ಕರ್ನಾಟಕ ಬೆಸ್ಟ್ ರೆಸಿಪಿ- ಹೀರೆಕಾಯಿ ಹುಳಿ ತೊವ್ವೆ

Image Credit: krushikendra.com Image Credit: krushikendra.com

ಹೀರೆಕಾಯಿಯಿಂದ ಬೋಂಡಾ, ಪಲ್ಯ ಸಾರು ಮಾಡಿದರೆ ಎಷ್ಟು ರುಚಿಕರವಾಗಿರುತ್ತೋ ಹೀರೆಕಾಯಿಯ ಹುಳಿತೊವ್ವೆ ಕೂಡ ಅಷ್ಟೇ ರುಚಿಕರವಾಗಿರುತ್ತೆ. ಇದನ್ನು ಮಾಡುವುದಕ್ಕೂ ತುಂಬ ಕಷ್ಟವಿಲ್ಲ. ನಾರಿನಾಂಶ ಜಾಸ್ತಿ ಇರುವುದರಿಂದ ಹೀರೆಕಾಯಿ ಮಲಬದ್ಧತೆ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ. ಬಿಸಿಬಿಸಿ ಅನ್ನಕ್ಕೆ ಒಂದು ಚಮಚ ತುಪ್ಪ ಹಾಕಿ ಹೀರೆಕಾಯಿ ಹುಳಿ ತೊವ್ವೆ ಬಡಿಸಿಕೊಂಡು ತಿಂದರೆ ಅದರ ಸ್ವಾಧವೇ ಬೇರೆ.

ಹಾಗಾದ್ರೆ ತಡವ್ಯಾಕೆ ಹೀರೆಕಾಯಿ ಹುಳಿತೊವ್ವೆ ಮಾಡೋಣ ಬನ್ನಿ. ಮೊದಲಿಗೆ ಬೇಕಾಗಿರುವ ಸಾಮಾಗ್ರಿಳನ್ನು ನೋಡೋಣ.

ಚೆನ್ನಾಗಿ ಬಲಿತ ಹೀರೆಕಾಯಿ-3 ತೆಗೆದುಕೊಳ್ಳಿ. ದೊಡ್ಡದಿದ್ದರೆ 2 ಸಾಕು. ಹಾಗೇ ಕಾಲು ಕಪ್ ನ್ನಷ್ಟು ತೊಗರಿಬೇಳೆ, ಒಂದು ಸಣ್ಣ ಚೂರು ಚಕ್ಕೆ, ಒಂದು ಮೊಗ್ಗು, ಹುಳಿ-ಒಂದು ಚಿಕ್ಕ ಗಾತ್ರದ್ದು, ಕೊತ್ತಂಬರಿ ಒಂದು ಚಮಚ, ಜೀರಿಗೆ-ಒಂದು ಕಾಲು ಚಮಚ, ಮೆಂತೆ-4 ಕಾಳಿನಷ್ಟಿದ್ದರೆ ಸಾಕು. ಉದ್ದಿನಬೇಳೆ 1 ಚಮಚ, ಕಡಲೇಬೇಳೆ-1 ಚಮಚ.ಹಾಗೇ ಮೆಣಸು-6. ಖಾರ ಜಾಸ್ತಿ ಬೇಕೆನಿಸುವವರು ಜಾಸ್ತಿ ಹಾಕಿಕೊಳ್ಳಬಹುದು. ತೆಂಗಿನಕಾಯಿ ತುರಿ ½ ಕಪ್,ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು. ಬೆಲ್ಲ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ಮೊದಲಿಗೆ ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಮೈಯಲ್ಲಿರುವ ಸಿಪ್ಪೆ ಬೇಕಾದ್ರೆ ಸ್ವಲ್ಪ ಸ್ವಲ್ಪವೇ ತೆಗೆದುಕೊಳ್ಳಿ. ಹೀರೆಕಾಯಿ ಎಳೆತಾಗಿದ್ದರೆ ಸಿಪ್ಪೆ ತೆಗೆಯುವ ಅವಶ್ಯಕತೆ ಇಲ್ಲ. ಆಮೇಲೆ ಹೀರೆಕಾಯಿಯನ್ನು ಚೆಕ್ಕದ್ದಾಗಿ ಕತ್ತರಿಸಿಕೊಳ್ಳಿ. ಸಾಂಬಾರು ಮಾಡುವಾಗ ಕತ್ತರಿಸುವ ರೀತಿಯಲ್ಲಿ. ಹೀರೆಕಾಯಿ, ಬೇಳೆ, ಸ್ವಲ್ಪ ಉಪ್ಪು, ಅರಿಶಿನ ಹಾಕಿ ಕುಕ್ಕರ್ ನಲ್ಲಿ ಎರಡು ವಿಷಲ್ ಬರಿಸಿಕೊಳ್ಳಿ.

ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಮೊಗ್ಗು, ಜೀರಿಗೆ ಕೊತ್ತಂಬರಿ, ಮೆಂತೆ, ಕಡಲೇಬೇಳೆ, ಉದ್ದಿನಬೇಳೆ  ಹಾಕಿ ಹುರಿದುಕೊಳ್ಳಿ. ಮೆಣಸನ್ನು ಹುರಿದುಕೊಳ್ಳಿ. ನಂತರ ಹುರಿದ ಸಾಮಾಗ್ರಿಗಳನ್ನು ಕಾಯಿತುರಿಯೊಂದಿಗೆ ಹುಳಿ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ, ಸಾಸಿವೆ ಹಾಕಿ ಅದು ಚಟಪಟ ಎಂದಾಗ ಕರಿಬೇವು ಹಾಕಿ. ತದನಂತರ ಬೇಯಿಸಿದ ಹೀರೆಕಾಯಿಯನ್ನು ಹಾಕಿ. ಆಮೇಲೆ ಅದಕ್ಕೆ ರುಬ್ಬಿಕೊಂಡ ಮಿಶ್ರಣ ಹಾಕಿ. ಬೆಲ್ಲ, ಉಪ್ಪು ಸೇರಿಸಿ. ಚೆನ್ನಾಗಿ ಕುದಿಸಿ. ಈ ಮಿಶ್ರಣ ದಪ್ಪಗಿದ್ದರೆ ತುಸು ನೀರು ಸೇರಿಸಿ ಕುದಿಸಿ. ಬಿಸಿಬಿಸಿಯಾದ ಅನ್ನದ ಜತೆ ಈ ತೊವ್ವೆ ಸವಿಯಿರಿ.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 

ನಮ್ಮ ಇಮೇಲ್ ವಿಳಾಸ: bpchand@gmail.com

[qcopd-directory mode=”one” list_id=”3926″ style=”simple” item_orderby=”menu_order” column=”1″ enable_embedding=”false” title_font_size=”” subtitle_font_size=”” title_line_height=”” subtitle_line_height=””]