ಒಂದು ಕನವರಿಕೆಯ ಕ್ಷಣ

ಒಂದು ಕನವರಿಕೆಯ ಕ್ಷಣ
ಪ್ರತಿದಿನ ನಾನು ನಗರವನ್ನು ಅಚ್ಚರಿಗಣ್ಣಿಂದಲೇ ನೋಡುತ್ತಿದ್ದೇನೆ. ಇನ್ನೂ ಅರ್ಥವಾಗಿಲ್ಲ. ಒಂದೊಮ್ಮೆ ಮದುವೆ ಮನೆಯ ಸಡಗರ, ಮತ್ತೊಮ್ಮೆ ಸೂತಕದ ಮನೆಯ ಬೇಸರ, ಎರಡರ ನಡುವೆಯೂ ಯಾತ್ರಿಕವಾಗಿ ಸಾಗುವ ನೇಸರನ ಬದುಕು ಇಲ್ಲಿಯದು.
ಊರಿನಲ್ಲಿ ಜಡಿಹಿಡಿದು ಸುರಿವ ಮಳೆ ಇನ್ನೂ ಬಿಟ್ಟಿಲ್ಲವಂತೆ. ಇಲ್ಲಿ ಎಲ್ಲಿಯ ಮಳೆ? ಮಳೆಗೂ ಹಸಿರಿನ ಪ್ರೀತಿ. ಮರಕಂಡಲ್ಲಿ ಒಂದಿಷ್ಟು ಸುರಿಯುತ್ತದೆ. ನಗರಗಳ ಮೇಲೆ ಯಾವಾಗಲೊಮ್ಮೆ ಕಣ್‌ಹನಿ ಸುರಿಸುತ್ತದೆ ಅಷ್ಟೇ. ಹಳ್ಳಿಯಲ್ಲಿ ಮಳೆ ಸುರಿವಾಗ ಕೊಡೆ ಹಿಡಿದು ನಡೆಯುವುದೆಂದರೆ ನನಗೆ ಇಷ್ಟವಾಗುತ್ತಿತ್ತು. ಇಲ್ಲಿನ ಮನೆ ಮುಳುಗಿಸೋ ಮಳೆ ಸುರಿದಾಗ ಭಯವಾಗುತ್ತದೆ. ಇಲ್ಲಿ ಮರಗಳು ಇಲ್ಲವೆಂದಲ್ಲ. ಉದ್ಯಾನನಗರಿಯಲ್ಲಿ ಲೆಕ್ಕದ ಮರಗಳು ಇವೆ. ಲೆಕ್ಕ ಮಾಡೋಕೆ ಯಾರಿಗೂ ಪುರುಸೋತ್ತಿಲ್ಲ.
ಪ್ರತಿನಿತ್ಯ ಫುಟ್‌ಪಾತ್‌ ಮೇಲೆ ನಡೆಯುತ್ತೇನೆ. ಫುಟ್‌ಪಾತ್‌ ಬದುಕು ಕಾಣುತ್ತದೆ. ನಗರಕ್ಕೆ ಸೂಕ್ತ ಉಪಮೆ ಫುಟ್‌ಪಾತ್‌. ನಡೆಯುವ ಸ್ಥಳ ಸುಂದರವಾಗಿರುತ್ತದೆ. ಆದರೆ ಕೆಳಗೆ ಕೊಳಚೆ ಹರಿಯುತ್ತಿರುತ್ತದೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮ, ಐಟಿಐ, ಎಂಎ ಹೀಗೆ ಶಿಕ್ಷಣ ಮುಗಿದಾಕ್ಷಣ ನಗರದತ್ತ ಸಾಗುವ ಯುವಕರ ಕಂಡು ಯುವತಿಯರು ಬಸ್ಸ್‌ ಹತ್ತುತ್ತಿದ್ದಾರೆ. ಪ್ಯಾಟೆ ಹುಡುಗಿಯ ಹಳ್ಳಿ ಬದುಕಿನಂತೆ ಹಳ್ಳಿ ಹುಡುಗಿಯ ಪ್ಯಾಟೆ ಬದುಕಿನ ರಿಯಾಲಿಟಿ ಇಲ್ಲಿ ಕಾಣುತ್ತದೆ. ಯುವತಿಯರಿಗೂ ಕೃಷಿ ಮಾಡೋ ಹುಡುಗರು ಬೇಡವಾಗುತ್ತಿದ್ದಾರೆ. ಸಮಧಾನದ ಸಂಗತಿಯೆಂದರೆ ಪ್ರತಿದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಇಲ್ಲಿ ಜನರನ್ನು ಇಳಿಸಿ ಹೋಗುವ ವಾಹನಗಳು ಹೋಗುವಾಗ ಖಾಲಿ ಹೋಗುವುದಿಲ್ಲ. ನನ್ನೂರಿನ ಸುನಿಲ, ಸವೀತಾ, ಯತೀಶ, ರಾಜು ಹೀಗೆ ಹೆಚ್ಚಿನವರು ಊರಿಗೆ ಮರಳಿದ್ದಾರೆ. ನಾನು ಇಲ್ಲಿ ಉಳಿದಿದ್ದೇನೆ. ಒಂದಿಷ್ಟು ಓದಿದ ತಪ್ಪಿಗೆ ಇಲ್ಲಿ ಬದುಕು ಕಟ್ಟಿ ಹಾಕಿದೆ. ಕಟ್ಟಿಹಾಕುವಂತದ್ದು ಏನೂ ಇಲ್ಲವೆಂದೆನಿಸುತ್ತದೆ.
ಭವಿಷ್ಯ ಇಲ್ಲೇ ಕಳೆಯಬೇಕೆನ್ನುವ ಯೋಚನೆ ಭಯ ಹುಟ್ಟಿಸುತ್ತದೆ. ಟ್ರಾಫಿಕ್‌ ರೆಡ್‌ ಸಿಗ್ನಲ್‌ ತೋರಿಸೋ ತನಕ ನಿಲ್ಲಲೇ ಬೇಕು. ಏಳು ಗುಡ್ಡದಾಚೆ ಮತ್ತೆ ಸಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕು. ಕಾಲವಿನ್ನು ಪಕ್ವವಾಗಿಲ್ಲವೆಂದೆನ್ನುತ್ತಿದೆ ಮನಸ್ಸು.
ಮತ್ತೆ ಊರಿಗೆ ಹೋಗಬೇಕು.
ಇದು ಕಂಪ್ಯೂಟರ್‌ ಪರದೆಯ ಮುಂದೆ ಕುಳಿತ ನನ್ನ ಕನವರಿಕೆ
Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ ಓದುವುದು, ಬರೆಯುವುದು ಇಷ್ಟದ ಕೆಲಸ. ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ ಧನ್ಯವಾದ

2 thoughts on “ಒಂದು ಕನವರಿಕೆಯ ಕ್ಷಣ

Leave a Reply

This site uses Akismet to reduce spam. Learn how your comment data is processed.