ಬೆಸ್ಟ್ ನಾಟಕ: ಪಾರ್ಶ್ವ ಸಂಗೀತ-ಶಾಮನ ಧ್ಯಾನ

By | September 8, 2018
Photo Credit: Rangavalli Mysore Facebook Page

ನಾಟಕದ ಹೆಸರು: ಪಾರ್ಶ್ವ ಸಂಗೀತ

ಪ್ರಸ್ತುತಿ: ರಂಗವಲ್ಲಿ ಮೈಸೂರು

ಪರಿಕಲ್ಪನೆ ಮತ್ತು ನಿರ್ದೇಶನ: ಪ್ರಶಾಂತ್ ಹಿರೇಮಠ

(ಈ ನಾಟಕವನ್ನು ಬೆಂಗಳೂರಿನಲ್ಲಿ ನೋಡಿದ ಶ್ರೀಲಕ್ಷ್ಮಿ ಹೆಗಡೆ ಬರೆದ ಅಭಿಪ್ರಾಯ ಇಲ್ಲಿದೆ. ನೀವು ನೋಡಿದ ನಾಟಕಗಳ ವಿಮರ್ಶೆಯನ್ನು ಕರ್ನಾಟಕ ಬೆಸ್ಟ್ ಗೆ (ಇಮೇಲ್: bpchand@gmail.com ) ಕಳುಹಿಸಬಹುದು.

 

-ಶ್ರೀಲಕ್ಷ್ಮಿ ಹೊಸ್ಕೊಪ್ಪ

ಮೊದಲಿನಿಂದಲೂ ಅಷ್ಟೇ, ನಾಟಕವೆಂದರೆ ಅದೆನೋ ಪ್ರೀತಿ. ಸಮಯ ಸಿಕ್ಕಾಗೆಲ್ಲ ಯಾವುದೇ ನಾಟಕವಿದ್ದರೂ ಮಿಸ್ ಮಾಡೋ ಪ್ರಶ್ನೆಯೇ ಇಲ್ಲ. ಕಳೆದ ಭಾನುವಾರ ಶ್ರೀನಿವಾಸ ವೈದ್ಯರ ಬರಹಗಳನ್ನಾಧರಿಸಿದ ಮೈಸೂರಿನ ರಂಗವಲ್ಲಿ ತಂಡದ ಪ್ರಶಾಂತ ಹಿರೇಮಠ ನಿರ್ದೇಶನದ “ಪಾರ್ಶ್ವ ಸಂಗೀತ” ನಾಟಕ ನೋಡೋಕೆ ಹೋಗಿದ್ದೆ. ನಾಟಕ ನೋಡಿ ಕಳೆದೇ ಹೋದೆ. ಆ ಗುಂಗಿನಿಂದ ಹೊರಬರಲು, ನೋಡಿದ್ದನ್ನು ಬರೆಯಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

1940ರಿಂದ 70 ರ ದಶಕದ ನಡುವಿನ ಇಂದಿಗೂ ಹಸಿರಾಗಿರುವ, ಕೇಳಿದಾಗೆಲ್ಲ ಮತ್ತೆ ಮತ್ತೆ ಕೇಳಬೇಕೆನಿಸುವ ಹಿಂದಿ ಚಿತ್ರಗೀತೆಗಳೊಂದಿನ ನಾಟಕ ಸಾಗುತ್ತದೆ. ಸಂಗೀತ ಲೋಕದ ಅದ್ಭುತಗಳೆನಿಸಿರುವ ಸೈಗಲ್, ಮುಕೇಶ್, ರಫಿ, ಕಿಶೋರ್, ಲತಾ ಮಂಗೇಶ್ಕರ್‌ರ ಮನತಟ್ಟುವ ಹಾಡುಗಳು, ಮಧ್ಯಮ ವರ್ಗದ ಜನರ ಜೀವನದಲ್ಲಿ ಯಾವ ರೀತಿ ಹಾಸುಹೊಕ್ಕಿದೆ ಎಂಬುದನ್ನು ನಾಟಕ ತೆರೆದಿಡುತ್ತದೆ.

ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಚಿಕ್ಕಪ್ಪ-ಕಾಕೂ, ಅಕ್ಕ ಹೀಗೆ ತುಂಬು ಕುಟುಂಬದಲ್ಲಿ ಬೆಳೆದ ಶೀನೂ ಈ ನಾಟಕದ ನಿರೂಪಕ. ಅವನು ತನ್ನ ಬಾಲ್ಯದ ಅಪರೂಪದ ಅನುಭವದ ಮೂಲಕ ಆ ಕಾಲದ ಹಿಂದಿ ಗೀತೆಗಳ ಸುವರ್ಣಯುಗವನ್ನು ನೆನಪಿಸಿಕೊಳ್ಳುತ್ತಾನೆ. ಪ್ರತಿ ಮಾತಿನಲ್ಲೂ ನಗೆಯುಕ್ಕಿಸುತ್ತಾನೆ.

ತನ್ನ ಆ ಕಾಲದ ಹೀರೊ, ಚಿತ್ರಪ್ರೇಮಿ, ಸೈಗಲ್‌ನ ಅಪರಾವತಾರವೇ ಆಗಿರುವ ಶಾಮ ಚಿಕ್ಕಪ್ಪನ (ಪೂರ್ಣಚಂದ್ರ) ಸುತ್ತವೇ ಇಡೀ ನಾಟಕ ಸುತ್ತುತ್ತದೆ. ಅವನಿಗೋ ಗ್ರಾಮೋಫೋನ್‌ನಲ್ಲಿ ಹಳೆಯ ಹಿಂದಿ ಗೀತೆಗಳನ್ನು ಕೇಳೋ ಹುಚ್ಚು. ಸಿಗರೇಟಿನ ಚಟವೂ ಹೆಚ್ಚು. ಸದಾ ದೇವರ ಪೂಜೆ-ಪುನಸ್ಕಾರದಲ್ಲಿ ತೊಡಗಿರುವ ಅಪ್ಪನಿಗೆ (ಶಾಮನಿಟ್ಟ ಹೆಸರು ಬೆಂಕಿ ನವಾಬ) ಹಿಂದಿಚಿತ್ರಗೀತೆಗಳು ನಿಷಿದ್ಧ. ಶಾಮನ ಹುಚ್ಚಾಟಗಳನ್ನು ಸಹಿಸದ ಅಪ್ಪ ದೇವರ ಮಂತ್ರದ ಜತೆಯಲ್ಲಿ ಇವನಿಗೂ ಮಂತ್ರಾಕ್ಷತೆ ಹಾಕುತ್ತಾನೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಅತ್ತಿಗೆಯ ಮುದ್ದು ಶಾಮ, ಅವನ ಮಂಗಾಟಗಳಿಗೆಲ್ಲ ಶೀನೂನೇ ಸಾಕ್ಷಿ.

ಈ ನಡುವೆ ಶಾಮನ ಮದ್ವೆ ಜಾನಕಿಯೊಂದಿಗೆ ನಿಶ್ಚಯವಾಗುತ್ತದೆ. ಗಣಿತದಲ್ಲಿ ಸೊನ್ನೆ ಸುತ್ತಿ, ಬರೆದ ಎಲ್ಲಾ ಪರೀಕ್ಷೆಗಳಲ್ಲಿ ಡುಮ್ಕಿ ಹೊಡೆದ ಶಾಮು, ಜಾನಕಿಗೆ ಪೈಥಾಗೋರಸ್ ಪ್ರಮೇಯ ಹೇಳಿಕೊಡುವುದು ಹೊಟ್ಟೆ ಹುಣ್ಣಾಗಿಸುತ್ತದೆ. ಮದುವೆಯಾದ ಜಾನಕಿಯೊಂದಿಗಿನ ಅವನ ಸರಸ ಸಲ್ಲಾಪ ರೋಮಾಂಚನಗೊಳಿಸುತ್ತದೆ. ಅವರ ರೊಮಾನ್ಸ್ ನಡುವೆ ಆಗಾಗ ಪ್ಲೇ ಆಗುವ ಹಿಂದಿ ಹಾಡಿಗೆ ರೆಟ್ರೋ ಡಾನ್ಸ್, ಕೂತಲ್ಲಿಂದ ನಮ್ಮನ್ನು ಅಲ್ಲಾಡಲು ಬಿಡುವುದಿಲ್ಲ.

ಬಿಟ್ಟುಬಿಡದೇ ಸುರಿದ ಮಳೆಯಲ್ಲಿ ನೆನೆದ ಜಾನಕಿ ಜ್ವರದಲ್ಲಿ ಕೊನೆಯುಸಿರೆಳೆದಾಗ, ಬೆಂಕಿ ನವಾಬನಾಡುವ ಮಾತು ಕಣ್ಣಾಲಿಗೆಯನ್ನು ತುಂಬಿಸುತ್ತದೆ. ಪ್ರೀತಿ ಕಳೆದುಕೊಂಡ ಶಾಮನ ಮೌನ ನಮ್ಮನ್ನೂ ಆವರಿಸುತ್ತದೆ. ನಾಟಕದ ಮುಗಿದ ನಂತರವೂ ಶಾಮನ ತುಂಟಾಟ, ಕ್ರೇಜಿನೆಸ್, ರೊಮಾನ್ಸ್, ಮೌನ ಕಾಡುತ್ತದೆ. ಶಾಮನಂತಹ ಜೀವದ ಗೆಳೆಯಬೇಕು ಅನಿಸುತ್ತದೆ. ಒಟ್ಟಿನಲ್ಲಿ ನಗಿಸುತ್ತಲೇ ಜೀವನವನ್ನು ತೆರೆದಿಡುವ “ಪಾರ್ಶ್ವ ಸಂಗೀತ” ಅದ್ಭುತವೇ ಸರಿ.

Rangavalli Facebook Page

6 thoughts on “ಬೆಸ್ಟ್ ನಾಟಕ: ಪಾರ್ಶ್ವ ಸಂಗೀತ-ಶಾಮನ ಧ್ಯಾನ

 1. Raviprasad

  ನಮಸ್ಕಾರ ಶ್ರೀಲಕ್ಷ್ಮಿಯವರೆ…

  ಪಾರ್ಶ್ವಸಂಗೀತ ಕುರಿತು ತಾವು ಬರೆದ ಲೇಖನ ಓದಿ ಬಹಳ ಸಂತಸವಾಯಿತು. ನಾಟಕದ ಪ್ರತಿ ಕ್ಷಣವನ್ನು ತಾವು ಗ್ರಹಿಸಿರುವ ರೀತಿ ಅದ್ಭುತ. ನಿಮ್ಮ ಬರವಣಿಗೆಯನ್ನು ಅವಲೋಕಿಸಿದರೆ ನಾಟಕ ತಮ್ಮ ಮೇಲೆ ಬೀರಿರುವ ಪರಿಣಾಮವನ್ನು ಮಾತುಗಳಲ್ಲಿ ಹಿಡಿದಿಡುವುದು ಕಷ್ಟಸಾಧ್ಯವೇ ಸರಿ. ಈ ನಾಟಕವನ್ನು ಕಣ್ಣೆದುರು ಕಟ್ಟಿಕೊಟ್ಟ ಕಲಾವಿದರ ಮಾತೃಸಂಸ್ಥೆಯ ಹೆಸರನ್ನು ತಾವು ಎಲ್ಲಿಯೂ ಉಲ್ಲೇಖಿಸದೆ ಇರುವುದು ದುರದೃಷ್ಟಕರ ಎಂದೇ ನಾನು ಭಾವಿಸುತ್ತೇನೆ. ನಿಮ್ಮೆದುರು ಅದ್ಭುತ ನಾಟಕವನ್ನು ಅಭಿನಯಿಸಿದ ಕಲಾವಿದರೆಲ್ಲರೂ ರಂಗವಲ್ಲಿಯ ಸದಸ್ಯರು. ಉತ್ತಮ ಗುಣಮಟ್ಟದ ನಾಟಕ ನಿರ್ಮಾಣ ಮಾಡಿರುವ ಸಂಸ್ಥೆಯ ಹೆಸರನ್ನು ಬಿಡುವುದು ಎಷ್ಟು ಸರಿ?

  ರಂಗವಲ್ಲಿ ಸಂಸ್ಥೆ ಕಳೆದ 12 ವರ್ಷಗಳಲ್ಲಿ ಇದೇ ಗುಣಮಟ್ಟದ
  13 ನಾಟಕಗಳನ್ನು ಮಾತ್ರ ನಿರ್ಮಾಣ ಮಾಡಿದೆಯಾದರೂ 5೦೦ಕ್ಕೂ
  ಹೆಚ್ಚು ಮರುಪ್ರದರ್ಶನಗಳನ್ನು ರಂಗಾಸಕ್ತರಿಗೆ ನೀಡಿದೆ.
  ಉಣಬಡಿಸಿದೆ.

  Reply
  1. Praveen Chandra Puttur

   ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಮಾಹಿತಿ ಪರಿಷ್ಕರಿಸಲಾಗಿದೆ. ಪ್ರೀತಿಯಿಂದ- ಕರ್ನಾಟಕ ಬೆಸ್ಟ್.ಕಾಂ

   Reply
  2. Subbu nadagouda

   Namaskara,
   Shri lakshmi hoskoppa avara lekhanavannu nanu kooda facebook nalli odiddene mattu avaru “rangavalli samte”yannu avara barahadalli ullekisiddare.adare ee website nalli adu barade iddudu vishadaniya.bahushaha avara barahavannu websitege upload madabekadare miss aagirabahudu.

   Reply
 2. Nandini

  ನಿನ್ನೆ ನನ್ನ ಆತ್ಮೀಯರೊಂದಿಗೆ ಈ ನಾಟಕ ನೋಡಿ ಮನಸಿಗೆ ತುಂಬಾ ಸಂತೋಷ ಆಯಿತು. ಪ್ರತಿಯೊಬ್ಬ ಕಲಾವಿದನಿಗೂ ನಮ್ಮ ಅಭಿನಂದನೆಗಳು. ನವರಸ ಭರಿತವಾದ ನಾಟಕ. ಬೆಂಕಿ ನವಾಬ ಮತ್ತು ಶಾಮಾ ಚಿಕ್ಕಪ್ಪನಿಗೆ ವಿಶೇಷ ಚಪ್ಪಾಳೆ. ರಂಗವಲ್ಲಿ ತಂಡಕ್ಕೆ ಶುಭವಾಗಲಿ.
  ನಂದಿನಿ ಲಿಂಗೇಶ್ ಬಾಬು

  Reply
  1. Praveen Chandra Puttur

   ಕರ್ನಾಟಕ ಬೆಸ್ಟ್ ಗೆ ಭೇಟಿ ನೀಡಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು

   Reply

Leave a Reply

This site uses Akismet to reduce spam. Learn how your comment data is processed.