ಸ್ನೇಹಿತ ಮೊದಲ ಬಾರಿ ಅತ್ತುಬಿಟ್ಟ

ಬಸ್ ವೇಗವಾಗಿ ಸಾಗುತ್ತಿತ್ತು. ಊರಿಗೆ ಬಂದ ಸಂಭ್ರಮವನ್ನು ಕಿತ್ತುಕೊಂಡ ಆ ಕ್ಷಣದ ಕುರಿತು ಯೋಚಿಸುತ್ತಿದ್ದೆ. ಬಸ್ಸಿನ ಕಿಟಕಿ ಹಾಕಿದ್ದರೂ ಚಳಿ ಕಾಡುತ್ತಿತ್ತು. ಹೃದಯವೂ ತಣ್ಣಗಿತ್ತು. ಅಪದಮನಿ ಅಭಿದಮನಿಗಳೆರಡೂ ನೋವಿನಲ್ಲಿತ್ತು. ಆಪ್ತ ಸ್ನೇಹಿತನೊಬ್ಬನ ಮುಂದೆ ಸ್ವಾಭಿಮಾನದ ಪ್ರಶ್ನೆಯೆದ್ದು ಅಹಲ್ಯೆಯಂತೆ ಕಲ್ಲಾದ ಪರಿಣಾಮವದು. ನನ್ನ ಎದುರು ಮಾತು ಆತನಿಗೆ ಅನಿರೀಕ್ಷಿತವಾಗಿತ್ತು. ನನಗೆ ಅನಿವಾರ್ಯವಾಗಿತ್ತು.
***
ಬ್ಯಾಗಿನಲ್ಲಿದ್ದ ಪತ್ರಿಕೆಯೊಂದನ್ನು ಕೈಗೆತ್ತಿಕೊಂಡೆ. ಅಲ್ಲಿ ನಾಗತಿಹಳ್ಳಿ ಸಂಬಂಧದ ಕುರಿತು ಬರೆದಿದ್ದರು. ಸಂಬಂಧವೆಂದರೆ ಬೆಂಕಿ ಮತ್ತು ಚಳಿ ಕಾಯುವವನ ನಡುವಿನ ಅಂತರದಂತೆ. ಚಳಿಯಾಗುತ್ತೆ ಎಂದು ಬೆಂಕಿಯನ್ನು ಮುಟ್ಟುವ ಹಾಗಿಲ್ಲ. ಬೆಂಕಿಗೂ ವ್ಯಕ್ತಿಗೂ ಒಂದಿಷ್ಟು ಅಂತರ ಕಾಯ್ದುಕೊಳ್ಳಬೇಕು ಅಂತ ಬರೆದಿದ್ದರು. ಸ್ನೇಹಕ್ಕೂ ಇದು ಅನ್ವಯವಾಗುತ್ತಾ? ನಾನು ಯೋಚಿಸತೊಡಗಿದೆ. ಸ್ನೇಹಕ್ಕೆ ಯಾವುದೇ ಅಂತರಗಳೇ ಇಲ್ಲವಾ ಅರ್ಥವಾಗಲಿಲ್ಲ.
***
ಇನ್ ಬಾಕ್ಸ್ ತೆರೆದು ನೋಡಿದಾಗ ಸ್ನೇಹದ ಮಹತ್ವ ಸಾರುವ ಹತ್ತಾರು ಸಂದೇಶಗಳು ಬಂದು ಕೂತ್ತಿದ್ದವು. ನಮ್ಮ ಕೋಪನೋಡಿ ಸ್ನೇಹಿತರೇ ಕಳುಹಿಸುತ್ತಿದ್ದರು. ಬೇರೆ ಸಂದರ್ಭದಲ್ಲಿಯಾದರೆ ಡಿಲಿಟ್ ಮಾಡಿ ಬಿಡುತ್ತಿದ್ದೆ. ಈಗ ಪ್ರತಿಪದಗಳು ಅರ್ಥವತ್ತಾಗಿ ಗೋಚರಿಸುತ್ತಿದ್ದವು. ನಮ್ಮೊಳಗೆ ಯಾಕೆ ಜಗಳ ಎಂದು ಸ್ನೇಹಿತರೆಲ್ಲರ ಗೋಗೆರತದಂತೆ ಕಾಡುತ್ತಿದ್ದವು.
***
ಅವನಲ್ಲಿ ಜಗಳ ಮಾಡಿದ ಮರುಕ್ಷಣವೇ ಆತನೊಂದಿಗೆ ಮನಸ್ಸು ರಾಜಿಯಾಗಿತ್ತು. ಆದರೆ ಮಾತನಾಡಲು ಮನಸ್ಸು ಇಚ್ಚಿಸಲಿಲ್ಲ. ಏನು ನಡೆಯಿತು ಎಂದು ಬರೆಯಲು ಕಷ್ಟ. ಯಾಕೆಂದರೆ ಅದರ ಯಾತನೆ ಅನುಭವವೇದ್ಯ. ಇಲ್ಲೊಂದು ಕತೆ ಓದಿ.
***
ರಾಜು ಮತ್ತು ಸಂದೀಪ ಆಪ್ತ ಸ್ನೇಹಿತರು. ಬಹಳಷ್ಟು ವರ್ಷಗಳಿಂದಲೂ ಅನ್ಯೋನ್ಯವಾಗಿದ್ದರು. ಪಿಯುಸಿಯಿಂದ ಸ್ನಾತಕೋತ್ತರದವರೆಗೆ, ನಿರುದ್ಯೋಗದಿಂದ ಉದ್ಯೋಗ ಸಿಕ್ಕವರೆಗೆ, ಉದ್ಯೋಗ ಸಿಕ್ಕಂದಿನಿಂದ ಇಂದಿನವರೆಗೆ ಆಪ್ತವಾಗಿದ್ದರು. ಮೊನ್ನೆ ಆತನ ಗೃಹಪ್ರವೇಶದ ನೆಪದಲ್ಲಿ ಒಟ್ಟಿಗೆ ಕೂಡುವ ಅವಕಾಶ ದೊರಕಿತು ಅವರಿಗೆ. ಅಜ್ಜ ಸತ್ತ ಹಿನ್ನಲೆಯಲ್ಲಿ ಗೃಹಪ್ರವೇಶ ಕ್ಯಾನ್ಸಲ್ ಆದರೂ ಒಂದು ಕಡೆ ಎಲ್ಲರೂ ಭೇಟಿಯಾಗುವ ನಿರ್ಧಾರ ಮಾಡಲಾಯಿತು. ಹಲವಾರು ವರ್ಷಗಳಿಂದ ಮುಖ ನೋಡದವರೆಲ್ಲ ಸಂಭ್ರಮಿಸಿದರು. ಸಂತೋಷದ ಕ್ಷಣವನ್ನು ಸಂದೀಪ ಹಾಳು ಮಾಡಿಬಿಟ್ಟ.

ಸಂದೀಪ ಒಂದಿಷ್ಟು ಒರಟ. ಹೃದಯದಲ್ಲಿ ತುಂಬಾ ಒಳ್ಳೆಯವನು. ಹೀಗಾಗಿ ಅವನ ಸ್ನೇಹಿತರ ಗುಂಪು ದೊಡ್ಡದಾಗಿದೆ. ವಿಶೇಷ, ಕೆಲವೊಮ್ಮೆ ವಿಚಿತ್ರ ವ್ಯಕ್ತಿತ್ವದಿಂದ ಅವನಿಂದ ದೂರವಾದವರೂ ಇದ್ದಾರೆ. ಆದರೆ ರಾಜುವಿಗೆ ಹಾಗಲ್ಲ. ಆತನೊಂದಿಗೆ ಬೆಳೆದವನು. ಪಿಯುಸಿಯಿಂದ ಜೊತೆಯಲ್ಲಿದ್ದವನು. ಹಲವು ಸಂತೋಷ, ಕಷ್ಟಗಳನ್ನೆಲ್ಲ ಜೊತೆಯಾಗಿ ಅನುಭವಿಸಿದವರು.

ಆತನ ಸ್ನೇಹಿತರ ಗುಂಪಿನಲ್ಲಿ ಇನ್ನೂ ಹಲವರಿದ್ದಾರೆ. ಅದರಲ್ಲಿ ಪ್ರಶಾಂತನೂ ಒಬ್ಬ. ಆತ ಸಂದೀಪನ ಗೃಹಪ್ರವೇಶಕ್ಕಾಗಿ ದೂರದ ಬೆಂಗಳೂರಿನಿಂದ ಬಂದವನು. ಒಂದು ಕಡೆ ಕುಳಿತು ಸಾಕಷ್ಟು ಮಾತುಕತೆ ನಡೆದು ಮತ್ತೊಬ್ಬ ಸ್ನೇಹಿತನ ಮನೆಗೆ ರಾಜು ಮತ್ತು ಪ್ರಶಾಂತ ಹೋದ. ಅಲ್ಲಿಗೆ ಸಂದೀಪ ಬರಲಿಲ್ಲ. ಸಂದೀಪನಿಗೆ ಫೋನ್ ಮಾಡಿ ಬರಲು ಹೇಳಿದಾಗ ಆತ ಅಸಂಬಂದ್ಧವಾಗಿ ಮಾತನಾಡಿದ. ಅವನ ಒಟ್ಟಾರೆ ಮಾತಿನ ತಾತ್ಪರ್ಯ. “ನಂಗೆ ಆ ಸ್ನೇಹಿತರು ಫಸ್ಟ್. ನೀವೆಲ್ಲ ನೆಕ್ಸ್ಟ್”. ದೂರದ ಬಾಂಬೆಯಿಂದ ಬಂದವನಿಗೆ ಈ ಮಾತು ಸಹನೀಯವಾಗುವ ಸಾಧ್ಯತೆ ಎಲ್ಲಿಯದ್ದು. ಉಳಿದ ಸ್ನೇಹಿತರೂ ಆತನಲ್ಲಿ ಮಾತನಾಡಿದಾಗಲೂ ಕೋಪ ಕೂಲ್ ಆಗಲಿಲ್ಲ. ಮುಂದೆ ಇನ್ನಷ್ಟು ಘಟನೆ ನಡೆದು ಜಗಳ ಜಾಸ್ತಿಯಾಯ್ತು. ನಮಗೆ ಬಯ್ದ ಸ್ನೇಹಿತ ಆಮೇಲೆ ಅತ್ತನಂತೆ. ಆತ ಇಲ್ಲಿವರೆಗೆ ನೋಡಿರದ ನನಗೆ ಇದು ತುಂಬಾ ನೋವನ್ನುಂಟುಮಾಡಿತು. ಆಮೇಲೆ ಇನ್ನಷ್ಟು ಘಟನೆ ನಡೆಯಿತು. ಬರೆಯಲು ಅದು ಅನ್ ಇಂಟ್ರೆಸ್ಟಿಂಗ್.

ಇದನ್ನೂ ಓದಿ  ಒಂದು ಕನವರಿಕೆಯ ಕ್ಷಣ

ಹೀಗೆ ಸಂಭ್ರಮ ಸೂತಕವಾಗಿ ರಾಜು ಬೆಂಗಳೂರಿಗೆ ಹೊರಟ. ಮರುದಿನ ಸಂದೀಪನಿಗೆ ಸ್ನೇಹಿತರು ಕರೆ ಮಾಡಿ ತಿಳಿಸಿದರು. ರಾಜು ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿದ್ದಾನೆ ಅಂತ. ಸಂದೀಪ ಕಣ್ಣೀರು ಸುರಿಸುತ್ತ ಓಡೋಡಿ ಬಂದ. ಆಸ್ಪತ್ರೆಯ ಹೊರಾಂಗಣದಲ್ಲಿ ಕುಳಿತಿದ್ದ ಸ್ನೇಹಿತರೆಲ್ಲ “ಏಪ್ರಿಲ್ ಫೋಲ್” ಎಂದು ತಿಳಿಸಿ ಅವರಿಬ್ಬರನ್ನೂ ರಾಜಿ ಮಾಡಿಸಿದರು. ಈ ಪ್ಯಾರಾ ಕಾಲ್ಪನಿಕ!
***
ಸ್ನೇಹಿತರೆಂದರೆ ಒಂದಿಷ್ಟು ಜಗಳ ಇದ್ದದ್ದೇ. ಆದರೆ ರಾಜಿಯಾಗುವುದು ಮಾತ್ರ ಮುಖ್ಯ. ಅವನೊಂದಿಗೆ ಮಾಡಿದ ಕೋಪ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗಿದೆ. ಉಳಿದ ಸ್ನೇಹಿತರೂ ಇನ್ನಷ್ಟು ಆಪ್ತವಾಗಿದ್ದಾರೆ.
***
ಇವರೆಲ್ಲರ ಹೊರತಾಗಿ ಒಳ್ಳೆಯ ಸ್ನೇಹಿತೆಯೊಬ್ಬಳೂ ನನಗಿದ್ದಾಳೆ. ಆಕೆಯೊಂದಿಗಿನ ಸ್ನೇಹ ಭಾವನಾತ್ಮಕವಾಗಿ “ಕೃಷ್ಣ ಕುಚೇಲರಂತೆ”
***
ಸ್ನೇಹ ಚಿರಾಯು ಎಂದು ನಂಬಿಕೊಂಡವನು ನಾನು… ಕ್ಷಮಿಸಿ ಬರಹಕ್ಕೆತಲೆಬುಡವಿಲ್ಲ. ಅಂತ್ಯವಂತೂ ಇಲ್ಲವೇ ಇಲ್ಲ. ಥೇಟ್ ಸ್ನೇಹದಂತೆ.