ಫ್ರಿಲ್ಯಾನ್ಸರ್ ಆಗುವುದು ಹೇಗೆ? ಬಿಡುವಿನ ವೇಳೆಯಲ್ಲಿ ಕೈತುಂಬಾ ಗಳಿಸಿ

ಮನೆಯಲ್ಲಿದ್ದುಕೊಂಡು ಫ್ರಿಲ್ಯಾನ್ಸರ್ ಆಗಿ ಕೆಲಸ ಮಾಡುವವರಿಗೆ ಇಂದಿನ ಆನ್‍ಲೈನ್ ಜಗತ್ತು ಅಪಾರ ಅವಕಾಶ ನೀಡುತ್ತಿದೆ. ಫ್ರಿಲ್ಯಾನ್ಸರ್ ಆಗುವುದು ಹೇಗೆ? ಯಾವ ರೀತಿ ಸಿದ್ಧತೆ ನಡೆಸಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸೇರಿದಂತೆ `ನಿಮಗೆ ನೀವೇ ಬಾಸ್ ಆಗಲು’ ಸಂಪೂರ್ಣ ಮಾರ್ಗದರ್ಶನ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಆಫೀಸ್ ಕೆಲಸಕ್ಕಿಂತ ಮನೆಯಲ್ಲಿದ್ದುಕೊಂಡು ಫ್ರಿಲ್ಯಾನ್ಸರ್ ಆಗಲು ಹೆಚ್ಚಿನವರು ಇಷ್ಟಪಡುತ್ತಾರೆ. ವೈಯಕ್ತಿಕ ಕಾರಣಗಳಿಂದ ಆಫೀಸ್ ಕೆಲಸಕ್ಕೆ ಹೋಗದವರಿಗಂತೂ ಇದು ಉತ್ತಮ ಅವಕಾಶವಾಗಿದೆ. ಖಾಯಂ ಉದ್ಯೋಗಿಗಳು ಒಂದೇ ಕಂಪನಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಫ್ರಿಲ್ಯಾನ್ಸರ್ ಆದವರು ಒಂದೇ ಸಮಯದಲ್ಲಿ ಹಲವು ಕಂಪನಿಗಳಿಗೆ ಕೆಲಸ ಮಾಡಿಕೊಡಬಹುದು. `ಕಡಿಮೆ ಅಥವಾ ಹೆಚ್ಚು’ ಎಷ್ಟು ಕೆಲಸ ಬೇಕೋ ಅಷ್ಟು ಪಡೆದುಕೊಳ್ಳಬಹುದು. ಇದರಲ್ಲಿ ಉದ್ಯೋಗಕ್ಕೆ ತಕ್ಕಂತೆ ಆಫೀಸ್‍ಗಿಂತ ಹೆಚ್ಚು ಹಣಗಳಿಸುವ ಅವಕಾಶವೂ ಇರುತ್ತದೆ.


ಫ್ರಿಲ್ಯಾನ್ಸರ್ ಆಗಲು ತಯಾರಿ

ಏನು ಕೆಲಸ ಮಾಡುವಿರಿ?:

 ಮೊದಲಿಗೆ ನಿಮ್ಮಲ್ಲಿರುವ ಕೌಶಲವನ್ನು ಹುಡುಕಿ. ನೀವು ಬರಹಗಾರರು, ಫೆÇೀಟೊಗ್ರಾಫರ್, ಆನ್‍ಲೈನ್ ಟ್ಯೂಟರ್, ಗಣಿತಶಾಸ್ತ್ರಜ್ಞ, ವೆಬ್ ವಿನ್ಯಾಸಕಾರರು, ಮಾರ್ಕೆಟಿಂಗ್ ಗುರು, ಇಲ್ಯುಸ್ಟ್ರೇಟರ್, ವಿಜ್ಞಾನಿ ಆಗಿರಬಹುದು. ನಿಮ್ಮ ಕೌಶಲಕ್ಕೆ ಸಂಬಂಧಪಟ್ಟ ಫ್ರಿಲ್ಯಾನ್ಸರ್ ಉದ್ಯೋಗಗಳು ಇಂದು ಸಿಗುತ್ತವೆ.
ಕೌಶಲದ ಬೇಡಿಕೆ ತಿಳಿದುಕೊಳ್ಳಿ: ನಿಮ್ಮ ಕೌಶಲ ಯಾರಿಗೆ ಬೇಕು ತಿಳಿದುಕೊಳ್ಳಿ. ಫ್ರಿಲ್ಯಾನ್ಸರ್‍ಗಳಿಗೆ ಉದ್ಯೋಗ ಕೊಡಿಸುವ ವೆಬ್‍ಸೈಟ್‍ಗಳ ಸದಸ್ಯರಾಗಿರಿ. ನಿಮ್ಮ ಕೌಶಲಕ್ಕೆ ಎಷ್ಟು ಬೇಡಿಕೆ ಇದೆ ತಿಳಿದುಕೊಳ್ಳಿ. ನೀವು ಉದ್ಯೋಗದಲ್ಲಿರುವಾಗಲೇ ಫ್ರಿಲ್ಯಾನ್ಸರ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ. ಉತ್ತಮ ಬೇಡಿಕೆ ಬಂದರೆ ಮಾತ್ರ ಉದ್ಯೋಗ ಬಿಟ್ಟು ಫ್ರಿಲ್ಯಾನ್ಸರ್ ಆಗಿ ಮುಂದುವರೆಯಿರಿ.

ವಸ್ತುಗಳನ್ನು ಖರೀದಿಸಿ: 

ಫ್ರಿಲ್ಯಾನ್ಸರ್ ಆಗಲು ಬೇಕಾದ ಸರಕುಗಳನ್ನು ಖರೀದಿಸಿ. ನೀವು ಬರಹಗಾರರಾಗಿದ್ದರೆ ಕಂಪ್ಯೂಟರ್ ಮತ್ತು ಇಂಟರ್‍ನೆಟ್ ಕನೆಕ್ಷನ್ ಇರಬೇಕು. ಫೆÇೀಟೊಗ್ರಾಫರ್ ಆಗಿದ್ದರೆ ಕ್ಯಾಮೆರಾ ಇರಲೇಬೇಕು. ಫ್ರಿಲ್ಯಾನ್ಸರ್ ಸ್ಟಾಟಿಸ್ಟಿಸಿಯನ್ ಆಗಿದ್ದರೆ ಅದಕ್ಕೆ ಸಂಬಂಧಪಟ್ಟ ಸಾಫ್ಟ್‍ವೇರ್‍ಗಳನ್ನು ನೀವು ಹೊಂದಿರಬೇಕು. ಹಣ ಗಳಿಸಬೇಕಾದರೆ ನೀವು ಹಣ ಹೂಡಿಕೆ ಮಾಡಲೇ ಬೇಕು.

ಪ್ಲಾನ್ ಮಾಡಿ: 

ಒಂದು ಗಂಟೆ ಕೆಲಸಕ್ಕೆ ಎಷ್ಟು ದರ ನಿಗದಿಪಡಿಸಬೇಕು ಎಂದು ಪ್ಲಾನ್ ಮಾಡಿ. ನಿಮ್ಮ ಸ್ಪರ್ಧಿಗಳು ಎಷ್ಟು ಹಣ ಪಡೆಯುತ್ತಾರೆ ತಿಳಿದುಕೊಳ್ಳಿ. ನೀವು ಹೆಚ್ಚು ಅನುಭವ ಪಡೆದ ಮೇಲೆ ಗಂಟೆ ಅಥವಾ ಪ್ರಾಜೆಕ್ಟ್ ದರವನ್ನು ಹೆಚ್ಚಿಸಬಹುದಾಗಿದೆ.


ನಿಮ್ಮ ಕೌಶಲದ ಮಾರಾಟ

ಬ್ರಾಂಡ್ ಕ್ರಿಯೇಟ್ ಮಾಡಿ: 

ನಿಮ್ಮ ಪರ್ಸನಲ್ ಬ್ರಾಂಡ್ ಕ್ರಿಯೇಟ್ ಮಾಡಿ. ನೀವು ನಿಮ್ಮ ಕೌಶಲ ಇತರರಿಗಿಂತ ಹೇಗೆ ಭಿನ್ನವೆಂದು ತೋರ್ಪಡಿಸಿ. ನಿಮ್ಮ ಶೈಕ್ಷಣಿಕ ಹಿನ್ನೆಲೆ, ಪ್ರತಿಭೆಗಳು, ಈಗಾಗಲೇ ಮಾಡಿರುವ ಕೆಲಸಗಳ ಕುರಿತು ನಿಮ್ಮ ಸಿವಿ ಅಥವಾ ವೆಬ್‍ಪುಟದಲ್ಲಿ ತಿಳಿಸಿ. ಆನ್‍ಲೈನ್‍ನಲ್ಲಿ ನಿಮ್ಮ ಅಸ್ತಿತ್ವವನ್ನು ತೋರಿಸಲು ಉತ್ತಮ ರೆಸ್ಯೂಂ ರಚಿಸಿ. ಬಿಸ್ನೆಸ್ ಕಾರ್ಡ್ ನಿಮ್ಮಲ್ಲಿ ಇರಲಿ.

ಅವಕಾಶಗಳನ್ನು ಒಪ್ಪಿಕೊಳ್ಳಿ:

 ನಿಮಗೆ ಹೆಚ್ಚು ಕೆಲಸ ಬೇಕಿದ್ದರೆ ನೀವು ಹಿಂದೆ ಮಾಡಿರುವ ಕೆಲಸಗಳನ್ನು ರೆಸ್ಯೂಂನಲ್ಲಿ ತೋರಿಸಬೇಕಾಗುತ್ತದೆ. ಆರಂಭದಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳಿ. ಕೆಲವೊಮ್ಮೆ ಈ ರೀತಿ ಒಪ್ಪಿಕೊಂಡರೆ ಪೇಮೆಂಟ್ ಸಿಗದೆ ಇರಬಹುದು. ಆರಂಭದಲ್ಲಿ ಫ್ರಿಲ್ಯಾನ್ಸರ್‍ಗಳು ಬಿಕ್ಷುಕರಂತೆ ವರ್ತಿಸಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಫ್ರಿಲ್ಯಾನ್ಸರ್ ಒಬ್ಬರು ಹೇಳುತ್ತಾರೆ.

ಇದನ್ನೂ ಓದಿ  ಇಂಟರ್‍ನೆಟ್ ಗುರು: ಆನ್‍ಲೈನ್ ಟ್ಯೂಟರ್ ಆಗುವಿರಾ?

ಆನ್‍ಲೈನ್‍ನಲ್ಲಿ ಪ್ರಚಾರ: 

ನಿಮ್ಮ ಸ್ವಂತ ವೆಬ್‍ಪುಟ, ಲಿಂಕ್ಡ್‍ಇನ್, ಟ್ವಿಟ್ಟರ್, ಬ್ಲಾಗ್, ಫೇಸ್‍ಬುಕ್ ಇತ್ಯಾದಿಗಳಲ್ಲಿ ನಿಮ್ಮ ಕೆಲಸದ ಕುರಿತು ಮಾಹಿತಿ ನೀಡಿರಿ. ಫ್ರಿಲ್ಯಾನ್ಸರ್ ವೆಬ್‍ಸೈಟ್‍ಗಳನ್ನು ಹುಡುಕಿ ಅಲ್ಲಿ ಅರ್ಜಿ ಸಲ್ಲಿಸಿ.
ಉದ್ಯೋಗಕ್ಕಾಗಿ ಹೋರಾಡಿ: ಫ್ರಿಲ್ಯಾನ್ಸರ್ ಜಗತ್ತಿನಲ್ಲಿ ಸಾಕಷ್ಟು ಸ್ಪರ್ಧೆ ಇರುತ್ತದೆ. ನಿಮ್ಮಲ್ಲಿ ಸ್ವಂತ ವೆಬ್‍ಸೈಟ್ ಇದ್ದರೆ ಅಥವಾ ವೈಯಕ್ತಿಕ ಬ್ರಾಂಡ್ ಇದ್ದರೆ ಸಾಲದು. ನೀವು ಲಭ್ಯವಿರುವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಲೇ ಇರಬೇಕಾಗುತ್ತದೆ.

ಕಠಿಣ ಪರಿಶ್ರಮದ ಅಗತ್ಯ

 1. ನಿಮ್ಮ ಮೊದಲ ಪ್ರಾಜೆಕ್ಟ್ ಅನ್ನು ಸ್ಥಳೀಯವಾಗಿ ಅಥವಾ ಆನ್‍ಲೈನ್‍ನಲ್ಲಿ ಹುಡುಕಿ. ಮೊದಲ ಪ್ರಾಜೆಕ್ಟ್‍ನಲ್ಲಿ ಹೆಚ್ಚು ಹಣ ಸಿಕ್ಕಿಲ್ಲ ಎಂದು ಚಿಂತಿಸಬೇಡಿ. ಅನುಭವ ಪಡೆದ ನಂತರ ಹೆಚ್ಚು ಹಣದ ಪ್ರಾಜೆಕ್ಟ್ ದೊರಕಬಹುದು.  ಸ್ಥಳೀಯ ಬಿಸ್ನೆಸ್‍ಗಳನ್ನು ಭೇಟಿಯಾಗಿ. ನಿಮ್ಮ ಸೇವೆ ಅವರಿಗೆ ಹೇಗೆ ಸಹಾಯವಾಗಬಲ್ಲದು ಎಂದು ಅವರಿಗೆ ಮನದಟ್ಟವಾಗುವಂತೆ ತಿಳಿಸಿ.
 2. ನಿಮ್ಮ ಕೌಶಲಗಳಿಗೆ ಸಂಬಂಧಪಟ್ಟ ಫ್ರಿಲ್ಯಾನ್ಸರ್‍ಗಳನ್ನು ಹುಡುಕುತ್ತಿರುವ ಸಂಸ್ಥೆಗಳಿಗೆ ಆಗಾಗ ರೆಸ್ಯೂಂ ಕಳುಹಿಸುತ್ತ ಇರಿ. ಅಪ್‍ವರ್ಕ್, ಟಾಪ್‍ಟಾಲ್, ಎಲೆನ್ಸ್, ಐಫ್ರಿಲ್ಯಾನ್ಸ್, ಪ್ರಾಜೆಕ್ಟ್4ಹೈರ್, ಡಿಮಾಂಡ್ ಮೀಡಿಯಾ ಇತ್ಯಾದಿ ಹಲವು ವೆಬ್‍ಸೈಟ್‍ಗಳು ದಿನಪ್ರತಿ ಸಾಕಷ್ಟು ಫ್ರಿಲ್ಯಾನ್ಸರ್ ಉದ್ಯೋಗಗಳನ್ನು ಪೆÇೀಸ್ಟ್ ಮಾಡುತ್ತಿರುತ್ತವೆ.
 3. ನೀವು ಫ್ರಿಲ್ಯಾನ್ಸರ್ ಆಗಿ ಕರಿಯರ್ ಆರಂಭಿಸುವ ಹಂತದಲ್ಲಿ ಸಣ್ಣ ಉದ್ಯೋಗದ ಮೌಲ್ಯವನ್ನು ತಿಳಿದುಕೊಳ್ಳಿ. ಸಣ್ಣಗಾತ್ರದ ಮತ್ತು ಕಡಿಮೆ ಪಾವತಿಸುವ ಪ್ರಾಜೆಕ್ಟ್‍ಗಳು ಸರಳವಾಗಿ ಇರಬಹುದು. ಈ ಸಣ್ಣ ಪ್ರಾಜೆಕ್ಟ್ ನಿಮ್ಮ ಕ್ಲಯೆಂಟ್‍ಗಳಿಗೆ ಇಷ್ಟವಾದರೆ ಮುಂದೆ ಅವರಿಂದ ದೊಡ್ಡ ಪ್ರಾಜೆಕ್ಟ್ ದೊರಕಬಹುದು.
 4.  ಕೆಲವೊಮ್ಮೆ ನಿಮಗೆ ಉದ್ಯೋಗ ದೊರಕದೆ ಇರಬಹುದು. ಈ ಸಮಯವನ್ನು ಹಾಳುಗೆಡವಬೇಡಿ. ಈ ಸಮಯದಲ್ಲಿ ನಿಮ್ಮ ವೆಬ್‍ಸೈಟ್ ಅನ್ನು ಇನ್ನೂ ಉತ್ತಮಗೊಳಿಸಿ. ನೆಟ್‍ವರ್ಕಿಂಗ್ ಇವೆಂಟ್‍ಗಳಲ್ಲಿ ಭಾಗವಹಿಸುತ್ತ ಇರಿ. ಆನ್‍ಲೈನ್‍ನಲ್ಲಿ ಪ್ರಾಜೆಕ್ಟ್‍ಗಳಿಗೆ ಅರ್ಜಿ ಸಲ್ಲಿಸುತ್ತ ಇರಿ. ನಿಮ್ಮನ್ನು ನೀವು ಮಾರ್ಕೆಟಿಂಗ್ ಮಾಡುತ್ತ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ.

ಹೇಗೆ ಕೆಲಸ ಮಾಡಬೇಕು?

ಶೆಡ್ಯೂಲ್ ಇರಲಿ: 

ಫ್ರಿಲ್ಯಾನ್ಸರ್ ಎಂದು ಕಾಲಹರಣ ಮಾಡಬೇಡಿ. ಪ್ರತಿದಿನ ಇಂತಿಷ್ಟು ಸಮಯ ನಿಗದಿಪಡಿಸಿಕೊಂಡು ಕೆಲಸ ಮಾಡಿ. ಇಲ್ಲವಾದರೆ ಪ್ರಾಜೆಕ್ಟ್ ಸಲ್ಲಿಸಬೇಕಾದ ದಿನಾಂಕದಂದು ಒತ್ತಡ ಹೆಚ್ಚಾಗಬಲ್ಲದು. ಫ್ರಿಲ್ಯಾನ್ಸರ್ ಆಗಿದ್ದಾಗ ನಿಮಗೆ ಬೇಕಾದಗ ಬ್ರೇಕ್ ತೆಗೆದುಕೊಳ್ಳಬಹುದು. ಒಂದು ಗಂಟೆ ಕೆಲಸ ಮಾಡಿ ಅರ್ಧಗಂಟೆ ರೆಸ್ಟ್ ತೆಗೆದುಕೊಳ್ಳಬಹುದು.

ತಪ್ಪುಗಳು ಕಡಿಮೆ ಇರಲಿ:

 ನಿಮ್ಮ ಪ್ರಾಜೆಕ್ಟ್ ಅನ್ನು ಡೆಡ್‍ಲೈನ್‍ನಲ್ಲಿ ಮುಗಿಸಿದ ತಕ್ಷಣ ಮುಗಿಯುವುದಿಲ್ಲ. ನಿಮ್ಮ ಕ್ಲಯೆಂಟ್ ಅದನ್ನು ಪರಿಶೀಲಿಸಿ ಒಂದಿಷ್ಟು ಮಾರ್ಪಾಡುಗಳನ್ನು ಮಾಡಲು ಹೇಳಬಹುದು. ತಪ್ಪುಗಳಿದ್ದರೆ ತಿದ್ದಿ ವಾಪಸ್ ಕಳುಹಿಸಲು ಹೇಳಬಹುದು. ಪ್ರಾಜೆಕ್ಟ್ ಗುಣಮಟ್ಟ ಕಳಪೆಯಾಗಿದ್ದರೆ ಮುಂದೆ ನಿಮಗೆ ಯಾವುದೇ ಅವಕಾಶ ನೀಡದೆ ಇರಬಹುದು. ಹೀಗಾಗಿ ಪ್ರತಿಯೊಂದು ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಲು ಆದ್ಯತೆ ನೀಡಿ.

ಒಟ್ಟಾರೆ ಫ್ರಿಲ್ಯಾನ್ಸರ್ ಆಗುವುದೆಂದರೆ ನಿಮಗೆ ನೀವೇ ಬಾಸ್ ಆದಂತೆ. ನಿಮಗೆ ದೊರಕುವ ಕೆಲಸದ ಪ್ರಮಾಣ ಹೆಚ್ಚಿದ್ದರೆ ನೀವು ಉದ್ಯೋಗಿಗಳನ್ನು ಇಟ್ಟುಕೊಳ್ಳಬಹುದು. ಫ್ರಿಲ್ಯಾನ್ಸರ್ ಆಗಲು ಬಯಸುವವರಿಗೆ ಕೆಲಸ ಕೊಡಬಹುದು. ನಿಮಗೆ ಗಂಟೆಗೆ 5 ಸಾವಿರ ರೂ. ವೇತನ ದೊರಕಿದರೆ ನಿಮ್ಮ ಜೊತೆ ಕೆಲಸ ಮಾಡುವ ಫ್ರಿಲ್ಯಾನ್ಸರ್‍ಗೆ ತುಸು ಕಡಿಮೆ ದರದಲ್ಲಿ ನೀಡಬಹುದು. ಈ ಮೂಲಕ ಒಂದು ಏಜೆನ್ಸಿಯಂತೆ ಕಾರ್ಯನಿರ್ವಹಿಸಿ ಹೆಚ್ಚು ಹಣ ಗಳಿಕೆ ಮಾಡಬಹುದು.

ಇದನ್ನೂ ಓದಿ  ಪುಸ್ತಕ ಪರಿಚಯ: ಸೇತುರಾಮ್ ಅವರ “ನಾವಲ್ಲ” ಕಥಾ ಸಂಕಲನ

ಕೊನೆಯ ಮಾತು: ಕ್ಲಯೆಂಟ್‍ಗಳು ಹಣ ಪಾವತಿ ಮಾಡುವುದು ವಿಳಂಬವಾಗುತ್ತದೆ ಎನ್ನುವುದು ಬಹುತೇಕ ಫ್ರಿಲ್ಯಾನ್ಸರ್‍ಗಳ ಅಳಲು. ಕೆಲವೊಂದು ಸಂಸ್ಥೆಗಳು ತುಂಬಾ ಸಮಯದಿಂದ ಪೇಮೆಂಟ್ ಮಾಡದೆ ಇದ್ದರೆ ಅವುಗಳಿಗೆ ಆಗಾಗ ಇಮೇಲ್ ಕಳುಹಿಸಿ ನೆನಪಿಸುತ್ತ ಇರಿ. ಕೆಲವೊಂದು ಅಪರಿಚಿತ ಸಂಸ್ಥೆಗಳು ನಿಮಗೆ ಹಣ ಪಾವತಿ ಮಾಡದೆಯೂ ಇರಬಹುದು. ಕೆಲವೊಂದು ಕಂಪನಿಗಳು ಇನ್ವಾಯ್ಸ್ ತಲುಪಿಸಿದ ತಕ್ಷಣ ಪೇಮೆಂಟ್ ಮಾಡುತ್ತವೆ. ಒಟ್ಟಾರೆ ಫ್ರಿಲ್ಯಾನ್ಸ್ ಆಗಿ ಕೆಲಸ ಮಾಡುವಾಗ ಪೇಮೆಂಟ್ ಕುರಿತು ಎಚ್ಚರದಿಂದ ಇರಿ. 
(ಪೂರಕ ಮಾಹಿತಿ: ವಿಕಿಹೌ, ಫ್ರಿಲ್ಯಾನ್ಸರ್ ತಾಣಗಳು).

ಫ್ರಿಲ್ಯಾನ್ಸರ್‍ಗಳು ಕೆಲಸ ಹುಡುಕಬಹುದಾದ ವೆಬ್‍ಸೈಟ್‍ಗಳು

 • www.freelancer.com
 • www.upwork.com
 • www.craigslist.co.in
 •  www.guru.com
 •  https://99designs.com
 • www.peopleperhour.com
 •  http://freelancewritinggigs.com
 •  http://getacoder.com
 • http://ifreelance.com
 • http://project4hire.com.