ಕಾರಿನ ಎಂಜಿನ್ ಕಾರ್ಯನಿರ್ವಹಣೆ ಕುರಿತು ತಿಳಿಯಿರಿ

By | June 25, 2018
Photo credit: wikipedia

image credit: wikipedia

ಕಾರು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೊಸ ಅಥವಾ ಹಳೆಯ ಕಾರು ಖರೀದಿಸಿ ಓಡಿಸುವ ಮಜವೇ ಬೇರೆ. ಕಾರಿನ ಚಕ್ರಗಳು, ಸ್ಟಿಯರಿಂಗ್, ಬಿಡಿಭಾಗ ಇತ್ಯಾದಿಗಳ ಸಾಮಾನ್ಯ ಜ್ಞಾನವನ್ನು ಬಹುತೇಕರು ಹೊಂದಿರಬಹುದು. ಆದರೆ, ಕಾರಿನ ಹೃದಯಭಾಗವಾದ ಎಂಜಿನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ಬಹುತೇಕರಿಗೆ ಇರಲಿಕ್ಕಿಲ್ಲ. ಆಟೋಮೊಬೈಲ್ ಎಂಜಿನಿಯರಿಂಗ್ ಅಥವಾ ಅದಕ್ಕೆ ಸಂಬಂಧಪಟ್ಟ ಅಧ್ಯಯನಗಳನ್ನು ಮಾಡಿದವರಿಗೆ ಈ ಕುರಿತು ಮಾಹಿತಿ ಇರಬಹುದು.

ಇಂಟರ್ನೆಟ್ ನಲ್ಲಿ ಹುಡುಕಿದರೆ ಇದಕ್ಕೆ ಪೂರಕವಾದ ಸಾಕಷ್ಟು ಮಾಹಿತಿಗಳು ಚಿತ್ರಸಮೇತ, ವಿಡಿಯೋ ಸಮೇತ ದೊರಕುತ್ತವೆ. ಆದರೆ, ಎಂಜಿನ್ ಕಾರ್ಯನಿರ್ವಹಣೆಯ ಕುರಿತು ಕನ್ನಡದಲ್ಲಿ ಬರೆಯುವುದು ಸುಲಭವಲ್ಲ. ಅದೊಂದು ಕ್ಲಿಷ್ಟವಾದ ಕೆಲಸವೆಂದು ಅನಿಸದೆ ಇರಬಹುದು. ಆದರೂ, ಕರ್ನಾಟಕ ಬೆಸ್ಟ್ ಓದುಗರಿಗಾಗಿ ಎಂಜಿನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ಸರಳವಾಗಿ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಎಂಜಿನ್ ಎಂಬ ಮಾಯಾಲೋಕ

ಇಂಧನವನ್ನು ಚಲನೆಯಾಗಿ ಪರಿವರ್ತಿಸುವುದು ಎಂಜಿನ್ ಕೆಲಸ. ಅದಕ್ಕಾಗಿ ಎಂಜಿನ್ ಒಳಗೆ ಇಂಧನ ಉರಿಯುವ ಇಂಟರ್ನಲ್ ಕಂಬಶ್ಟನ್ ಸಿಸ್ಟಮ್ ಬಳಸಲಾಗುತ್ತದೆ.ಈ ಎಂಜಿನ್‍ಗಳಿಗೆ ಕಡಿಮೆ ಇಂಧನ ಸಾಕು.  ಹಳೆಕಾಲದ ಉಗಿರೈಲುಗಳಲ್ಲಿ ಎಂಜಿನ್ ಹೊರಗಡೆ ಕಲ್ಲಿದ್ದಲ್ಲಿನಂತಹ ಇಂಧನ ಉರಿಸಲಾಗುತ್ತಿತ್ತು.

ಎಂಜಿನ್ ಒಳಗೆ ಬೆಂಕಿ

ಇಂಟರ್ನಲ್ ಕಂಬಶ್ಟನ್ ಎಂಜಿನ್‍ನ ಒಳಭಾಗದ ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಅತಿಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್‍ನಂತಹ ಇಂಧನದ ಹನಿ ಹಾಕಿ ಬೆಂಕಿಯ ಕಿಡಿ ಹಚ್ಚಿದರೆ ನಂಬಲು ಅಸಾಧ್ಯವಾದಷ್ಟು ಪ್ರಮಾಣದಲ್ಲಿ ಶಕ್ತಿಯು ಬಿಡುಗಡೆಯಾಗುತ್ತದೆ. ಕಾರಿನ ಚಕ್ರಗಳು ತಿರುಗಲು ಇವೇ ಅಶ್ವಶಕ್ತಿ. ಹೆಚ್ಚಿನ ಕಾರುಗಳಲ್ಲಿ ನಾಲ್ಕು ಸ್ಟ್ರೋಕ್(ಕಿಡಿ)ನ ಕಂಬಶ್ಟನ್ ಸೈಕಲ್ ಸಿಸ್ಟಮ್ ಬಳಸಲಾಗುತ್ತದೆ. ಇದಕ್ಕೆ ಒಟ್ಟೊ ಸೈಕಲ್ ಎಂಬ ಹೆಸರು ಸಹ ಇದೆ. 1967ರಲ್ಲಿ ನಿಕೊಲಾಸ್ ಒಟ್ಟೊ ಈ ಟೆಕ್ನಾಲಜಿ ಕಂಡುಹಿಡಿದಿದ್ದರು.

ಎಂಜಿನ್ ಒಳಗೆ ಏನಿದೆ?

ಇಂಟೆಕ್ (ಇಂಧನ ಒಳಬರುವುದು), ಕಂಪ್ರೆಷನ್ (ಸಂಕೋಚನ), ಕಂಬಸ್ಟನ್(ದಹನ) ಮತ್ತು ಎಗ್ಸಾಸ್ಟ್ ಸ್ಟ್ರೋಕ್ (ಹೊಗೆ ಹೊರಕ್ಕೆ) ಎಂಬ ನಾಲ್ಕು ಸ್ಟ್ರೋಕ್‍ಗಳು ಎಂಜಿನ್ ಒಳಗೆ ಕಾರ್ಯನಿರ್ವಹಿಸುತ್ತವೆ. ಎಂಜಿನ್ ಒಳಗೆ ನೂರಾರು ಬಿಡಿಭಾಗಗಳಿವೆ. ಕ್ಯಾಮ್‍ಶಾಫ್ಟ್, ವಾಲ್ವ್ ಕವರ್, ಇಂಟೆಕ್ ವಾಲ್ವ್, ಇಂಟೆಕ್ ಫೋರ್ಟ್, ಹೆಡ್, ಕೂಲೆಂಟ್, ಎಂಜಿನ್ ಬ್ಲಾಕ್, ಆಯಿಲ್ ಪಾನ್, ಆಯಿಲ್ ಸುಂಪ್, ಸ್ಪಾರ್ಕ್ ಪ್ಲಗ್, ಎಗ್ಸಾಟ್ ವಾಲ್ವ್, ಎಗ್ಸಾಟ್ ಫೋರ್ಟ್, ಪಿಸ್ಟನ್, ಕನೆಕ್ಟಿಂಗ್ ರಾಡ್ಸ್, ಕ್ರಾಂಕ್‍ಶಾಫ್ಟ್ ಇತ್ಯಾದಿಗಳಿವೆ.

ಹೇಗೆ ಕೆಲಸ ಮಾಡುತ್ತದೆ?

ಎಂಜಿನ್‍ನಲ್ಲಿರುವ ಪಿಸ್ಟನನ್ನು ಕನೆಕ್ಟಿಂಗ್ ರಾಡ್ ಮೂಲಕ ಕ್ರಾಂಕ್‍ಶಾಫ್ಟ್ಗೆ ಸಂಪರ್ಕ ಮಾಡಲಾಗಿರುತ್ತದೆ. ಕ್ರಾಂಕ್‍ಶಾಫ್ಟ್ ಸುತ್ತುತ್ತಿರುವಾಗ ಕ್ಯಾನನ್ ಮರುಹೊಂದಿಕೊಳ್ಳುತ್ತದೆ. ಎಂಜಿನ್ ಸಿಲಿಂಡರ್ ಒಳಗಿರುವ ಪಿಸ್ಟನ್ ಮೇಲಿನಿಂದ ಕೆಳಗೆ ಬರಲು ಆರಂಭವಾದಗ ಇಂಟೆಕ್ ಕವಾಟ ತೆರೆದುಕೊಳ್ಳುತ್ತದೆ. ಅದರಿಂದ ಅಲ್ಪ ಪ್ರಮಾಣದ ಇಂಧನ ಮತ್ತು ಗಾಳಿಯ ಮಿಶ್ರಣ ಸಿಲಿಂಡರ್ ಒಳಗೆ ಬಂದಾಗ ಪಿಸ್ಟನ್ ಕೆಳಗೆ ಬರುತ್ತದೆ. ಮತ್ತೆ ಪಿಸ್ಟನ್ ಮೇಲೆ ಬಂದಾಗ ಸ್ಪಾರ್ಕ್ ಪ್ಲಗ್ ಉಂಟು ಮಾಡಿದ ಕಿಡಿಯು ಇಂಧನ/ಗಾಳಿ ಮಿಶ್ರಣವನ್ನು ಸ್ಪೋಟಿಸಿದಾಗ ಬಿಡುಗಡೆಯಾಗುವ ಶಕ್ತಿಗೆ ಪಿಸ್ಟನ್ ಕೆಳಗೆ ಬರುತ್ತದೆ. ಮತ್ತೆ ಪಿಸ್ಟನ್ ಮೇಲಕ್ಕೆ ಹೋದಾಗ ಇಂಟೆಂಕ್ ಕವಾಟದ ಮೂಲಕ ಹೊಗೆ ಹೊರಕ್ಕೆ ಹೋಗುತ್ತದೆ. ಕ್ಯಾಮ್‍ಶಾಫ್ಟ್ ಸಮರ್ಪಕವಾಗಿ ತಿರುಗಿದಾಗ ಇಂಟೆಕ್ ಮತ್ತು ಎಗ್ಸಾಸ್ಟ್ ಕವಾಟಗಳು ತೆರೆಯುವುದು ಮತ್ತು ಮುಚ್ಚುವುದು ನಡೆಯುತ್ತಿರುತ್ತವೆ. ಪಿಸ್ಟನ್ ಮೇಲೆ ಕೆಳಗೆ ಬರುತ್ತಿರುವಾಗ ಅದಕ್ಕೆ ಕನೆಕ್ಟ್ ಮಾಡಿದ ಕ್ರಾಂಕ್‍ಶಾಫ್ಟ್ ತಿರುಗುತ್ತದೆ(ಸೈಕಲ್ ತುಳಿದಾಗ ಆಗುವಂತೆ).

ನಾವೀಗ ಕೇವಲ ಒಂದು ಪಿಸ್ಟನ್ ಸಿಲಿಂಡರ್ ತಿರುಗುವ ಬಗ್ಗೆ ತಿಳಿದುಕೊಂಡೆವು. ಆದರೆ ಹೆಚ್ಚಿನ ಕಾರುಗಳು ಒಂದಕ್ಕಿಂತ ಹೆಚ್ಚು ಸಿಲಿಂಡರ್ ಹೊಂದಿರುತ್ತವೆ. ನಾಲ್ಕು, ಆರು, ಎಂಟು ಸಿಲಿಂಡರ್ರಿನ ಎಂಜಿನ್‍ಗಳು ಇರುತ್ತವೆ. ಹೀಗೆ ಹಲವು ಸಿಲಿಂಡರ್‍ ಗಳು ಇರುವಾಗ ಸಿಲಿಂಡರ್‍ ಗಳು ಹೆಚ್ಚಾಗಿ ಮೂರು ರೀತಿಯಾಗಿ (ಇನ್‍ಲೈನ್, ವಿ ಅಥವಾ ಫ್ಲಾಟ್) ಜೋಡಿಸಲಾಗಿರುತ್ತದೆ.

ಯಾವುದಕ್ಕೆ ಏನು ಕೆಲಸ?

ಸ್ಪಾರ್ಕ್ ಪ್ಲಗ್: ಇಂಧನ/ಗಾಳಿ ಮಿಶ್ರಣಕ್ಕೆ ಬೆಂಕಿ ಹಾಕುವುದು ಸ್ಪಾರ್ಕ್ ಪ್ಲಗ್ ಕಾರ್ಯ. ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಸ್ಪಾರ್ಕ್ ಆದರೆ ಮಾತ್ರ ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.

ವಾಲ್ವ್: ಇಂಟೆಕ್ ಮತ್ತು ಎಗ್ಸಾಟ್ ವಾಲ್ವ್(ಕವಾಟ)ಗಳು ಸರಿಯಾದ ಸಮಯಕ್ಕೆ ತೆರೆದುಕೊಂಡರೆ ಮಾತ್ರ ಸರಿಯಾದ ಸಮಯಕ್ಕೆ ಗಾಳಿ ಮತ್ತು ಇಂಧನ ಮಿಶ್ರಣ ಒಳಬರುತ್ತದೆ. ಸಂಕೋಚನ ಮತ್ತು ದಹನ ಸಮಯದಲ್ಲಿ ಎರಡೂ ಕವಾಟಗಳು ಮುಚ್ಚಿರುತ್ತವೆ.

ಪಿಸ್ಟನ್: ಸಿಲಿಂಡರ್ ಒಳಭಾಗದಲ್ಲಿ ಮೇಲೆ ಕೆಳಗೆ ಹೋಗುವ ಸಿಲಿಂಡರ್ ತುಂಡು.

ಪಿಸ್ಟನ್ ರಿಂಗ್‍ಗಳು: ಸಿಲಿಂಡರ್ ಒಳಭಾಗದಿಂದ ಯಾವುದೇ ಲೀಕ್ ಆಗದಂತೆ, ದಕ್ಷತೆಯಿಂದ ಇಂಧನ/ಗಾಳಿ ದಹನವಾಗುವಂತೆ ನೋಡಿಕೊಳ್ಳುತ್ತದೆ.

ಕನೆಕ್ಟಿಂಗ್ ರಾಡ್: ಪಿಸ್ಟನನ್ನು ಕ್ರಾಂಕ್‍ಶಾಫ್ಟ್ಗೆ ಕನೆಕ್ಟ್ ಮಾಡೋ ಕೆಲಸವನ್ನು ಕನೆಕ್ಟಿಂಗ್ ರಾಡ್ ಮಾಡುತ್ತದೆ.

ಕ್ರಾಂಕ್‍ಶಾಫ್ಟ್:ಪಿಸ್ಟನ್ ಮೇಲೆ ಕೆಳಗೆ ಚಲಿಸಿದಾಗ ಕ್ರಾಂಕ್‍ಶಾಫ್ಟ್ ತಿರುಗುತ್ತದೆ.

ಎಂಜಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಇತರೆ ಅಂಶಗಳು.

ವಾಲ್ವ್ ಟ್ರೈನ್: ಕವಾಟಗಳು ಮತ್ತು ಇತರ ಮೆಕಾನಿಸಂ ಇರುವ ವಾಲ್ವ್ ಟ್ರೈನ್‍ಗಳು ಕಾಮ್‍ಶಾಫ್ಟ್‍ ಅನ್ನು ತೆರೆಯಲು ಮತ್ತು ಮುಚ್ಚಲು ನೆರವಾಗುತ್ತದೆ. ಹೆಚ್ಚಿನ ಆಧುನಿಕ ಎಂಜಿನ್‍ಗಳು ಓವರ್‍ಹೆಡ್ ಕ್ಯಾಮ್‍ಗಳನ್ನು ಹೊಂದಿರುತ್ತವೆ.

ರಾಡ್: ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸಲು ಕ್ಯಾಮ್‍ನ ಕೆಳಗೆ ಇರುವ ರಾಡ್‍ಗಳು ಸಹ ಸಮರ್ಪಕವಾಗಿ ಕೆಲಸ ಮಾಡಬೇಕು.’

ಟೈಮಿಂಗ್ ಬೆಲ್ಟ್: ಟೈಮಿಂಗ್ ಚೈನ್ ಲಿಂಕ್ ಸಹ ಎಂಜಿನ್‍ನಲ್ಲಿ ಅತ್ಯಂತ ಅಗತ್ಯದ ಭಾಗ. ಈ ಚೈನ್ ಕ್ರಾಂಕ್‍ಶಾಫ್ಟ್‍ ನಿಂದ ದ ಕ್ಯಾಮ್‍ಶಾಫ್ಟ್‍ಗೆ ಲಿಂಕ್ ಮಾಡುತ್ತದೆ.

ಕ್ಯಾಮ್‍ಶಾಫ್ಟ್: ಹೆಚ್ಚಿನ ಆಧುನಿಕ ಎಂಜಿನ್‍ಗಳು ಪ್ರತಿಸಿಲಿಂಡರ್‍ಗೆ ನಾಲ್ಕು ವಾಲ್ವ್‍ಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಎರಡು ಇಂಟೆಕ್‍ಗೆ ಮತ್ತು ಎರಡು ಎಗ್ಸಾಸ್ಟ್‍ಗೆ ಇರುತ್ತದೆ. ಇದರಿಂದಾಗಿ ಒಂದು ಸಿಲಿಂಡರ್‍ಗೆ ಎರಡು ಕ್ಯಾಮ್‍ಶಾಫ್ಟ್‍ಗಳು ಬೇಕಿರುತ್ತದೆ. ಇದಕ್ಕಾಗಿ ಡ್ಯೂಯಲ್ ಓವರ್‍ಹೆಡ್ ಕ್ಯಾಮ್ಸ್ ಬಳಕೆ ಮಾಡಲಾಗುತ್ತದೆ.

ಎಂಜಿನ್ ಸ್ಟಾರ್ಟ್ ಆಗದೆ ಇರುವುದಕ್ಕೆ ಕಾರಣಗಳೇನು?
ಮುಂಜಾನೆ ಇಗ್ನಿಷನ್ ಕೀಲಿಕೈ ತಿರುಗಿಸಿದಾಗ ಕಾರು ಸ್ಟಾರ್ಟ್ ಆಗದ ಅನುಭವ ನಿಮಗೆ ಆಗಿರಬಹುದು. ಎಂಜಿನ್ ಸ್ಟಾರ್ಟ್ ಆಗದಿರಲು ನೂರಾರು ಕಾರಣಗಳು ಇರಬಹುದು. ಆದರೆ ಮುಖ್ಯವಾಗಿ ಮೂರು ಕಾರಣಗಳಿವೆ.

  1. ಅಸಮರ್ಪಕ ಇಂಧನ ಮಿಶ್ರಣ:ಇಂಧನ ಖಾಲಿಯಾದಗ ಎಂಜಿನ್‍ನೊಳಗೆ ಗಾಳಿ ಮಾತ್ರ ಪ್ರವೇಶಿಸುತ್ತದೆ. ಇಂಧನ ಪ್ರವೇಶಿಸುವುದಿಲ್ಲ. ಕೆಲವೊಮ್ಮೆ ಏರ್ ಇಂಟೆಕ್ ಮುಚ್ಚಿದ್ದರೆ ಇಂಧನ ಪೂರೈಕೆ ಆಗುತ್ತದೆ, ಗಾಳಿ ಪೂರೈಕೆ ಆಗುವುದಿಲ್ಲ. ಒಮ್ಮೊಮ್ಮೆ ಹೆಚ್ಚು ಇಂಧನ, ಕಡಿಮೆ ಗಾಳಿ ಪೂರೈಕೆಯಾಗಬಹುದು. ಇಂಧನ ಟ್ಯಾಂಕ್‍ನಲ್ಲಿ ನೀರು ಪ್ರವೇಶಿಸಿದರೂ ಇಂಧನದ ಗುಣಮಟ್ಟ ಹಾಳಾಗಿ ಸ್ಟಾರ್ಟಿಂಗ್ ಟ್ರಬಲ್ ನೀಡಬಹುದು.
  2. ಕಂಪ್ರೆಷನ್ ಪ್ರಾಬ್ಲಂ:ಗಾಳಿ ಮತ್ತು ಇಂಧನ ಸಮರ್ಪಕವಾಗಿ ಸಂಕೋಚನ ಆಗದೆ ಇದ್ದರೆ ಕಂಬಶ್ಟನ್ ಅಥವಾ ದಹನ ಪ್ರಕ್ರಿಯೆ ಸಮರ್ಪಕವಾಗಿ ನಡೆಯದು. ಕಂಪ್ರೆಷನ್‍ನಲ್ಲಿ ತೊಂದರೆ ಉಂಟಾಗಲು ಪಿಸ್ಟನ್ ರಿಂಗ್ ಸವೆದಿರುವುದೂ ಕಾರಣವಾಗಿರಬಹುದು. ಇಂಟೆಕ್ ಅಥವಾ ಎಗ್ಸಾಸ್ಟ್ ಕವಾಟಗಳು ಸರಿಯಾಗಿ ಸೀಲ್ ಆಗದಿದ್ದರೆ ಕಂಪ್ರೆಷನ್ ಸಮಯದಲ್ಲಿ ಲೀಕ್ ಉಂಟಾಗುತ್ತದೆ.
  3. ಸ್ಪಾರ್ಕ್ ಪ್ಲಗ್‍ನ ವೈರ್‍ನಲ್ಲಿ ಉಂಟಾಗುವ ತೊಂದರೆಯಿಂದ ಕಿಡಿ ಹತ್ತಿಕೊಳ್ಳದಿದ್ದರೆ ಎಂಜಿನ್ ಸ್ಟಾರ್ಟ್ ಆಗದು. ಕೆಲವೊಮ್ಮೆ ಕಿಡಿ ಬೇಗ ಅಥವಾ ಲೇಟಾಗಿ ಹತ್ತಿಕೊಂಡರೂ ಎಂಜಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದು.

ಇನ್ನಿತರ ಕಾರಣಗಳು: ಎಂಜಿನ್ ಸ್ಟಾರ್ಟ್ ಆಗದಿರಲು ಬ್ಯಾಟರಿ ಹಾಳಾಗಿರುವುದು, ಎಂಜಿನ್ ಕವಾಟಗಳು ಸರಿಯಾದ ಸಮಯಕ್ಕೆ ತೆರೆಯದೆ ಅಥವಾ ಮುಚ್ಚದೆ ಇರುವುದು ಇತ್ಯಾದಿ ಕಾರಣಗಳು ಇವೆ. ಆಯಿಲ್ ಇಲ್ಲದೆ ಪಿಸ್ಟನ್‍ಗೆ ಸರಾಗವಾಗಿ ಮೂವ್ ಆಗಲು ಸಾಧ್ಯವಾಗದೆ ಇದ್ದರೆ ಎಂಜಿನ್ ಸೀಝ್ ಆಗಬಹುದು.

ಕೂಲಾಗಿರಲಿ ಎಂಜಿನ್

ಎಂಜಿನ್ ಕೂಲಿಂಗ್: ಹೆಚ್ಚಿನ ಕಾರುಗಳಲ್ಲಿ ರೇಡಿಯೇಟರ್ ಮತ್ತು ವಾಟರ್ ಪಂಪ್ ಒಳಗೊಂಡಿರುವ ಕೂಲಿಂಗ್ ಸಿಸ್ಟಮ್ ಇರುತ್ತದೆ. ಸಿಲಿಂಡರ್ ಸುತ್ತಮುತ್ತ ನಾಳಗಳಲ್ಲಿ ನೀರು ಹರಿಯುತ್ತದೆ ಮತ್ತು ಮತ್ತೆ ರೇಡಿಯೇಟರ್ ಪ್ರವೇಶಿಸಿ ನಾಳಗಳಲ್ಲಿ ಹೊರಬರುತ್ತದೆ. ಏರ್‍ಕೂಲಿಂಗ್‍ನಿಂದ ಎಂಜಿನ್‍ಗೆ ತಂಪಾಗಿ ಹಾಯೆನಿಸುತ್ತದೆ. ಆದರೆ ಇದು ಎಂಜಿನ್ ಬಾಳ್ವಿಕೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು ತಗ್ಗಿಸುತ್ತದೆ.

ಏರ್ ಇಂಟೆಕ್: ಹೆಚ್ಚಿನ ಕಾರುಗಳಲ್ಲಿ ಏರ್ ಫಿಲ್ಟರ್‍ನಿಂದ ನೇರವಾಗಿ ಸಿಲಿಂಡರ್‍ಗೆ ಗಾಳಿಯನ್ನು ಕಳುಹಿಸಿಕೊಡಲಾಗುತ್ತದೆ. ಟರ್ಬೊ ಜಾರ್ಜ್‍ಡ್ ಅಥವಾ ಸೂಪರ್ ಚಾರ್ಜ್‍ಡ್ ಎಂಜಿನ್‍ಗಳಲ್ಲಿ ಎಂಜಿನ್‍ಗೆ ಮೊದಲು ಏರ್ ಬರುತ್ತದೆ. ಇದರಿಂದ ಕಾರ್ಯಕ್ಷಮತೆ ಹೆಚ್ಚಿರುತ್ತದೆ.

ಎಂಜಿನ್ ಲ್ಯುಬ್ರಿಕೇಷನ್: ಎಂಜಿನ್‍ನಲ್ಲಿ ಆಯಿಲ್ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಲುಬ್ರಿಕೇಷನ್ ವ್ಯವಸ್ಥೆಯು ಎಂಜಿನ್‍ನ ಎಲ್ಲಾ ಚಲಿಸುವ ಬಿಡಿಭಾಗಗಳಿಗೆ ಸಮರ್ಪಕವಾಗಿ ಆಯಿಲ್ ದೊರಕುವಂತೆ ಮಾಡುತ್ತದೆ. ಇದರಿಂದ ಎಂಜಿನ್‍ನ ಬಿಡಿಭಾಗಗಳು ಸಮರ್ಪಕವಾಗಿ ಚಲಿಸುತ್ತವೆ.

ಈ ಲೇಖನ ಬರೆಯುವಾಗ ಹತ್ತು ಹಲವು ಮೂಲಗಳಿಂದ, ವಿಡಿಯೋಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಅವುಗಳಲ್ಲಿ ಮುಖ್ಯವಾದ ಮೂಲಗಳ ಲಿಂಕ್ ಗಳನ್ನು ಈ ಕೆಳಗೆ ನೀಡಲಾಗಿದೆ.  

ಕಾರಿನ ಎಂಜಿನ್ ಕಾರ್ಯನಿರ್ವಹಣೆ ಕುರಿತು ಕಲಿಯಬಹುದಾದ ಯೂಟ್ಯೂಬ್ ವಿಡಿಯೋ ಲಿಂಕ್

ಇಂಟರ್ನೆಟ್ ನಲ್ಲಿ ಪಡೆಯಲಾದ ಮಾಹಿತಿಗಳ ಕೊಂಡಿಗಳು:

How Car Engines Work

How A Car Engine Works (animated infographic) – Jacob O’Neal

How Cars Work – The Workings Of A Car Engine Explained

Internal combustion engine – Wikipedia, the free encyclopedia

How a Car Engine Works Video – Science for Kids

4 Ways to Learn How a Car Engine Works – wikiHow

How Car Engines Work – Automotive Training Board of NSW

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ ಓದುವುದು, ಬರೆಯುವುದು ಇಷ್ಟದ ಕೆಲಸ. ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ ಧನ್ಯವಾದ

2 thoughts on “ಕಾರಿನ ಎಂಜಿನ್ ಕಾರ್ಯನಿರ್ವಹಣೆ ಕುರಿತು ತಿಳಿಯಿರಿ

  1. Pingback: ಜುಪೀಟರ್ ಸ್ಕೂಟರ್ ಟೆಸ್ಟ್ ರೈಡ್ ಮತ್ತು ಟಿವಿಎಸ್ ಫ್ಯಾಕ್ಟರಿ ಟೂರ್ ಅನುಭವ | KarnatakaBest.Com tvs jupiter scooter review

  2. Pingback: ಟೆಸ್ಟ್ ರೈಡ್: ಜುಪೀಟರ್ ಸ್ಕೂಟರ್ ಮತ್ತು ಟಿವಿಎಸ್ "ಫ್ಯಾಕ್ಟರಿ ಟೂರ್" ಅನುಭವ | ಕರ್ನಾಟಕ Best tvs jupiter scooter review

Leave a Reply

This site uses Akismet to reduce spam. Learn how your comment data is processed.