ಯಶಸ್ವಿ ಮಹಿಳೆ ಇಂದ್ರಾ ನೂಯಿ ಅವರಿಂದ ಏನು ಕಲಿಯಬಹುದು?

indra nooyi success guide
ಸುಮಾರು 12 ವರ್ಷಗಳ ಕಾಲ ಪೆಪ್ಸಿಕೊ ಕಂಪನಿಯಲ್ಲಿ ಅತ್ಯುತ್ತಮ ನಾಯಕತ್ವ ಕೌಶಲ ತೋರಿ ಇಡೀ ಜಗತ್ತನ್ನೇ ಬೆರಗುಗೊಳಿಸಿದ ಮಹಿಳೆ- ಪೆಪ್ಸಿಕೊ ಸಿಇಒ ಇಂದ್ರಾ ನೂಯಿ. ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಅಗ್ರ 100 ಪವರ್ ಫುಲ್ ಮಹಿಳೆಯರಲ್ಲಿ ಇವರು ಒಬ್ಬರು. ಉದ್ಯೋಗ ಅಥವಾ ಜೀವನದಲ್ಲಿ ಏನಾದರೂ ಸಾಧಿಸಲು ಬಯಸುವವರಿಗೆ ಇಂದ್ರಾ ನೂಯಿ ಅವರು ಪಾಲಿಸಿದ ಮತ್ತು ತಿಳಿಸಿದ ಕರಿಯರ್ ಪಾಠಗಳು ಅತ್ಯುತ್ತಮ ಮಾರ್ಗದರ್ಶಿಯಾಗಬಲ್ಲದು.

ಪ್ರತಿಯೊಬ್ಬರಲ್ಲಿಯೂ ಒಂದು ದೃಷ್ಟಿಕೋನವಿರಬೇಕು

`ಒಂದು ಉದ್ದೇಶವಿರುವ ಕಾರ್ಯಕ್ಷಮತೆಯನ್ನು ತೋರಬೇಕು’ ಎಂದು ನೂಯಿ ತನ್ನ ಭಾಷಣಗಳಲ್ಲಿ ಹೇಳುತ್ತಾರೆ. ಇಂತಹ ವಿಷನ್‍ನಿಂದಲೇ ಕಂಪನಿಯಲ್ಲಿ ಮತ್ತು ಕರಿಯರ್‍ ನಲ್ಲಿ ತಾನು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ.

ದೀರ್ಘಕಾಲದ ಗುರಿ ಅವಶ್ಯ

ಅವರು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ದೀರ್ಘಕಾಲ ಲಾಭವಿರುವ ಯೋಜನೆಗಳನ್ನು ರೂಪಿಸುತ್ತಿದ್ದರು. ತಮ್ಮ ತಂಡದಿಂದಲೂ ಇದನ್ನೇ ಬಯಸುತ್ತಿದ್ದರು. ಕೆಲವೊಂದು ಯೋಜನೆಗಳು ಅಲ್ಪಾವಯಲ್ಲಿ ಲಾಭದಾಯಕ ಎಂದೆನಿಸದೆ ಇದ್ದರೂ ದೀರ್ಘಕಾಲದಲ್ಲಿಪ್ರಯೋಜನಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಮನವೋಲಿಕೆ ಮಾಡುವ ಸಾಮರ್ಥ್ಯ

ನೂಯಿ ಅವರು ತನ್ನ ತಂಡವನ್ನು ಮನವೋಲಿಸಿ ಕೆಲಸ ತೆಗೆಯುವಲ್ಲಿ ಪರಿಣತಿ ಪಡೆದಿದ್ದರು. ಚಿಪ್ಸ್ ಮತ್ತು ಸೋಡಾವನ್ನು ಪೌಷ್ಠಿಕಾಂಶ ಮರೆತು ಮಾರಾಟ ಮಾಡುತ್ತಾರೆ ಎಂದು ಇವರನ್ನು ವಿಮರ್ಶಕರು ಟೀಕೆ ಮಾಡಿದ್ದರಂತೆ. ಆದರೆ, ಪೆಪ್ಸಿಕೊದ ಮೂಲಕ ಆಹಾರ ಮತ್ತು ಪಾನೀಯದಲ್ಲಿ 6.4 ಟ್ರಿಲಿಯನ್ ಕ್ಯಾಲೋರಿ ಕಡಿಮೆ ಮಾಡುವ ಗುರಿಯನ್ನು ಹಾಕಿಕೊಂಡಿದ್ದರು. ಅವರ ಈ ತಂತ್ರವೂ ಯಶಸ್ವಿಯಾಯಿತು. ಪೌಷ್ಟಿಕ ಆಹಾರ ಮತ್ತು ಪರಿಸರ ರಕ್ಷಣೆಯತ್ತಲೂ ಗಮನ ನೀಡುತ್ತಿದ್ದರು.

 ಹೆಚ್ಚು ಆಲಿಸಿ, ಕಡಿಮೆ ಮಾತನಾಡಿ

ಮನುಷ್ಯರಿಗೆ ಎರಡು ಕಿವಿ ಮತ್ತು ಒಂದು ಬಾಯಿ ಇರುವುದು ಹೆಚ್ಚು ಕೇಳಲು ಮತ್ತು ಕಡಿಮೆ ಮಾತನಾಡಲು ಎಂದು ಇಂದ್ರಾ ನೂಯಿ ಹೇಳುತ್ತಿದ್ದರು. ಕೆಲವರು ಹೆಚ್ಚು ಮಾತನಾಡುತ್ತಾರೆ, ಕಡಿಮೆ ಕೆಲಸ ಮಾಡುತ್ತಾರೆ. ಇದರ ಬದಲು ಹೆಚ್ಚು ಆಲಿಸಿರಿ, ಕಡಿಮೆ ಮಾತನಾಡಿ ಮತ್ತು ಹೆಚ್ಚು ಕೆಲಸ ಮಾಡಿ ಎಂಬ ಸಲಹೆಯನ್ನು ಇವರು ನೀಡುತ್ತಾರೆ.

ಸದಾ ಕಲಿಯಿರಿ

ನೀವು ಕಲಿಯುವುದನ್ನು ಎಂದಿಗೂ ನಿಲ್ಲಿಸಬಾರದು. ಸಿಇಒ ಸ್ಥಾನಕ್ಕೆ ಏರಿದರೂ ನೂಯಿ ಅವರು ಕಲಿಯುವುದನ್ನು ಬಿಡಲಿಲ್ಲ. ಇವರು ತನ್ನ ಗ್ರಾಹಕರ ಜೊತೆ, ಫೀಲ್ಡ್‍ಗೆ ಹೋಗುವ ಸೇಲ್ಸ್ ಜನರೊಂದಿಗೆ ಮತ್ತು ತಮ್ಮ ಕಂಪನಿಯ ಉದ್ಯೋಗಿಗಳ ಜೊತೆ ಮಾತನಾಡಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ವಹಿಸುತ್ತಿದ್ದರು. ಇವರು ಹತ್ತು ಹಲವು ಮೂಲಗಳಿಂದ ಮಾಹಿತಿ ಕಲೆ ಹಾಕುತ್ತಿದ್ದರು.

 ಯಶಸ್ಸಿಗೆ ಅಗತ್ಯವಿರುವ ತಂಡದ ಸದಸ್ಯರು

ನಿಮ್ಮ ಉದ್ಯೋಗಿಗಳ ತಂಡವನ್ನು ಸಂತೋಷಕರವಾಗಿ, ಸ್ಪೂರ್ತಿದಾಯಕವಾಗಿ ಇಟ್ಟುಕೊಳ್ಳಿ ಎಂಬ ಮಾತನ್ನು ನೂಯಿ ಸದಾ ಹೇಳುತ್ತಾರೆ. ನೂಯಿ ಅವರು ತನ್ನ ಉದ್ಯೋಗಿಗಳ ಹೆತ್ತವರಿಗೆ `ನಿಮ್ಮ ಮಕ್ಕಳ ಕೊಡುಗೆಯ ಕುರಿತು ಕಂಪನಿಗೆ ಹೆಮ್ಮೆಯಾಗುತ್ತಿದೆ’ ಎಂಬ ಧನ್ಯವಾದ ಪತ್ರಗಳನ್ನು ಕಳುಹಿಸುತ್ತಿದ್ದರು. ಇವರು ತಮ್ಮ ಕೈ ಬರಹದ ಮೂಲಕವೇ ಉತ್ತಮ ಕಾರ್ಯಕ್ಷಮತೆ ತೋರಿದವರಿಗೆ ಪ್ರೋತ್ಸಾಹಕರ ಪತ್ರಗಳನ್ನು ಬರೆಯುತ್ತಿದ್ದರು.

ನೀನು ಆಫೀಸ್‍ನಲ್ಲಿ ಸಿಇಒ, ಮನೆಯಲ್ಲಿ ಅಲ್ಲ!

`ನೀವು ತಲೆಯಲ್ಲಿ ಹೊತ್ತುಕೊಂಡ ಚಿನ್ನದ ಕಿರೀಟವನ್ನು ಆಫೀಸ್‍ನಲ್ಲೇ ಬಿಟ್ಟುಬಿಡಿ’ ಎಂದು ಅವರು ಹೇಳುತ್ತಿದ್ದರು. ಕುಟುಂಬ ಮತ್ತು ಸ್ನೇಹಿತರ ಬಳಗಕ್ಕೆ ಬಂದಾಗ ಸಿಇಒ ಎಂಬ ಹಮ್ಮು ಇವರಲ್ಲಿ ಇರುತ್ತಿರಲಿಲ್ಲ. ಮನೆಯಲ್ಲಿ ಒಳ್ಳೆಯ ಅಮ್ಮನಾಗಿ, ತನ್ನ ತಾಯಿಗೆ ಪ್ರೀತಿಯ ಮಗಳಾಗಿ ಇರುತ್ತಿದ್ದರು.
ಇಂದ್ರಾ ನೂಯಿ ಪ್ರೊಫೈಲ್
ಇಂದ್ರಾ ನೂಯಿ ಹುಟ್ಟಿದ್ದು ಚೆನ್ನೈನಲ್ಲಿ.ಅಮೆರಿಕದ ಪೌರತ್ವ ಹೊಂದಿರುವ ಇವರು 2014ರಲ್ಲಿ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. 2015ರ ಫಾರ್ಚೂನ್ ಪಟ್ಟಿಯಲ್ಲಿ ವಿಶ್ವದ ಎರಡನೇ ಪ್ರಭಾವಿ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. ಐಐಎಂಕೋಲ್ಕೋತ್ತದಿಂದ ಎಂಬಿಎ, ಯೇಲ್ ವಿವಿಯಿಂದ ಎಂಎಸ್ ಪದವಿ ಪಡೆದಿದ್ದಾರೆ.

ಸ್ಫೂರ್ತಿದಾಯಕ ಕತೆ: ಇಂದ್ರಾ ನೂಯಿ ಯಶಸ್ಸಿನ ಕತೆ