ಹೊಸ ಮನೆ

curtecy: http://images2.just-landed.com/

`ಅಂತು ಕೊನೆಗೂ ಮನೆ ಕಟ್ಟಿಬಿಟ್ರಿ’ ಪಕ್ಕದ ಮನೆಯಾಕೆ ಈಗಷ್ಟೇ ಹೇಳಿದ ಮಾತು ಕಮಲಮ್ಮನಿಗೆ ನೆನಪಾಯಿತು. ಸರಿಯಾದ ಪಂಚಾಗ ಇರುವ ಮನೆಯೊಂದನ್ನು ಕಟ್ಟಬೇಕೆಂದು ಅದೆಷ್ಟು ವರ್ಷದಿಂದ ಕನಸು ಕಾಣುತ್ತಿದ್ದರು. ಹೊಟ್ಟೆ ಬಟ್ಟೆ ಕಟ್ಟಿ ಹಣ ಕೂಡಿಡುತ್ತಿದ್ದರು. ಆದರೆ ಕಾಲ ಕೂಡಿ ಬರಲು ಅದೆಷ್ಟು ವರ್ಷಗಳು ಬೇಕಾಯಿತು. ಒಂದಿಷ್ಟು ಹಣ ಸಂಗ್ರಹವಾದಗ ಯಾವುದಾದರೂ ಕಷ್ಟಗಳು ಎದುರಾಗುತ್ತಿದ್ದವು. ಅವರ ಆರೋಗ್ಯ, ಮಕ್ಕಳ ಓದು, ತೋಟ ಸಮಸ್ಯೆಗಳು ಒಂದೆರಡಲ್ಲ.

ಸ್ವಂತ ಮನೆ ಕಟ್ಟೋಕೆ ತಮ್ಮ ಕಾಲದಲ್ಲಿ ಆಗದಿದ್ದರೂ ಮಕ್ಕಳ ಕಾಲದಲ್ಲಿಯಾದರೂ ನೆರವೇರಿತಲ್ಲ. ಅಂತ ಸಮಧಾನದಿಂದ ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟ 70 ಸಾವಿರ ರೂಪಾಯಿಯನ್ನು ಮಗನ ಕೈಲ್ಲಿಟ್ಟಿದ್ದರು.

ಅಂತು ಕೆಲವು ಲಕ್ಷ ರೂಪಾಯಿಗಳ ಟೇರಸಿ ಮನೆಯೊಂದು ರೆಡಿಯಾಗಿತ್ತು. ಕಮಲಮ್ಮ ಯೋಚಿಸುತ್ತಿದ್ದರು. ಒಂದು ಬಾಗಿಲಿನ ಎರಡು ಕಿಟಕಿಯ ಹಿಂದಿನ ಮನೆ ಪುಟ್ಟದಾಗಿದ್ದರೂ ಏನೋ ತಂಪು ತಂಪಾಗಿತ್ತು. ಆ ಜಗಲಿಯಲ್ಲಿ ಒಂದಿಷ್ಟು ಹೊತ್ತು ಕುಳಿತರೆ ಎಲ್ಲ ನೋವು ಸುಸ್ತು ಮಾಯವಾಗುತ್ತಿತ್ತು. ಆದರೆ, ಈ ಹೊಸ ಮನೆ ಎಲ್ಲ ಸುಖ, ನೆಮ್ಮದಿಗಳನ್ನು ಕಸಿದುಕೊಂಡಂತೆ ಭಾಸವಾಗತೊಡಗಿದೆ.

`ಈ ಕಪ್ಪು ಪಾತ್ರೆಯನ್ನು ಹಿಂದುಗಡೆ ಹಾಕು. ಗುಜರಿಯವನು ಬಂದ್ರೆ ಕೊಡಬಹುದು’ ಸೊಸೆ ಕೆಲಸದವನಿಗೆ ಹೇಳಿದ್ದು ಕೇಳಿ ಕಮಲಮ್ಮ ದಡಕ್ಕನೆ ಎದ್ದು ಒಂದು ತೆರನಾಗಿ ನೋಡಿದ ಸೊಸೆಯನ್ನು ಗಮನಿಸದೆ ಕಪ್ಪು ಪಾತ್ರೆಯನ್ನ್ರು ಕಸಿದುಕೊಂಡಳು.

ಅವಳಿಗೇನು ಗೊತ್ತು. ಮೊನ್ನೆ ಬಂದವಳು. ಅವಳ ಪಾಲಿಗೆ ಇದು ಕೇವಲ ಮಸಿ ಹಿಡಿದು ಕರ್ರಗಾದ ಕಪ್ಪು ಪಾತ್ರೆ.

ಕಮಲಮ್ಮನ ಕೈಯಲ್ಲಿದ್ದ ಕಪ್ಪು ಪಾತ್ರೆಗೆ ಟನ್‌ ಅಂತ ಬೆರಳಲ್ಲಿ ಹೊಡೆದು ನೋಡಿದ ಕೆಲಸದ ಸೋಮ ‘ಇದಕ್ಕೆ ನಿಮಗಿಂತ ಜಾಸ್ತಿ ವಯಸ್ಸಾಗಿದೆ’ ಅಂದ.

ಕಮಲಮ್ಮನಿಗೆ ಹಳೆಯ ನೆನಪಾಗಲು ಅಷ್ಟು ಸಾಕಾಗಿತ್ತು.

‘ಹುಂ.. ನನ್ನ ಮದುವೆಗೆ ಅಪ್ಪ ಕೊಟ್ಟದ್ದು. ಅವರ ನೆನಪಿಗೆ ಇರೋದು ಇದೊಂದೆ’ ಎಂದು ಪಾತ್ರೆಯನ್ನು ಎರಡು ಕೈಯಲ್ಲಿ ಬಾಚಿ ಹಿಡಿದುಕೊಂಡರು.

ಹಿಡಿದುಕೊಳ್ಳುವ ಬದಿಗಳು ನಜ್ಜುಗುಜ್ಜಾಗಿರುವ ಆ ಪಾತ್ರೆಯನ್ನು ಅಪಾದಮಸ್ತಕವಾಗಿ ನೋಡುತ್ತಿದ್ದ ರಾಜು ಏನೋ ನೆನಪಾದವನಂತೆ,

`ಆವಾಗ ಇಂತಹ ಪಾತ್ರೆ ಕೊಡೊದು ಅಂದ್ರೆ ಈಗ ಟಿವಿ ಕೊಟ್ಟ ಹಾಗೆ’ ಎಂದು ಸೇರಿಸಿದ.

ಯಾಕೋ ಅಲ್ಲಿ ಕುಳಿತುಕೊಳ್ಳಲಾಗದೇ ಕಮಲಮ್ಮ ಹೊಸ ಮನೆಯ ಒಳಗಡೆ ಹೋದರು. ಪೈಂಟ್‌ ವಾಸನೆ ಇನ್ನೂ ಹೋಗಿರಲಿಲ್ಲ. ಜಗಲಿಯಲ್ಲಿ ಮಗನ ಬೈಕ್‌ ನಿಂತಿತ್ತು.

ಒಳಗಡೆ ಮಗ ಮತ್ತು ಸೊಸೆ ಯಾವುದೋ ಚಿತ್ರ ಪಟ ಹಿಡಿದುಕೊಂಡು ಚರ್ಚೆ ಮಾಡುತ್ತಿದ್ದರು. `ಇದು ಅಲ್ಲಿ ಇರಲಿ’ ಅಂತ ಮಗ ಅಂದ್ರೆ ಸೊಸೆ `ಅಲ್ಲಿ ಬೆಳಕು ಬರೋದಿಲ್ಲ. ಈ ಖಾಲಿ ಜಾಗದಲ್ಲಿ ಹಾಕಿಡಿ’ ಅಂತ ಚರ್ಚೆ ಮಾಡುತ್ತಿದ್ದರು. ‘ಮಾಮನ ಫೋಟೊ ಎಲ್ಲಿ ಹಾಕ್ತಿಯ? ಅಂತ ಇವರು ಹೇಳಿದಾಗ `ಅದು ಬೇಡಮ್ಮ. ಹಳತಾಗಿ ಗಲೀಜಾಗಿ ಕಾಣುತ್ತದೆ’ ಅಂದ ಮಗನ ಮಾತಿಗೆ ಇವರಲ್ಲಿ ಉತ್ತರವಿರಲಿಲ್ಲ. ಹಳೆ ಮನೆಯಲ್ಲಿ 15 ವರ್ಷದಿಂದ ಕಮಲಮ್ಮನ ತಮ್ಮನ ಫೋಟೊ ನೇತಾಡುತ್ತಿತ್ತು. ಅವರ ವಂಶದಲ್ಲಿ ಸರಕಾರಿ ಕೆಲಸದಲ್ಲಿದ್ದದ್ದು ಆತನೊಬ್ಬನೇ. ಮಿಲಿಟರಿಯಲ್ಲಿದ್ದ.

ಹೊಸ ಮನೆಯ ಅಲಂಕಾರ ಮುಗಿಯುವ ಹಾಗೇ ಕಾಣಲಿಲ್ಲ. ಮತ್ತೆ ಕಮಲಮ್ಮ ಹೊರಗೆ ಬಂದರು ಅಲ್ಲಿ ಎಲೆಯಡಿಕೆ ಮೆಲ್ಲುತ್ತಿದ್ದ ಸೋಮನ ಪಕ್ಕ ಕುಳಿತರು.

ಏನೋ ಮಾತನಾಡುತ್ತ ಮಾತನಾಡುತ್ತ ಇವರ ಮದುವೆ ವಿಷಯ ಎತ್ತಿ ಬಿಟ್ಟ.. ಇವರಿಗೂ ಮಾಡುವಂತಹ ಕೆಲಸವೇನಿರಲಿಲ್ಲ. ಹೇಳುತ್ತ ಹೋದರು.

`ನಾನು ನನ್ನ ಗಂಡನನ್ನು ನೋಡಿದ್ದು ಮದುವೆ ಚಪ್ಪರದಲ್ಲಿಯೇ’ ಇವರ ಮಾತಿಗೆ ರಾಜು, `ನಿಮ್ಮಲ್ಲಿ ಮದುವೆಗೆ ಮುನ್ನ ಗಂಡು ನೋಡುವ ಪದ್ದತಿ ಇಲ್ವೆ?’ ಅಂತ ಆಶ್ಚರ್ಯದಿಂದ ಕೇಳಿದ.

`ಇತ್ತು. ನೋಡೊಕ್ಕೆ ಹೋಗಿದ್ದೇವು. ಅವರು ಮಡಿಕೇರಿಯವರು. ನಾವು ಹೋದಾಗ ಅವರು ಬೇರ್ಯಾವುದೋ ಕೆಲಸದ ಮೇಲೆ ಸುಂಟಿಕೊಪ್ಪದ ಕಡೆ ಹೋಗಿದ್ದರು.

ಏನೋ ಹಿರಿಯರು ಒಂದಿಷ್ಟು ಮಾತನಾಡಿ ಮದುವೆ ನಿಶ್ಚಯಿಸಿ ವಾಪಸ್ಸು ಬಂದರು. ಮತ್ತೆ ಅವರನ್ನು ನೋಡಿದ್ದು ಮದುವೆಯಲ್ಲಿಯೇ’ ಎಂದು ಹೇಳಿ ನಿಲ್ಲಿಸಿದರು. ರಾಜು ಬಾಯಿ ಬಿಟ್ಟು ಕೇಳುತ್ತಿದ್ದ.

‘ಮದುವೆಯಾದ ಮೇಲೆ ಗೊತ್ತಾಯಿತು. ಅವರನ್ನು ಅತ್ತೆ ವಿಪರೀತ ಕೆಲಸ ಮಾಡಿಸ್ತ ಇದ್ರಂತ. ಅವರು ತುಂಬಾ ಸಾಧು. ಬಾಯಿ ಮುಚ್ಚಿ ಕೊಂಡು ದುಡೀತಾ ಇದ್ರು. ನನ್ನ ಅತ್ತೆ ತುಂಬಾ ಜೋರು. ಅಲ್ಲಿ ಎಲ್ಲರೂ ಅವರ ಬಾಯಿಗೆ ಹೆದರುತ್ತಿದ್ದರು. ಚಿಕ್ಕ ಮಕ್ಕಳಿಬ್ಬರನ್ನು ಶಾಲೆಗೆ ಕಳುಹಿಸಿ ಇವ್ರನ್ನು ಗದ್ದೆ ಕೆಲಸಕ್ಕೆ ಹಚ್ಚಿದ್ದರು. ಮಾವ ಕೂಡ ಇವರ ಹಾಗೇನೇ. ಏನೂ ಮಾತನಾಡುತ್ತಿರಲ್ಲಿಲ್ಲ. ಎತ್ತಿನಂತೆ ದುಡಿಯುತ್ತಿದ್ದರು’

`ನೀವು ಅಲ್ಲಿ ಎಷ್ಟು ವರ್ಷ ಇದ್ರಿ?’ ರಾಜು ಎಡೆಯಲ್ಲಿ ಬಾಯಿ ಹಾಕಿದ.`ಎರಡುವರೆ ವರ್ಷ ಇದ್ದೆ. ಅತ್ತೆಯ ಉಪದ್ರ ಜಾಸ್ತಿಯಾದಾಗ ಇವ್ರನ್ನು ಕರೆದುಕೊಂಡು ಊರಿಗೆ ಬಂದೆ. ಇಲ್ಲಿ ಅಪ್ಪನ ಜಾಗದಲ್ಲಿ ಪುಟ್ಟ ಮನೆ ಮಾಡಿ ಇಬ್ರು ಕೆಲಸಕ್ಕೆ ಹೋಗ್ತಾ ಇದ್ವಿ. ಅವರು ಒಮ್ಮೊಮ್ಮೆ ರಾತ್ರಿನೂ ತೋಟದ ಕೆಲಸ ಮಾಡ್ತಿದ್ರು. ಈಗ ನೋಡು ಇಷ್ಟು ಸಣ್ಣ ತೋಟದ ಪಾಲಿಗಾಗಿ ಮಕ್ಳು ಜಗಳವಾಡಿ ಬೇರೆಯಾಗಿದ್ದಾರೆ.

`ಮಡಿಕೇರಿಲಿ ಅಷ್ಟೊಂದು ಹಿಂಸೆ ಇತ್ತಾ’ ರಾಜುವಿನ ಮರು ಪ್ರಶ್ನೆ. `ಹುಂ ಅದನ್ನು ಈಗಿನ ಕಾಲದವರು ಊಹಿಸೋಕ್ಕೂ ಸಾಧ್ಯ ಇಲ್ಲ. ದಿನಾ ಬೆಳಗ್ಗೆ 4 ಗಂಟೆಗೆ ಎದ್ದು ಕೆಲಸ ಮಾಡಬೇಕಿತ್ತು. ಆಮೇಲೆ ಅಡುಗೆ, ಆಮೇಲೆ ಕಾಫಿ ಎಸ್ಟೇಟ್‌ಗೆ ಕೆಲಸಕ್ಕೆ ಹೋಗಬೇಕಿತ್ತು. ರಾತ್ರಿ ಬಂದು ಮತ್ತೆ ಇಲ್ಲಿ ಕೆಲಸ. ಅತ್ತೆ ಎಲ್ಲದಕ್ಕೂ ಕಿರಿಕಿರಿ ಮಾಡ್ತಾ ಇದ್ರು. ಗಂಡನೊಟ್ಟಿಗೆ ಗುಸುಗುಸು ಮಾತನಾಡಿದ್ರು ಅತ್ತೆಗೆ ಡೌಟ್‌ ಬರ್ತಾ ಇತ್ತು. ಅದನ್ನೇಲ್ಲ ಹೇಳಿ ಸುಖ ಇಲ್ಲ’ ಅಂತ ಕಮಲಮ್ಮ ನಿಟ್ಟುಸಿರು ಬಿಟ್ಟರು.`ಇಲ್ಲಿ ಸುರುವಿನಲ್ಲಿ ತುಂಬಾ ಕಷ್ಟ ಪಟ್ಟಿರ್ಬೆಕು ಅಲ್ವ

` ರಾಜುವಿನ ಪ್ರಶ್ನೆಗೆ ಕಮಲಮ್ಮ ನಗುತ್ತ `ಕಷ್ಟ ಇತ್ತು. ನಮ್ಮ ಹೊಟ್ಟೆ ತುಂಬೊಕ್ಕೆ ದುಡೀಬೇಕಿತ್ತು. ಇಲ್ಲಿಗೆ ಬಂದ ಮೇಲೆ ಇವರಿಗೂ ಒಂದಿಷ್ಟು ಧೈರ್ಯ ಬಂತು. ಇಬ್ರು ಕಷ್ಟಪಟ್ಟು ದುಡೀತಾ ಇದ್ವಿ. ನಮ್ಮಪ್ಪನೂ ನಮಗೆ ಸಹಾಯ ಮಾಡ್ತ ಇದ್ರು. ಎಂತಹ ಕಷ್ಟದಲ್ಲೂ ನೆಮ್ಮದಿಗೆ ಕೊರತೆ ಇರ್ರಿಲ್ಲ. ಅವ್ರಿಗೂ ಇಲ್ಲಿಗೆ ಬಂದ್ಮೇಲೆ ಜೀವನ ಅಂದ್ರೆ ಏನು ಅಂತ ಗೊತ್ತಾಯಿತು. ಇಬ್ರು ಆವೇಶಕ್ಕೆ ಬಿದ್ದವ್ರಂತೆ ದುಡೀತಾ ಇದ್ವಿ. ಮಡಿಕೇರಿಯವರ ಮುಂದೆ ನಾವು ತಲೆತಗ್ಗಿಸಬಾರದಲ್ವ’ ಅಂತ ಮಾತು ನಿಲ್ಲಿಸಿ ಮತ್ತೆ ಮುಂದುವರೆಸಿದರು.ಹಾಗೇ ಕಷ್ಟಪಟ್ಟಿರುವುದರಿಂದ ಮಕ್ಕಳನ್ನು ಒಂದು ದಾರೀಗೆ ತರೋಕೆ ಸಾಧ್ಯಆಯ್ತು. ಆದ್ರೆ ನಮ್ಮ ಕಾಲದಲ್ಲಿ ಪಾಯ ಇರುವ ಮನೆ ಕಟ್ಟೋಕೆ ಸಾಧ್ಯ ಆಗ್ಲಿಲ್ಲ. ಮಕ್ಕಳು ಕಟ್ಟಿದ್ದು ನೋಡಿ ಖುಷಿ ಪಡಬೇಕಾಯಿತು’ ಎಂದರು.

`ಹೊಸ ಮನೆ ಬಹಳ ಚೆನ್ನಾಗಿದೆ’ ಸೋಮುವಿನ ಮಾತಿಗೆ ಕಮಲಮ್ಮನ ಮುಖದಲ್ಲಿ ನಿರಾಸೆಯೊಂದು ಹೋಯಿತು.

`ಇಷ್ಟು ಖರ್ಚು ಮಾಡಿದ್ಮೇಲೆ ಮನೆ ಚೆನ್ನಾಗಿಯೇ ಆಗುತ್ತೆ. ಆದ್ರೆ ನಂಗೆ ಹಳೆಯ ಮನೆ ಬೀಳೋಕ್ಕೆ ಆಗಿದ್ರು ಏನೋ ನೆಮ್ಮದಿಯಿತ್ತು. ಇಲ್ಲಿ ಯಾರದ್ದೋ ಮನೆಯಲ್ಲಿರುವ ಹಾಗೇ ಆಗುತ್ತೆ. ಸೊಸೆ ಬಂದ್ಮೇಲೆ ಮಗನೂ ನನ್ನನ್ನೂ ಅಷ್ಟು ನೋಡ್ತಾ ಇಲ್ಲ’ ಅದಕ್ಕೆ ಸೋಮು

`ನಮ್ಮ ಕಾಲ ಮುಗೀತು. ಅದಕ್ಕೇಲ ಚಿಂತೆ ಮಾಡ್ಬರ್ದು’ ಅಂದ. `ಓ ಇವತ್ತು ಭಾನುವಾರ. ಟಿವಿಲಿ ಪಿಕ್ಚರ್‌ ಇರಬಹುದು ಅಂತ ಹೇಳಿ ಒಳಗೆ ಹೋದ್ರು. ಪುಣ್ಯಕ್ಕೆ ಭಕ್ತ ಅಂಬರೀಷ ಬರ್ತಾ ಇತ್ತು. ಕಮಲಮ್ಮ ಕುತೂಹಳದಿಂದ ನೋಡ್ತ ಕೂತ್ರು. ಆಗ ಅಲ್ಲಿಗೆ ಬಂದ ಸೊಸೆ

`ಈ ಡಬ್ಬ ಪಿಕ್ಚರ್‌ ಯಾಕೆ ನೋಡ್ತಿರಾ. ನಂಗೆ ಸ್ಟಾರ್‌ ನೋಡಬೇಕು ಅಂತ ರಿಮೋಟ್‌ ಬದಲಾಯಿಸಿದಳು.

ಅಲ್ಲಿಂದ ಎದ್ದು ಬಂದ ಕಮಲಮ್ಮ ಹಳೆ ಮನೆಯ ಪಕ್ಕದಲ್ಲಿದ್ದ ಮಣ್ಣದಿಬ್ಬದಲ್ಲಿ ಕುಳಿತರು. ನೆಮ್ಮದಿ ನೆಲಸಮವಾಗಿತ್ತು.