ರೆಸಿಪಿ: ರುಚಿಕರ ಸಬ್ಬಕ್ಕಿ ಕಿಚಡಿ ಹೀಗೆ ಮಾಡಿ

By | August 31, 2018
Bisibele bath recipe kannada

ಕಿಚಡಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತಿಂಡಿ. ಆದರೆ ಕೆಲವರಿಗೆ ಇದನ್ನು ಮಾಡುವುದು ಹೇಗೆ ಎಂಬ ಚಿಂತೆಯೂ ಕಾಡುತ್ತಿರುತ್ತದೆ. ರುಚಿ ನೋಡಿರುವವರಿಗೆ ಇದನ್ನು ಮಾಡುವ ವಿಧಾನದ ಬಗ್ಗೆ ತಿಳಿಯಬೇಕೆನಿಸುವುದು ಸಹಜ, ಏಕೆಂದರೆ ಈ ಕಿಚಡಿ ಬೆಳಗಿನ ತಿಂಡಿಯಾಗಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ನಿಮಗೂ ಕೂಡ ಕಿಚಡಿ ಮಾಡುವುದು ಹೇಗೆ ಎಂಬ ಕುತೂಹಲವಿರಬಹುದಲ್ಲವೇ? ಇದನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ರೆಸಿಪಿ ಇಲ್ಲಿದೆ ನೋಡಿ.

ಹೆಸರುಬೇಳೆ ಕಿಚಡಿ, ರೈಸ್ ಕಿಚಡಿಯನ್ನೆಲ್ಲಾ ನೀವು ಸವಿದಿರುತ್ತೀರಿ. ನಾನಿಲ್ಲಿ ಸಾಬಕ್ಕಿ ಕಿಚಡಿ ಮಾಡುವುದರ ಕುರಿತು ಮಾಹಿತಿ ನೀಡಿದ್ದೇನೆ. ಕಡಿಮೆ ಸಾಮಾಗ್ರಿಯಲ್ಲಿ ಫಟಾಫಟ್ ರೆಡಿಯಾಗುವ ಈ ಸಾಬಕ್ಕಿ ಕಿಚಡಿಯನ್ನು ಮಾಡಿ ಮನೆ ಮಂದಿಯೆಲ್ಲಾ ಸವಿಯಿರಿ.

ಈ ಸಾಬಕ್ಕಿ ಕಿಚಡಿಗೆ ಬೇಕಾಗುವ ಸಾಮಾಗ್ರಿಗಳನ್ನು ನೋಡೋಣ ಬನ್ನಿ. ಮೊದಲಿಗೆ ಅರ್ಧ ಕಪ್ ಸಾಬಕ್ಕಿ ತೆಗೆದುಕೊಳ್ಳಿ. ನಂತರ 1 ದೊಡ್ಡ ಚಮಚ ತುಪ್ಪ, 1 ದೊಡ್ಡ ಚಮಚ ಕಡಲೆಬೀಜ, ಸ್ವಲ್ಪ ಕೊತ್ತಂಬರಿ ಸೊಪ್ಪು, ಒಂದು ಚಿಕ್ಕ ಚಮಚ ಲಿಂಬೆ ರಸ, 1 ಚಮಚ ಸಕ್ಕರೆ, ಒಂದು ಚಿಕ್ಕ ಚಮಚದಷ್ಟು ಮೆಣಸಿನಕಾಯಿ ಪುಡಿ ತೆಗೆದುಕೊಳ್ಳಿ. ಹಾಗೇ ರುಚಿಗೆ ತಕ್ಕಷ್ಟು ಉಪ್ಪು.

ಇನ್ನು ಒಗ್ಗರಣೆಗೆ ಏನೇನು ಬೇಕು ಎಂಬುದನ್ನು ರೆಡಿಮಾಡಿಕೊಳ್ಳೋಣ. ಒಂದು ಚಿಕ್ಕ ಚಮಚದಷ್ಟು ಜೀರಿಗೆ, ಹಾಗೇ ಅರಿಸಿನ ಪುಡಿ.

ಇನ್ನು ಕಿಚಡಿ ಮಾಡೋಣ. ಸಾಬಕ್ಕಿಯನ್ನು ಶುದ್ಧವಾದ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಈ ಸಾಬಕ್ಕಿಯನ್ನು ಒಂದು ಪಾತ್ರೆಗೆ ಹಾಕಿ ನೀರಿನಲ್ಲಿ ನೆನೆಹಾಕಿ. ಈ ನೀರಿಗೆ ಸಕ್ಕರೆ, ಉಪ್ಪು ಮತ್ತು ಲಿಂಬೆ ರಸ ಹಾಕಿ ಚೆನ್ನಾಗಿ ಕಲಕಿ 2 ಗಂಟೆ ಹೊತ್ತು ಮುಚ್ಚಿ ಇಡಿ. ನಂತರ ಕಡಲೇಬೀಜವನ್ನು ಹುರಿದು ಅದರ ಸಿಪ್ಪೆ ತೆಗೆದುಕೊಳ್ಳಿ

ನಂತರ. ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ನೆನೆಸಿಟ್ಟ ಸಾಬಕ್ಕಿಗೆ ಕಡಲೆಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣಗೊಳಿಸಿ.ನಂತರ ಒಂದು ಅಗಲವಾದ ಬಾಣಲೆಯನ್ನು ಒಲೆಯ ಮೇಲಿಡಿ. ಅದು ಕಾದ ಮೇಲೆ ತುಪ್ಪ ಹಾಕಿ. ನಂತರ ಅದಕ್ಕೆ ಸಾಸಿವೆ ಹಾಕಿ ಅದ ಪಟಪಟನೆ ಸಿಡಿದ ಕೂಡಲೇ ಜೀರಿಗೆ ಹಾಕಿ. ಇದಕ್ಕೆ ಮೆಣಸಿನ ಪುಡಿ, ಅರಿಶಿನವನ್ನು ಸೇರಿಸಿ. ಬೆಂಕಿಯನ್ನು ಕಡಿಮೆ ಉರಿಯಲ್ಲಿ ಇಟ್ಟುಕೊಳ್ಳಿ. ಇಲ್ಲ ಅಂದ್ರೆ ಮೆಣಸಿನ ಪುಡಿ ಸೀದು ಹೋಗುತ್ತದೆ.

ನಂತರ ಇದಕ್ಕೆ ನೆನೆಸಿಟ್ಟುಕೊಂಡ ಸಾಬಕ್ಕಿ ಸೇರಿಸಿ. ಸಣ್ಣ ಉರಿಯಲ್ಲಿ ಬೇಯಿಸಿ. ಸ್ವಲ್ಪ ಹೊತ್ತು ಬಿಟ್ಟು ಗ್ಯಾಸ್ ಆಫ್ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಸಾಬಕ್ಕಿ ಕಿಚಡಿಯನ್ನು ಅಲಂಕರಿಸಿ. ರುಚಿಯಾದ ಸಾಬಕ್ಕಿ ಕಿಚಡಿಯನ್ನು ಸವಿಯಿರಿ.

[qcopd-directory mode=”one” list_id=”3926″]

Leave a Reply

This site uses Akismet to reduce spam. Learn how your comment data is processed.