ಕರ್ನಾಟಕ ಬೆಸ್ಟ್ ವೆಬ್ ಸೈಟ್ ಗೈಡ್ ಮೂಲಕ ಈಗಾಗಲೇ ವರ್ಡ್ ಪ್ರೆಸ್ ಯಾಕೆ ಬೆಸ್ಟ್? ಸೇರಿದಂತೆ ಕೆಲವು ಲೇಖನ ಓದಿದ್ದೀರಿ. ಈಗ ಬ್ಲಾಗರ್ ಮೂಲಕ ಬ್ಲಾಗ್ ರಚಿಸುವ ಕಲೆಯನ್ನು ಕಲಿಯೋಣ. ಇದನ್ನು ಕಲಿತರೆ ಮುಂದೆ ವೆಬ್ ಸೈಟ್ ರಚಿಸುವುದು ನಿಮಗೆ ಸುಲಭವಾಗಲಿದೆ.
ಫೇಸ್ಬುಕ್ ಇತ್ಯಾದಿಗಳ ನಂತರ ಬ್ಲಾಗರ್ ಬಳಸುವವರು ಕಡಿಮೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬ್ಲಾಗರ್ ಅನ್ನೇ ಸ್ವಂತ ವೆಬ್ ಸೈಟ್ ಆಗಿ ರೂಪಿಸಿ ಬಹುತೇಕರು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ವೆಬ್ ಸೈಟ್ ನಿರ್ಮಾಣಕ್ಕೆ ಹಲವು ಹತ್ತು ಸಾವಿರಗಳನ್ನು ನೀಡಲು ಸಾಧ್ಯವಿಲ್ಲದೆ ಇರುವವರು ಸುಲಭವಾಗಿಯೇ ಬ್ಲಾಗ್ ಸ್ಪಾಟ್ ಗಳಲ್ಲಿಯೇ ಕಂಟೆಂಟ್ ನೀಡಿ ಆ್ಯಡ್ ಸೆನ್ಸ್, ಅಫಿಲಿಸಿಯೇಟ್ ಕಾರ್ಯಕ್ರಮಗಳನ್ನು ಅಳವಡಿಸಿ ಆದಾಯ ಪಡೆಯುತ್ತಿದ್ದಾರೆ. ಬ್ಲಾಗರ್ ಅನ್ನು ವೆಬ್ ಸೈಟ್ ಆಗಿ ಪರಿವರ್ತಿಸುವ ವೇದಿಕೆಯಾಗಿ ಮೊದಲು ಬ್ಲಾಗರ್ ನಲ್ಲಿ ಬ್ಲಾಗ್ ರಚಿಸಲು ಕಲಿಯೋಣ ಬನ್ನಿ.
#1 ಮೊದಲಿಗೆ ನಿಮ್ಮ ಜೀಮೇಲ್ ಐಡಿಯ ಮೂಲಕ ಬ್ಲಾಗರ್ ಖಾತೆಗೆ ಲಾಗಿನ್ ಆಗಿ
# 2 ನಿಮ್ಮ ಬ್ಲಾಗ್ ಗೆ ಒಂದು ಹೆಸರು ನೀಡಿ. ಅಂದರೆ ನಿಮ್ಮಸೈಟ್ ಹೆಸರು.ಬ್ಲಾಗ್ ಸ್ಪಾಟ್.ಕಾಂ ಎಂದು ಹೆಸರು ಬರುತ್ತದೆ.
#3 ಅಲ್ಲಿ ಡೊಮೈನ್ ಖರೀದಿ ಆಯ್ಕೆಯೂ ಇದೆ. ಆದರೆ, ಅಲ್ಲಿರುವ ಡೊಮೈನ್ ಹೆಸರನ್ನು ಈಗಲೇ ಖರೀದಿಸಬೇಡಿ. ಮುಂದೆ ಖರೀದಿಸಬಹುದು ಅಥವಾ ಅದಕ್ಕಿಂತಲೂ ಕಡಿಮೆ ದರಕ್ಕೆ ದೊರೆಯುವ ಬೇರೆಡೆ ಖರೀದಿಸಬಹುದು. ಡೊಮೈನ್ ಖರೀದಿಸಬೇಕೆಂದೂ ಇಲ್ಲ.
#4. ಅಲ್ಲಿರುವ ರೆಡಿಮೆಡ್ ಟೆಂಪ್ಲೆಟ್ ಗಳನ್ನು ಬಳಸಿ ಒಂದು ಬ್ಲಾಗ್ ರಚಿಸಿ.
#5. ನ್ಯೂಪೋಸ್ಟ್ ಎಂಬಲ್ಲಿ ನೀವು ಲೇಖನಗಳನ್ನು ಬರೆದು ಪೇಸ್ಟ್ ಮಾಡಿ. ನೆನಪಿಡಿ: ಯೂನಿಕೋಡ್ ಗೆ ಮಾತ್ರ ಬೆಂಬಲ ನೀಡುತ್ತದೆ.
#6. ಅಲ್ಲಿ ಚಿತ್ರಗಳನ್ನು ಅಪ್ಲೋಡ್ ಮಾಡಬಹುದು. ವರ್ಡ್ ಪ್ಯಾಡ್ ಬಳಸಲು ಗೊತ್ತಿದ್ದರೆ ಅಲ್ಲಿರುವ ಆಯ್ಕೆಗಳು ನಿಮಗೆ ಅರ್ಥವಾಗಬಹುದು.
#7. ನಿಮ್ಮ ಲೇಖನಕ್ಕೆ ಆಕರ್ಷಕವಾದ(ಓದುಗರನ್ನು ಸೆಳೆಯುವಂತಹ) ಹೆಡ್ ಲೈನ್ ನೀಡಿ.
# 8 ಹೆಡ್ ಲೈನ್ ಕೆಳಗಿರುವ ಬಾಕ್ಸ್ ಗಳಲ್ಲಿ ನೀವು ಬರೆದ ಲೇಖನವನ್ನು ಬೋಲ್ಡ್, ಇಟಾಲಿಕ್ ಮಾಡುವ ಆಯ್ಕೆಗಳು ಇರುತ್ತವೆ. ಅವುಗಳನ್ನು ಬಳಸಿಕೊಳ್ಳಿರಿ.
#9 ಪುಟದ ಬಲಭಾಗದಲ್ಲಿ ಇರುವ ವಿವಿಧ ಆಯ್ಕೆಗಳನ್ನು ಗಮನಿಸಿರಿ. ಅವುಗಳಲ್ಲಿ ಲೇಬಲ್ಸ್ ಎಂಬ ವಿಭಾಗವನ್ನು ಕ್ಲಿಕ್ ಮಾಡಿ. ನೀವು ಯಾವ ವಿಷಯದ ಬಗ್ಗೆ ಲೇಖನ ಬರೆದಿದ್ದೀರೋ ಅದರ ಕೀವರ್ಡ್ ಬರೆಯಿರಿ. ಉದಾಹರಣೆಗೆ ಪೊಲೀಸ್ ನೇಮಕಾತಿ ಬಗ್ಗೆ ಬರೆದಿದ್ದರೆ ಪೊಲೀಸ್ ನೇಮಕ, ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ 2018 ಇತ್ಯಾದಿ ಕೀವರ್ಡ್ ಗಳನ್ನು ಬರೆಯಿರಿ. ನೀವು ಬರೆಯುವ ಕೀವರ್ಡ್ ಗಳು ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸಲು ಬಳಸುವಂತದ್ದು ಆಗಿದ್ದರೆ ಉತ್ತಮ. ನೆನಪಿಡಿ ನೀವು ಯಾವ ವಿಭಾಗದ ಲೇಖನ ಬರೆಯುವಿರೋ ಅದರ ಲೇಬಲ್ ನೀಡಲು ಮರೆಯಬೇಡಿ. ನೀವು ಸುದ್ದಿಗಳನ್ನು ಹಂಚಿಕೊಳ್ಳುವುದಿದ್ದರೆ ನ್ಯೂಸ್ ಎಂದು ಬರೆಯಿರಿ. ವಾಣಿಜ್ಯ ಸುದ್ದಿಗಳನ್ನು ಬರೆಯುವುದಿದ್ದರೆ ಕಾಮರ್ಸ್ ನ್ಯೂಸ್ ಎಂದು ಬರೆಯಿರಿ. ಈ ಕೀವರ್ಡ್ ಗಳು ಮುಂದೆ ವೆಬ್ ಪುಟದಲ್ಲಿ ವಿಭಾಗಗಳನ್ನು ರಚಿಸುವಾಗ ಅಗತ್ಯವಾಗಿ ಬೇಕಿರುತ್ತದೆ.
#10. ಲೇಬಲ್ಸ್ ಕೆಳಗೆ ಶೆಡ್ಯೂಲ್ ಎಂಬ ಆಯ್ಕೆಯಿದೆ. ನಿಮ್ಮ ಲೇಖನ ಸಂಪೂರ್ಣವಾಗಿ ಸಿದ್ಧವಾದ ನಂತರ ನಿಗದಿತ ಸಮಯ, ದಿನಾಂಕದಂದು ಸುದ್ದಿ ಪ್ರಕಟವಾಗುವಂತೆ ಮಾಡಲು ಇರುವ ಆಯ್ಕೆ ಇದಾಗಿದೆ.
#11. ಬಹುತೇಕರು ಶೆಡ್ಯೂಲ್ ಕೆಳಗೆ ಇರುವ ಲಿಂಕ್ ಎಂಬ ಆಯ್ಕೆಯನ್ನು ಎಚ್ಚರಿಕೆಯಿಂದ ಗಮನಿಸುವುದಿಲ್ಲ. ಗೂಗಲ್ ಸರ್ಚ್ ನಲ್ಲಿ ಈ ಲಿಂಕ್ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ಇಂಗ್ಲಿಷ್ನನಲ್ಲಿ ಬರೆದಿದ್ದರೆ ಸರ್ಚ್ ಎಂಜಿನ್ ಗೆ ಸುಲಭವಾಗಿ ದೊರಕುತ್ತದೆ. ಇದನ್ನು ಸಣ್ಣ ಅಕ್ಷರದಲ್ಲಿ ಬರೆಯಬೇಕು: ಉದಾಹರಣೆಗೆ: karnataka-state-police-recruitment
- ಲೊಕೆಷನ್ ಎಂಬ ಆಯ್ಕೆಯನ್ನು ಸರಿಯಾಗಿ ಬಳಸಿಕೊಂಡರೆ ಗೂಗಲ್ ಸರ್ಚ್ ನಲ್ಲಿ ನಿಮ್ಮ ಮಾಹಿತಿ ಸಮರ್ಪಕವಾಗಿ ದೊರಕುತ್ತದೆ. ನೀವು ಬೆಂಗಳೂರು ಸುದ್ದಿ ಬರೆದಿದ್ದರೆ ಲೊಕೆಷನ್ ನಲ್ಲಿ ಇಂಗ್ಲಿಷ್ ನಲ್ಲಿ ಬೆಂಗಳೂರು ಎಂದು ಬರೆಯಿರಿ.
- ಸರ್ಚ್ ಡಿಸ್ಕ್ರಿಪ್ಷನ್ ಆಯ್ಕೆಯಲ್ಲಿ ನೀವು ಏನು ಬರೆದಿರುವಿರೋ ಆ ಲೇಖನದ ಸಾರಾಂಶವನ್ನು ಇಂಗ್ಲಿಷ್ ನಲ್ಲಿ ಬರೆಯಿರಿ. ಎರಡು ಮೂರು ವಾಕ್ಯ ಬರೆದರೆ ಉತ್ತಮ. ಇದು ಸಹ ಗೂಗಲ್ ಸರ್ಚ್ ಎಂಜಿನ್ ನಲ್ಲಿ ನಿಮ್ಮ ಲೇಖನವನ್ನು ಹೆಚ್ಚು ಜನರಿಗೆ ತಲುಪಿಸಲು ಸಹಾಯ ಮಾಡುತ್ತದೆ. ಇಂತಹ ಎಸ್ಇಒ ತಂತ್ರವನ್ನು ಮರೆಯುವುದರಿಂದ ಬಹುತೇಕರು ತಮ್ಮ ಲೇಖನಗಳನ್ನು ಹೆಚ್ಚು ಜನರಿಗೆ ತಲುಪಿಸಲು ವಿಫಲವಾಗುತ್ತಾರೆ. ಸದ್ಯ ಇಷ್ಟು ಆಯ್ಕೆಯನ್ನು ಬಳಸಿಕೊಂಡರೆ ಸಾಕು. ಪಬ್ಲಿಷ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಲೇಖನವನ್ನು ಪ್ರಕಟಿಸಬಹುದು.
- ಬ್ಲಾಗರ್ ಡ್ಯಾಷ್ ಬೋರ್ಡಿಗೆ ಹೋಗಿ. ಅಲ್ಲಿ ಪುಟಗಳನ್ನು ರಚಿಸುವ ಆಯ್ಕೆಯಿದೆ. ಲೇಔಟ್ ಆಯ್ಕೆಯಲ್ಲಿ ನಿಮ್ಮ ಬ್ಲಾಗ್ ಯಾವ ರೀತಿ ಕಾಣಿಸಿಕೊಳ್ಳಬೇಕು. ಯಾವ ಭಾಗದಲ್ಲಿ ಯಾವೆಲ್ಲ ಅಂಶಗಳನ್ನು ಜೋಡಿಸಬೇಕೆಂಬ ಆಯ್ಕೆಯಿದೆ. ಅವುಗಳನ್ನು ನಿಮ್ಮ ಇಷ್ಟದಂತೆ ಜೋಡಿಸಿಕೊಳ್ಳಿರಿ.
- ನಿಮ್ಮ ಬ್ಲಾಗ್ ನಲ್ಲಿ ಒಂದಿಷ್ಟು ಮಾಹಿತಿ ತುಂಬಿಸುವರೆಗೆ ಲೇಔಟ್ ಬಗ್ಗೆ ಚಿಂತಿಸಬೇಡಿ.
- ಪುಟ ಎಂಬಲ್ಲಿ ನಿಮಗೆ ಬೇಕಾದ ವಿವಿಧ ಪುಟಗಳನ್ನು ರಚಿಸಿ. ಅಂದರೆ, ಪ್ರೈವೇಸಿ ಪಾಲಿಸಿ, ನಿಮ್ಮ ಬಗ್ಗೆ, ಸಂಪರ್ಕಿಸಿ ಇತ್ಯಾದಿ ಪುಟಗಳನ್ನು ರಚಿಸಬಹುದು. ಇವುಗಳನ್ನು ನಿಮ್ಮ ಬ್ಲಾಗ್ ಗೆ ಜೋಡಿಸಬಹುದು.
- ನಿಮಗೆ ಇಂಗ್ಲಿಷ್ ಬರವಣಿಗೆಯಲ್ಲಿ ಹಿಡಿತವಿದ್ದರೆ ಇಂಗ್ಲಿಷ್ ನಲ್ಲಿಯೂ ಬ್ಲಾಗ್ ರಚಿಸಬಹುದು. ಇಂಗ್ಲಿಷ್ , ತಮಿಳು ಇತ್ಯಾದಿ ಭಾಷೆಗಳಿಗೆ ಮಾತ್ರ ಆ್ಯಡ್ ಸೆನ್ಸ್ ಬೆಂಬಲ ನೀಡುತ್ತದೆ. ಕನ್ನಡಕ್ಕೆ ಮುಂದಿನ ವರ್ಷಗಳಲ್ಲಿ ಆ್ಯಡ್ ಸೆನ್ಸ್ ಬೆಂಬಲ ದೊರಕುವ ನಿರೀಕ್ಷೆಯಿದೆ. ಇದಕ್ಕಾಗಿ ಈಗಲೇ ನಿಮ್ಮ ಬ್ಲಾಗ್ ಗೆ ಭೇಟಿ ನೀಡುವವರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು.
ಬ್ಲಾಗ್ ನಲ್ಲಿ ಪ್ರೀತಿಯಿಂದ ಬರೆಯಿರಿ. ಸಾಕಷ್ಟು ಜನರು ಅದನ್ನು ಓದುತ್ತಾರೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಬ್ಲಾಗ್ ರಚಿಸುವಾಗ ದೂರದೃಷ್ಟಿಯಿರಲಿ.
ಬ್ಲಾಗರ್ ಬಳಸಿ ನಾವು ರಚಿಸಿದ ಬ್ಲಾಗ್ ನೋಡಲು ಬಯಸುವಿರಾದರೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ಇಲ್ಲಿದೆ ಕರ್ನಾಟಕ ಬೆಸ್ಟ್ ಲಿಂಕ್: http://karnatakabest.blogspot.in
ನಮ್ಮ ಬ್ಲಾಗ್ http://karnatakabest.blogspot.in ವಿನ್ಯಾಸವು ನೀವು ಈಗ ರಚಿಸಿದ ವಿನ್ಯಾಸಕ್ಕಿಂತ ಭಿನ್ನವಾಗಿರುವುದನ್ನು ಗಮನಿಸಿದ್ದೀರಿ. ಆ ರೀತಿ ಅಂದವಾಗಿ ಬ್ಲಾಗ್ ಮುಖಪುಟವನ್ನು ವಿನ್ಯಾಸ ಮಾಡುವುದು ಹೇಗೆ ಎನ್ನುವುದನ್ನು ಮುಂದಿನ ಸರಣಿ ಲೇಖನದಲ್ಲಿ ತಿಳಿಸಲಾಗುವುದು. ಈ ಲೇಖನವನ್ನು ನಿಮ್ಮ ಸ್ನೇಹಿತರ ಜೊತೆಯೂ ಹಂಚಿಕೊಳ್ಳಿರಿ.
ವೆಬ್ ಸೈಟ್ ಗೈಡ್ ಮುಂದಿನ ಅಧ್ಯಾಯದಲ್ಲಿ ನೀವು ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವ ಕಲೆಯನ್ನು ಕಲಿಯಲಿದ್ದೀರಿ. ಈ ಮೂಲಕ ಕೇವಲ ಡೊಮೈನ್ ಹೆಸರು ಖರೀದಿಸಿ ಬ್ಲಾಗರ್ ಅನ್ನೇ ಹೋಸ್ಟಿಂಗ್ ಆಗಿ ಬಳಸಿಕೊಂಡು ವೆಬ್ ಸೈಟ್ ವಿನ್ಯಾಸ ಮಾಡಬಹುದಾಗಿದೆ.
ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವುದು ಹೇಗೆ?