ಎಳೆ ಹಲಸಿನಕಾಯಿ ಪಲ್ಯ

ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಇದರಿಂದ ಹಲವು ಬಗೆಯ ಸಿಹಿ ತಿಂಡಿಗಳನ್ನು ಮಾಡಬಹುದು. ಅದೇರೀತಿ ಎಳೆಹಲಸಿನ ಕಾಯಿಯಿಂದಲೂ ಅಡುಗೆ ತಯಾರಿಸಬಹುದು. ಇದರಿಂದ ಪಲ್ಯ ಮಾಡಿದರೆ ಅದು ಬಲು ರುಚಿಯಾಗಿರುತ್ತದೆ.

ಎಳೆ ಹಲಸಿನಕಾಯಿ ಪಲ್ಯ ಮಾಡಲು ಬೇಕಾಗುವ ಸಾಮಾಗ್ರಿಗಳು :

ಒಂದು ಎಳೆ ಹಲಸಿನ ಕಾಯಿ ತೆಗೆದುಕೊಳ್ಳಿ, ನೆನೆಸಿದ ಕಡಲೆಕಾಳು 1 ಕಪ್, ಅಚ್ಚಖಾರದ ಪುಡಿ 4 ಟೀ ಚಮಚ, ಈರುಳ್ಳಿ 1, ಬೆಳ್ಳುಳ್ಳಿ12 ಎಸಳು, ಟೊಮೆಟೊ 1, ತೆಂಗಿನಕಾಯಿ ತುರಿ ½ ಕಪ್, ಜೀರಿಗೆ ಪುಡಿ ½ ಟೀ ಚಮಚ, ಅರಶಿನ 1 ಚಿಟಿಕೆ, ದನಿಯಾ ಪುಡಿ ½ ಟೀ ಚಮಚ, ಎಣ್ಣೆ 1 ಚಮಚ, ಹುಣಸೆ ಹಣ್ಣು 1 ನೆಲ್ಲಿಕಾಯಿ ಗಾತ್ರದಷ್ಟು ಸಾಕು, ರುಚಿಗೆ ತಕಷ್ಟು ಉಪ್ಪು.

ಎಳೆ ಹಲಸಿನಕಾಯಿ ಪಲ್ಯ ಮಾಡುವ ವಿಧಾನ :

ಎಳೆಯ ಹಲಸಿನ ಕಾಯಿ ಯನ್ನು ಸಿಪ್ಪೆ ತೆಗೆದು ಉದ್ದಕ್ಕೆ ಹೆಚ್ಚಿಕೊಂಡು ಕುಕ್ಕರ್ ಗೆ ಹಾಕಿ ಅದಕ್ಕೆ ಸ್ವಲ್ಪ ನೀರು, 2 ಟೀ ಚಮಚ ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು ಹಾಗೂ ಹುಣಸೆ ಹಣ್ಣನ್ನು ಹಾಕಿ ಒಂದು ಅಥವಾ ಎರಡು ವಿಶಲ್ ಹಾಕಿ. ತಣ್ಣಗಾದ ನಂತರ ಕುಕ್ಕರ್ ನಿಂದ ತೆಗೆದು ಮಿಕ್ಸ್ ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಅದೇ ಕುಕ್ಕರ್ ನಲ್ಲಿರುವ ನೀರಿಗೆ ಕಡಲೆಕಾಳು ಹಾಕಿ ಬೇಯಿಸಿಕೊಳ್ಳಿ.

ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ನಂತರ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಬಾಡಿಸಿ. ಅದು ಚೆನ್ನಾಗಿ ಫ್ರೈ ಆದ ನಂತರ ಟೊಮೆಟೊ ಹಾಕಿ ಬೇಯಿಸಿ. ಅದು ಬೆಂದ ನಂತರ ಉಳಿದ ಖಾರದ ಪುಡಿ, ಚಿಟಿಕೆ ಅರಶಿನ ಹಾಕಿ ಮಿಕ್ಸ್ ಮಾಡಿ ನಂತರ ಅದಕ್ಕೆ ಬೇಯಿಸಿ ಇಟ್ಟುಕೊಂಡ ಹಲಸಿನ ಕಾಯಿ ಹಾಗೂ ಬೇಯಿಸಿದ ಕಡಲೆಕಾಳನ್ನು ಹಾಕಿ ರುಚಿಗೆ ಬೇಕಾಗುವಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ತುರಿದ ತೆಂಗಿನಕಾಯಿ ಹಾಕಿ ತಿರುವಿ ಸ್ವಲ್ಪ ಹೊತ್ತು ಬಿಸಿ ಮಾಡಿ ಉರಿಯಿಂದ ಕೆಳಗಿಳಿಸಿದರೆ ರುಚಿಯಾದ ಎಳೆ ಹಲಸಿನ ಕಾಯಿ ಪಲ್ಯ ರೆಡಿ.

ಇದನ್ನೂ ಓದಿ  ರವಾ ಇಡ್ಲಿ- ರುಚಿಕರ, ಆರೋಗ್ಯಕರ ಬ್ರೇಕ್ ಫಾಸ್ಟ್ ರೆಸಿಪಿ