ರವಾ ಇಡ್ಲಿ- ರುಚಿಕರ, ಆರೋಗ್ಯಕರ ಬ್ರೇಕ್ ಫಾಸ್ಟ್ ರೆಸಿಪಿ

Bisibele bath recipe kannada

ರವಾ ಇಡ್ಲಿ ಇದು ಆರೋಗ್ಯಕರವಾದ ತಿಂಡಿಯಾಗಿದ್ದು ಬೆಳಗಿನ ಉಪಹಾರಕ್ಕೆ ಅತ್ಯಂತ ಸೂಕ್ತ. ಇದನ್ನು ಮಕ್ಕಳು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಾರೆ. ಚಟ್ನಿ ಮತ್ತು ಸಾಂಬಾರ್ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಏನು ತಿಂಡಿ ಮಾಡಲಿ ಎಂಬ ಯೋಚನೆಯಲ್ಲಿದ್ದವರಿಗೆ, ಮನೆಗೆ ದಿಡೀರ್ ಎಂದು ಯಾರಾದರೂ ಅತಿಥಿಗಳು ಬಂದಾಗ  ಈ ರವಾ ಇಡ್ಲಿ ಮಾಡಬಹುದು. ಇದನ್ನು ತಯಾರಿಸುವುದೂ ಸುಲಭ, ರುಚಿಕರ ಹಾಗೂ ಆರೋಗ್ಯಕರ ಕೂಡ ಹೌದು.  ಇಡ್ಲಿ, ದೋಸೆ, ತಿಂದು ಬೇಜಾರಾದವರು ಈ ರವಾ ಇಡ್ಲಿ ಮಾಡಿ ನೋಡಿ.

ಇನ್ನು ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ಏನೇನು ಗೊತ್ತಾ? ಇಲ್ಲಿದೆ ನೋಡಿ. ಒಂದು ಕಪ್ ನಷ್ಟು ಸಣ್ಣ ರವೆ ತೆಗೆದುಕೊಳ್ಳಿ. ಮೊಸರು1/4 ಕಪ್ ಬೇಕು. ಆಮೇಲೆ ಹಸಿಮೆಣಸಿನ ಕಾಯಿ  3 ಸಣ್ಣಗೆ ಕತ್ತರಿಸಿಕೊಳ್ಳಿ. ಸಣ್ಣಗೆ ಹಚ್ಚಿಕೊಂಡ ಹಸಿ ಶುಂಠಿ ಒಂದು ಚಿಕ್ಕ ತುಂಡು, ಕ್ಯಾರೆಟ್ ತುರಿ ಕಾಲು ಕಪ್ ತೆಗೆದುಕೊಳ್ಳಿ, ಸಾಸಿವೆ-ಕಾಲು ಚಮಚ, ಕರಿಬೇವಿನ ಎಸುಳು-8 ಎಸುಳು, ಸಣ್ಣಗೆ ಕತ್ತರಿಸಿಕೊಂಡ ಗೋಡಂಬಿ ಸ್ವಲ್ಪ, ಉದ್ದೀನಬೇಳೆ-1 ಚಮಚ, ಇಂಗು ಚಿಟಿಕೆಯಷ್ಟು, ಹಾಗೇ ಎಣ್ಣೆ ಒಂದು ಚಮಚ, ತುಪ್ಪ ಅರ್ಧ ಚಮಚ.ರುಚಿಗೆ ತಕ್ಕಷ್ಟು ಉಪ್ಪು.

ಮೊದಲು ರವೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಗೆ ಹುರಿದಿಟ್ಟುಕೊಂಡ ರವೆ ಹಾಕಿ ಅದಕ್ಕೆ ರವೆ, ಉಪ್ಪು, ಮೊಸರು, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಗಂಟಿಲ್ಲದಂತೆ ಕಲಸಿ.ಜಾಸ್ತಿ ನೀರು ಹಾಕಬೇಡಿ. ಇಡ್ಲಿ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಿ. ನಂತರ ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಒಗ್ಗರಣೆಗೆ ತಯಾರು ಮಾಡಿಕೊಳ್ಳಿ. ಚಿಕ್ಕ ಪಾತ್ರೆಗೆ ತುಪ್ಪ ಹಾಕಿ ನಂತರ ಸಾಸಿವೆ, ಕರಿಬೇವು, ಉದ್ದಿನಬೇಳೆ, ಇಂಗು, ಗೋಡಂಬಿ, ಶುಣಠಿ ಹಾಕಿ ಒಗ್ಗರಣೆ ಸಿದ್ಧಪಡಿಸಿಕೊಳ್ಳಿ. ನಂತರ ಇದನ್ನು ರವೆಯ ಮಿಶ್ರಣಕ್ಕೆ ಸೇರಿಸಿ. ಆಮೇಲೆ ಅದಕ್ಕೆ ತುರಿದಿಟ್ಟುಕೊಂಡ ಕ್ಯಾರೆಟ್ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಹಿಟ್ಟು ದಪ್ಪಗಿದ್ದರೆ ತುಸು ನೀರು ಸೇರಿಸಿ.ಇಡ್ಲಿ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿ ನಂತರ ಈ ಮಿಶ್ರಣವನ್ನು ಹಾಕಿ 10 ನಿಮಿಷ ಬೇಯಿಸಿ. ಈಗ ಬಿಸಿ ಬಿಸಿಯಾದ ಇಡ್ಲಿ ರೆಡಿ. ಇಡ್ಲಿಯೊಂದಿಗೆ ಬಿಸಿ ಸಾಂಬಾರ್ ಇಲ್ಲವೇ ಚಟ್ನಿ ಉತ್ತಮ ಕಾಂಬಿನೇಶನ್ ಆಗಿದೆ. ಈ ವಿಶಿಷ್ಟ ರೆಸಿಪಿಯನ್ನು ನೀವೂ ಟ್ರೈ ಮಾಡಿ

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 

ನಮ್ಮ ಇಮೇಲ್ ವಿಳಾಸ: bpchand@gmail.com