Big Dreams: 20 ಕೋಟಿ ಸಿಕ್ಕರೆ ಏನು ಮಾಡ್ತಿರಿ?

By | January 1, 2019

ನಿಮಗೆ ಅಂದಾಜು 20 ಕೋಟಿ ರೂಪಾಯಿ ನೀಡಿದರೆ ಏನು ಮಾಡುವಿರಿ? ಇಂತಹ ಪ್ರಶ್ನೆ ನನ್ನಲ್ಲಿ ಕೇಳಿದರೆ “ಬೆಂಗಳೂರಿನಲ್ಲಿ ಒಂದು ಸೈಟ್ ಅಥವಾ ಅಪಾರ್ಟ್ ಮೆಂಟ್”(ಬಾಡಿಗೆ ಕೊಟ್ಟು ಸಾಕಾಗಿದೆ), ಊರಲ್ಲಿ ಒಂದು ಆಸ್ತಿ ಖರೀದಿ… ಒಂದು ಒಳ್ಳೆಯ ಕಾರು… ಹೀಗೆ ಒಂದಿಷ್ಟು ಕನಸುಗಳನ್ನು ಬಿಚ್ಚಿಡುತ್ತಿದ್ದೆ. ಬಹುತೇಕರಿಗೆ ಇದೇ ರೀತಿ ಕನಸು ಇರಬಹುದು. ಹಣ ಕೊಡ್ತಿನಿ ಎಂದು ಯಾರು ಪ್ರಶ್ನೆ ಕೇಳುತ್ತಾರೆ? ಇಂತಹ ಪ್ರಶ್ನೆಯನ್ನು ಯಾರಾದರೂ ಕೇಳುತ್ತಾರ? ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು.

ನಿಜಕ್ಕೂ ಇಂತಹ ಪ್ರಶ್ನೆ ಕೇಳಲಾಗಿತ್ತು…

ಸಾವಿರಾರು ಜನರು ಈ ಪ್ರಶ್ನೆಗೆ ಉತ್ತರಿಸಿದ್ದರು..

ಈ ಸ್ಪರ್ಧೆಯಲ್ಲಿ ಪುತ್ತೂರು ಮೂಲದ ಹನೀಫ್ ಗೆದ್ದಿದ್ದಾರೆ.  (ಇವರ ಕುರಿತು ವೆಬ್ಸೈಟ್ ರಚನೆಗೆ ಸಂಬಂಧಪಟ್ಟ ಲೇಖನದಲ್ಲಿ ಕೊಂಚ ಬರೆದಿದ್ದೆ)

ಹೀಗಾಗಿ, ಇಂದು ನನ್ನ ಬ್ಲಾಗ್ ಬರಹ ಹನೀಫ್ ಪುತ್ತೂರು ಅವರ ಗೆಲುವು ಮತ್ತು ಅವರ ಸುಂದರ ಕನಸಿನ ಕುರಿತು 🙂

ಬುದಾಬಿ ಡಿಯರ್ ಬಿಗ್ ಟಿಕೆಟ್ ‍ಸ್ಪರ್ಧೆ ಇತ್ತೀಚೆಗೆ ನಡೆದಿತ್ತು. ಪ್ರತಿವರ್ಷ ಐಷಾರಾಮಿ ಕಾರುಗಳನ್ನು ಉಡುಗೊರೆ ನೀಡುವ ಈ ಸ್ಪರ್ಧೆ(ಒಂದರ್ಥದಲ್ಲಿ ಲಾಟರಿ)ಯನ್ನು ಈ ಬಾರಿ ವಿನೂತನವಾಗಿ ಆಯೋಜಿಸಲಾಗಿತ್ತು. ಯುಎಇಯಲ್ಲಿರುವ ಜಗತ್ತಿನ ಎಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

“ನಿನಗೆ 10 ಮಿಲಿಯನ್ ದಿರ್ಹಮ್ ನೀಡಿದರೆ ಏನು ಮಾಡುತ್ತೀಯಾ?’ ಎಂಬ ಪ್ರಶ್ನೆಯನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಸಾಕಷ್ಟು ಜನರು ವೈಯಕ್ತಿಕ, ಸಾಮಾಜಿಕ ಗುರಿಗಳನ್ನು ಇಟ್ಟುಕೊಂಡ ಉತ್ತರ ನೀಡಿದ್ದರು. ಸಾವಿರಾರು ಜನರಲ್ಲಿ ಅಂತಿಮವಾಗಿ 20 ಜನರನ್ನು ಆಯ್ಕೆ ಮಾಡಿ ಮತದಾನದ ಮೂಲಕ ಅಗ್ರ 5 ಜನ ವಿನ್ನರ್ ಗಳನ್ನು ಆಯ್ಕೆ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ಸ್ನೇಹಿತರಾಗಿರುವ ಹನೀಫ್ ಪುತ್ತೂರು ಗೆಲುವು ಪಡೆದಿದ್ದಾರೆ ಎನ್ನುವ ಸುದ್ದಿನನಗಂತೂ ಖುಷಿ, ಥ್ರಿಲ್ ನೀಡಿದೆ.

ಏನಿದು ಬಿಗ್ ಟಿಕೇಟ್?: “ನಿನಗೆ 10 ಮಿಲಿಯನ್ ದಿರ್ಹಮ್ ನೀಡಿದರೆ ಏನು ಮಾಡುತ್ತೀಯಾ?’ ಎಂಬ ಪ್ರಶ್ನೆಯ ಜೊತೆಗೆ ಈ ಸ್ಪರ್ಧೆ ಇದೆ. ಅಂದರೆ, ಸುಮಾರು 20 ಕೋಟಿ ಹಣ ನೀಡಿದರೆ ಏನು ಮಾಡುವೆ ಎಂಬ ಪ್ರಶ್ನೆಗೆ ಸ್ಪರ್ಧಿಗಳು ಉತ್ತರಿಸಬೇಕು. ಇಂತಹ ಉತ್ತರಗಳನ್ನು ನೀಡಿದವರಲ್ಲಿ ಅತ್ಯುತ್ತಮ ಕನಸು ವ್ಯಕ್ತಪಡಿಸಿದ ಅಗ್ರ 20 ಜನರನ್ನು ಆಯ್ಕೆ ಮಾಡಲಾಗುತ್ತದೆ. ಈ 20 ಜನರ ಕನಸು ಅಥವಾ ಭವಿಷ್ಯದ ಯೋಜನೆಯ ವಿಡಿಯೋಗಳಿಗೆ ವಿಶ್ವದ್ಯಾಂತ ಇರುವ ಜನರು ಮತ ಹಾಕುತ್ತಾರೆ. ಈ ವಿಡಿಯೋವನ್ನು ಬಿಗ್ ಟಿಕೇಟ್ ವೆಬ್ ಸೈಟ್ ಮತ್ತು ಟೀವಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ತಾಣಗಳಲ್ಲಿ ಪ್ರಕಟಿಸಲಾಗಿತ್ತು. ಬಹುತೇಕ ಸ್ಪರ್ಧಿಗಳು ಬಿಗ್ ಟಿಕೇಟ್ ಹಣ ಸಿಕ್ಕರೆ ತಮ್ಮ ಸ್ವಂತ ಬಳಕೆಗೆ (ಸ್ವಲ್ಪ ಸಮಾಜ ಸೇವೆಗೆ) ಬಳಸುವುದಾಗಿ ತಿಳಿಸಿದ್ದರು. ಆದರೆ, ಹನೀಫ್ ಕನಸು ಭಿನ್ನವಾಗಿತ್ತು. ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಹನೀಫ್ ಪುತ್ತೂರು ಕನಸು ಏನಾಗಿತ್ತು?

ಡಿಯರ್ ಬಿಗ್ ಟಿಕೇಟ್ ಸ್ಪರ್ಧೆಯಲ್ಲಿ ಇತರರಿಗಿಂತ ಹನೀಫ್ ಉತ್ತರ ಯಾಕೆ ಬಹುಮಾನ ಪಡೆಯಿತು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು.

ನನಗೆ ಹಣ ಬಂದರೆ ನಾನು ನನ್ನ ಪುತ್ತೂರಿನ ಬಡ ವಿದ್ಯಾರ್ಥಿಗಳಿಗೆ ಹೈಟೆಕ್ ಮೊಬೈಲ್ ಬಸ್ ಮೂಲಕ ಶಿಕ್ಷಣ ಕಲ್ಪಿಸುತ್ತೇನೆ ಎಂಬ ಕನಸನ್ನು ಬಿಗ್ ಟಿಕೇಟ್ ಮುಂದೆ ಹನೀಫ್ ಬಿಚ್ಚಿಟ್ಟಿದ್ದರು.

ಅಂದರೆ, ಒಂದು ಬಸ್ ನಲ್ಲಿ ಸುಮಾರು 50 ಲ್ಯಾಪ್ ಟಾಪ್ ಕಂಪ್ಯೂಟರ್, ಸೌರ ಫ್ಯಾನ್, ಜನರೇಟರ್ ಅಳವಡಿಸಿ ನುರಿತ ತಂತ್ರಜ್ಞಾನ ಶಿಕ್ಷಕರನ್ನು ನೇಮಿಸಲಾಗುತ್ತದೆ. ಈ ಬಸ್ ದಿನದಲ್ಲಿ 5 ಶಾಲೆಗಳಿಗೆ ತೆರಳಿ ಅಲ್ಲಿನ ಬಡವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತದೆ. ಈ ಬಸ್ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸೇರಿದಂತೆ ಇತ್ತೀಚಿನ ತಂತ್ರಜ್ಞಾನಗಳನ್ನೂ ಕಲಿಸುವ ಕನಸು ಹನೀಫ್ ಅವರದ್ದು. ಒಂದು ಅತ್ಯಾಧುನಿಕ ಬಸ್ ಗೆ ಸುಮಾರು 2 ಕೋಟಿ ರೂ. ಖರ್ಚು ಬೀಳಲಿದೆ. ಬಹುಮಾನದ ಮೊತ್ತಕ್ಕೆ ತಕ್ಕಂತೆ ಹಲವು ಬಸ್ ಗಳನ್ನು ರೆಡಿ ಮಾಡಲಾಗುತ್ತದೆ (ಬಹುಮಾನದ ನಿಖರ ಮೊತ್ತ ಖಚಿತವಾಗಿಲ್ಲ).

ವಿಶೇಷವೆಂದರೆ ಈ ಮೂಲಕ ವಿದ್ಯಾರ್ಥಿಗಳಿಗೆ ವಾರಕ್ಕೊಂದು ವಿಷಯ ಕಲಿಸುವ ಯೋಜನೆ ರೂಪಿಸಿದ್ದಾರೆ. ಅಂದರೆ, ಒಂದು ವಾರ ಕಂಪ್ಯೂಟರ್ ಲ್ಯಾಬ್, ಮತ್ತೊಂದು ವಾರ ರೊಬೊಟಿಕ್ಸ್, ಮತ್ತೊಂದು ವಾರ ಸ್ಕಿಲ್ ಡೆವಲಪ್ ಮೆಂಟ್, ಮಗದೊಂದು ವಾರ, ಮೆಡಿಕಲ್ ಚೆಕಪ್, ಹೀಗೆ ಹಲವು ವಿಷಯಗಳನ್ನು ಸರಣಿಯಾಗಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಪುತ್ತೂರು ಮಾತ್ರವಲ್ಲದೆ ಯೋಜನೆಯನ್ನು ಇತರೆ ಊರುಗಳಿಗೂ ಭವಿಷ್ಯದಲ್ಲಿ ವಿಸ್ತರಿಸುವ ಕನಸು ಅವರಿಗಿದೆ.

ಹನೀಫ್ ಕಿರು ಪರಿಚಯ: ದಕ ಜಿಲ್ಲೆಯ ಪುತ್ತೂರಿನ ಆರ್ಯಾಪು ಗ್ರಾಮದ ಬಲ್ಲೇರಿಯ ಕೂಲಿ ಕಾರ್ಮಿಕ ಅಬ್ಬಾಸ್ ಹಾಕಿ ಅವರ ಪುತ್ರ ಮಹಮ್ಮದ್ ಹನೀಫ್ ಅವರು ದುಬೈನ ಖಲೀಫಾ ಯೂನಿವರ್ಸಿಟಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದವರು. ಇತ್ತೀಚೆಗೆ ಅವರು ದುಬೈ ವಿವಿಯ ಬಿನ್ ರಾಶಿದ್ ಬಾಹ್ಯಾಕಾಶ ಕೇಂದ್ರದಲ್ಲಿ ಸಾಫ್ಟ್ ವೇರ್ ವಿಭಾಗದಲ್ಲಿ ಉದ್ಯೋಗ ಪಡೆದು ಅಲ್ಲಿನ ರಾಕೆಟ್ ಮಿಷನ್ ಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತಿದ್ದಾರೆ.  ಇವರು ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಓದಿದ್ದಾರೆ. ಇವರು ಈಗ ಯುಎಇಯ ಬಾಹ್ಯಾಕಾಶ ಯೋಜನೆಯಲ್ಲಿ ಮಾತ್ರ ಕಳೆದುಹೋಗಿಲ್ಲ. ಊರಿಗೆ ಏನಾದರೂ ಸಮಾಜ ಸೇವೆ ಮಾಡಬೇಕೆನ್ನುವ ತುಡಿತವನ್ನು ಜೀವಂತವಾಗಿಟ್ಟಿದ್ದಾರೆ. ಮಂಗಳೂರು ಎಂ ಫ್ರೆಂಡ್ಸ್ ನ ಯುಎಇ ಪ್ರಾಂತ್ಯದ ಮುಖ್ಯಸ್ಥರಾಗಿದ್ದಾರೆ. ಎಂ ಫ್ರೆಂಡ್ಸ್ ಮೂಲಕ ಪ್ರತಿದಿನ ವೆಲ್ನಾಕ್ ಆಸ್ಪತ್ರೆಯಲ್ಲಿ ನೂರಾರು ಬಡ ರೋಗಿಗಳ ಜೊತೆಗಾರರಿಗೆ ರಾತ್ರಿ ಹೊತ್ತಿನ ಊಟ ನೀಡಲಾಗುತ್ತದೆ. ಎಂ ಫ್ರೆಂಡ್ಸ್ ಕಾರುಣ್ಯ ಯೋಜನೆಯ ಕುರಿತು ಇನ್ನೊಂದು ಬ್ಲಾಗ್ ಪೋಸ್ಟ್ ಮೂಲಕ ತಿಳಿಸುತ್ತೇನೆ.

Haneef Puttur Blog

Haneef Puttur Github repositories https://github.com/haneefputtur/

This slideshow requires JavaScript.

Leave a Reply

This site uses Akismet to reduce spam. Learn how your comment data is processed.