ಬರೆದದ್ದೇ ಕವಿತೆ

ಪ್ರತಿದಿನ ಅದೇ ಪ್ಲಾಟ್ ಫಾರ್ಮ್ ನಲ್ಲಿ
ನಿನ್ನ ನನ್ನ ಕಣ್ಣುಗಳು ಮಿಲನವಾಗುತ್ತವೆ
ನೀನು ಮಾತನಾಡುವುದಿಲ್ಲ, ತಲೆ ತಗ್ಗಿಸಿಬಿಡುವೆ,
ನಾನು ಏನೋ ಕಳೆದುಕೊಂಡಂತೆ ಬಸ್ ಹತ್ತುತ್ತೇನೆ

ಮತ್ತೆ ಮರುದಿನ ಅದೇ ಪ್ಲಾಟ್ ಫಾರ್ಮ್
ಮಾತಿಲ್ಲ, ಕತೆಯಿಲ್ಲ, ಕನಸುಗಳು ಮಾತ್ರ
ಗೊತ್ತಾಗದಂತೆ ಮುಗುಳ್ನಗೆಯ ವಿನಿಮಯವಾಗುತ್ತದೆ,
ಕಣ್ಣುಗಳು ಮಿಲನವಾಗುತ್ತವೆ.

ಮತ್ತೆ ಮರುದಿನ ಅದೇ ಪ್ಲಾಟ್ ಫಾರ್ಮ್ ನಲ್ಲಿ
ನಾನು ನೀನು ಮತ್ತೆ ಸೇರುತ್ತೇವೆ
ಕಣ್ಣುಗಳು ಅರಳುತ್ತವೆ, ಮನಸು ಮಾತನಾಡುತ್ತದೆ
ನಾನು ಬಸ್ ಮಿಸ್ ಮಾಡಿಕೊಳ್ಳುತ್ತೇನೆ

ಒಂದೆರಡು ದಿನ ನೋಡದೆ ಇದ್ದರೆ
ಏನೋ ಕಳೆದುಕೊಂಡಂತೆ ಹುಡುಕುತ್ತೇನೆ
ಮತ್ತೆ ಬಂದಾಗ ಮನಸ್ಸು ನಗುತ್ತದೆ,
ಮತ್ತದೇ ಬಸ್ ಬರುತ್ತದೆ, ನಾನು ಹೋಗುತ್ತೇನೆ

ಎಲ್ಲೋ ಹೋಗಿ ಕೆಲವು ದಿನ ಕಳೆದು ಹೋಗಿ
ಮತ್ತೆ ಅದೇ ಪ್ಲಾಟ್ ಫಾರ್ಮ್ ಗೆ ಬರುತ್ತೇನೆ,
ನೀನು ಕಾಣದೇ ಚಡಪಡಿಸುತ್ತೇನೆ
ಪ್ಲಾಟ್ ಫಾರ್ಮ್ ಬದಲಿಸಿ ಬಿಟ್ಟೆಯಾ ಅಂತ ಹುಡುಕುತ್ತೇನೆ

ಮತ್ತೆ ಅವಳು ಬರುತ್ತಾಳೆ, ಕಣ್ಣಿನಡಿ ನಗುತ್ತಾಳೆ
ತಲೆತಗ್ಗಿಸುತ್ತಾಳೆ, ನಾನು ಕದ್ದು ನೋಡುತ್ತೇನೆ
ಅವಳು ಮೆಲ್ಲಗೆ ಬಂದು ಮಾತನಾಡುತ್ತಾಳೆ
ನಿದ್ದೆಯಲ್ಲಿ ಈಗೀಗ ನಾನು ಕನವರಿಸುತ್ತಿದ್ದೇನಂತೆ!

-ಪ್ರವೀಣ ಚಂದ್ರ ಪುತ್ತೂರು

ಇದನ್ನೂ ಓದಿ  ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ