ನಿಮ್ಮನ್ನು ಆರೋಗ್ಯಕರವಾಗಿಸುವ ಮೆಂತ್ಯಕಾಳಿನ ಸಾಂಬಾರ್

ಮೆಂತ್ಯಕಾಳು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಪದಾರ್ಥಗಳಲ್ಲಿ ಒಂದು. ಇದನ್ನು ಪ್ರತಿದಿನ ಬಳಸುತ್ತಾ ಬಂದರೆ ಆರೋಗ್ಯಕರ ಜೀವನ ನಮ್ಮದಾಗುತ್ತದೆ. ಈ ಮೆಂತ್ಯಕಾಳುಗಳಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ನಿಯೊಸಿಸ್, ಪೊಟ್ಯಾಶಿಯಂಗಳಿವೆ. ಇದು ಆರೋಗ್ಯದ ಜೊತೆಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಇಷ್ಟೊಂದು ಆರೋಗ್ಯಕರವಾದ ಮೆಂತ್ಯಕಾಳನ್ನು ಕೆಲವರು ಪ್ರತಿದಿನ ನೆನೆಸಿ ತಿನ್ನತ್ತಾರೆ. ಇನ್ನು ಕೆಲವರು ಅದು ಕಹಿ ಎಂದು ಅದರ ಹತ್ತಿರ ಕೂಡ ಸುಳಿಯುವುದಿಲ್ಲ. ಅಂತವರಿಗೆ ರುಚಿಕರವಾದ, ಆರೋಗ್ಯಕರವಾದ, ತುಂಬಾ ಸುಲಭವಾಗಿ ರೆಡಿಯಾಗುವಂತಹ ಮೆಂತ್ಯ ಕಾಳಿನ ಸಾಂಬಾರ್ ಮಾಡಿ ಕೊಡಿ.

ಈ ಮೆಂತ್ಯಕಾಳಿನ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ:
2 ಅಥವಾ 3 ಚಮಚ ಎಣ್ಣೆ ತೆಗೆದುಕೊಳ್ಳಿ, ಆಮೇಲೆ, ಸಾಸಿವೆ ¼ ಚಮಚ, ಅರಶಿನ ಪುಡಿ ಸ್ವಲ್ಪ, ¼ ಚಮಚ ಜೀರಿಗೆ, ಒಣ ಮೆಣಸು 3, ಕರಿಬೇವು ಸ್ವಲ್ಪ, ಬೆಲ್ಲ 2 ಚಮಚ, ರುಚಿಗೆ ಬೇಕಾಗುವಷ್ಟು ಉಪ್ಪು, ಹುಣಸೆ ಹಣ್ಣಿನ ರಸ 3 ಚಮಚ, ತೆಂಗಿನಕಾಯಿಯಿಂದ ತೆಗೆದ ಹಾಲು 1 ಕಪ್, ಸಾಂಬಾರ್ ಪುಡಿ 1 ಚಮಚ, ಮೆಣಸಿನ ಪುಡಿ 1 ಚಮಚ, ಮೆಂತ್ಯ ಕಾಳು 1 ಚಮಚ.

ಮೆಂತ್ಯ ಕಾಳಿನ ಸಾಂಬಾರ್ ಮಾಡುವುದು ಹೇಗೆ?

ಮೊದಲಿಗೆ ಒಗ್ಗರಣೆ ಹಾಕಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ. ಅದು ಕಾದ ನಂತರ ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಜೀರಿಗೆ, ಒಣ ಮೆಣಸು , ಕರಿಬೇವು ಹಾಕಿ ಚೆನ್ನಾಗಿ ಬಾಡಿಸಿ, ನಂತರ ಇದಕ್ಕೆ ಮೆಂತ್ಯಕಾಳನ್ನು ಹಾಕಿ ಬಾಡಿಸಿ.

ಆಮೇಲೆ ನೀರು ಹಾಕಿ ಅದಕ್ಕೆ ಸ್ವಲ್ಪ ಬೆಲ್ಲ, ರುಚಿಗೆ ತಕಷ್ಟು ಉಪ್ಪು, ಹುಣಸೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ ಮುಚ್ಚಿಟ್ಟು ಚೆನ್ನಾಗಿ ಕುದಿಸಿ. ಮೆಂತ್ಯಕಾಳು ಚೆನ್ನಾಗಿ ಬೆಂದ ನಂತರ ಅದಕ್ಕೆ ತೆಂಗಿನಕಾಯಿಯಿಂದ ತೆಗೆದಿಟ್ಟುಕೊಂಡ ಹಾಲನ್ನು ಹಾಕಿ, ಸಾಂಬಾರ್ ಪುಡಿ ಹಾಗೂ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು ಕಡಿಮೆಯಾಗಿದ್ದಲ್ಲಿ ಹಾಕಿಕೊಳ್ಳಬಹುದು. ನಂತರ ಪಾತ್ರೆಯನ್ನು ಮುಚ್ಚಿಟ್ಟು 5 ನಿಮಿಷ ಕುದಿಸಿ ಕೆಳಗಿಳಿಸಿ. ಈಗ ಬಿಸಿ ಬಿಸಿಯಾದ ಆರೋಗ್ಯಕರವಾದ ಮೆಂತ್ಯಕಾಳಿನ ಸಾಂಬಾರ್ ರೆಡಿ. ಇದನ್ನು ಊಟಕ್ಕೆ , ಅಥವಾ ದೋಸೆಗೆ ಹಾಕಿಕೊಂಡು ತಿನ್ನಬಹುದು.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 

ನಮ್ಮ ಇಮೇಲ್ ವಿಳಾಸ: bpchand@gmail.com