ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಆರ್ಗ್ ಯಾಕೆ ಬೆಸ್ಟ್?

ಈ ಹಿಂದಿನ ಲೇಖನದಲ್ಲಿ ವರ್ಡ್ ಪ್ರೆಸ್.ಕಾಂನ ಒಳಿತುಗಳು ಮತ್ತು ಕೆಡುಕುಗಳು ಹಾಗೂ ವರ್ಡ್ ಪ್ರೆಸ್.ಕಾಂನಲ್ಲಿ ಲಭ್ಯವಿರುವ ವಿವಿಧ ದರಪಟ್ಟಿಯ ಕುರಿತು ಮಾಹಿತಿ ನೀಡಲಾಗಿತ್ತು. ಇದಕ್ಕಿಂತ ವರ್ಡ್ ಪ್ರೆಸ್. ಆರ್ಗ್ ಇನ್ನೂ ಉತ್ತಮ ಎಂಬ ಅಭಿಪ್ರಾಯವನ್ನು ನಾನು ವ್ಯಕ್ತಪಡಿಸಿದ್ದೆ. ಅಲ್ಲಿ ನೀವು ಹತ್ತು ಸಾವಿರ ರೂಪಾಯಿಗೆ ಪಡೆಯುವುದನ್ನು .ಆರ್ಗ್ ನಲ್ಲಿ 5 ಸಾವಿರ ರೂ.ಗೆ ಪಡೆಯಬಹುದು ಎನ್ನುವುದು ನನ್ನ ಅಭಿಪ್ರಾಯ.

ಏನಿದು ವರ್ಡ್ ಪ್ರೆಸ್ ಆರ್ಗ್?

ಇಂಟರ್ನೆಟ್ ನಲ್ಲಿ ಲಭ್ಯವಿರುವ ವ್ಯಾಖ್ಯಾನವನ್ನು ನಾನು ಇಲ್ಲಿ ನೀಡುವುದಿಲ್ಲ. ವರ್ಡ್ ಪ್ರೆಸ್.ಕಾಂ ಎನ್ನುವುದು ವರ್ಡ್ ಪ್ರೆಸ್ ಮೂಲಕ ಹೋಸ್ಟಿಂಗ್, ನಿರ್ವಹಣೆ ಇರುವ ಸ್ಥಳ. ಅಲ್ಲಿ ವೆಬ್ ಸೈಟ್ ಸಂಪೂರ್ಣವಾಗಿ ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ.

ವರ್ಡ್ ಪ್ರಸ್ ಅನ್ನು ಬಳಸಿಕೊಂಡು ನೀವು ಹೊರಗಿನಿಂದ ಹೋಸ್ಟಿಂಗ್, ಡೊಮೈನ್ ಇತ್ಯಾದಿಗಳನ್ನು ಖರೀದಿಸಿ ಬಳಸುವುದನ್ನು ವರ್ಡ್ ಪ್ರೆಸ್ ಆರ್ಗ್ ಎನ್ನಬಹುದು. ಅಂದರೆ, ವರ್ಡ್ ಪ್ರೆಸ್ ಪ್ಲಾಟ್ ಫಾರ್ಮ್ ನಲ್ಲಿದ್ದುಕೊಂಡೇ ನಾವು ರಚಿಸಿದ ವೆಬ್ ಸೈಟ್ ಸಂಪೂರ್ಣ ನಮ್ಮ ನಿಯಂತ್ರಣದಲ್ಲಿರುತ್ತದೆ. 

ಕೆಲವು ವರ್ಷಗಳ ಹಿಂದೆ ವರ್ಷಕ್ಕೆ ಸುಮಾರು ಎರಡೂವರೆ ಸಾವಿರ ರೂ.ಗೆ ಹೋಸ್ಟಿಂಗ್ ಖರೀದಿಸಿದೆ. ಸುಮಾರು 800 ರೂ.ಗೆ ಡೊಮೈನ್ ಖರೀದಿಸಿದೆ. ಇವೆರಡನ್ನು ಜೋಡಿಸಿ ರಚಿಸಿದ ವೆಬ್ ಸೈಟ್ ನಲ್ಲಿ ಎಲ್ಲಾ ಫೀಚರ್  ಗಳಿದ್ದವು. ಅಂದರೆ, ನೀವು ವರ್ಡ್ ಪ್ರೆಸ್.ಕಾಂನಲ್ಲಿ ಬಿಸ್ನೆಸ್ ಪ್ಲ್ಯಾನ್ ನಲ್ಲಿ ಪಡೆಯುವ ಎಲ್ಲಾ ಫೀಚರ್ ಗಳು ನನ್ನ 3 ಸಾವಿರ ರೂ.ನ ವೆಬ್ ಸೈಟ್ ನಲ್ಲಿತ್ತು. ಇದಕ್ಕೆ ಕೊಂಚ ತಾಂತ್ರಿಕ ಜ್ಞಾನ ಇದ್ದರೆ ಸಾಕು. ಆ ಜ್ಞಾನವನ್ನು ಕಲಿಸುವುದೇ ಈ ಸರಣಿ ಲೇಖನದ ಉದ್ದೇಶ.

ವರ್ಡ್ ಪ್ರೆಸ್ ಆರ್ಗ್ ಎನ್ನುವುದು ಸಂಪೂರ್ಣ ಮುಕ್ತ ತಂತ್ರಾಂಶ. ಇದು ಉಚಿತ ತಂತ್ರಾಂಶವಾಗಿದ್ದು, ಯಾರೂ ಬೇಕಾದರೂ ಬಳಸಬಹುದು. ಇದಕ್ಕಾಗಿ ನಿಮ್ಮಲ್ಲಿ ಡೊಮೈನ್ ಹೆಸರು ಮತ್ತು ವೆಬ್ ಹೋಸ್ಟಿಂಗ್ ಇದ್ದರೆ ಸಾಕು. ಇದೇ ಕಾರಣಕ್ಕೆ ಇದನ್ನು ಸೆಲ್ಫ್ ಹೋಸ್ಟೆಡ್ ವರ್ಡ್ ಪ್ರೆಸ್ ಎನ್ನಲಾಗುತ್ತದೆ.

ವರ್ಡ್ ಪ್ರೆಸ್.ಆರ್ಗ್ ಗುಣಗಳು

ಮೊದಲೇ ಹೇಳಿದಂತೆ ನಿಮ್ಮ ವೆಬ್ ಸೈಟ್ ಮೇಲೆ ನಿಮಗೆ ಸಂಪೂರ್ಣ ನಿಯಂತ್ರಣ ಇರುತ್ತದೆ. ಇದನ್ನು ನಿಮಗೆ ಬೇಕಾದಂತೆ ಮಾರ್ಪಾಡು ಮಾಡಲು ನೀವು ಸ್ವತಂತ್ರರು. ಇದರ ಕೆಲವು ಗುಣಗಳನ್ನು ಈ ಮುಂದಿನಂತೆ ಪಟ್ಟಿ ಮಾಡಬಹುದು.

 •  ಇದು ಉಚಿತ, ಬಳಕೆಯೂ ಸುಲಭ.
 • ಈ ವೆಬ್ ಸೈಟ್ ಸಂಪೂರ್ಣ ನಿಮ್ಮ ಹಿಡಿತದಲ್ಲಿ ಇರುತ್ತದೆ.
 • ವಿನ್ಯಾಸವನ್ನು ನಿಮಗೆ ಬೇಕಾದಂತೆ ಮಾರ್ಪಾಡುವ ಮಾಡಬಹುದು.
 • ನಿಮಗೆ ಬೇಕಾದ ಜಾಹೀರಾತು ಹಾಕಿ ಹಣ ಸಂಪಾದಿಸಬಹುದು.
 • ಗೂಗಲ್ ಅನಾಲಿಟಿಕ್ಸ್ ಇತ್ಯಾದಿ ಪ್ಲಗಿನ್ ಗಳನ್ನು ಬಳಸಬಹುದು.
 • ಇ-ಕಾಮರ್ಸ್ ತಾಣವನ್ನು ಸುಲಭವಾಗಿ ರಚಿಸಬಹುದು.
 • ಮೆಂಬರ್ಷಿಪ್ ತಾಣವನ್ನೂ ರಚಿಸಬಹುದು.
 • ವರ್ಡ್ ಪ್ರೆಸ್.ಕಾಂನ ಬಿಸ್ನೆಸ್ ಪ್ಲ್ಯಾನ್ ಗಿಂತಲೂ ಹೆಚ್ಚಿನದ್ದನ್ನು ಸೆಲ್ಫ್ ಹೋಸ್ಟೆಡ್ ವರ್ಡ್ ಪ್ರೆಸ್ ನಲ್ಲಿ ಪಡೆಯಬಹುದು.

ಅವಗುಣಗಳು

 • ನೀವು ಹೋಸ್ಟಿಂಗ್ ಖರೀದಿಸಬೇಕು. ಖರೀದಿಸಿದ ಹೋಸ್ಟಿಂಗ್ ತಕ್ಕಂತೆ ವೆಬ್ ಸೈಟ್ ವೇಗ ಇರುತ್ತದೆ.
 • ಅಪ್ ಡೇಟ್ ಗಳನ್ನು ನೀವೇ ಮಾಡಿಕೊಳ್ಳಬೇಕು.( ಒಂದು ಕ್ಲಿಕ್ ಮೂಲಕ ಅಪ್ ಡೇಟ್ ಮಾಡಬಹುದು)
 • ಬ್ಯಾಕಪ್ ಸಹ ನೀವೇ ಮಾಡಿಕೊಳ್ಳಬೇಕು. (ಇದು ಕಷ್ಟವೇನಲ್ಲ.)

ಒಟ್ಟಾರೆ ವರ್ಡ್ ಪ್ರೆಸ್. ಆರ್ಗ್ ಬೆಸ್ಟ್. ಈ ವಿಷಯದ ಕುರಿತು ಹೆಚ್ಚು ಉದ್ದದ ಲೇಖನ ಬೇಕಿಲ್ಲ. ಬೇಕಿದ್ದರೆ ಇಂಟರ್ನೆಟ್ ನಲ್ಲಿ ಈ ಕುರಿತು ಸಾಕಷ್ಟು ಮಾಹಿತಿ ದೊರಕುತ್ತದೆ. ಓದಿಕೊಳ್ಳಿ.

ವರ್ಡ್ ಪ್ರೆಸ್.ಆರ್ಗ್ ನಲ್ಲಿ ಸ್ವಂತ ವೆಬ್ ಸೈಟ್ ನಿರ್ಮಿಸಲು ಕಲಿಯುತ್ತೀರಾ? ಹೆದರಬೇಡಿ, ಈಗಲೇ ಹೋಸ್ಟಿಂಗ್ ಮತ್ತು ಡೊಮೈನ್ ಖರೀದಿಸಬೇಕಿಲ್ಲ. ನೀವು ಇಂಟರ್ನೆಟ್ ಇಲ್ಲದೆಯೇ, ಹೋಸ್ಟಿಂಗ್ ಇಲ್ಲದೆಯೇ, ಡೊಮೈನ್ ಇಲ್ಲದೆಯೇ ನಿಜವಾದ ವರ್ಡ್ ಪ್ರೆಸ್ ವೆಬ್ ಸೈಟ್ ನಿರ್ಮಾಣವನ್ನು ಕಲಿಯಬಹುದು. ನೀವು ಈ ಟೂಲ್ ಮೂಲಕ ವೆಬ್ ಸೈಟ್ ರಚನೆಯನ್ನು ಮಾಡಿ ನಿಮಗೆ ತೃಪ್ತಿಯಾದ ಬಳಿಕ ಹೋಸ್ಟಿಂಗ್ ಮತ್ತು ಡೊಮೈನ್ ಖರೀದಿಸಿ ಜೀವ ಕೊಡಬಹುದು. ಇದಕ್ಕೆ ಸಂಬಂಧಪಟ್ಟ ಒಂದು ವಿಶೇಷ ಟೂಲ್ ಅನ್ನು ಮುಂದಿನ ಲೇಖನದಲ್ಲಿ ಪರಿಚಯಿಸುತ್ತೇನೆ. ಆಸಕ್ತಿದಾಯಕವಾಗಿದೆಯಲ್ಲವೇ? ಈ ಕುರಿತಾದ ನನ್ನ ಮುಂದಿನ ಲೇಖನವನ್ನು ಓದಿರಿ.

ಮುಂದಿನ ಅಧ್ಯಾಯ

ವೆಬ್ ಸೈಟ್ ಗೈಡ್: ಹೋಸ್ಟಿಂಗ್, ಡೊಮೈನ್ ಇಲ್ಲದೆ ವರ್ಡ್ ಪ್ರೆಸ್ ಕಲಿಯಿರಿ

ಹಿಂದಿನ ಲೇಖನ ಓದಿ: ವರ್ಡ್ ಪ್ರೆಸ್.ಕಾಂ ಮೂಲಕ ವಿವಿಧ ಪ್ಲ್ಯಾನ್ ಗಳ ಖರೀದಿ