ಕನಕಮಜಲು: ಕರಾವಳಿಯಲ್ಲೊಂದು ಕಲಾಗ್ರಾಮ

Featured post on IndiBlogger, the biggest community of Indian Bloggers

ಕರಾವಳಿ ಸೇರಿದಂತೆ ಕರ್ನಾಟಕದಲ್ಲಿ ಗ್ರಾಮಕ್ಕೊಂದು ಯುವಕಮಂಡಲ-ಯುವತಿ ಮಂಡಲಗಳು ಸಾಮಾನ್ಯ. ಪ್ರತಿ ಯುವ ಸಂಘಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅಂತಹ ವ್ಯತ್ಯಾಸಗಳು ಇರುವುದಿಲ್ಲ. ಆಗಾಗ ಗ್ರಾಮೀಣ ನಾಟಕ, ಯಕ್ಷಗಾನ, ಹಾಡು ನೃತ್ಯ, ಒಂದಿಷ್ಟು ಗ್ರಾಮೀಣ ಕ್ರೀಡೆಗಳು, ಶ್ರಮದಾನ…. ಹೀಗೆ ಒಂದೇ ತೆರನಾದ ಚಟುವಟಿಕೆಗಳು.

ನನ್ನ ಪಕ್ಕದೂರು ಕನಕಮಜಲು ಹಾಗಲ್ಲ. ನನ್ನ ಕಾಲೇಜು ದಿನಗಳಲ್ಲಿಯೇ ವಿನೂತನ ಕಾರ್ಯಕ್ರಮಗಳಿಂದ ಗಮನಸೆಳೆಯುತ್ತಿತ್ತು.ಊರು ಬಿಟ್ಟು ಬಂದು ಹತ್ತು ವರ್ಷ ಕಳೆದರೂ ಅಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಸುದ್ದಿ ಸುದ್ದಿಪತ್ರಿಕೆಗಳಮೂಲಕವೇ ನನಗೆ ತಲುಪುತ್ತಿದೆ. ಇತ್ತೀಚೆಗೆ ಅಲ್ಲಿ ಕಲಾ ಕಾರ್ಯಕ್ರಮವೊಂದು ನಡೆದಾಗ ಆ ಊರಿನ ವಿಶೇಷಗಳಕುರಿತು, ಅಲ್ಲಿನ ಯುವಮನಸ್ಸುಗಳ ಕುರಿತು ಕರ್ನಾಟಕಬೆಸ್ಟ್.ಕಾಂನಲ್ಲಿ ಒಂದು ಬ್ಲಾಗ್ ಬರಹ ಬರೆಯಲೇಬೇಕೆನಿಸಿತು.

ಕ್ಯಾನ್ವಸ್ನಲ್ಲಿ ಕಂಡ ಕನಕಮಜಲು

ಬಣ್ಣಗಳು, ಕುಂಚ, ಕ್ಯಾನ್ವಸ್ ಮತ್ತು ಕಣ್ಣ ಮುಂದೆ ಒಂದು ಸುಂದರ ಪರಿಸರವಿದ್ದರೆ ಚಿತ್ರಕಲಾವಿದರಿಗೆ ಹಬ್ಬ. ಜಗತ್ತನ್ನೇ ಮರೆತು ಆ ಸುಂದರ ಪರಿಸರವನ್ನು ಕ್ಯಾನ್ವಸ್ ನಲ್ಲಿ ಮೂಡಿಸುತ್ತಾರೆ. ಮಂಗಳೂರಿನ ಮಹಾಲಸ ಕಾಲೇಜಿನ ಕಲಾವಿದ್ಯಾರ್ಥಿಗಳು ಇತ್ತೀಚೆಗೆ ಕನಕಮಜಲು ಎಂಬ ಪುಟ್ಟಗ್ರಾಮಕ್ಕೆ ಬಂದು ಇಹದ ಪರಿವೆ ಮರೆತು ವಾರವಿಡಿ ಕನಕಮಜಲಿನ ರಸ್ತೆ, ಮನೆ, ಅಂಗಡಿಗಳ ಮುಂದೆ ಕುಳಿತು, ಗ್ರಾಮ್ಯ ಸೌಂದರ್ಯವನ್ನು ಕಣ್ತುಂಬಿಕೊಂಡು ಕ್ಯಾನ್ವಸ್ ಮೇಲೆ ಪಡಿಮೂಡಿಸಿದ ಪರಿಗೆ ಜನರು ಬೆರಗಾಗಿದ್ದರು.

ಕರ್ನಾಟಕದ, ಕರಾವಳಿಯ ಇತರೆ ಊರುಗಳನ್ನು ಬಿಟ್ಟು ಚಿತ್ರಕಲಾವಿದರು ಕನಕಮಜಲನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಸುತ್ತಲೂ ಕಾಡು, ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಪರಿಸರ, ಹೆದ್ದಾರಿಯ ಇಕ್ಕೆಲಗಳಲ್ಲಿರುವ ಮನೆ, ಅಂಗಡಿಗಳು, ಮಂದಿರಗಳು… ಇವಿಷ್ಟೇ ಕಾರಣವೇ. ಇಂತಹ ಪರಿಸರ ದಕ್ಷಿಣಕನ್ನಡದ ಬಹುತೇಕ ಊರುಗಳಲ್ಲಿದೆ. ಆದರೆ, ಚಿತ್ರಕಲಾವಿದರಿಗೆ ಇವಿಷ್ಟೇ ಸಾಕಾಗುವುದೇ? ನೀವು ಎಷ್ಟು ಬೇಕೋ ಅಷ್ಟು ಹೊತ್ತು ಚಿತ್ರಬರೀರಿ, ನಾವು ನಿಮಗೆ ಪ್ರೋತ್ಸಾಹ ನೀಡುತ್ತೇವೆ ಎಂದು ಪ್ರೋತ್ಸಾಹ ನೀಡುವ ಕನಕಮಜಲಿನ ಕಲಾಮನಸ್ಸು ಈ ಯುವಕಲಾವಿದರ ಕಣ್ಣುಗಳಲ್ಲಿ ಬಣ್ಣ ತುಂಬಿದೆ.

ಈ ಸುಯೋಗ ಚಿತ್ರಕಲಾಶಿಬಿರದ ಕುರಿತು ಪ್ರತ್ಯಕ್ಷದರ್ಶಿ ವರದಿಗಳು, ಚಿತ್ರಗಳು ಈ ಕೆಳಗೆ ಇದೆ. ಕಣ್ತುಂಬಿಕೊಳ್ಳಿರಿ.

ಮೇಲೆ ತಿಳಿಸಿದ ಒಂದು ಚಿತ್ರಕಲಾ ಕಾರ್ಯಕ್ರಮವೇ ಕನಕಮಜಲಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಎಂತಹದ್ದು ಎನ್ನುವುದಕ್ಕೆ ಸಾಕ್ಷ್ಯ ಒದಗಿಸಬಹುದು. ಆದರೆ, ಇಷ್ಟು ಮಾತ್ರ ಮಾಹಿತಿ ನೀಡಿ “ಕಲಾಗ್ರಾಮ’ವೆಂಬ ಹೆಡ್ ಲೈನ್ ನೀಡಲು ಸಾಕಾಗದು. ಹೀಗಾಗಿ, ನನಗೆ ಸುಲಭವಾಗಿ ದೊರಕಿದ (ಅಲ್ಲಿ ಸಾಕಷ್ಟು ಸಣ್ಣಪುಟ್ಟ ಕಾರ್ಯಕ್ರಮಗಳು ಹೆಚ್ಚು ಸದ್ದಿಲ್ಲದೇ ಸದಾ ನಡೆಯುತ್ತಿರುತ್ತವೆ) ಕೆಲವು ಇತರೆ ಕಾರ್ಯಕ್ರಮಗಳ ವಿವರವನ್ನು ಈ ಕೆಳಗೆ ನೀಡುತ್ತಿದ್ದೇನೆ. ಇವುಗಳಲ್ಲಿ ಕೆಲವು ತಿಂಗಳಹಿಂದೆ, ಕೆಲವು ವರ್ಷಗಳ ಹಿಂದೆ, ಹಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮಗಳು ಸೇರಿವೆ.

This slideshow requires JavaScript.

ಹೀಗೆ ಚಿತ್ರಕಲೆಗೆಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಕನಕಮಜಲು ಯುವಕಮಂಡಲ ಸೀಮಿತ ಎಂದುಕೊಳ್ಳಬೇಡಿ. ಇಲ್ಲಿ ಪ್ರಶಸ್ತಿ ವಿಜೇತಸಿನಿಮಾಗಳು, ವಿಶೇಷವಾದ ಚಲನಚಿತ್ರಗಳು, ನಾಟಕಗಳು ಸಹ ಪ್ರದರ್ಶನಗೊಳ್ಳುತ್ತವೆ. ಅಲ್ಲಿನ ಯುವಜನತೆ ಆಗಾಗ ಟ್ರೆಕ್ಕಿಂಗ್, ಪ್ರವಾಸ, ಪಿಕ್ ನಿಕ್ಎಂದೂ ಹೋಗುತ್ತಿರುತ್ತಾರೆ. ಅಂತಹ ಹತ್ತು ಹಲವುಕಾರ್ಯಕ್ರಮಗಳಿಗೆ ಸಾಕ್ಷಿಯಾಗಿ ಒಂದೆರಡು ಚಿತ್ರಗಳನ್ನು ಕೆಳಗೆ ನೀಡಲಾಗಿದೆ.

This slideshow requires JavaScript.

ರಾಷ್ಟೀಯ ಯುವ ಪ್ರಶಸ್ತಿ ಪಡೆದ ಹೆಮ್ಮೆ

ಕನಕಮಜಲು ಯುವಕ ಮಂಡಲದ ಮಾಜಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜಗದ್ದೆ ಅವರು 2012ರಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿಗೆ ಭಾಜನರಾಗಿದ್ದರು. ಇದಕ್ಕೂ ಮೊದಲು 2008ರಲ್ಲಿ ಇವರು ರಾಜ್ಯ ಯುವ ಪ್ರಶಸ್ತಿಯನ್ನೂ ಪಡೆದಿದ್ದರು. ಉಳಿದಂತೆ ಕನಕಮಜಲು ಯುವಕ ಮಂಡಲಕ್ಕೆ ಕ್ಲಬ್ ಮಟ್ಟದ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳು ದೊರಕಿವೆ.

ಈ ಯುವಕಮಂಡಲದ ಸಾಧನೆಯ ಹಿಂದೆ ಅನೇಕ ಯುವಕ, ಯುವತಿಯರು, ಊರಿನ ಹಿರಿಯರು ಇದ್ದಾರೆ. ಜೊತೆಗೆ, ಈ ಯುವಕಮಂಡಲದ ಪ್ರಮುಖಚಾಲಕಶಕ್ತಿಯಾಗಿ ರಾಷ್ಟ್ರೀಯ ಯುವ ಪ್ರಶಸ್ತಿ  ಮತ್ತು  ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಲಕ್ಷ್ಮಿನಾರಾಯಣ ಕಜಗದ್ದೆ(ಊರಿನ ಯುವಕರಿಗೆ ಪ್ರೀತಿಯಲಕ್ಷ್ಮಿಯಣ್ಣ) ಇದ್ದಾರೆ. ಈ ಯುವಕಮಂಡಲದ ಕುರಿತು ಅಲ್ಪಸ್ವಲ್ಪ ಮಾಹಿತಿಯು ಕನಕಮಜಲು ಬ್ಲಾಗಿನಿಂದ ಪಡೆದುಕೊಳ್ಳಬಹುದು(ಇತ್ತೀಚೆಗೆ ಅಪ್ಡೇಟ್ ಆಗಿಲ್ಲ).

ಇಲ್ಲಿ ನೀಡಿರುವುದು ಕೆಲವು ಉದಾಹರಣೆಗಳಷ್ಟೇ, ಅಲ್ಲಿ ನಡೆದ ಹಿಂದಿನ ಕಾರ್ಯಕ್ರಮಗಳ ಕುರಿತು ಬರೆಯುವುದು ಕಷ್ಟ. ಯಾಕೆಂದರೆ, ಅಲ್ಲಿ ನಡೆದ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಚಂದ. ಯುವಜನತೆಯ ಲವಲವಿಕೆಯ ಕಾರ್ಯಚಟುವಟಿಕೆಯಿಂದ ಕಲಾಗ್ರಾಮವಾಗಿ ಕರ್ನಾಟಕದಲ್ಲಿ ಮಿಂಚುತ್ತಿರುವ ಕನಕಮಜಲಿನ ಯುವ ಮನಸ್ಸುಗಳಿಗೆ ಕರ್ನಾಟಕ ಬೆಸ್ಟ್.ಕಾಂ ಕಡೆಯಿಂದ ಆಲ್ ದಿ ಬೆಸ್ಟ್.