ಬೆಸ್ಟ್ ಗೈಡ್: ಸ್ವಂತ ವೆಬ್ಸೈಟ್ ನಿರ್ಮಿಸುವುದು ಹೇಗೆ?

ವೆಬ್ ಸೈಟ್ ನಿರ್ಮಾಣಕ್ಕೆ ಹಲವು ಸಾವಿರ ರೂಪಾಯಿ ವಿನಿಯೋಗಿಸಬೇಕು. ಆರಂಭದಲ್ಲಿ 3 ಸಾವಿರ ರೂ.ಗೆ ವೆಬ್ಸೈಟ್ ರೂಪಿಸಿಕೊಡುತ್ತೇವೆ ಎನ್ನುವ ವೆಬ್ ಡಿಸೈನರ್ ಗಳು ನಮ್ಮ ಕನಿಷ್ಠ ಬೇಡಿಕೆ ಈಡೇರಿಸಲೂ ಕೆಲವು ಸಾವಿರ ರೂ. ಹೆಚ್ಚಿಸುತ್ತ ಹೋಗುತ್ತಾರೆ. ಒಂದು ಸಾಧಾರಣ ವೆಬ್ ಸೈಟ್ ರೂಪುಗೊಳ್ಳಲು ಕನಿಷ್ಠ 10 ಸಾವಿರ ರೂ. ಪಡೆದೇ ಪಡೆಯುತ್ತಾರೆ. ವರ್ಷಗಳು ಕಳೆದಂತೆ ಆ ಹಣ ಹೆಚ್ಚಾಗುತ್ತ ಹೋಗುತ್ತದೆ. ಯಾವುದೋ ಕನಸಿಟ್ಟುಕೊಂಡು ವೆಬ್ಸೈಟ್ ಆರಂಭಿಸಿದವರಿಗೆ ದಿನಕಳೆದಂತೆ ಇದು ಹೊರೆಯಾಗಿ ಪರಿಣಮಿಸುತ್ತದೆ.

ಇಂತಹ ಸಮಯದಲ್ಲಿ 400 ರೂಪಾಯಿಗೆ ವೆಬ್ಸೈಟ್ ನಿರ್ಮಿಸಬಹುದು ಎಂದು ಕರ್ನಾಟಕಬೆಸ್ಟ್.ಕಾಂ ಹೇಳಿದರೆ ನೀವು ಸುಳ್ಳು ಎಂದುಕೊಳ್ಳುವಿರಾ? ನಿಜಕ್ಕೂ ಇದು ಸಾಧ್ಯವಿದೆ. ಹೇಗಂತಿರಾ?

ಇಲ್ಲಿ 400 ರೂಪಾಯಿ ಎನ್ನುವುದು ಒಂದು ನಿರ್ದಿಷ್ಟ ಮೊತ್ತವಷ್ಟೇ. ನೀವು ಎಷ್ಟು ರೂಪಾಯಿಯ ಡೊಮೈನ್ ಹೆಸರು ಖರೀದಿಸುವಿರೋ ಅಷ್ಟೇ ಮೊತ್ತದಲ್ಲಿ ವೆಬ್ಸೈಟ್ ರೂಪಿಸಬಹುದು. ಗೋಡ್ಯಾಡಿಯಲ್ಲಿ ಕಡಿಮೆ ಮೊತ್ತಕ್ಕೆ ಡೊಮೈನ್ ನಿಮಗೆ ಸಿಗಬಹುದು. ಆದರೆ, ಒಂದು ವರ್ಷ ಕಳೆದ ಬಳಿಕ ಆ ಮೊತ್ತ 800-900 ರೂ. ಆಗಬಹುದು. ಇಂತಹ ಆರಂಭದ ಆಮೀಷಗಳಿಂದ ದೂರವಿರಿ.

ಇಲ್ಲಿ 400 ರೂ. ಎಂದು ನಮೋದಿಸಿರುವುದು ಬಿಗ್ ರಾಕ್ ಡೊಮೈನ್ ಮೊತ್ತವನ್ನು. ಅಲ್ಲಿನ ಹೋಸ್ಟಿಂಗ್ ಬಗ್ಗೆಯೂ ಜನರಲ್ಲಿ ಸಾಕಷ್ಟು ಒಳ್ಳೆಯ ಅಭಿಪ್ರಾಯವಿರುವುದರಿಂದ ಅದೇ ಹೆಸರನ್ನು ಇಲ್ಲಿ ನಮೋದಿಸಲಾಗಿದೆ.

400 ರೂಪಾಯಿಗೆ ನಿಮ್ಮ ಸ್ವಂತ ವೆಬ್ಸೈಟ್ ನಿರ್ಮಿಸುವ ಮೊದಲು ನಾವು ಈ ಹಿಂದೆ ಬರೆದ ಮೂರು ಲೇಖನಗಳನ್ನು ನೀವು ಓದಬೇಕು. ಅದೇ ರೀತಿ ಬ್ಲಾಗರ್ ನಲ್ಲಿ ಬ್ಲಾಗ್ ರೂಪಿಸಬೇಕು.

ಆ ಲೇಖನಗಳು ಇಲ್ಲಿವೆ.

ಲೇಖನ 1: ಬ್ಲಾಗರ್ ನಲ್ಲಿ ಬ್ಲಾಗ್ ರಚಿಸುವುದು ಹೇಗೆ?

ಲೇಖನ 2: ಬ್ಲಾಗ್ ವಿನ್ಯಾಸವನ್ನು ಕಸ್ಟಮ್ ಟೆಂಪ್ಲೆಟ್ ಮೂಲಕ ವೆಬ್ ಸೈಟಿನಂತೆ ಪರಿವರ್ತಿಸುವುದು ಹೇಗೆ?

ಮೇಲಿನ ಎರಡು ಲೇಖನ ಓದಿದ ಬಳಿಕ ನೀವು 400 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಕಡಿಮೆ ಮೊತ್ತದ ಡೊಮೈನ್ ಹೆಸರನ್ನು ನಿಮಗೆ ಬೇಕಾದ ವೆಬ್ ಸೈಟಿನಿಂದ ಖರೀದಿಸಿ. ಬಿಗ್ ರಾಕ್ ನಲ್ಲಿ 400 ರೂ.ಗಿಂತ ಕಡಿಮೆಗೆ ಡೊಮೈನ್ ಹೆಸರು ಲಭ್ಯವಿದೆ. ಗೋಡ್ಯಾಡಿಯೂ ಕಡಿಮೆ ದರಕ್ಕೆ ಡೊಮೈನ್ ನೀಡುತ್ತದೆ. ಯಾವ ತಾಣದಿಂದ ಖರೀದಿಸುವಿರೋ ಅದೇ ಮೊತ್ತಕ್ಕೆ ನಿಮ್ಮ ವೆಬ್ ಸೈಟ್ ನಿರ್ಮಾಣವಾಗಲಿದೆ. ಇಲ್ಲಿ ಈ ಲೇಖನದಲ್ಲಿ 400 ರೂ. ಎಂದಿರುವುದು ಸಾಂಕೇತಿಕವಾಗಿಯಷ್ಟೇ! ಇಲ್ಲಿ ನಾವು ಯಾವುದೇ ಡೊಮೈನ್ ಕಂಪನಿಗಳ ಜೊತೆಯೂ ಒಪ್ಪಂದ ಮಾಡಿಕೊಳ್ಳದೆ ಇರುವುದರಿಂದ ಇದೇ ಸಂಸ್ಥೆಯಿಂದ ಖರೀದಿಸಿ ಎಂದು ಹೇಳುವುದಿಲ್ಲ.

ನಾನು ಡೊಮೈನ್ ಹೆಸರನ್ನು ಖರೀದಿಸಿದ್ದು ಡಿಜಿಕ್ಸ್ ಆನ್ಲೈನ್ ತಾಣದಿಂದ. ಅದರ ಮಾಲೀಕರು ನನಗೆ ಪರಿಚಯ ಇರುವುದು ಅದಕ್ಕೆ ಕಾರಣ. ಜೊತೆಗೆ, ಅಲ್ಲಿನ ಲಾಭವು ನೇರವಾಗಿ ಸೋಷಿಯಲ್ ವರ್ಕ್ ಗೆ ಹೋಗುತ್ತದೆ. ಯಾಕೆಂದರೆ, ಅದರ ಮಾಲೀಕರು ದುಬೈನ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ದುಬೈನ ಉಪಗ್ರಹ ಯೋಜನೆಯೊಂದರಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಡಿಜಿಕ್ಸ್ ಆನ್ ಲೈನ್ ಲಾಭವನ್ನು ಸಮಾಜಸೇವೆಗೆ ನೇರವಾಗಿ ಹೋಗುವಂತೆ ನೋಡಿಕೊಂಡಿದ್ದಾರೆ.

ಹೋಸ್ಟಿಂಗ್ ಖರೀದಿಸಿದರೆ ಕೆಲವು ಸಂಸ್ಥೆಗಳು ಉಚಿತ ಡೊಮೈನ್ ಹೆಸರು ನೀಡುತ್ತವೆ. ಆದರೆ, ಈ ಲೇಖನ ತಿಳಿಸಿದಂತೆ ಕಡಿಮೆ ಮೊತ್ತಕ್ಕೆ ವೆಬ್ ಸೈಟ್ ನಿರ್ಮಿಸುವವರು ಹೋಸ್ಟಿಂಗ್ ಖರೀದಿಸಬಾರದು. ಯಾಕೆಂದರೆ, ಇದು ಬ್ಲಾಗರ್ ಅನ್ನೇ ಹೋಸ್ಟಿಂಗ್ ಆಗಿ ಬಳಸಿ ನಿರ್ಮಿಸುವ ವೆಬ್ ಸೈಟ್. ಇದೇ ತಂತ್ರದಿಂದ ಹಲವು ವೆಬ್ಸೈಟ್ ಗಳು ಇಂದು ತಿಂಗಳಿಗೆ ಆ್ಯಡ್ ಸೆನ್ಸ್ ಮೂಲಕ ಹಲವು ಲಕ್ಷ ಹಣ ಸಂಪಾದಿಸುತ್ತಿವೆ.

ಡೊಮೈನ್ ಖರೀದಿಸಿ: ಲೇಖನ 3:- ಡೊಮೈನ್ ಖರೀದಿ ಹೇಗೆ?

ಈಗ ನೀವು ಪೂರ್ಣಗೊಳಿಸಿರುವ ಕೆಲಸಗಳು: ಬ್ಲಾಗರ್ ಮೂಲಕ ಬ್ಲಾಗ್ ರಚಿಸಿದ್ದೀರಿ. ಬ್ಲಾಗರ್ ಗೆ ಕಸ್ಟಮ್ ಟೆಂಪ್ಲೆಟ್ ಮೂಲಕ ವೆಬ್ಸೈಟ್ ಡಿಸೈನ್ ಮಾಡಿರುವಿರಿ. 400 ರೂ. ಅಥವಾ 800 ರೂ. ನೀಡಿ ಒಂದು ಡೊಮೈನ್ ಹೆಸರು ಖರೀದಿಸಿದ್ದೀರಿ. ಈಗ ನಿಮ್ಮ ವೆಬ್ಸೈಟ್.ಕಾಂ ಸಿದ್ಧವಿದೆ. ಇದನ್ನು ಈಗ ನಿಮ್ಮ ಬ್ಲಾಗರ್ ಗೆ ಜೋಡಿಸಿ.

ಗಮನಿಸಿ: ನಾನು ಆರಂಭದಲ್ಲಿ ಪ್ರವೀಣ್ ಪುತ್ತೂರು. ಬ್ಲಾಗ್ ಸ್ಪಾಟ್.ಇನ್ ಹೆಸರಿನಲ್ಲಿ ಬ್ಲಾಗ್ ರಚಿಸಿದೆ. ಅದರೆ ಆ ಲಿಂಕ್ ನಲ್ಲಿ ನನ್ನ ಬ್ಲಾಗ್ ನಿಮಗೆ ದೊರಕದು. ಯಾಕೆಂದರೆ, ಅದು ಈಗ ಪ್ರವೀಣ್ ಪುತ್ತೂರು.ಕಾಂ ಆಗಿದೆ. ಇದೇ ರೀತಿ ನೀವು ರಚಿಸಿರುವ ಬ್ಲಾಗ್ ಅನ್ನು ಡೊಮೈನ್ ಹೆಸರಿಗೆ ಜೋಡಿಸಬೇಕು. ಅದಕ್ಕಾಗಿ ಈ ಮುಂದಿನ ಪಾಯಿಂಟ್ ಗಳನ್ನು ಗಮನಿಸಿ.

#1: ಡೊಮೈನ್ ಹೆಸರನ್ನು ಖರೀದಿಸಿ. ನಾನು ಖರೀದಿಸಿರುವುದು ಡಿಜಿಕ್ಸ್ ಆನ್ ಲೈನ್ ನಿಂದ.

#2: ಡೊಮೈನ್ ದೊರಕಿದ ಬಳಿಕ ನಿಮ್ಮ ಬ್ಲಾಗರ್ ಗೆ ಲಾಗಿನ್ ಆಗಿ. ಡ್ಯಾಷ್ ಬೋರ್ಡ್ ನಲ್ಲಿ ಸೆಟ್ಟಿಂಗ್ ಎಂಬ ಆಯ್ಕೆ ಇರುವುದನ್ನು ಗಮನಿಸಿ.

#3: ಸೆಟ್ಟಿಂಗ್ ಕ್ಲಿಕ್ ಮಾಡಿದ ಬಳಿಕ ಅಲ್ಲಿನ ಬೇಸಿಕ್ ವಿಭಾಗವನ್ನು ನೋಡಿ. ಅಲ್ಲಿ ಪಬ್ಲಿಷಿಂಗ್ ಎಂಬ ಆಯ್ಕೆಯು ಲಭ್ಯವಿದೆ.

#4: ಪಬ್ಲಿಷಿಂಗ್ ಆಯ್ಕೆಯಲ್ಲಿ Third party domain settings  ಎಂಬ ಆಯ್ಕೆಯು ದೊರಕುತ್ತದೆ. ಅಲ್ಲಿ ನೀವು ಖರೀದಿಸಿದ ಡೊಮೈನ್ ಹೆಸರನ್ನು ಬರೆಯಿರಿ. ಅಂದರೆ ನಾನು praveenputtur.com ಎಂಬ ಡೊಮೈನ್ ಖರೀದಿಸಿದ್ದೆ. ಅಲ್ಲಿ ನಮೋದಿಸುವಾಗ ಡಬ್ಲ್ಯುಡಬ್ಲ್ಯುಡಬ್ಲ್ಯುಬರೆದು ಡೊಮೈನ್ ಹೆಸರು ಬರೆಯಿರಿ. ಅಂದರೆ: www.praveenputtur.com/ ಎಂದು ನಮೋದಿಸಿರಿ. (ನೀವು ಖರೀದಿಸಿದ ಡೊಮೈನ್ ಹೆಸರು ಬರೆಯಿರಿ, ಪ್ರವೀಣ್ ಪುತ್ತೂರು ಎನ್ನುವುದು ತನ್ನ ಡೊಮೈನ್ ಹೆಸರು).

#5 ಸೇವ್ ಎಂಬ ಆಯ್ಕೆಯನ್ನು ನೀಡಿ. ಅಲ್ಲಿ ಒಂದಿಷ್ಟು ಕೋಡ್ ಗಳು ಬರುತ್ತವೆ. ಅಂದರೆ:

www ghs.google.com

ಮತ್ತು ಇದರ ಕೆಳಗೆ ಒಂದಿಷ್ಟು ಸಂಕೇತಗಳು ಬರುತ್ತವೆ. ಅದು ಅಗತ್ಯವಾಗಿ ಬೇಕಾಗುತ್ತದೆ. ನಂತರ ನೀವು ಡೊಮೈನ್ ಖರೀದಿಸಿದ ತಾಣಕ್ಕೆ ಹೋಗಿರಿ. ಅಲ್ಲಿ ಡಿಎನ್ ಎಸ್ ಸೆಟ್ಟಿಂಗ್ ಎಂದಿರುತ್ತದೆ. ಅಲ್ಲಿ ನಿರ್ದಿಷ್ಟಪಡಿಸಿದ ವಿಭಾಗಗಳಿಗೆ ಈ ಕೋಡ್ ಗಳನ್ನು ಹಾಕಬೇಕು. ಅದನ್ನು ಹೇಗೆ ಹಾಕುವುದೆಂದು ಗೂಗಲ್ ನಲ್ಲಿ ಹುಡುಕಬಹುದು ಅಥವಾ ಕರ್ನಾಟಕ ಬೆಸ್ಟ್ ತಾಣವನ್ನು ಸಂಪರ್ಕಿಸಿ ವಿಭಾಗದ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಈ ರೀತಿ ಜೋಡಿಸಿರುವುದು ಯಶಸ್ವಿಯಾದ ಕೆಲವು ಸಮಯದ ಬಳಿಕ ನೀವು ನಿಮ್ಮ ಬ್ಲಾಗ್ ವಿಳಾಸವನ್ನು ತೆರೆಯಿರಿ. ಆ ಬ್ಲಾಗ್ ಬ್ಲಾಗರ್ ಹೆಸರಿನ ಬದಲಿಗೆ ನಿಮ್ಮ ಡೊಮೈನ್ ಹೆಸರಿನಲ್ಲಿ ತೆರೆಯುತ್ತದೆ. ಬಹುತೇಕ ಉದ್ಯೋಗ ವೆಬ್ಸೈಟ್ ಗಳು, ಬ್ಲಾಗ್ ವೆಬ್ ಸೈಟ್ ಗಳು, ರೆಸ್ಯೂಂ ವೆಬ್ ಸೈಟ್ ಗಳು, ಪರ್ಸನಲ್ ವೆಬ್ ಸೈಟ್ ಗಳು, ಕೆಲವು ನ್ಯೂಸ್ ವೆಬ್ ಸೈಟ್ ಗಳು ಇದೇ ರೀತಿಯಾಗಿ ರಚನೆಯಾಗಿವೆ. ಇದರಿಂದ ನೀವು ಡೊಮೈನ್ ಹೆಸರಿಗೆ ಮಾತ್ರ ಹಣ ಪಾವತಿಸಿದರೆ ಸಾಕು. ಬೇರೆ ಖರ್ಚುಮಾಡಬೇಕಿಲ್ಲ. ನಿಮ್ಮ ವೆಬ್ ಸೈಟ್ ಜನಪ್ರಿಯವಾಗುವವರೆಗೆ, ಸಾವಿರಾರು ಜನರನ್ನು ಸೆಳೆಯುವವರೆಗೆ ಇದರಲ್ಲಿಯೇ ಮುಂದುವರೆಯಬಹುದು. ನಿಮ್ಮ ತಾಣ ಇಂಗ್ಲಿಷ್ ನಲ್ಲಿದ್ದರೆ ಬ್ಲಾಗ್ ರಚಿಸಿದ ಆರು ತಿಂಗಳ ಬಳಿಕ ಆ್ಯಡ್ ಸೆನ್ಸ್ ಗೆ ಅರ್ಜಿ ಸಲ್ಲಿಸಬಹುದು.

  • ನಿಮ್ಮ ಬ್ಲಾಗ್ ವಿನ್ಯಾಸ ಸರಳವಾಗಿರಿಲಿ. ನೀಟಾಗಿರಲಿ. ಅನವಶ್ಯಕ ಅಂಶಗಳನ್ನು ತೆಗೆದುಹಾಕಿರಿ.
  • ಸಂಪರ್ಕಿಸಿ, ನಮ್ಮ ಬಗ್ಗೆ, ಇತ್ಯಾದಿ ಪುಟಗಳನ್ನು ರಚಿಸಿ ವೆಬ್ ಸೈಟಿಗೆ ಜೋಡಿಸಿ.
  • ಬ್ಲಾಗ್ ನಲ್ಲಿ ಸ್ವಂತ ಲೇಖನಗಳನ್ನು ಬರೆದು ಪ್ರಕಟಿಸಿ. ಕಾಪಿಪೇಸ್ಟ್ ಮಾಡುವ ಕೆಲಸ ಮಾಡಬೇಡಿ. ಯಾಕೆಂದರೆ ಇದನ್ನು ಗೂಗಲ್ ಕಂಡುಹಿಡಿಯುತ್ತದೆ. ಮುಂದೊಂದು ದಿನ ನಿಮ್ಮ ತಾಣಕ್ಕೆ ಭಾರೀ ಹಿನ್ನೆಡೆಯಾಗಬಹುದು.
  • ಫೇಸ್ಬುಕ್, ಟ್ವಿಟ್ಟರ್ ಇತ್ಯಾದಿ ಸೋಷಿಯಲ್ ಮೀಡಿಯಾಗಳಲ್ಲಿ ನಿಮ್ಮ ವೆಬ್ ಸೈಟ್ ಅನ್ನು ಪ್ರಚಾರ ಮಾಡಿ.

400 ರೂಪಾಯಿ ಅಥವಾ 1 ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ ನೀವು ರಚಿಸಿದ ವೆಬ್ ಸೈಟ್ ಅನ್ನು ಪ್ರಚಾರಗೊಳಿಸಿ. ಏನಾದರೂ ಸಂದೇಹಗಳಿದ್ದರೆ ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. ನಾವು ಖಂಡಿತವಾಗಿಯೂ ಉತ್ತರ ನೀಡುತ್ತೇವೆ. ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಲು ಮರೆಯಬೇಡಿ. ಜೊತೆಗೆ ನೀವು ಬ್ಲಾಗರ್ ಮೂಲಕ ಡೊಮೈನ್ ಲಿಂಕ್ ಮಾಡಿ ವೆಬ್ ಸೈಟ್ ರಚಿಸಿದ ಬಳಿಕ ನಿಮ್ಮ ಸ್ನೇಹಿತರಿಗೂ ಈ ತಂತ್ರವನ್ನು ಹೇಳಿರಿ. ಜ್ಞಾನವನ್ನು ಇತರರಿಗೂ ಧಾರೆ ಎರೆಯಿರಿ. ಕಲಿಯುತ್ತ, ಕಲಿಸುತ್ತ ಬೆಳೆಯೋಣ. ಎಲ್ಲರಿಗೂ ಕರ್ನಾಟಕಬೆಸ್ಟ್ ಕಡೆಯಿಂದ ಆಲ್ ದಿ ಬೆಸ್ಟ್!

ಲೇಟೆಸ್ಟ್ ಅಪ್ ಡೇಟ್ (ಡಿಸೆಂಬರ್ 19, 2018)

ಗಮನಿಸಿ: ಕರ್ನಾಟಕ ಬೆಸ್ಟ್.ಕಾಂ ವೆಬ್ ಸೈಟ್ ಆರಂಭಿಕ ಖರ್ಚು ಸುಮಾರು 5 ಸಾವಿರ ರೂ. ಆಸುಪಾಸಿನಲ್ಲಿತ್ತು. ನೂತನ ವಿನ್ಯಾಸ ಸೇರಿದಂತೆ ಈಗಿನ ವೆಚ್ಚ 10 ಸಾವಿರ ರೂ. ದಾಟಿರುತ್ತದೆ. ವರ್ಷಗಳು ಕಳೆದಂತೆ ಅನ್ ಲಿಮಿಟೆಡ್ ಹೋಸ್ಟಿಂಗ್ ಇತ್ಯಾದಿಗಳನ್ನು ಖರೀದಿಸುವ ಅವಶ್ಯಕತೆ ಇರುತ್ತದೆ. ಹೀಗಾಗಿ, ಖರ್ಚುಗಳು ಹೆಚ್ಚಿರುತ್ತವೆ. ಆದರೂ, ಕೆಲವು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ಬಹುತೇಕ ಅವಶ್ಯಕತೆಗಳನ್ನು ಪೂರೈಸುವ ವೆಬ್ ಸೈಟ್ ಗಳನ್ನು ಹತ್ತಿಪ್ಪತ್ತು ಸಾವಿರ ರೂ.ಗೆ ನಿರ್ಮಿಸಬಹುದು. ಹೆಚ್ಚು ಅವಶ್ಯಕತೆ ಬೇಡದ ವೆಬ್ ಸೈಟ್ ಗಳನ್ನು ಐದು ಸಾವಿರ ರೂ. ಆಸುಪಾಸಿನಲ್ಲಿ ಖರೀದಿಸಬಹುದು. ಬ್ಲಾಗರ್ ಗೆ ಲಿಂಕ್ ನೀಡುವಿರಿ ಎಂದಾದರೆ ಡೊಮೈನ್ ಹಣ ಪಾವತಿಸಿದರೆ ಸಾಕು. ವರ್ಡ್ ಪ್ರೆಸ್ ವೆಬ್ ಸೈಟ್ ವಿನ್ಯಾಸಕ್ಕೆ ಸಂಬಂಧಪಟ್ಟ ಮಾಹಿತಿ ಮತ್ತು ಸಹಕಾರ ಬೇಕಿದ್ದರೆ ಈ ವೆಬ್ ಪುಟದ ಸಂಪರ್ಕಿಸಿ ವಿಭಾಗದಲ್ಲಿ ಸಂಪರ್ಕಿಸಿ.