ಸ್ಫೂರ್ತಿದಾಯಕ ಕತೆ: ಇಂದ್ರಾ ನೂಯಿ ಯಶಸ್ಸಿನ ಕತೆ

ಪೆಪ್ಸಿಕೊ ಕಂಪನಿಯ ಸಿಇಒ ಮತ್ತು ಮುಖ್ಯಸ್ಥೆ ಇಂದ್ರಾ ನೂಯಿ ಅವರ ಯಶಸ್ಸಿನ ಹಿಂದಿರುವ ಕತೆಗಳನ್ನು ಕೇಳಿದಾಗ `ನಮ್ಮತನ’ಕ್ಕೆ ಇರುವ ಶಕ್ತಿಯ ಅರಿವಾದೀತು. ಜಗತ್ತಿನ ಬೃಹತ್ ಆಹಾರ ಮತ್ತು ಪಾನೀಯ ಕಂಪನಿಯ ಉನ್ನತ್ತ ಸ್ಥಾನದಲ್ಲಿದ್ದ ಇವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟಂಪ್ ಅವರಿಗೆ ಆರ್ಥಿಕ ಸಲಹೆಗಾರ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 

ನೀವು ಮಾಡಬೇಕಾದ ಒಂದು ಪ್ರಮುಖ ಧೈರ್ಯದ ಕಾರ್ಯವೆಂದರೆ ನಿಮ್ಮತನವನ್ನು ಗುರುತಿಸಿಕೊಳ್ಳುವುದು. ನೀವು ಯಾರೆಂದು, ನೀವು ಏನನ್ನು ನಂಬಿದ್ದೀರಿ ಮತ್ತು ನೀವು ಏನಾಗಬಯಸುವಿರಿ ಎನ್ನುವುದನ್ನು ಕಂಡುಕೊಳ್ಳುವುದಾಗಿದೆ’ ಎನ್ನುವುದು ಜನಪ್ರಿಯ ಸೂಕ್ತಿ.

ನೂಯಿ ಪುಟಾಣಿ ಬಾಲಕಿಯಾಗಿದ್ದಾಗ ಅವರ ತಾಯಿಯು ತನ್ನ ಮಕ್ಕಳಿಗೆ ಭಾಷಣ ಮಾಡಲು ಹೇಳುತ್ತಿದ್ದರಂತೆ. ಅದು ಹೇಗೆಂದರೆ, ನೀವು ರಾಷ್ಟ್ರವೊಂದರ ಅಧ್ಯಕ್ಷೆ, ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ ಯಾವ ರೀತಿ ಭಾಷಣ ಮಾಡುವಿರಿ ಎಂದು ಕೇಳಿ ಅದೇ ರೀತಿ ಭಾಷಣ ಮಾಡುವಂತೆ ಉತ್ತೇಜಿಸುತ್ತಿದ್ದರಂತೆ.

ಮಕ್ಕಳಲ್ಲಿ ಯಾರ ಭಾಷಣ ಉತ್ತಮವಾಗಿದೆಯೋ ಅವರನ್ನು ತಾಯಿ `ವಿನ್ನರ್’ ಎಂದು ಘೋಷಿಸುತ್ತಿದ್ದರಂತೆ. ಇದು ನೂಯಿ ಮತ್ತು ಅವರ ಸಹೋದರಿಯರಿಗೆ ಸ್ಪೂರ್ತಿದಾಯಕ ಅಂಶವಾಗಿತ್ತು ಮತ್ತು ಜೀವನದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡಿದ ಪ್ರಮುಖ ಸಂಗತಿಯಾಗಿತ್ತು. ಮುಖ್ಯವಾಗಿ ಇವರಲ್ಲಿ ಕಾನಿಡೆನ್ಸ್ ಹೆಚ್ಚಾಗಲು ಈ ಆಶುಭಾಷಣ ಕಾರಣವಾಗಿತ್ತು.

ಇಂದ್ರಾ ನೂಯಿ ಅವರು ಮದ್ರಾಸ್‍ನ ಹೋಲಿ ಏಂಜೆಲ್ಸ್ ಆಂಗ್ಲೊ ಇಂಡಿಯನ್ ಹೈಯರ್ ಸೆಕೆಂಡರಿ ಸ್ಕೂಲ್‍ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬ್ಯಾಚುಲರ್ ಪದವಿ ಪಡೆದರು. ಐಐಎಂ ಕೊಲ್ಕೋತ್ತಾದಲ್ಲಿ ಪದವಿ ಪಡೆದರು. ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತು ಮೆಟ್ಯೂರ್ ಬ್ರೀಡ್‍ಸೆಲ್ ಎಂಬ ಜವಳಿ ಕಂಪನಿಗಳಲ್ಲಿ ಪ್ರಾಡಕ್ಟ್ ಮ್ಯಾನೇಜನರ್ ಆಗಿ ಕೆಲಸ ಮಾಡಿದ್ದರು. 

ಅಮೆರಿಕದ ಬಿಸ್ನೆಸ್ ಸ್ಕೂಲ್‍ನಲ್ಲಿ ನೂಯಿಗೆ ಸೀಟು ಸಿಗದು ಎಂಬ ಭಾವನೆ ಅವರ ಹೆತ್ತವರಲ್ಲಿತ್ತು. ಹೀಗಾಗಿ ಅದಕ್ಕೆ ಅರ್ಜಿ ಸಲ್ಲಿಸು ಎಂದಿದ್ದರು. ಅಂದ್ರೆ, ಆಕೆಗೆ ಬೇಸರವಾಗಬಾರದು ಮತ್ತು ಆಕೆಗೆ ಅಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಸೀಟು ಸಿಗದು ಎಂಬ ಅನುಮಾನದಲ್ಲಿಯೇ ಅರ್ಜಿ ಸಲ್ಲಿಸು ಎಂದಿದ್ದರು. ಆದರೆ, ಸ್ಕಾಲರ್‍ಷಿಪ್ ನೆರವಿನಿಂದ ಇವರು ಯೇಲ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ಗೆ ಸೇರಿದರು. 

ಇವರು ಮೊದಲ ಉದ್ಯೋಗದ ಸಂದರ್ಶನದ ಕುರಿತಾದ ಆಸಕ್ತಿದಾಯಕ ಸಂಗತಿಯೊಂದಿದೆ. ಈ ಸಂದರ್ಶನಕ್ಕೆ ಬೇಕಾದ ಉಡುಗೆ ಖರೀದಿಸುವ ಸಲುವಾಗಿ ಇವರು ರಾತ್ರಿಪಾಳಿಯಲ್ಲಿ ರಿಸೆಪ್ಷನ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ, ಆ ಉದ್ಯೋಗಕ್ಕೆ ಅವರು ರಿಜೆಕ್ಟ್ ಆದರು. `ಸಂದರ್ಶನಕ್ಕೆ ಕಂಫರ್ಟ್ ಆದ ಉಡುಗೆ ಧರಿಸು’ ಎಂದು ಯೇಲ್ ವಿವಿಯ ಪ್ರೊಫೆಸರ್ ಒಬ್ಬರು ಸಲಹೆ ನೀಡಿದರು.

ಆಕೆ ಮುಂದಿನ ಉದ್ಯೋಗ ಸಂದರ್ಶನಕ್ಕೆ ಸೀರೆಯುಟ್ಟು ಹೋದರು. ಅವರು ಆ ಸಂದರ್ಶನದಲ್ಲಿ ಯಶಸ್ಸು ಪಡೆದು ಉದ್ಯೋಗ ಪಡೆದರು. ಈ ಮೂಲಕ ಅವರಿಗೆ `ಬೀಯಿಂಗ್ ಯುವರ್‍ಸೆಲ್ಫ್’ ಅಥವಾ `ನಿಮ್ಮತನವನ್ನು ಬಿಡಬೇಡಿ’ ಎಂಬ ಜೀವನಪಾಠ ದೊರಕಿತು. 

ಸುಮಾರು ಆರು ವರ್ಷಗಳ ಕಾಲ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‍ನಲ್ಲಿ ಕೆಲಸ ಮಾಡಿದರು. ಅಲ್ಲಿ ಅಮೆರಿಕದ ಹೊರಗಿನ ಮಹಿಳೆಯಾಗಿ ಮತ್ತು ಒಬ್ಬ ಮಹಿಳೆಯಾಗಿ ತನ್ನ ಸಾಮಥ್ರ್ಯವನ್ನು ಪ್ರದರ್ಶಿಸಿದರು. ನಂತರ ಮೊಟೊರೊಲಾ ಕಂಪನಿಯ ಕಂಪನಿ ಕಾರ್ಯತಂತ್ರ ಮತ್ತು ಯೋಜನೆ ವಿಭಾಗದ ಉಪಾಧ್ಯಕ್ಷೆ ಮತ್ತು ನಿರ್ದೇಶಕಿಯಾದರು.

ನಂತರ ಜ್ಯೂರಿಚ್‍ನ ಪ್ರಮುಖ ಕಂಪನಿಯೊಂದರಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು. 1994ರಲ್ಲಿ ಪೆಪ್ಸಿಕೊಗೆ ಸೇರಿದರು. ಅಲ್ಲಿ ಇವರು ಹಲವು ನೂರು ಕೋಟಿ ಡಾಲರ್‍ನ ಗುತ್ತಿಗೆಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. 2001ರಲ್ಲಿ ಇದೇ ಕಂಪನಿಯ ಸಿಎಫ್‍ಒ ಆದರು. 2006ರಲ್ಲಿ ಸಿಇಒ ಆದರು. ತಂಡಕ್ಕೆ ಸಮರ್ಥವಾಗಿ ಕೆಲಸ ಮಾಡುವ ಇವರ ಗುಣ ಹೆಚ್ಚು ಜನಪ್ರಿಯತೆ ಪಡೆಯಿತು. 

ಇವರ ಯಶಸ್ಸಿಗೆ ಅನೇಕ ಅಂಶಗಳು ಕಾರಣವಾಗಿವೆ. ಅವುಗಳಲ್ಲಿ ಆಕೆಯ ಬಾಲ್ಯದಿಂದಲೂ ಕಲಿತುಕೊಂಡು ಬಂದಿರುವ ಸಂವಹನ ಕೌಶಲ, ಸಣ್ಣ ಗುಂಪಿಗೆ ಹೇಗೆ ಉತ್ತೇಜನ ನೀಡಬೇಕು ಮತ್ತು ಅವರಿಂದ ಸಮರ್ಥವಾಗಿ ಕೆಲಸ ಹೇಗೆ ತೆಗೆಯಬೇಕು ಎಂಬುದರ ಕುರಿತು ಆಕೆಗಿದ್ದ ಸಾಮಥ್ರ್ಯ ಈಕೆಯ ಯಶಸ್ಸಿನ ಹಿಂದಿರುವ ಪ್ರಮುಖ ಅಂಶಗಳಾಗಿವೆ. ಇದಕ್ಕಿಂತಲೂ ಪ್ರಮುಖವಾಗಿ ಈಕೆಗಿದ್ದ ಅತೀವ ಆಸಕ್ತಿ, ಶಕ್ತಿ ಮತ್ತು ಜೀವನಪೂರ್ತಿ ಕಲಿಯುತ್ತಲೇ ಬೆಳೆಯುವ ಗುಣ ಇವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎನ್ನಬಹುದು.

ನೂಯಿ ಸಲಹೆ

  • ಆಫೀಸ್‍ನ ಟೆನ್ಷನ್ ಅನ್ನು ಮನೆಗೆ ತರಬೇಡಿ. ಮನೆಯ ಚಿಂತೆಗಳನ್ನು ಆಫೀಸ್‍ಗೆ ತರಬೇಡಿ.
  • ಬಿ ಯುವರ್‍ಸೆಲ್, ನಿಮ್ಮತನವನ್ನು ಯಾವಾಗಲೂ ಬಿಡಬೇಡಿ.
  • ಗುಡ್ಡ ಹಾರುವತ್ತ ಗಮನ ಕೇಂದ್ರೀಕರಿಸುವ ಕಿವುಡ ಕಪ್ಪೆಯಂತೆ ಗುರಿ ಸಾಧನೆ ಮಾಡಬೇಕು.

ಯಶಸ್ವಿ ಮಹಿಳೆ ಇಂದ್ರಾ ನೂಯಿ ಅವರಿಂದ ಏನು ಕಲಿಯಬಹುದು?