ಬೆಸ್ಟ್ ರೆಸಿಪಿ: ಮೊಳಕೆ ಬರಿಸಿದ ಹುರುಳಿ ಕಾಳಿನ ತೊಕ್ಕು

Bisibele bath recipe kannada

ಮೊಳೆತ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಲಾಡ್ ಮಾಡುವಾಗ ಈ ಕಾಳುಗಳನ್ನು ಹಾಕಿದರೆ ಕೆಲವು ಮಕ್ಕಳು ತಿನ್ನುವುದಿಲ್ಲ. ಹಾಗಾಗಿ ಇದನ್ನು ತೊಕ್ಕು ಮಾಡುವ ಮೂಲಕ ಅನ್ನ ಅಥವಾ ಚಪಾತಿ ಜತೆ ಸವಿಯಬಹುದು. ಬಿಸಿ ಬಿಸಿ ಅನ್ನದ ಜತೆ ತೊಕ್ಕು ತಿಂದರೆ ಎರಡು ತುತ್ತು ಅನ್ನ ಜಾಸ್ತಿಯೇ ಹೊಟ್ಟೆಗಿಳಿಯುತ್ತದೆ. ನಾನಿಂದು ಮೊಳಕೆ ಬರಿಸಿದ ಹುರುಳಿಕಾಳಿನ ತೊಕ್ಕು ಮಾಡುವುದರ ಕುರಿತು ಹೇಳಲಿದ್ದೇನೆ ನೋಡಿ.

ಅಂದ ಹಾಗೇ, ತೊಕ್ಕು ಮಾಡುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ½ ಕಪ್ ಮೊಳಕೆ ಬರಿಸಿದ ಹುರುಳಿಕಾಳು. 2 ಈರುಳ್ಳಿ ಹದ ಗಾತ್ರದ್ದು ತೆಗೆದುಕೊಳ್ಳಿ. ಹಾಗೇ ಒಂದು ಟೊಮೆಟೊ, ಸ್ವಲ್ಪ ಕೊತ್ತಂಬರಿ ಸೊಪ್ಪು. ಇನ್ನು ಮಸಾಲೆಗೆ ಏನೇನು ಬೇಕು ಎಂದರೆ, ಕಾಲು ಕಪ್ ತೆಂಗಿನ ತುರಿ, 1 ಚಮಚ ಜೀರಿಗೆ, ½ ಚಮಚ ಕಾಳು ಮೆಣಸು, ಒಣಮೆಣಸಿನಕಾಯಿ 6, ಈರುಳ್ಳಿ-1 ದೊಡ್ಡದ್ದು ತೆಗೆದುಕೊಳ್ಳಿ (ಕತ್ತರಿಸಿಕೊಳ್ಳಿ), ಬೆಳ್ಳುಳ್ಳಿ-3 ಎಸಳು, 1 ಚಮಚ ಕೊತ್ತಂಬರಿ, ಚಿಕ್ಕ ತುಂಡು ಚಕ್ಕೆ.

ಹುರುಳಿ ಕಾಳನ್ನು ಚೆನ್ನಾಗಿ ತೊಳೆದು ಒಂದು ರಾತ್ರಿ ನೆನೆ ಹಾಕಿ ಇಡಿ. ಮರುದಿನ ಹುರುಳಿ ಕಾಳಿನ ನೀರನ್ನು ಚೆಲ್ಲಿ ಒಂದು ತೆಳುವಾದ ಬಟ್ಟೆಯಲ್ಲಿ ಹಾಕಿ ಬಿಗಿಯಾಗಿ ಗಂಟು ಕಟ್ಟಿ. ಅದು ನಿಧಾನಕ್ಕೆ ಮೊಳಕೆ ಬರುತ್ತದೆ. ರಾತ್ರಿ ಇದನ್ನು ಬಟ್ಟೆಯಿಂದ ತೆಗೆದು ಬೇರೊಂದು ಪಾತ್ರೆಗೆ ಹಾಕಿ ನೀರು ಹಾಕಿ ನೆನೆಯಲು ಬಿಡಿ. ಮುರುದಿನಕ್ಕೆ ಚೆನ್ನಾಗಿ ಮೊಳೆತ ಹುರುಳು ಕಾಳು ಸಿದ್ಧವಾಗುತ್ತದೆ. ಇನ್ನೇನಿದ್ದರೂ ತೊಕ್ಕು ಮಾಡುವ ಕೆಲಸ.

ಗ್ಯಾಸ್ ಮೇಲೆ ಒಂದು ಪಾತ್ರೆ ಇಡಿ. ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ. ಮೇಲೆ ಮಸಾಲೆಗೆ ಸಿದ್ಧಪಡಿಸಿಕೊಂಡ ನೀರುಳ್ಳಿ, ಚಕ್ಕೆ, ಜೀರಿಗೆ, ಕೊತ್ತಂಬರಿ, ಬೆಳ್ಳುಳ್ಳಿ, ತೆಂಗಿನತುರಿ, ಕಾಳು ಮೆಣಸು ಎಲ್ಲವನ್ನೂ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಇದನ್ನು ರುಬ್ಬುವ ಕೆಲಸ. ಹುರಿದಿಟ್ಟುಕೊಂಡ ಸಾಮಾಗ್ರಿಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ. ಸ್ವಲ್ಪ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಟ್ಟುಕೊಳ್ಳಿ. ನಂತರ ಒಂದು ಕುಕ್ಕರ್ ಗೆ ಈ ಮೊಳಕೆ ಬರಿಸಿದ ಹುರುಳಿ ಕಾಳು ಹಾಕಿ. ಎರಡು ಕಪ್ ನೀರು ಸೇರಿಸಿ 4ರಿಂದ 5 ವಿಷಲ್ ಬರಿಸಿ. ಕುಕ್ಕರ್ ತಣ್ಣಗಾದ ನಂತರ ಈ ಬೆಂದ ಹುರುಳಿಕಾಳನ್ನು ಒಂದು ದೊಡ್ಡ ಲೋಟ ಇಲ್ಲವೇ, ಮ್ಯಾಶರ್ ಸಹಾಯದಿಂದ ಸ್ವಲ್ಪ ಮೆತ್ತಗೆ ಮಾಡಿಕೊಳ್ಳಿ.  ಇದಾದ ನಂತರ ಒಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಸಾಸಿವೆ ಹಾಕಿ. ಸಾಸಿವೆ ಚಟಪಟ ಎಂದ ಕೂಡಲೇ ಕರಿಬೇವು, ಈರುಳ್ಳಿ ಹಾಕಿ. ಈರುಳ್ಳಿ ಗುಲಾಬಿ ವರ್ಣಕ್ಕೆ ತಿರುಗಿದ ನಂತರ ಟೊಮೆಟೊ ಹಾಕಿ. ಟೊಮೆಟೊ ಬೇಯುವಾಗ ತುಸು ಉಪ್ಪು ಹಾಕಿದರೆ ಬೇಗನೇ ಬೆಯುತ್ತದೆ. ಆಮೇಲೆ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ ಚೆನ್ನಾಗಿ ಕುದಿಸಿ. ಕಾಳು ಸೇರಿಸಿ ಮತ್ತೊಮ್ಮೆ ಕುದಿಸಿ. ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಬಿಸಿ ಅನ್ನದ ಜತೆ, ಚಪಾತಿ ಜತೆ ಹೇಳಿ ಮಾಡಿಸಿದ ತೊಕ್ಕು ಇದು.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 

ನಮ್ಮ ಇಮೇಲ್ ವಿಳಾಸ: bpchand@gmail.com

ಇದನ್ನೂ ಓದಿರಿ:

ಪಟಾಫಟ್ ಮಾಡಿ, ಬಾಯಲ್ಲಿ ನೀರೂರಿಸುವ ಹುಣಸೆ ತೊಕ್ಕು