ರುಚಿಕರವಾದ ಹಸಿಬಟಾಣಿ ಸಾರು ಮಾಡುವ ಸುಲಭ ವಿಧಾನ

ಬಟಾಣಿ ಒಂದು ರುಚಿಕರವಾದ ಧಾನ್ಯ. ಇದನ್ನು ಹಾಕಿ ಮಾಡಿದ ಯಾವುದೇ ಸಾಂಬಾರು, ತಿಂಡಿ ಏನೆ ಇರಲಿ ಅದು ರುಚಿಕರವಾಗಿಯೇ ಇರುತ್ತದೆ. ಚಿಕ್ಕ ಮಕ್ಕಳು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಬಟಾಣಿಯಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಹೆಚ್ಚಾಗಿ ಬಟಾಣಿಯನ್ನು ಹಾಗೇ ಬೇಯಿಸಿ ಅಡುಗೆ ಮಾಡುತ್ತಾರೆ. ಆದರೆ ಬಟಾಣಿಯನ್ನು ರುಬ್ಬಿ ಹಾಕಿ ಮಾಡುವ ಅಡುಗೆಯ ರುಚಿಯೇ ಬೇರೆ. ಇದನ್ನು ಹೆಚ್ಚಾಗಿ ಉತ್ತರಭಾರತದ ಕಡೆ ಮಾಡುತ್ತಾರೆ. ಇಂತಹ ರುಚಿಕರವಾಗ ಬಟಾಣಿ ಸಾಂಬಾರು ಮಾಡುವುದು ಹೇಗೆಂದು ನೋಡೋಣ.

ಬಟಾಣಿ ಸಾಂಬಾರು ಮಾಡಲು ಬೇಕಾಗುವ ಸಾಮಗ್ರಿಗಳು :

ಹಸಿ ಬಟಾಣಿ 1 ಕಪ್, ದೊಡ್ಡದಾದ ಈರುಳ್ಳಿ 1, 4 ಬೆಳ್ಳುಳ್ಳಿ ಎಸಳು, ಶುಂಠಿ ಸ್ವಲ್ಪ, ಹಸಿ ಮೆಣಸಿನಕಾಯಿ 2, ಟೊಮೆಟೊ 1, ಆಲೂಗಡ್ಡೆ 2, ಅರಿಶಿನ ಪುಡಿ 1 /2 ಚಮಚ, ದನಿಯಾ ಪುಡಿ 1 ಚಮಚ, ಜೀರಿಗೆ ½ ಚಮಚ, ಕಾಳು ಮೆಣಸಿನ ಪುಡಿ ½ ಚಮಚ, ಗರಂ ಮಸಾಲ ಪುಡಿ ½ ಚಮಚ, ಸಾಸಿವೆ ½ ಚಮಚ, ಮೆಣಸಿನ ಕಾಯಿ 2, ಸ್ವಲ್ಪ ಕರಿ ಬೇವು, ಇಂಗು ಸ್ವಲ್ಪ, ಎಣ್ಣೆ 2 ಚಮಚ, ಸಕ್ಕರೆ ½ ಚಮಚ, ರುಚಿಗೆ ತಕ್ಕಷ್ಟು ಉಪ್ಪು .

ಬಟಾಣಿ ಸಾಂಬಾರು ತಯಾರಿಸುವ ವಿಧಾನ

ಮೊದಲಿಗೆ ಹಸಿ ಬಟಾಣಿಯನ್ನು ತೆಗೆದುಕೊಂಡು ಅದನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಪುಡಿ, ಕಾಳು ಮೆಣಸಿನ ಪುಡಿ ಇವಿಷ್ಟನ್ನು ಹಾಕಿ ನುಣ್ಣನೆ ರುಬ್ಬಿಕೊಳ್ಳಿ. ಆಮೇಲೆ ಒಂದು ಪಾತ್ರೆಯಲ್ಲಿ 1 ಚಮಚ ಎಣ್ಣೆ ಹಾಕಿ, ಅದರಲ್ಲಿ ಕತ್ತರಿಸಿದ ಆಲೂಗಡ್ಡೆ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು, ಅದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ.

ನಂತರ ಅದೇ ಪಾತ್ರೆಯಲ್ಲಿ ಒಗ್ಗರಣೆ ಹಾಕಿಕೊಳ್ಳಿ ಅದಕ್ಕೆ 2 ಚಮಚ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ ಹಾಕಿ, ಅದು ಸಿಡಿದ ನಂತರ ಕರಿಬೇವಿನ ಎಲೆ, ಇಂಗು ಹಾಕಿ ಚೆನ್ನಾಗಿ 2 ನಿಮಿಷ ಹುರಿಯಿರಿ. ಆಮೇಲೆ ಅದಕ್ಕೆ ಕತ್ತರಿಸಿದ ಟೊಮೆಟೊ ಹಾಕಿ ಹುರಿಯಿರಿ. ಟೊಮೆಟೊ ಮೆತ್ತಗಾದ ಮೇಲೆ ಅದಕ್ಕೆ ರುಬ್ಬಿದ ಮಸಾಲೆ, ರುಬ್ಬಿದ ಬಟಾಣಿ, ರುಚಿಗೆ ಬೇಕಾಗುವಷ್ಟು ಉಪ್ಪು, ಅರಿಶಿನ, 1/4 ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿರಿ. ನಂತರ ಅದಕ್ಕೆ ಆಲೂಗಡ್ಡೆ ಮತ್ತು ಗರಂ ಮಸಾಲ ಹಾಕಿ 8-10 ನಿಮಿಷ ಬೇಯಿಸಿ. ಹಾಗೇ ಆಗಾಗ ಸೌಟ್ ನಿಂದ ತಿರುಗಿಸುತ್ತಾ ಇರಿ. ಎಲ್ಲಾ ಚೆನ್ನಾಗಿ ಬೆಂದ ಮೇಲೆ ಅದಕ್ಕೆ ಸಕ್ಕರೆ ಹಾಕಿ 2 ನಿಮಿಷ ಬೇಯಿಸಿದರೆ ರುಚಿಕರವಾದ ರುಬ್ಬಿದ ಹಸಿ ಬಟಾಣಿ ಸಾರು ರೆಡಿ


ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ.   
ನಮ್ಮ ಇಮೇಲ್ ವಿಳಾಸ: bpchand@gmail.com