ಬೆಸ್ಟ್ ಸಿನಿಮಾ: ಹಚಿಕೊ ಎಂಬ ಕುಚಿಕು ಗೆಳೆಯ

Hachiko movie review

ಜಪಾನಿನ ಶಿಬುಯಾ ರೈಲ್ವೆ ನಿಲ್ದಾಣದ ಮುಂದೆ ಒಂದು ನಾಯಿಯ ಕಂಚಿನ ಮೂರ್ತಿ ಇದೆ. ಆ ನಾಯಿ ಸತ್ತ ದಿನದಂದು ಪ್ರತಿವರ್ಷ ಅಲ್ಲೊಂದು ಚಿರಸ್ಮರಣೆ ಕಾರ್ಯಕ್ರಮವೂ ನಡೆಯುತ್ತದೆ. ಜಪಾನಿವರ ಪಾಲಿಗೆ ಆ ನಾಯಿಯೆಂದರೆ ನಂಬಿಕೆ ಮತ್ತು ನಿಷ್ಠೆಯ ಪ್ರತೀಕ.

  • ಪ್ರವೀಣ್ ಚಂದ್ರ ಪುತ್ತೂರು

ಆ ನಾಯಿಯ ಹೆಸರು ಹಾಚಿ. ಆ ನಾಯಿಯ ಸತ್ಯಕತೆ ಆಧರಿತ ಚಿತ್ರದ ಹೆಸರು ಹಚಿಕೊ (hachiko monogatari). ಇದು ಪ್ರೊಫೆಸರ್ ಮತ್ತು ಆತನ ಪ್ರೀತಿಯ ನಾಯಿ ಹಾಚಿ ನಡುವೆ ನಡೆಯುವ ಭಾವನಾತ್ಮಕ ತಾಕಲಾಟದ ಕತೆ. ಪ್ರಾಣಿಗೆ ಮನುಷ್ಯರ ಜೊತೆ ಏನು ಭಾವನಾತ್ಮಕ ತಾಕಲಾಟ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಈ ಚಿತ್ರ ಉತ್ತರ ನೀಡುತ್ತದೆ.

ಪ್ರೊಫೆಸರ್ ಹೈದೆಸಬುರೊ ಯುನೊಗೆ ತಾನು ಪ್ರತಿನಿತ್ಯ ಸಾಗುವ ರೈಲ್ವೆ ನಿಲ್ದಾಣದಲ್ಲಿ ಒಂದು ನಾಯಿಮರಿ ಸಿಗುತ್ತದೆ. ಅದು ಅಪರೂಪದ ಅತಿಕಾ ಸಂತತಿಯ ನಾಯಿ. ಆ ಮುದ್ದು ನಾಯಿಮರಿ ಇವರ ಬಳಿಯೇ ಓಡುತ್ತಿತ್ತು. ಪ್ರೊಫೆಸರ್ ಗೂ ಆ ನಾಯಿ ಇಷ್ಟವಾಯಿತು. ಅದನ್ನು ಎತ್ತಿ ಆಡಿದರು.

ಯಾರೋ ಪ್ರಯಾಣಿಕರಿಂದ ಈ ರೈಲ್ವೆ ನಿಲ್ದಾಣದಲ್ಲಿ ನಾಯಿ ತಪ್ಪಿಸಿಕೊಂಡಿರಬಹುದು ಎಂಬ ಸಂದೇಹ ಅವರಿಗೆ. ಅದಕ್ಕೆ ರೈಲ್ವೆ ನಿಲ್ದಾಣದ ಎಲ್ಲರಲ್ಲಿಯೂ ವಿಚಾರಿಸಿದರು. ಸುಳಿವು ಸಿಗಲಿಲ್ಲ. ನಾಳೆ ಯಾರಾದರೂ ಬಂದು ಕೇಳಿದರೆ ಮಾಹಿತಿ ನೀಡಲು ತಿಳಿಸಿ ಆ ನಾಯಿಮರಿಯನ್ನು ತನ್ನೊಂದಿಗೆ ಮನೆಗೆ ಕೊಂಡೊಯ್ದರು.

ವಿಶೇಷ ಗೊತ್ತ? ಪ್ರೊಫೆಸರ್ ಹೆಂಡತಿಗೆ ನಾಯಿಗಳೆಂದರೆ ಅಷ್ಟಕಷ್ಟೇ. ಅದಕ್ಕೆ ಹೆಂಡತಿಗೆ ಗೊತ್ತಾಗದಂತೆ ಪೆಟ್ಟಿಗೆಯೊಂದರಲ್ಲಿ ಅಡಗಿಸಿಟ್ಟರು. ಆದರೂ, ತುಂಟ ನಾಯಿ ಪೆಟ್ಟಿಗೆಯಿಂದ ಹೊರಗೆಬಂದಾಗ ಪ್ರೊಫೆಸರ್ ಹೆಂಡತಿಯ ಕೈಯಲ್ಲಿ ಸಿಕ್ಕಿಬೀಳುತ್ತಾರೆ.

ಮರುದಿನ ಸ್ಟೇಷನ್ ಮಾಸ್ಟರ್ ಕಡೆಯಿಂದ ನಾಯಿಯ ಮಾಲೀಕರ ಕುರಿತು ಯಾವುದೇ ವಿಚಾರಗೊತ್ತಾಗುವುದಿಲ್ಲ. ನಾಯಿಯ ಮಾಹಿತಿಯನ್ನು ಕರಪತ್ರದಲ್ಲಿ ಬರೆದು ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲು ಅಂಟಿಸುತ್ತಾರೆ.

ಹೀಗೆ ಇವರ ಕುಟುಂಬಕ್ಕೆ ಎಂಟ್ರಿ ಕೊಟ್ಟ ಹಾಚಿ, ಕುಟುಂಬದ ಸದಸ್ಯರಲ್ಲಿ ಒಬ್ಬನಾಗಿಬಿಡುತ್ತದೆ. ಹಾಚಿ ದೊಡ್ಡದಾಗಿ ಬೆಳೆಯುತ್ತದೆ. ಅದಕ್ಕೆ ಪ್ರೊಫೆಸರ್ ಎಂದರೆ ಅಚ್ಚುಮೆಚ್ಚು. ಪ್ರತಿದಿನ ಪ್ರೊಫೆಸರ್ ರೈಲ್ವೆ ನಿಲ್ದಾಣಕ್ಕೆ ಹೋಗುವಾಗ ಜೊತೆಯಲ್ಲಿಯೇ ಬರುತ್ತಿತ್ತು. ಅವರು ರೈಲಿನಲ್ಲಿ ಹೋದ ಬಳಿಕ ಸ್ವಲ್ಪ ಹೊತ್ತು ರೈಲ್ವೆ ನಿಲ್ದಾಣದ ಮುಂದೆ ಕುಳಿತು ವಾಪಸ್ ಬರುತ್ತಿತ್ತು. ಸಂಜೆ ಅವರು ರೈಲಿನಲ್ಲಿ ಬರುವ ಸಮಯಕ್ಕೆ ಸರಿಯಾಗಿ ರೈಲ್ವೆ ನಿಲ್ದಾಣದಲ್ಲಿ ಹಾಜರಿರುತ್ತಿತ್ತು. ಹೀಗೆ, ಹೋಗುವಾಗ ಬರುವಾಗ ದಾರಿಯಲ್ಲಿ ಇವರಿಬ್ಬರ ಆಟ ನೋಡುಗರಿಗೂ ಮಜವೆನಿಸುತ್ತಿತ್ತು. ಇವರ ಕುಚಿಕು ಸ್ನೇಹ ಎಲ್ಲರಿಗೂ ಇಷ್ಟವಾಗಿತ್ತು.

ಒಂದಿನ ಏನೋ ತುರ್ತು ಕೆಲಸದ ನಿಮಿತ್ತ ಪ್ರೊಫೆಸರ್ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಾರೆ. ಹೋಗುವಾಗ ಹಾಚಿಯ ಗೂಡಿನ ಬಾಗಿಲನ್ನು ಮುಚ್ಚಿ ಹೋಗುತ್ತಾರೆ. ಕಟ್ಟಿಗೆಯ ಬೇಲಿಯ ಕೆಳಗೆ ಮಣ್ಣನ್ನು ಅಗೆದು ಅಲ್ಲಿಂದ ಹಾಚಿ ಬರುತ್ತದೆ. ರೈಲ್ವೆ ನಿಲ್ದಾಣಕ್ಕೆ ಓಡಿ ಹೋಗಿ ತನ್ನ ಪ್ರೀತಿಯ ಗೆಳೆಯ ಪ್ರೊಫೆಸರ್ ಅನ್ನು ಭೇಟಿಯಾಗುತ್ತದೆ.

ಹೀಗೆ, ದಿನಗಳು ಮುಂದುವರೆಯುತ್ತದೆ. ಒಂದಿನ ಎಂದಿನಂತೆ ಪ್ರೊಫೆಸರ್ ರೈಲ್ವೆ ನಿಲ್ದಾಣಕ್ಕೆ ಹೊರಡುತ್ತಾರೆ. ಹಾಚಿಗೆ ಅದೇನಾಯ್ತೋ ಗೊತ್ತಿಲ್ಲ. ಹೋಗಬೇಡ ಎಂದು ನಾನಾ ರೀತಿ ಕಸರತ್ತು ಮಾಡಿ ಹೇಳುತ್ತದೆ. ಇವರಿಗೂ ಕಸಿವಿಸಿಯಾಗುತ್ತದೆ. ಪ್ರೊಫೆಸರ್ ಕೊಟ್ಟ ಶಬ್ದಮಾಡುವ ಚೆಂಡನ್ನು ಮೊದಲ ಬಾರಿಗೆ ಕಚ್ಚಿ ಹಿಡಿಯುತ್ತದೆ. ರೈಲು ಬರುವ ಸಮಯವಾಗುವುದರಿಂದ ಇವರು ಹೊರಡುತ್ತಾರೆ. ಜೊತೆಗೆ ನಿಲ್ದಾಣಕ್ಕೆ ಬಂದ ಹಾಚಿ ಅಲ್ಲೂ ಅವರನ್ನು ತಡೆಯಲು ಯತ್ನಿಸುತ್ತದೆ. ಇದರ ಪ್ರಯತ್ನ ವಿಫಲವಾಗುತ್ತದೆ. ಪ್ರೊಫೆಸರ್ ರೈಲಿನಲ್ಲಿ ಹೋಗುತ್ತಾರೆ. ಬೇಸರದಲ್ಲಿ ಹಾಚಿ ಮನೆಗೂ ಹೋಗದೆ ರೈಲ್ವೆ ನಿಲ್ದಾಣದಲ್ಲಿಯೇ ಕಾಯುತ್ತದೆ.

ಪಾಠ ಮಾಡುವ ಸಮಯದಲ್ಲಿ ನಾಯಿ ತಂದುಕೊಟ್ಟ ಶಬ್ದಮಾಡುವ ಚೆಂಡನ್ನು ಹಿಡಿದುಕೊಂಡಿರುತ್ತಾರೆ. ಅವರಿಗೆ ಆ ನಾಯಿಯ ತುಂಟಾಟ ನೆನಪಾಗುತ್ತದೆ. ಹೀಗೆ ಪಾಠ ಮಾಡುತ್ತಿರುವಾಗ ಮಿದುಳು ಸ್ಟ್ರೋಕ್ ಗೆ ಒಳಗಾಗಿ ಪ್ರೊಫೆಸರ್ ಕುಸಿದು ಬೀಳುತ್ತಾರೆ. ಮೃತರಾಗುತ್ತಾರೆ. ಹಾಚಿಗೆ ಇಂದು ಏನೋ ಆಗುತ್ತದೆ ಎಂಬ ಅರಿವಾಗಿತ್ತು. ಅದಕ್ಕೆ ಅವರನ್ನು ಹೋಗದಂತೆ ತಡೆದಿತ್ತು.

ಇಲ್ಲಿಯವರೆಗೆ ತನ್ನ ತುಂಟಾಟ, ಕುಚಿಕು ಫ್ರೆಂಡ್ಸ್ ಶಿಪ್ ನಿಂದ ಹಿಡಿದಿಟ್ಟ ಸಿನಿಮಾವು ಮುಂದೆ ಭಾವನಾತ್ಮಕವಾಗಿ ಕಾಡುತ್ತದೆ. ನಾಯಿಯ ಕೈಯಲ್ಲಿ ಈ ರೀತಿ ನಟನೆ ಹೇಗೆ ತೆಗೆದರು ಎಂದು ನಿರ್ದೇಶಕರ ಕುರಿತು ಅಚ್ಚರಿಯಾಗುತ್ತದೆ.

ಸಂಜೆ ರೈಲು ಬರುವ ಸಮಯವಾಯಿತು. ಹಾಚಿ ಎದ್ದುನಿಂತಿತು. ಕಿವಿನಿಮಿರಿಸಿತು. ರೈಲು ಬಂತು. ಹೋಯಿತು. ಪ್ರೊಫೆಸರ್ ಬರಲಿಲ್ಲ. ಮತ್ತೊಂದು ರೈಲಿಗೆ ಕಾದುಕುಳಿತಿತ್ತು. ಅದರಲ್ಲೂ ಬರಲಿಲ್ಲ. ಎಲ್ಲದರೂ ಮನೆಗೆ ಬೇರೆ ದಾರಿಯಲ್ಲಿ ಹೋದರಾ ಎಂದು ಮನೆಗೆ ಹೋಗಿ ಹುಡುಕಿತು. ಅಲ್ಲೂ ಇಲ್ಲ. ಮತ್ತೆ ರೈಲ್ವೆ ನಿಲ್ದಾಣಕ್ಕೆ ಬಂತು.

ಗಂಡ ಸತ್ತ ನಂತರ ಪ್ರೊಫೆಸರ್ ಪತ್ನಿ ತನ್ನ ಅಳಿಯನ ಮನೆಗೆ ಹೋಗುತ್ತಾರೆ. ಜೊತೆಗೆ ಹಾಚಿಯನ್ನೂ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಇರಲು ಅದಕ್ಕೆ ಆಗುವುದಿಲ್ಲ. ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ರೈಲ್ವೆ ನಿಲ್ದಾಣಕ್ಕೆ ಬರುತ್ತದೆ. ಅಲ್ಲೇ ಕಾಯುತ್ತದೆ. ಯಾವುದಾದರೂ ರೈಲು ಬಂದಾಗ ಕಿವಿ ನಿಮಿರಿಸಿ ಹೋಗುತ್ತದೆ.

ಹೀಗೆ ಕಳೆದದ್ದು ಒಂದೆರಡು ದಿನವಲ್ಲ. ಬರೋಬ್ಬರಿ 9 ವರ್ಷ ಕಾಯುತ್ತದೆ. ಹಾಚಿ ಮತ್ತು ಪ್ರೊಫೆಸರ್ ನಡುವಿನ ಆತ್ಮೀಯತೆ ತಿಳಿದ ರೈಲ್ವೆ ನಿಲ್ದಾಣದ ಟ್ರೈನ್ ಮಾಸ್ಟರ್, ಗೂಡಂಗಡಿಯವನು.. ಹೀಗೆ ಎಲ್ಲರೂ ಇದರ ಪ್ರೀತಿಯನ್ನು, ನಿಷ್ಠೆಯನ್ನು ಕಂಡು ಭಾವುಕರಾಗುತ್ತಾರೆ. ನಾಯಿಯನ್ನು ಇಷ್ಟಪಡದ ಪ್ರೊಫೆಸರ್ ಪತ್ನಿಯೂ ಇದರ ಪ್ರೀತಿಯನ್ನು ಕಂಡು ಅದನ್ನು ತಬ್ಬಿಕೊಳ್ಳುತ್ತಾರೆ.

ನಾಯಿ ಮುದಿಯಾಗಿರುತ್ತದೆ. ಕೊಳಕಾಗಿರುತ್ತದೆ. ಉತ್ಸಾಹ ಕಳೆದುಕೊಂಡಿರುತ್ತದೆ. ಒಂಬತ್ತು ವರ್ಷದ ಬಳಿಕ ಒಂದಿನ ರೈಲು ಬರುವ ಸಮಯದಲ್ಲಿ ಕಣ್ಣು ಮುಚ್ಚುತ್ತದೆ. ಪ್ರೊಫೆಸರ್ ಬಂದಂತೆ, ತನ್ನೊಂದಿಗೆ ಆಡಿದಂತೆ, ಹಿಂದಿನ ತುಂಟಾಟಗಳ ದೃಶ್ಯಗಳು ಕಣ್ಣಮುಂದೆ ಬರುತ್ತವೆ. ನಾಯಿ ಬದುಕಿರುವುದಿಲ್ಲ.

ಈ ನಾಯಿಯ ಕಂಚಿನ ಪ್ರತಿಮೆಯನ್ನು ರೈಲ್ವೆ ನಿಲ್ದಾಣದಲ್ಲಿ ಮಾಡಲಾಗುತ್ತದೆ. ಪ್ರತಿವರ್ಷ ಅಲ್ಲಿ ಪ್ರೊಫೆಸರ್ ಮತ್ತು ನಾಯಿಯ ಬಾಂಧವ್ಯವನ್ನು ನೆನಪಿಸಿಕೊಳ್ಳಲಾಗುತ್ತದೆ.

ಕೆಲವೇ ಪಾತ್ರಗಳ ನಡುವೆ ಈ ಸಿನಿಮಾ ನಮ್ಮನ್ನು ಕೊನೆತನಕ ಹಿಡಿದಿಟ್ಟುಕೊಳ್ಳುತ್ತದೆ. ನಮ್ಮ ಕಣ್ಣನ್ನು ತೇವಗೊಳಿಸುತ್ತದೆ. ಹಾಚಿಯ ಪ್ರೀತಿಯನ್ನು ಕಂಡು ನಾವು ಹಾಚಿಯಂತೆ ಮರಗುತ್ತೇವೆ. ಕೊರಗುತ್ತೇವೆ. ಈ ಸಿನಿಮಾವನ್ನು ಪದಗಳಲ್ಲಿ ಬಚ್ಚಿಟ್ಟುಕೊಳ್ಳುವುದು ಕಷ್ಟ. ಇಲ್ಲಿ ನೀಡಲಾದ ಲಿಂಕ್ ಮೂಲಕ ಯೂಟ್ಯೂಬ್ ನಲ್ಲಿರುವ ಹಚಿಕೊ hachiko monogatari full movie ನೋಡಿ.