ಸಿಂಪಲ್ ಆಗಿ ಮಾಡಿ ರುಚಿಕರ ಚಿಕನ್ ಬಿರಿಯಾನಿ

By | September 25, 2018
chicken biriyani recipe

ಚಿಕನ್ ಬಿರಿಯಾನಿ ಎಂದರೆ ಮಾಂಸಾಹಾರಿಗಳ ಬಾಯಲ್ಲಿ ನೀರೂ ಒಸರುತ್ತದೆ. ಮನೆಯಲ್ಲಿ ಇದನ್ನು ಸುಲಭವಾಗಿ ಮಾಡುವುದು ಹೇಗೆಂದು ಯೋಚನೆ ಮಾಡುತ್ತಿದ್ದೀರಾ? ಇಲ್ಲಿದೆ ನೋಡಿ ಸುಲಭ ಉಪಾಯ. ಮನೆಯಲ್ಲಿಯೇ ರುಚಿಯಾದ ಚಿಕನ್ ಬಿರಿಯಾನಿ ಮಾಡಿ ಸವಿಯಿರಿ.

ಚಿಕನ್ ಅರ್ಧ ಕೆ.ಜಿ, ಅಕ್ಕಿ-2 ಲೋಟ, ಮೊಸರು ಅರ್ಧ ಕಪ್, ಕೆಂಪು ಮೆಣಸಿನ ಪುಡಿ-1 ಚಮಚ, ಗರಂ ಮಸಾಲಾ –ಅರ್ಧ ಚಮಚ, ಧನಿಯಾ ಪುಡಿ-ಅರ್ಧ ಚಮಚ, ಜೀರಿಗೆ ಕಾಲು ಚಮಚ, ಚಕ್ಕೆ ಅರ್ಧ ಪೀಸ್, ಚಕ್ರ ಮೊಗ್ಗು-1, ಜಾಪತ್ರೆ-ಒಂದು ಸಣ್ಣ ಚೂರು, ಏಲಕ್ಕಿ-2, ಲವಂಗ-1, ಈರುಳ್ಳಿ ಒಂದು ದೊಡ್ಡದ್ದು, ಟೊಮೆಟೊ-1, ಉಪ್ಪು ರುಚಿಗೆ ತಕ್ಕಷ್ಟು, ಲಿಂಬೆ ರಸ-1 ಚಮಚ, ಬಿರಿಯಾನಿ ಮಸಲಾ –ಅರ್ಧ ಚಮಚ, ಪುದೀನಾ-3 ದಂಟು, ಕೊತ್ತಂಬರಿ ಸೊಪ್ಪು –ಕಾಲು ಕಪ್, ಶುಂಠಿ ಬೆಳ್ಳುಳ್ಳಿ ಪೇಸ್ಟ್-2 ದೊಡ್ಡ ಚಮಚದಷ್ಟು, ಪಲಾವ್ ಎಲೆ-1. ಹಸಿಮೆಣಸು-3.

ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ಒಂದು ಬೌಲ್ ಗೆ ಹಾಕಿ ಅದಕ್ಕೆ ಅರ್ಧ ಚಮಚ ಖಾರದ ಪುಡಿ, ಅರ್ಧ ಚಮಚ ಗರಂ ಮಸಾಲಾ, ಧನಿಯಾ ಪುಡಿ, ಜೀರಿಗೆ ಪುಡಿ, ಮೊಸರು, ಲಿಂಬೆ ರಸ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಗಂಟೆ ಇದನ್ನು ಮ್ಯಾರಿನೇಟ್ ಮಾಡಿ.

ನಂತರ ಒಂದು ಕುಕ್ಕರ್ ಗೆ ಎರಡು ಚಮಚ ತುಪ್ಪ, ಎರಡು ಚಮಚ ಎಣ್ಣೆ ಹಾಕಿ ಇದು ಬಿಸಿಯಾದ ಮೇಲೆ ಅದಕ್ಕೆ ಪಲಾವ್ ಎಲೆ, ಮೊಗ್ಗು, ಚಕ್ಕೆ, ಏಲಕ್ಕಿ, ಲವಂಗ, ಜಾಪತ್ರೆ ಹಾಕಿ ಇದು ತುಸು ಹುರಿದ ಮೇಲೆ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಈರುಳ್ಳಿ ಹಾಕಿ. ಅದು ಕೆಂಪಾಗಾದ ನಂತರ ಟೊಮೆಟೊ ಹಾಕಿ. ತುಸು ಉಪ್ಪು ಹಾಕಿ.

ಟೊಮೆಟೊ ಮತ್ತಗಾದ ನಂತರ ಹಸಿಮೆಣಸು , ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪಹಾಕಿ ಆಮೇಲೆ ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ, ಬೇಕಿದ್ದರೆ ಖಾರದ ಪುಡಿ ತುಸು ಸೇರಿಸಿ. ಚಿಕನ್ ಸ್ವಲ್ಪ ಮೆತ್ತಗಾಗುವ ತನಕ ಬೇಯಿಸಿರಿ. ನಂತರ ತೊಳೆದಿಟ್ಟುಕೊಂಡ ಅಕ್ಕಿಯನ್ನು ಹಾಕಿ. ಅಕ್ಕಿಯ ಎರಡರಷ್ಟು ನೀರು ಸೇರಿಸಿ. ಉಪ್ಪು ಬೇಕಿದ್ದರೆ ಹಾಕಿ. ಆಮೇಲೆ ಕುಕ್ಕರ್ ಮುಚ್ಚಳ ಎರಡು ವಿಷಲ್ ಬರಿಸಿ. ಕುಕ್ಕರ್ ತಣ್ಣಗಾದ ನಂತರ ಬಡಿಸಿ. ಈಗ ರುಚಿಯಾದ ಚಿಕನ್ ಬಿರಿಯಾನಿ ಸವಿಯಲು ಸಿದ್ಧ.

Leave a Reply

This site uses Akismet to reduce spam. Learn how your comment data is processed.