ಪುದೀನಾ ರೈಸ್ ಬಾತ್ ರೆಸಿಪಿ- ಬೆಳಗಿನ ಉಪಹಾರಕ್ಕೆ ಪುದೀನಾ ಅನ್ನ

Bisibele bath recipe kannada

ಮನೆಗೆ ತರಕಾರಿ ಸೊಪ್ಪು ತರುವಾಗ ಪುದೀನಾ ಕೊತ್ತಂಬರಿಸೊಪ್ಪನ್ನು ತರುತ್ತೇವೆ. ಪುದೀನಾದಿಂದ ಚಟ್ನಿ ಇತ್ಯಾದಿಗಳನ್ನು ಮಾಡುತ್ತೇವೆ ಇದೇ ಪುದೀನಾದಿಂದ ಒಂದೊಳ್ಳೆ ರೈಸ್ ಬಾತ್ ಕೂಡ ಮಾಡಬಹುದು. ಕೆಲವೊಮ್ಮೆ ಬೆಳಿಗ್ಗಿನ ತಿಂಡಿ ಮಾಡುವುದಕ್ಕೆ ಏನೂ ಇಲ್ಲದಾಗ ಈ ಪುದೀನಾದಿಂದ ಒಂದೊಳ್ಳೆ ಉಪಹಾರವನ್ನು ತಯಾರಿಸಿ ಮನೆಮಂದಿಯೆಲ್ಲಾ ಸವಿಯಿರಿ. ಮನೆಯಲ್ಲಿ ನಿನ್ನೆ ಮಾಡಿದ ಅನ್ನ ಉಳಿದಿದ್ದರೆ, ದಿನಾ ಅದೇ ಚಿತ್ರಾನ್ನ, ಲೆಮನ್ ರೈಸ್ ಮಾಡಿ ತಿಂದು ಬೇಜಾರಾಗಿದ್ದರೆ ಈ ಪುದೀನಾ ರೈಸ್ ಅನ್ನು ಒಮ್ಮೆ ಮಾಡಿ ಸವಿಯಿರಿ. ಪುದೀನಾ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.

ಹಾಗಾದರೆ ಇದಕ್ಕೆ ಏನೇನು ಬೇಕು ಎಂಬುದನ್ನು ನೋಡೋಣ ಬನ್ನಿ. 1 ಕಪ್ ಅಕ್ಕಿ, ಅರ್ಧ ಕಟ್ಟು-ಪುದೀನಾ ಸೊಪ್ಪು, ಸಾಸಿವೆ ಸ್ವಲ್ಪ, ತುಪ್ಪ-2 ಚಮಚ, ಈರುಳ್ಳಿ ಒಂದು ದೊಡ್ಡದ್ದು, ಟೊಮೆಟೋ ಸಣ್ಣದಿದ್ದರೆ ಎರಡು ತೆಗೆದುಕೊಳ್ಳಿ ಇಲ್ಲದಿದ್ದರೆ, ದೊಡ್ಡ ಗಾತ್ರದ್ದು ಒಂದು. ಕರಿಬೇವು ಸೊಪ್ಪು. ಶುಂಠಿ ಅರ್ಧ ತುಂಡು, ಹಸಿಮೆಣಸು-2, ಒಣಮೆಣಸು ಒಂದು, ಸ್ವಲ್ಪ ಕೊತ್ತಂಬರಿಸೊಪ್ಪು.

ಮೊದಲಿಗೆ ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರು ಹಾಕಿ ಕುಕ್ಕರ್ ನಲ್ಲಿ ಮೂರು ವಿಷಲ್ ಕೂಗಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಪುದೀನಾ, ಕೊತ್ತಂಬರಿ, ಹಸಿಮೆಣಸು, ಶುಂಠಿ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಬೇಕಿದ್ದರೆ ಸ್ವಲ್ಪ ನೀರನ್ನು ಹಾಕಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ ಹಾಕಿ,ಅದು ಕಾದ ನಂತರ ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಒಣಮೆಣಸು, ಕರಿಬೇವು ಹಾಕಿ. ನೀರುಳ್ಳಿ, ಹಾಕಿ ಅದು ಕೆಂಪಾಗಾದಾಗ ಟೊಮೆಟೋ ಸೇರಿಸಿ ಬಾಡಿಸಿಕೊಳ್ಳಿ.

ಟೊಮೆಟೋ ಬೇಯಿಸುವಾಗ ತುಸು ಉಪ್ಪು ಹಾಕಿ ಟೊಮೆಟೊ ಬೇಗ ಬೇಯುತ್ತದೆ. ನಂತರ ಅದಕ್ಕೆ ಈ ಮಿಕ್ಸಿ ಮಾಡಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕದಡಿಸಿ. ಪುದೀನಾದ ಹಸಿ ವಾಸನೆ ಹೋದ ನಂತರ ಅನ್ನ ಸೇರಿಸಿ ಚೆನ್ನಾಗಿ ಕಲಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಬೇಗನೆ ಸಿದ್ಧವಾಗುವ ಈ ಖಾದ್ಯ ಬೆಳಿಗ್ಗಿನ ಉಪಹಾರಕ್ಕೂ ಸೈ, ರಾತ್ರಿಯ ಊಟಕ್ಕೂ ಸೈ. ಆರೋಗ್ಯಕ್ಕೂ ಒಳ್ಳೆಯದು.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 

ನಮ್ಮ ಇಮೇಲ್ ವಿಳಾಸ: bpchand@gmail.com