ಹೀಗೊಂದು ಕತೆ

ಹೀಗೊಂದು ಕತೆ
‘ಏನಪ್ಪ ಒಂದೇ ಸಮನೆ ಆ ಕಡೆ ನೋಡ್ತಾ ಇದ್ದೀಯಾ. ಬೇಕಾದ್ರೆ ಒಬ್ಳನ್ನು ರೂಂಗೆ ಕರೆದುಕೊಂಡು ಹೋಗು’ ಗೆಳೆಯ ಹಾಸ್ಯ ಮಾಡಿದಾಗ `ಅಲ್ಲ ಕಣೋ ಆ ಕಡೆಯಲ್ಲಿ ಇದ್ದಾಳಲ್ಲ ನಸು ಕಪ್ಪಿನವಳು. ಅವಳನ್ನೋ ಎಲ್ಲೋ ನೋಡಿದ್ದಿನಿ’ ನನ್ನ ಮಾತನ್ನು ತುಂಡರಿಸುತ್ತ ಆತ `ಈ ಬಿಡೋ ಒಬ್ಬರಂತೆ 7 ಜನ ಇರ್ತಾರಂತೆ. ಅದ್ರಲ್ಲಿ  ಆ ಸೂಳೆಯೂ ಒಬ್ಬಳು’ ಅವನು ವಿಚಿತ್ರವಾಗಿ ನಕ್ಕ.  ನಾನು ನಗಲಿಲ್ಲ. `ಏ ಸುಮ್ನೆ ಸುಮ್ನೆ ಈ ಜಾಬ್‌ಗೆ ಅವರು ಬರೋಲ್ಲ ಕಣೋ. ಏನೋ ಜೀವನದಲ್ಲಿ ಕಷ್ಟ ಪಟ್ಟಿರ್ತಾರೆ’ ನನ್ನ ಮಾತಿಗೆ ಅವನು ಏನೂ ಹೇಳಿದ  ಅಂತ ಗೊತ್ತಾಗಲ್ಲಿಲ್ಲ. ನಾನು ಅವಳ ಬಗ್ಗೆ ಯೋಚಿಸುತ್ತಿದ್ದೆ. ಯಾರವಳು?
**
ಅಂದು ಬೈಕ್‌ ಅಲ್ಲಿ ನಿಲ್ಲಿಸಿ ಅವಳತ್ತ ನೋಡಿದೆ.. ಪಕ್ಕಕ್ಕೆ ಬಂದಳು. ನಿಮ್ಮ ಹೆಸರು? ಎಂದು ಕೇಳಿದಾಗ ರೇಟ್‌ ಹೇಳಿದಳು. ಹೆಸರು ಹೇಳಿ ಕರ್ಕೊಂಡ್‌ ಹೋಗ್ತಿನಿ ಅಂದಾಗ. ಅದೆಲ್ಲ ಕಟ್ಟಿಕೊಂಡು ನಿಮಗೇನಾಗ್ಬೆಕು ಎಂದಳು. ಸರಿ ಬಾ ಅಂದೆ. ಬೆಳಗಿನ ತನಕನ ಜಾಸ್ತಿಯಾಗುತ್ತೆ ಅಂದಳು. ಸರಿ ಬಾ ಅಂದೆ. ಬೈಕ್‌ನಲ್ಲಿ ಕುಳಿತುಕೊಂಡಳು.
**
ರೂಂನ ಮುಂದೆ ಬೈಕ್‌ ನಿಲ್ಲಿಸಿ ಹೆಲ್ಮೆಟ್‌ ತೆಗೆದೆ. ಅವಳು ಮುಖ ನೋಡಿದಳು. ನೋಡುತ್ತಲೇ ಇದ್ದಳು. ಅವಳಿಗೆ ನನ್ನ ಗುರುತು ಸಿಕ್ಕಿತಾ ಗೊತ್ತಿಲ್ಲ. ಆದ್ರೆ ನನಗೆ ಸ್ಪಷ್ಟವಾಗಿ ತಿಳಿದು ಹೋಗಿತ್ತು. ಬನ್ನಿ ಒಳಗೆ ಎಂದು ಮನೆಯೊಳಗೆ ಕರೆದುಕೊಂಡು ಹೋಗಿ ತಕ್ಷಣ ಕೇಳಿದೆ. ನೀವು ಸುಮತಿ ಅಲ್ವ. ಅವಳು ಬೆಚ್ಚಿ ಮುಖ ನೋಡಿದಳು. ಹೌದು ಅಂತ ತಲೆಯಾಡಿಸಿದಳು. ನಾನು ಹಿಮಕರ ಅಂದಾಗ
‘ಓಹ್‌ ದೇವರೆ… ನೀವಾ?’
ಹೌದು.. ಅದೇ ಹಿಮಕರ’
**
ಅಂದು ಸಿಕ್ಕಾಪಟ್ಟೆ ಮಳೆ ಬಂದ ಕಾರಣ ಶಾಲೆ ಬೇಗ ಬಿಟ್ಟಿದ್ದರು. ಒಂದೇ ಕೊಡೆಯಲ್ಲಿ ನಾನು ಸುಮತಿ ಬರುತ್ತಿದ್ದೇವು. 6ನೇ ಕ್ಲಾಸ್‌ನಲ್ಲಿ ಒಟ್ಟಿಗೆ ಓದುತ್ತಿದ್ದೇವು. ಮಳೆಯಲ್ಲಿ ಒದ್ದೆಯಾಗ್ತ ಬಂದಿರೋದು ನೋಡಿ ಅಮ್ಮ ಚಾ ಕುಡಿಯಲು ಕರೆದಾಗ ಅವಳು ಬಂದಳು. ಒಟ್ಟಿಗೆ ಹಲಸಿನಕಾಯಿ ಹಪ್ಪಳ ತಿಂದೆವು. ಮಳೆ ಬಿಟ್ಟ ನಂತರ ಮನೆಗೆ ಹೋದಳು. ಅವಳು ಹೋದ ನಂತರ ಅಮ್ಮ ಅಪ್ಪ ಅವಳ ಬಗ್ಗೆ ಮಾತನಾಡುತ್ತಿದ್ದರು. ಅವಳು ಬೆಂಗಳೂರಿಗೆ ಹೋಗ್ತಾಳೆ ಅಂತ ಮಾತ್ರ ಗೊತ್ತಾಗಿತ್ತು.
**
ಮರುದಿನ ಬೆಳ್ಳಗೆ ಸಿಕ್ಕ ಕೂಡಲೇ ಅವಳ ರಟ್ಟೆ ಜಗ್ಗಿಸಿ ಕೇಳಿದ್ದೆ. `ಹೌದಾ, ಬೆಂಗಳೂರಿಗೆ ಹೋತ್ತಿಯಾ’ ಅಂತ. `ಹುಂ ಅಲ್ಲಿ ನನ್ನನ್ನು ಯಾರೋ ಓದಿಸ್ತಾರಂತೆ’ ಅಂತ ತುಸು ಅತ್ತಳು. ನಂಗೂ ಅಳು ಬಂತು. ಆಮೇಲೆ ಪಕ್ಕದ ಮೋರಿಯಲ್ಲಿ ಕುಳಿತು ತುಂಬಾ ಮಾತನಾಡಿದೆವು. ಬೆಂಗಳೂರು ತುಂಬಾ ದೊಡ್ಡದಿದೆಯಂತೆ, ವಿಮಾನ, ಕಾರು ಎಲ್ಲ ಇದೆಯಂತೆ. ಹೀಗೆ ಪೆದ್ದು ಪೆದ್ದಾಗಿ ಏನೆಲ್ಲ ಮಾತನಾಡಿದ ನೆನಪು.
**
ನಿಜ ಅವಳು ಅಂದು ಬೆಂಗಳೂರಿಗೆ ಹೋಗಿದ್ದಳು. ನಾನು ತುಂಬಾ ಅತ್ತಿದೆ. ವರ್ಷ ಕಳೆದಂತೆ ಮರೆತಿದ್ದೆ. ಆದ್ರು ಒಮ್ಮೊಮ್ಮೆ ನೆನಪಾಗುತ್ತಿದ್ದಳು. ಆದ್ರೆ ಇಲ್ಲಿ ಅಚಾನಕ್ಕಾಗಿ. ಅದು ಈ ಅವಸ್ಥೆಯಲ್ಲಿ.
**
‘ನಿಂಗೆ ನೆನಪಿದೆಯಾ ಗೊತ್ತಿಲ್ಲ. ನಮ್ಮ ಮನೆಯಲ್ಲಿ ತುಂಬಾ ಬಡತನ ಇತ್ತು. ಅಪ್ಪ ತುಂಬಾ ಕುಡಿತಾ ಇದ್ದ’ ಅವಳು ಹೇಳತೊಡಗಿದಳು. ಅಪ್ಪನಿಗೆ ಯಾರೋ ಪರಿಚಯವಾಗಿ ನನ್ನನ್ನು ಬೆಂಗಳೂರಿನಲ್ಲಿ ಓದಿಸುವುದಾಗಿ ತಿಳಿಸಿದರಂತೆ. ಅಪ್ಪ ಮೊದಲು ಒಪ್ಪಲ್ಲಿಲ್ಲ. ಆಮೇಲೆ ಅಪ್ಪನ ಕೈಗೆ 5 ಸಾವಿರ ರೂಪಾಯಿ ಆತ ಕೊಟ್ಟಾನಂತೆ. ಅಮ್ಮನಿಗೆ ಹೊಡೆದು ಬಡಿದು ಹೇಗೋ ಅಪ್ಪ ನನ್ನನ್ನು ಬೆಂಗಳೂರಿಗೆ ಕಳಿಸಲು ಒಪ್ಪಿಸಿದ.
ನಂಗೆ ಮತ್ತೆ ಜಾಸ್ತಿ ನೆನಪಿಲ್ಲ. ಇಲ್ಲೇ 10ನೇ ತರಗತಿ ತನಕ ಓದಿಸಿದರು. ಆಮೇಲೆ ಯಾರಿಗೋ ಮದುವೆ ಮಾಡಿಕೊಟ್ಟರು.
`ನಿಂಗೆ ಈ ಗತಿ ಯಾಕೆ ಬಂತು’ ನನ್ನ ಪ್ರಶ್ನೆಗೆ ಅವಳು ಹೇಳ್ತಿನಿ ಕೇಳು ಅಂತ ಮುಂದುವರೆಸಿದಳು.
ಆಮೇಲೆ ನನ್ನನು ಸಾಕಿದವರ ಒಂದೋದು ಮುಖ ಗೊತ್ತಾಯ್ತು. ಅವರ ಜಾತಿಲೀ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಾರಂತೆ. ಅದಕ್ಕೆ ನನ್ನನ್ನು ಸಾಕಿ ಅವರ ಕುಟುಂಬದ ಯಾರಿಗೋ ಮದುವೆ ಮಾಡಿಕೊಡಲಾಯಿತಂತೆ. ಆಮೇಲೆ ನನಗೆ ಮಗುವಾಗುವುದಿಲ್ಲ ಅಂತ ತಿಳಿದಾಗ ನನ್ನನ್ನು ಯಾರಿಗೋ ಕೊಟ್ಟು ಹೋದ್ರು. ಅಲ್ಲಿಂದ ಈಗ ನನಗೆ ಈ ಸ್ಥಿತಿ. ಬಡವರಾಗಿ ಹುಟ್ಟೋದು ತಪ್ಪು ಅಲ್ವ ಹಿಮ’
**
ಅವಳಿಗೆ ಯಾವ ರೀತಿ ನ್ಯಾಯ ಕೊಡಿಸಬಹುದು? ನಾನು ಯೋಚನೆಗೆ ಬಿದ್ದೆ.
ಇದನ್ನೂ ಓದಿ  Moral Story: ಕುಂಟ ನಾಯಿಮರಿಗೆ ಬೆಲೆ ಎಷ್ಟು?