ಜೋರು ಮಳೆಗೆ ಹಾಗೆ ಸುಮ್ಮನೆ…

ನಾಲ್ಕು ದಿನಗಳಿಂದ ಬಿಡದೆ ಜಡಿಮಳೆ ಸುರಿಯುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದರೂ ಬಿಡದೆ ಬೆಂಗಳೂರಿನಿಂದ ಊರ ಬಸ್ ಹತ್ತಿದೆ. ಕಂಪನಿಯ ವಾರ್ಷಿಕ, ತ್ರೈಮಾರ್ಸಿಕ, ಮಾಸಿಕ, ಪಾಕ್ಷಿಕ ಮುಗಿಯದ ಗೋಲುಗಳ ಗೋಳಿನಿಂದ ತಲೆಯಂತೂ ಚಿಟ್ಟುಹಿಡಿದಿತ್ತು.

ಊರಲ್ಲಿ ಬಸ್ ಇಳಿದಾಗ ನನ್ನ ಸ್ವಾಗತಿಸಿದ್ದು ಬಿರುಮಳೆಯೇ. ಬಾ ಮಳೆಯೇ ಬಾ… ಹಾಡು ಗುನುಗುತ್ತ ಒದ್ದೆಮುದ್ದೆಯಾಗಿ ಓಡಿ ಮನೆ ತಲುಪಿದೆ. ಎಷ್ಟೊಂದು ಹಿತವೆನಿಸಿತು ಗೊತ್ತ? ನಮ್ಮೂರ ಮಳೆ ಒಂಚೂರು ಜಾಸ್ತಿ ಸ್ಪೆಷಲ್ ಅಂತ ಅಂದುಕೊಂಡೆ.
Image

***
ಹೊಸ ಟಿವಿಯಲ್ಲಿ ಹಳೆ ಚಾನಲುಗಳು ಬೋರು ಹೊಡೆಸಿತ್ತು. ಸೀದಾ ಅಪ್ಪನ ಬೈಕಾಪ್ ಚಪ್ಪಲಿ ಹಾಕಿಕೊಂಡು ತೋಟದತ್ತ ನಡೆದೆ. ಛೀ, ಕೆಸರು ಎಂದು ಒಂದುಕ್ಷಣ ತಲ್ಲಣಿಸಿದು ನಿಜ. ಕಾಲನ್ನು ಸೆಳೆಯುವ ಕೆಸರಿನಲ್ಲಿ ಹತ್ತಿಪ್ಪತ್ತು ಹೆಜ್ಜೆ ಇಟ್ಟದಷ್ಟೇ.. ಏನೋ ಹಿತವೆನಿಸಿತು. ಚಪ್ಪಲಿಯನ್ನು ಅಲ್ಲೇ ಬಿಸಾಕಿ ಬರಿಗಾಲಲ್ಲಿ ಆ ಕೆಸರಲ್ಲಿ ತುಂಬಾ ಹೊತ್ತು ಕಳೆದೆ. ಮಜಾವೋ ಮಜಾ..

ಕೆಸರಾಟ ಸಾಕೆನಿಸಿ ಅಲ್ಲೇ ಇದ್ದ ಸ್ಪಿಂಕರ್ ಪೈಪಲ್ಲಿ ಕಾಲು ತೊಳೆದೆ. ಆ ಸ್ಪಿಂಕ್ಲರ್ ಜಟ್ಟಿಗೆ ನನ್ನ ನೋಡಿ ತಮಾಷೆಯೆನಿಸಿತೋ. ಜಟ್ ಬುಡದಿಂದಲೇ ಕಿತ್ತು ಮೈಸೂರಿನಲ್ಲಿರುವ ಕಾರಂಜಿಗಳ ತರಹ ಎತ್ತರಕ್ಕೆ ನೀರು ಚಿಮ್ಮಿತ್ತು.. ನಾನು ಒದ್ದೆಮುದ್ದೆ..

****

ಒಂದು ಕ್ಷಣ ನನ್ನ ಬೆಳೆಸಿದ ತೋಟದತ್ತ ನೋಡಿದೆ. ಮಳೆಯಿಂದ ನೆಂದು ನೆಂದು ಶೀತ ಹಿಡಿದಂತೆ ಕಂಗುತೆಂಗುಗಳು ಕಂಗೊಳಿಸುತ್ತಿದ್ದವು. ಬಾಳೆಗಿಡಗಳು, ಕೆಸುವಿನೆಲೆಗಳು, ಒಂದಲಗದೆಲೆಗಳನ್ನು ನೋಡುತ್ತ ಸಾಗಿದಂತೆ ಕಂಡದ್ದು ನನ್ನ ಹಳೆ ಮನೆ.

Image
***

ಅಲ್ಲಿತ್ತು ನನ್ನ ಹಳೆ ಮನೆ. ಆರು ತಿಂಗಳ ಹಿಂದೆ ಅದೇ ನನ್ನ ಅರಮನೆಯಾಗಿತ್ತು. ಈಗ ತೆಂಗಿನ ಸಿಪ್ಪೆ, ಮಡಲು ಹಾಕಿಡುವ ಕೊಟ್ಟಿಗೆಯಾಗಿದೆ. ಆ ಮನೆಯ ಸುತ್ತ ಮುತ್ತ ನನ್ನ 25 ವರ್ಷದ ನೆನಪುಗಳಿದ್ದವು.

ಮನೆಯ ಮುಂದೆ ಒಂದು ಹಳೆಗಿಡವನ್ನು ನೋಡಿ ಒಂದುಕ್ಷಣ ನಿಂತೆ. ಅದಕ್ಕೆ ಬಹುಶಃ ನನ್ನಷ್ಟೇ ವಯಸ್ಸಾಗಿರಬೇಕು. ಅದರ ರೆಂಬೆ ಕಿತ್ತು ಚಾಟಿ ತಯಾರಿಸಿ ನನ್ನಜ್ಜ ನನಗೆ ಚಟಿರನೆ ಹೊಡೆಯುತ್ತಿದ್ದರು. ಆ ಗಿಡವನ್ನೇ ಮುರಿದುಹಾಕಲು ಎಷ್ಟೋ ಸಾರಿ ಪ್ರಯತ್ನಿಸಿದ್ದೆ. ಊಹುಂ.. ಅದು ಚಿಗುರಿಕೊಂಡು ಬೆಳೆಯುತ್ತಿತ್ತು. ಯಾಕೋ ಆ ಗಿಡ ಈಗ ನನ್ನನ್ನು ತುಂಬಾ ಪ್ರೀತಿಯಿಂದ ನೋಡುತ್ತಿದೆ ಎಂದೆನಿಸಿ ಒಂದೆರಡು ಕ್ಷಣ ಅಲ್ಲೇ ನಿಂತೆ.

***

ಆ ಹಳೆ ಮನೆಯಲ್ಲಿ ಮರೆಯಲಾಗದ ಕ್ಷಣವೊಂದಿದೆ. ಅಂದು ಇಂಥದ್ದೇ ಮಳೆಗಾಲ ಭಾರಿ ಗಾಳಿಮಳೆ. ನಾವು ಮುಂಜಾನೆ ಹಾಯಾಗಿ ಮಲಗಿದ್ದೇವು. ಆಗ ಮೇಲಿನಿಂದ ಚಟಪಟ ಹಂಚುಗಳ ಪೀಸುಗಳು ನಮ್ಮ ಮೇಲೆ ಬಿದ್ದವು. ಜೊತೆಗೆ ನೀರು, ದಡಿಲ್ ಅನ್ನೋ ಸದ್ದು ಬೇರೆ. ಭೂಕಂಪವಾಯಿತೋ ಎಂದು ನಾನು ಸ್ಥಂಭಿಸಿದೆ.

ಹೊರಗೆ ಹೋಗಿ ನೋಡಿದರೆ ಜೋರು ಮಳೆಗೆ ಮನೆಯ ಹಿಂದಿದ್ದ ವಕ್ರ ತೆಂಗಿನಮರ ಮುರಿದು ಮನೆಯ ಮೇಲೆ ಬಿದ್ದಿತ್ತು.

***
ನನ್ನ ಹಳೆಮನೆಯಲ್ಲಿ ಈಗ ನೆನಪುಗಳಿವೆ. ಹೊಸ ಮನೆಯಲ್ಲಿ ಕನಸುಗಳಿವೆ.

ಇದನ್ನೂ ಓದಿ: ನಿನಗೆ ಶೇಷಮ್ಮ ಟೀಚರ್‌ನ ನಂಬರ್‌ ಬೇಕಾ?