ಫೇಸ್ ಬುಕ್ಕಿನಲ್ಲಿ ಕಾಡು ಹರಟೆಗೆ ಬ್ರೇಕ್!

ನನ್ನ ಫೇಸ್ ಬುಕ್ ಗುಂಪಿನಲ್ಲಿ ಹಲವರನ್ನು ಕಿತ್ತಾಕಿ ಬಿಟ್ಟೆ. ಹಾಗಂತ ಸ್ನೇಹಿತನೊಬ್ಬ ಹೇಳಿದಾಗ, ನಾನು ಆಶ್ಚರ್ಯದಿಂದ “ಯಾಕೆ?” ಅಂತ ಕೇಳಿದೆ. “ಕೆಲವರಿಗೆ ಏನೂ ಕೆಲಸ ಇರುವುದಿಲ್ಲ. ಕೆಲಸಕ್ಕೆ ಬಾರದ ವಿಷಯಗಳನ್ನೆಲ್ಲ ಅಪ್ ಡೇಟ್ ಮಾಡ್ತಾ ಇರ್ತಾರೆ. ಇಂತವರನ್ನೆಲ್ಲ ಕಂಟ್ರೋಲ್ ಡಿಲೀಟ್ ಮಾಡಿಬಿಟ್ಟೆ. ಈಗ ಕೊಂಚ ಆರಾಮವೆನಿಸಿದೆ’ ಅಂತ ಹೇಳಿ ನಿಟ್ಟುಸಿರುಬಿಟ್ಟ. ನನಗೂ ಇದು ಅನುಭವವಾಗಿದೆ. ಐ ಆಮ್ ಬೋರಿಂಗ್, ಐ ಆಮ್ ಫೀಲಿಂಗ್ ಸೋ ಸ್ಯಾಡ್, ಆಫೀಸ್ ವರ್ಕ್ ಇಸ್ ಬೋರಿಂಗ್, ವಿಮಾ ಪಾಲಿಸಿಗಾಗಿ ನನ್ನನ್ನು ಸಂಪರ್ಕಿಸಿ…ಹೀಗೆ ಮಣ್ಣಾಗಂಟಿ ಬರೀತಾನೇ ಇರ್ತಾರೆ.

ಫೇಸ್ ಬುಕ್, ಆರ್ಕುಟ್ , ಟ್ವಿಟ್ಟರ್ , ಲಿಂಕ್ಡ್ಇನ್ ಯಾವುದೂ ಆಗಿರಬಹುದು. ಪ್ರತಿದಿನ ಇದರಲ್ಲಿ ಒಂದಿಷ್ಟು ಸಮಯ ಕಳೆಯದವರು ಇಂದು ಅಪರೂಪ. ಈಗ ಹೆಚ್ಚು ಚಾಲ್ತಿಯಲ್ಲಿರುವ ಫೇಸ್ ಬುಕ್, ಟ್ವಿಟ್ಟರ್ ನಂತಹ ತಾಣಗಳಲ್ಲಿ ಒಬಾಮನಿಂದ ಹಿಡಿದು ಚಿತ್ರದುರ್ಗದ ಒನಕೆ ಓಬವ್ವನವರೆಗೆ, ರಂಜಿತಾಳಿಂದ ಹಿಡಿದು ಅಪರಂಜಿತಾವರೆಗೆ ಯಾರ ಪ್ರೊಫೈಲ್ ಬೇಕಾದರೂ ಕಾಣಸಿಗುತ್ತದೆ! ಇಲ್ಲಿ ಹೊಸ ತಳಿಯ ಹೂವಿನ ಗಿಡದ ಬಗ್ಗೆ, ಕುಲಾಂತರಿ ತಳಿಯ ಬಗ್ಗೆ, ಇತ್ತೀಚೆಗೆ ಓದಿದ ಹೊಸ ಪುಸ್ತಕದ ಬಗ್ಗೆ.. ಹೀಗೆ ಅತ್ಯುತ್ತಮ, ಪ್ರಯೋಜನಕಾರಿ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಇಲ್ಲಿರುವ ಕೆಲವೊಂದು ಆಸಕ್ತಿದಾಯಕ ವಿಷಯಗಳಿಂದ ಇಂತಹ ತಾಣಗಳು ನಮಗೆ ಹೆಚ್ಚು ಆಪ್ತವಾಗುತ್ತದೆ.

ಆದರೆ, ಇಲ್ಲೂ ಒಂದಿಷ್ಟು ಶಿಷ್ಟಾಚಾರಗಳನ್ನು ನಾವು ಪಾಲಿಸಬೇಕಾಗುತ್ತದೆ, ಇಲ್ಲವಾದಲ್ಲಿ ನಾವು ಮ್ಯಾನರ್ಸ್ ಇಲ್ಲದವರು ಎಂದು ಇತರರು ಅಂದುಕೊಳ್ಳುವ ಸಾಧ್ಯತೆ ಇದೆ. “ಅಂದುಕೊಂಡರೆ ಅಂದುಕೊಳ್ಳಲಿ ಬಿಡಿ, ನಾನು ನನ್ನ ಇಷ್ಟ” ಎಂದು ವಾದಿಸುವವರು ಈ ಲೇಖನದ ಮುಂದಿನ ಭಾಗಗಳನ್ನು ಓದಬಾರದು. ನಮ್ಮ ಮಾತಿನಲ್ಲಿ ಒಂದಿಷ್ಟಾದರೂ ತಿರುಳಿದೆ ಎಂದು ನಿಮಗನಿಸಿದರೆ, ನಿಮಗೆ ನಿಮ್ಮ ಫೇಸ್ ಬುಕ್ ಫ್ರೆಂಡ್ಸ್ ಗಳಿಗಾಗಿ ಇಲ್ಲೊಂದಿಷ್ಟು ಟಿಪ್ಸ್ ಗಳಿವೆ. ಓದಿ.

ಪರ್ಸನಲ್ ಸ್ಟೇಟಸ್ ನಿಂದ ದೂರವಿರಿ: ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನಿಯಮಿತವಾಗಿ ಅಪ್ ಡೇಟ್ ಮಾಡ್ತಾ ಇರುವುದು ನಿಮ್ಮ ಸ್ನೇಹಿತರ ಗುಂಪಿನಲ್ಲಿರುವ ಇತರರಿಗೆ ಕಿರಿಕಿರಿ ಉಂಟು ಮಾಡಬಹುದು. ನಿಮ್ಮ ಬಗ್ಗೆ ಇದೇನೂ ಇತರರಲ್ಲಿ ಒಳ್ಳೆಯ ಅಭಿಪ್ರಾಯವನ್ನನೇನೂ ಮೂಡಿಸದು. ಇಂತಹ ತಾಣಗಳು ಮಾರುಕಟ್ಟೆಗೆ ಉತ್ತೇಜನ ನೀಡುವಲ್ಲಿ ಪ್ರಮುಖ ಮಾಧ್ಯಮ ಎಂಬುದು ನಿಜ. ಆದರೆ ಸೋಷಿಯಲ್ ನೆಟ್ ವರ್ಕ್ ನ ಪ್ರಮುಖ ಉದ್ದೇಶ ಆತ್ಮೀಯ ಸಂಬಂಧ ಬೆಳೆಸುವುದು. “ನಾನು ಊಟ ಮಾಡಿದೆ, ನಿನ್ನೆ ಗೆಳತಿಯೊಂದಿಗೆ ಸಿನಿಮಾಕ್ಕೆ ಹೋದೆ, ನನ್ನ ಅತ್ತೆ ಬಯ್ತಾರೆ, ನನ್ನ ಗಂಡನಿಗೆ ಭಾವಗೀತೆಗಳು ಎಂದರೆ ಅಷ್ಟಕ್ಕಷ್ಟೆ, ಇವತ್ತು ಯಾಕೋ ನಿದ್ದೆ ಬರುತ್ತಿದೆ..” ಹೀಗೆ ಏನಾದರೂ ನಿಮ್ಮ ಬಗ್ಗೆಯೇ ಬರೆಯುತ್ತ ತಲೆ ತಿನ್ನುವುದನ್ನು ನಿಲ್ಲಿಸಿ.

ಮಾಹಿತಿ ಮತ್ತು ಚಿತ್ರಗಳು: ಕೆಲವರು ಬರೆಯುವ ಮಾಹಿತಿ ಮತ್ತು ಅಪ್ ಲೋಡ್ ಮಾಡುವ ಚಿತ್ರಗಳೂ ಚೂರು ಪ್ರಯೋಜನಕಾರಿಯಾಗಿರುವುದಿಲ್ಲ. ಟ್ವಿಟ್ಟರ್ ನಲ್ಲಿ ಸುಮ್ಮನೆ ತನ್ನಷ್ಟಕ್ಕೆ ಆಟೋ-ಫಾಲೊ ಮಾಡಬೇಡಿ. ಇತರರ ಫೋಟೊ ಅಪ್ ಲೋಡ್ ಮಾಡುವಾಗ ಅವರಿಂದ ಅನುಮತಿ ಪಡೆಯುವ ಸೌಜನ್ಯವಾದರೂ ಇರಲಿ. ನೀವು ಪ್ರಕಟಿಸುವ ಮಾಹಿತಿ ಅಥವಾ ಫೊಟೊ ಇತರರ ಭಾವನೆಗಳಿಗೆ ಪೆಟ್ಟು ನೀಡದಿರಲಿ.

ಇದನ್ನೂ ಓದಿ  ನೆನಪಿನ ತೋರಣ- ನಾನು ನನ್ನ ಬಾಲ್ಯ

ನಂಬರ್ ಜಾಸ್ತಿಯಾಗಲು ಸ್ನೇಹಿತರನ್ನು ಸೇರಿಸಬೇಡಿ: ಕೆಲವರಿಗೆ ಇಂತಹ ಹುಚ್ಚು ಇರುತ್ತದೆ. ಯಾರದ್ದೇ ಫ್ರೆಂಡ್ ರಿಕ್ವೆಸ್ಟ್ ಬಂದಿರಲಿ ಅಥವಾ ಅಪರಿಚಿತರು ಯಾರೇ ಕಾಣಲಿ ಅವರಿಗೊಂದು ರಿಕ್ವೆಸ್ಟ್ ಕಳುಹಿಸಿ ಸ್ನೇಹಿತರ ಸಂಖ್ಯೆ ಹೆಚ್ಚು ಮಾಡಿಕೊಳ್ಳುವುದು. ಇಂತಹ ಸಂಬಂಧಗಳಿಂದ ಲಾಭಕ್ಕಿಂತ ಕಿರಿಕಿರಿಯೇ ಹೆಚ್ಚು.
ಸ್ನೇಹಿತರ ಅಂಕೆ ಸಂಖ್ಯೆ ಹೆಚ್ಚಾಗುವುದರಿಂದ ನಿಮಗೆ ಕೋಡು ಮೂಡುವುದಿಲ್ಲ, ಕೋಡು ಮೂಡಿದ್ದರೆ ಅದು ಬೆಳೆಯುವುದಿಲ್ಲ.

ಪ್ಲೀಸ್ ಮತ್ತು ಥ್ಯಾಂಕ್ಸ್ ಬಳಸಿ: ಇದು ನಿಜಕ್ಕೂ ಉಪಯೋಗಕಾರಿ. ನೀವು ಯಾರಿಗಾದರೂ ಏನಾದರೂ ವಿನಂತಿ ಕಳುಹಿಸುವಾಗ ಆತ್ಮೀಯವಾಗಿ ವರ್ತಿಸಿ. ಸೌಜನ್ಯ ಪೂರಕವಾಗಿ ಥ್ಯಾಂಕ್ ಯು ಅಥವಾ ಪ್ಲೀಸ್ ಇತ್ಯಾದಿ ಪದಗಳನ್ನು ಬಳಸಲು ಹಿಂಜರಿಯಬೇಡಿ. ಅಪರಿಚಿತರೊಂದಿಗೆ ಯಾವುದೇ ಮಾಹಿತಿ ಅಥವಾ ವಿನಂತಿ ಕಳುಹಿಸುವಾಗ ನಿಮ್ಮ ಬಗ್ಗೆ ಒಂದು ಸಾಲಾದರೂ ಬರೆಯಿರಿ. ನಿಮ್ಮ ವರ್ತನೆಯಲ್ಲಿ ವೃತ್ತಿ ಗೌರವ ಇರಲಿ.

ಭಾವೋದ್ವೇಗಕ್ಕೆ ಬ್ರೇಕ್ ಹಾಕಿ: ಇದು ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಬಹುದು. ಇತ್ತೀಚೆಗೆ ಅಮೆರಿಕದ ಪಬ್ಲಿಕ್ ಸ್ಕೂಲ್ ಟೀಚರ್ ಒಬ್ಬರು ಇದರಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಯಾಕೆಂದರೆ ಆಕೆ ವಿದ್ಯಾರ್ಥಿಗಳ ಮೇಲೆ ಕೋಪಗೊಂಡಾಗಲೆಲ್ಲ ಅದನ್ನು ಫೇಸ್ ಬುಕ್ ವಾಲ್ ನಲ್ಲಿ ಬರೆಯುತ್ತಿದ್ದಳಂತೆ!

ನಾವು ಬರೆದದ್ದನ್ನು ಯಾರೆಲ್ಲ ನೋಡುತ್ತಾರೆ ಎಂಬುದು ಸದಾ ನೆನಪಿನಲ್ಲಿದ್ದರೆ ಅಷ್ಟೇ ಸಾಕು. ಜಸ್ಟ್ ಒಂದು ಬೇಕಾಬಿಟ್ಟಿ ಗುಡ್ ಮಾರ್ನಿಂಗ್ ಅಥವಾ ಗುಡ್ ಈವನಿಂಗ್ ಹೇಳುವುದರಿಂದ ನೀವು ಎಲ್ಲರನ್ನೂ ಮೆಚ್ಚಿಸುವದಕ್ಕೆ ಆಗುವುದಿಲ್ಲ. ಮೈಗ್ರೇನಿಗೆ ಟ್ಯಾಬ್ಲೆಟ್ ಯಾವುದು ಎಂದು ಹುಡುಕುತ್ತಿರುವ ಒಬ್ಬ ಸದಸ್ಯ ಮಿತ್ರ ನಿಮ್ಮ ಗುಡ್ ಈವನಿಂಗ್ ತೆಗೆದುಕೊಂಡು ಏನು ಮಾಡಲು ಸಾಧ್ಯ? ಸ್ವಲ್ಪ ಯೋಚಿಸುವಂಥವರಾಗಿರಿ. ಸಾಮಾಜಿಕ ಸಂಪರ್ಕ ತಾಣಗಳು ಸಾಮಾಜಿಕ ಅರಣ್ಯಪ್ರದೇಶಗಳಿದ್ದಂತೆ. ಅಲ್ಲಿ ಕಾಡು ಹರಟೆಗೆ ಗುಡ್ ಬೈ ಹೇಳಿ, ಊರು ಹರಟೆಗೆ ಸ್ವಾಗತ.

http://thatskannada.oneindia.in/mixed-bag/lifestyle/2011/0124-facebook-manners-social-networking-sites-aid0039.html