ಮಕ್ಕಳಿಗೆ ಇಷ್ಟವಾದ ಸಬ್ಬಕ್ಕಿ ಲಡ್ಡು ಮಾಡುವ ವಿಧಾನ

ಸಬ್ಬಕ್ಕಿ ಯಿಂದ ಪಾಯಸ ಮಾಡುವುದು ಎಲ್ಲರಿಗೂ ತಿಳಿದೆ ಇದೆ. ಅದೇರೀತಿ ಸಬ್ಬಕ್ಕಿಯಿಂದ ಲಡ್ಡು ಕೂಡ ತಯಾರಿಸಬಹುದು. ಇದನ್ನುಮಕ್ಕಳು ತುಂಬಾ ಇಷ್ಟಪಡುತ್ತಾರೆ. ಹಾಗೇ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಸಬ್ಬಕ್ಕಿ ಲಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು :

ಸಬ್ಬಕ್ಕಿ 1 ಕಪ್ ತೆಗೆದುಕೊಳ್ಳಿ, ತುಪ್ಪ 6 ಟೇಬಲ್ ಸ್ಪೂನ್, ಪುಡಿ ಮಾಡಿದ ಏಲಕ್ಕಿ 1 ಟೀ ಸ್ಪೂನ್, ಸಣ್ಣದಾಗಿ ಪೀಸ್ ಮಾಡಿದಂತಹ ಗೋಡಂಬಿ ¼ ಕಪ್, ಜಾಯಿಕಾಯಿ ಪುಡಿ ¼ ಟೀ ಸ್ಪೂನ್, ಪುಡಿ ಮಾಡಿಟ್ಟುಕೊಂಡ ಸಕ್ಕರೆ 1 ಕಪ್, ಒಣ ಕೊಬ್ಬರಿ ತುರಿ ¾ ಕಪ್.

ಸಬ್ಬಕ್ಕಿ ಲಡ್ಡು ಮಾಡುವ ವಿಧಾನ

ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸಬ್ಬಕ್ಕಿ ಹಾಕಿ ತಿಳಿ ಹೊಂಬಣ್ಣಕ್ಕೆ ಬರುವವವರೆಗೂ ಹುರಿಯಿರಿ. ನಂತರ 5 ನಿಮಿಷ ಇಟ್ಟು ಅದು ತಣ್ಣಗಾದ ಮೇಲೆ ಅದನ್ನು ಇಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಬಿಸಿಯಾದ ಪಾತ್ರೆಯಲ್ಲಿ ಒಣ ಕೊಬ್ಬರಿ ತುರಿಯನ್ನು ಹಾಕಿ 30 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಅದಕ್ಕೆ ಸಬ್ಬಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಷಗಳ ಕಾಲ ಹುರಿದು ಒಂದು ಕಡೆ ತೆಗೆದಿಡಿ.

ಇನ್ನೊಂದು ಪಾತ್ರೆಯಲ್ಲಿ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದಕ್ಕೆ ಸಣ್ಣದಾಗಿ ಪೀಸ್ ಮಾಡಿದಂತಹ ಗೋಡಂಬಿಯನ್ನು ಹಾಕಿ ತಿಳಿ ಬಣ್ಣಕ್ಕೆ ಬರುವವರೆಗೂ ಹುರಿಯಿರಿ. ನಂತರ ಅದಕ್ಕೆ ಒಣ ಕೊಬ್ಬರಿ ಹಾಗೂ ಸಬ್ಬಕ್ಕಿ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಹುರಿಯಿರಿ. ಆಮೇಲೆ ಅದಕ್ಕೆ ಏಲಕ್ಕಿ ಪುಡಿ ಹಾಗೂ ಜಾಯಿಕಾಯಿ ಪುಡಿ, ಸಕ್ಕರೆ ಪುಡಿಯನ್ನು ಸೇರಿಸಿ 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಪುಡಿ ಕರಗಿದ ಮೇಲೆ 2 ಚಮಚ ತುಪ್ಪವನ್ನು ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ನಂತರ 2-3 ನಿಮಿಷ ತಣ್ಣಗಾಗಲು ಬಿಟ್ಟು ಮತ್ತೆ 2 ಚಮಚ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಸ್ವಲ್ಪ ಸ್ವಲ್ಪ ಮಿಶ್ರಣ ತೆಗೆದುಕೊಂಡು ಲಡ್ಡನ್ನು ತಯಾರಿಸಿ.