರೆಯ ನೆನಪಿರುತ್ತದೆ. ಇಷ್ಟಪಟ್ಟು ಓದಿದ ನಿಮಗೆ ಧನ್ಯವಾದಗಳು.

   ಪ್ರೀತಿಯಿಂದ
   -ಪ್ರವೀಣ ಚಂದ್ರ

   Reply
 6. Pingback: 25ರ ಲಹರಿಯಲ್ಲಿ « ಚುಕ್ಕಿ ಚಂದಿರ chukki chandira

 7. chukkichandira

  sampada.net ಪ್ರತಿಕ್ರಿಯೆಗಳು

  ಉ: ನಾನು ನನ್ನ ಬಾಲ್ಯ
  Submitted by kamath_kumble on December 27, 2010 – 11:17am.
  ಪ್ರವೀಣ್ ಅವರೇ ಬಾಲ್ಯವೇ ಅಂಥದ್ದು, ಮತ್ತೆ ನನ್ನ ನೆನಪನ್ನು (http://sampada.net/%…)ನೆನಪಿಸಿದಿರಿ.

  ಕಾಮತ್ ಕುಂಬ್ಳೆ

  ಇದಕ್ಕೆ ಪ್ರತಿಕ್ರಿಯೆ ಸೇರಿಸಿ

  ಉ: ನಾನು ನನ್ನ ಬಾಲ್ಯ
  Submitted by bpchand on January 7, 2011 – 6:22pm.
  ಹಾಯ್‌.. ನಿಮ್ಮ ಬಾಲ್ಯನೂ ನನ್ನ ಬಾಲ್ಯದ ತರಹನೇ ಇದೆ. ಹ್ಹ ಹ್ಹ. ಎಲ್ಲರ ಬಾಲ್ಯನೂ ಹೆಚ್ಚುಕಮ್ಮಿ ಒಂದೇ ರೀತಿ. ನೆನಪಿಸಿಕೊಳ್ಳೋಕೆ ಖುಷಿಯಾಗುತ್ತೆ. ಥ್ಯಾಂಕ್ಸ್‌

  edit ಇದಕ್ಕೆ ಪ್ರತಿಕ್ರಿಯೆ ಸೇರಿಸಿ

  ಉ: ನಾನು ನನ್ನ ಬಾಲ್ಯ
  Submitted by ಶ್ರೀನಿವಾಸ ವೀ. ಬ೦ಗೋಡಿ on January 7, 2011 – 6:53pm.
  Quote:
  ಚಂದದ ಚಂದಮಾಮ ಹುಡುಕಿದರೂ ಸಿಗುತ್ತ್ತಿಲ್ಲ.
  ಇಲ್ಲಿದೆ ನೋಡಿ.

  http://www.chandamam

  Reply
 8. chukkichandira

  sampada.net
  ಪ್ರತಿಕ್ರಿಯೆಗಳು

  ಉ: ನಾನು ನನ್ನ ಬಾಲ್ಯ
  Submitted by kamath_kumble on December 27, 2010 – 11:17am.
  ಪ್ರವೀಣ್ ಅವರೇ ಬಾಲ್ಯವೇ ಅಂಥದ್ದು, ಮತ್ತೆ ನನ್ನ ನೆನಪನ್ನು (http://sampada.net/%…)ನೆನಪಿಸಿದಿರಿ.

  ಕಾಮತ್ ಕುಂಬ್ಳೆ

  ಇದಕ್ಕೆ ಪ್ರತಿಕ್ರಿಯೆ ಸೇರಿಸಿ

  ಉ: ನಾನು ನನ್ನ ಬಾಲ್ಯ
  Submitted by bpchand on January 7, 2011 – 6:22pm.
  ಹಾಯ್‌.. ನಿಮ್ಮ ಬಾಲ್ಯನೂ ನನ್ನ ಬಾಲ್ಯದ ತರಹನೇ ಇದೆ. ಹ್ಹ ಹ್ಹ. ಎಲ್ಲರ ಬಾಲ್ಯನೂ ಹೆಚ್ಚುಕಮ್ಮಿ ಒಂದೇ ರೀತಿ. ನೆನಪಿಸಿಕೊಳ್ಳೋಕೆ ಖುಷಿಯಾಗುತ್ತೆ. ಥ್ಯಾಂಕ್ಸ್‌

  edit ಇದಕ್ಕೆ ಪ್ರತಿಕ್ರಿಯೆ ಸೇರಿಸಿ

  ಉ: ನಾನು ನನ್ನ ಬಾಲ್ಯ
  Submitted by ಶ್ರೀನಿವಾಸ ವೀ. ಬ೦ಗೋಡಿ on January 7, 2011 – 6:53pm.
  Quote:
  ಚಂದದ ಚಂದಮಾಮ ಹುಡುಕಿದರೂ ಸಿಗುತ್ತ್ತಿಲ್ಲ.
  ಇಲ್ಲಿದೆ ನೋಡಿ.

  http://www.chandamam

  Reply
 9. Pingback: ಜೋರು ಮಳೆಗೆ ಹಾಗೆ ಸುಮ್ಮನೆ… « ಚುಕ್ಕಿ ಚಂದಿರ chukki chandira

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.