ಚಪಾತಿ ಮಿಕ್ಕಿದೆ ಎಂದು ಚಿಂತಿಸಬೇಡಿ, ರುಚಿಕರವಾದ ಚಪಾತಿ ನೂಡಲ್ಸ್ ತಯಾರಿಸಿ

Bisibele bath recipe kannada

ಚಪಾತಿ ಆರೋಗ್ಯಕ್ಕೆ ತುಂಬಾ ಉತ್ತಮವಾದುದು. ಚಪಾತಿಯನ್ನು ಗೋಧಿಯಿಂದ ತಯಾರಿಸುವುದರಿಂದ ಇದರಲ್ಲಿ ಕೊಬ್ಬನಾಂಶ ಕಡಿಮೆ ಇರುತ್ತೆ ಹಾಗೂ ಹಲವು ಖನಿಜಾಂಶಗಳನ್ನು ಒಳಗೊಂಡಿರುವ ಕಾರಣ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಈ ಚಪಾತಿಯಿಂದ ಸಿಗುತ್ತದೆ. ಇದು ದೇಹದ ತೂಕ ಇಳಿಸಿಕೊಳ್ಳಲು ಕೂಡ ತುಂಬಾ ಸಹಕಾರಿಯಾಗಿದೆ.

ಚಪಾತಿಯನ್ನು ಹೆಚ್ಚಾಗಿ ರಾತ್ರಿ ಸಮಯದಲ್ಲಿ ತಿನ್ನುತ್ತಾರೆ. ಅದರಲ್ಲೂ ತುಂಬಾ ದಪ್ಪ ಇರುವವರು ದೇಹದ ತೂಕ ಇಳಿಸಲು ಹಾಗೂ ರಾತ್ರಿ ಅನ್ನ ತಿಂದರೆ ಸರಿಯಾಗಿ ಜೀರ್ಣ ಆಗದೆ ಇರುವವರು ರಾತ್ರಿ ಚಪಾತಿಯನ್ನು ತಿನ್ನುತ್ತಾರೆ. ಆದರೆ ಎಲ್ಲಾ ತಿಂದು ಮುಗಿದ ಮೇಲೆ ಮಾಡಿದ ಚಪಾತಿ ಮಿಕ್ಕಿದರೆ ಚಿಂತೆಮಾಡಬೇಡಿ. ಯಾಕೆಂದರೆ ಇದರಿಂದ ನೀವು ಚಪಾತಿ ನೂಡಲ್ಸ್ ಮಾಡಬಹುದು. ಅದನ್ನು ತಯಾರಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಚಪಾತಿ ನೂಡಲ್ಸ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು :

ರಾತ್ರಿ ಮಿಕ್ಕುಳಿದ ಚಪಾತಿ ಅಥವಾ ಹೊಸದಾಗಿ ಚಪಾತಿ ಮಾಡಿಕೊಳ್ಳಬಹುದು. ಅದರಲ್ಲಿ 5 ಚಪಾತಿ ತೆಗೆದುಕೊಳ್ಳಿ, 2 ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ, ಸಣ್ಣದಾಗಿ ಹೆಚ್ಚಿದ ಒಂದು ದೊಡ್ಡ ಹಸಿಮೆಣಸಿನಕಾಯಿ, ¼ ಕಪ್ ಬೇಯಿಸಿದ ಬಟಾಣಿ, ಸೋಯಾ ಸಾಸ್ ಸ್ವಲ್ಪ, ತುರಿದ ಕ್ಯಾರೆಟ್ 1, ಕಾಳುಮೆಣಸಿನ ಪುಡಿ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಬೆಳ್ಳುಳ್ಳಿ 4 ಎಸಳು, ಸ್ವಲ್ಪ ಎಣ್ಣೆ, ರುಚಿಗೆ ಬೇಕಾಗುವಷ್ಟು ಉಪ್ಪು.

ತಯಾರಿಸುವ ವಿಧಾನ ಹೇಗೆಂದು ನೋಡೋಣ :

ಮೊದಲಿಗೆ ಚಪಾತಿಯನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾದ ಮೇಲೆ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಬೇಯಿಸಿದ ಬಟಾಣಿ, ತುರಿದ ಕ್ಯಾರೆಟ್ ಹಾಕಿ ಚಿನ್ನಾಗಿ ಫ್ರೈ ಮಾಡಿ. ಅದು ಬೆಂದ ನಂತರ ಹಸಿಮೆಣಸಿನಕಾಯಿ ಹಾಕಿ ಮತ್ತೆ ಚೆನ್ನಾಗಿ ಫ್ರೈ ಮಾಡಿ. ನಂತರ ಈ ಮಿಶ್ರಣಕ್ಕೆ ಕಾಳುಮೆಣಸಿನ ಪುಡಿ, ರುಚಿಗೆ ಬೇಕಾಗುವಷ್ಟು ಉಪ್ಪು, ಸೋಯಾ ಸಾಸ್ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಕತ್ತರಿಸಿಟ್ಟುಕೊಂಡ ಚಪಾತಿ ತುಂಡುಗಳನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ಟೌವ್ ಆಫ್ ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದರೆ ರುಚಿ ರುಚಿಯಾದ ಚಪಾತಿ ನೂಡಲ್ಸ್ ಸವಿಯಲು ಸಿದ್ಧ


ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 


ನಮ್ಮ ಇಮೇಲ್ ವಿಳಾಸ: bpchand@gmail.com