ಕಡಿಮೆ ಅವಧಿಯಲ್ಲಿ ಮಾಡಿ ರುಚಿಕರ ಅಕ್ಕಿರೊಟ್ಟಿ

Bisibele bath recipe kannada

ಅಕ್ಕಿರೊಟ್ಟಿ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ ಅಲ್ವಾ?. ಆದರೆ ಮಾಡೋದಕ್ಕೆ ತುಂಬಾ ಕಷ್ಟವೆಂದು ಸುಮ್ಮನಾಗುತ್ತೇವೆ. ಹೆಚ್ಚಿನ ಜನರಿಗೆ ಈ ಅಕ್ಕಿ ರೊಟ್ಟಿ ಮಾಡುವುದೆಂದರೆ ಒಂದು ದೊಡ್ಡ ಯಜ್ಞ ಮಾಡಿದವರ ಹಾಗೇ ಮುಖ ಮಾಡುತ್ತಾರೆ. ಯಾಕೆಂದರೆ ಈ ಅಕ್ಕಿ ರೊಟ್ಟಿಯನ್ನು ಮಾಡುವುದಕ್ಕೆ ಬಹಳ ಸಮಯ ಬೇಕಾಗುತ್ತದೆ ಎಂದು ಇದರ ಉಸಾಬರಿಗೆ ಹೋಗುವುದಿಲ್ಲ.

ಇನ್ನು ಈ ರೊಟ್ಟಿ ಹದ ತಪ್ಪಿ ದಪ್ಪಗಾದರೆ ಮತ್ತೆ ತಿನ್ನುವುದಕ್ಕೆ ಕಷ್ಟ. ಹಾಗಾಗಿ ತೆಳು ಮಾಡುವುದು ಒಂದು ಕಷ್ಟವಾದರೆ ಹೆಚ್ಚಿನ ಸಮಯ ಹಿಡುತ್ತದೆ ಎನ್ನುವುದು ಇನ್ನೊಂದು ಸಮಸ್ಯೆ. ಇದಕ್ಕೆಲ್ಲಾ ಇಲ್ಲಿದೆ ನೋಡಿ ಒಂದು  ಪರಿಹಾರ. ಕಡಿಮೆ ಅವಧಿಯಲ್ಲಿ ರುಚಿಕರವಾದ ಅಕ್ಕಿರೊಟ್ಟಿ ಮಾಡಿ ಸವಿಯಿರಿ.

ಅಕ್ಕಿ ರೊಟ್ಟಿ ಮಾಡುವುದಕ್ಕೆ ಏನೇನು ಸಾಮಾಗ್ರಿ ಬೇಕು ಎಂಬುದನ್ನು ನೋಡೋಣ.

ಮೊದಲಿಗೆ 2 ಕಪ್ ಅಕ್ಕಿ ಹಿಟ್ಟು ತಗೊಳ್ಳಿ.1/2 ಕಪ್ ಸಣ್ಣಗೆ ಕತ್ತರಿಸಿಟ್ಟುಕೊಂಡ ಈರುಳ್ಳಿ, ಕ್ಯಾರಟ್ ತುರಿ ಒಂದು ಅರ್ಧ ಕಪ್, ¼ ಕಪ್ ಸೌತೆಕಾಯಿ, ಸಬ್ಬಸಿಗೆ ಸೊಪ್ಪು-ಕಾಲು ಕಪ್, ಹಸಿಮೆಣಸಿನಕಾಯಿ- ಒಂದು ದೊಡ್ಡದ್ದು, ಉಪ್ಪು ನಿಮ್ಮ ರುಚಿಗೆ ತಕ್ಕಹಾಗೇ ಹಾಕಿಕೊಳ್ಳಿ.

ಇವಿಷ್ಟು ಸಾಮಾಗ್ರಿಗಳನ್ನು ರೆಡಿ ಮಾಡಿಟ್ಟುಕೊಳ್ಳಿ. ಈಗ ರೊಟ್ಟಿ ತಯಾರಿ ಮಾಡೋಣ.

ಕತ್ತರಿಸಿಟ್ಟುಕೊಂಡ ಈರುಳ್ಳಿ, ಸೌತೆಕಾಯಿ, ಸಬ್ಬಸಿಗೆ ಸೊಪ್ಪು, ತುರಿದ ಕ್ಯಾರೆಟ್, ಹಸಿಮೆಣಸು, ಸೌತೆಕಾಯಿ, ಉಪ್ಪು ಇವನ್ನೆಲ್ಲವನ್ನು ಒಂದು ಅಗಲವಾದ ಪಾತ್ರೆಗೆ ಹಾಕಿಕೊಂಡು ಕೈಯಿಂದ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇವುಗಳನ್ನು ಹಿಸುಕಿದಾಗ ನೀರು ಬಿಡುತ್ತದೆ. ಇನ್ನು ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಅಕ್ಕಿಹಿಟ್ಟನ್ನು ಸೇರಿಸಿ. ಹಿಟ್ಟು ಗಟ್ಟಿಯಾಗಿದ್ದರೆ ನೀರನ್ನು ಬೇಕಾದರೂ ಸೇರಿಸಬಹುದು. ಈ ಮಿಶ್ರಣ ಚಪಾತಿ ಹಿಟ್ಟಿನ ಹದಕ್ಕೆ ಬಂದರೆ ಸಾಕು. ಒಂದು ವೇಳೆ ಈ ಮಿಶ್ರಣ ನೀರಾದರೆ ಸ್ವಲ್ಪ ಹಿಟ್ಟನ್ನು ಸೇರಿಸಿಕೊಳ್ಳಲೂ ಬಹುದು. ಕೈಗೆ ತುಸು ಎಣ್ಣೆ ಸವರಿಕೊಂಡು ಈ ಹಿಟ್ಟಿನ ಮಿಶ್ರಣವನ್ನು ಲಿಂಬೆ ಹಣ್ಣಿನ ಗಾತ್ರದಷ್ಟು ಉಂಡೆ ಮಾಡಿಕೊಳ್ಳಿ.

ಈಗ ಮುಖ್ಯವಾದ ಹಂತಕ್ಕೆ ಬಂದಿದ್ದೇವೆ. ನಿಮ್ಮ ತೋಟದಲ್ಲಿ ಬಾಳೆ ಎಲೆ ಇದ್ದರೆ ಅದನ್ನು ತಂದು ಚೆನ್ನಾಗಿ ತೊಳೆದು ದಂಟು ತೆಗೆದು ಕತ್ತರಿಸಿಕೊಳ್ಳಿ. ಅದಕ್ಕೆ ಎಣ್ಣೆ ಸವರಿ ಈ ಉಂಡೆ ಇಟ್ಟು ತೆಳುವಾಗಿ ರೊಟ್ಟಿ ತಟ್ಟಿರಿ. ಆಮೇಲೆ ಕಾದ ಕಾವಲಿಗೆ ಎಲೆಯ ಸಮೇತವಾಗಿ ರೊಟ್ಟಿಯನ್ನು ಮೇಲೆ ಕವಚು ಹಾಕಿ.  ನಿಧಾನಕ್ಕೆ ಎಲೆಯನ್ನು ತೆಗೆಯರಿ. ರೊಟ್ಟಿಯನ್ನು ಎರಡು ಬದಿ ಹದವಾಗಿ ಬೇಯಿಸಿ. ಒಂದು ವೇಳೆ ಬಾಳೆ ಎಲೆ ಸಿಗದೇ ಇದ್ದರೆ ಅಂಗಡಿಯಲ್ಲಿ ಬಟರ್ ಪೇಪರ್ ಸಿಗುತ್ತದೆ ಅದರಲ್ಲಿಯೂ ಕೂಡ ನೀವು ಮಾಡಬಹುದು. ಕತ್ತರಿಸಿದ ಹಾಲಿನ ಪ್ಯಾಕ್, ಎಣ್ಣೆಯ ಪ್ಯಾಕ್ ಗಳಲ್ಲಿಯೂ ಕೆಲವರು ಮಾಡುತ್ತಾರೆ ಆದರೆ ಅದು ಕಾವಲಿಯ ಬಿಸಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಬಾಳೆ ಎಲೆ ಅಥವಾ ಬಟರ್ ಪೇಪರ್ ನಲ್ಲಿ ಮಾಡಬಹುದು. ಈ ರೊಟ್ಟಿ ಬಿಸಿಯಾಗಿರುವಾಗ ಕಾಯಿ ಚಟ್ನಿ ಇಲ್ಲವೇ ತುಪ್ಪದ ಜತೆ ಸವಿದರೆ ಆ ಸುಖವೇ ಬೇರೆ.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 
ನಮ್ಮ ಇಮೇಲ್ ವಿಳಾಸ: bpchand@gmail.com