ಸೂರ್ತಿದಾಯಕ: ವಾಲ್ಟ್ ಡಿಸ್ನಿ ಬದುಕಿನ ಕತೆ

ಅನಿಮೇಟರ್, ಕಾರ್ಟೂನಿಸ್ಟ್, ನಿರ್ದೇಶಕ, ಉದ್ಯಮಿಯಾಗಿ ವಾಲ್ಟ್ ಡಿಸ್ನಿ ಫೇಮಸ್. ಆತ 20ನೇ ಶತಮಾನದ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಸುಮಾರು 22 ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈಗ ವಾಲ್ಟ್ ಡಿಸ್ನಿ ಕಂಪನಿಯು ಹಲವು ಬಿಲಿಯನ್ ಡಾಲರ್ ವಹಿವಾಟಿನ ಬೃಹತ್ ಕಂಪನಿಯಾಗಿದೆ.

ಆದರೆ, ವಾಲ್ಟ್ ಡಿಸ್ನಿಗೆ ಯಶಸ್ಸು ಸಡನ್ ಆಗಿ ಬಂದಿರುವುದಲ್ಲ. ಆತನಿಗೆ ಹೆಜ್ಜೆಹೆಜ್ಜೆಗೂ ಸೋಲು, ಅಪಮಾನಗಳು ಎದುರಾಗುತ್ತಿದ್ದವು. ಸೇನೆಗೆ ಸೇರಬೇಕೆಂಬ ಉದ್ದೇಶದಿಂದ 1917ರಲ್ಲಿ ವಾಲ್ಟ್ ಡಿಸ್ನಿಯು ಶಾಲೆಯನ್ನು ಅರ್ಧಕ್ಕೆ ಬಿಟ್ಟರು. ಆದರೆ, ಸೇನೆಗೆ ಸೇರಲು ವಯಸ್ಸು ಆಗಿಲ್ಲವೆಂಬ ಕಾರಣ ನೀಡಿ ಆತನನ್ನು ಸೇರಿಸಲಿಲ್ಲ. ರೆಡ್ ಕ್ರಾಸ್‍ನಲ್ಲಿ ಒಂದು ವರ್ಷ ಕೆಲಸ ಮಾಡಿ ಫ್ರಾನ್ಸ್ ಗೆ ತೆರಳಿದರು. ನಂತರ ಅಂಬ್ಯುಲೆನ್ಸ್ ಚಾಲಕರಾಗಿ ಕೆಲಸ ಮಾಡಿದರು.

walt disney

ಬಾಲ್ಯದಲ್ಲಿಯೇ ವಾಲ್ಟ್ ಡಿಸ್ನಿಗೆ ಕಾರ್ಟೂನ್ ರಚನೆ ಎಂದರೆ ಪಂಚಪ್ರಾಣ. ಸ್ಥಳೀಯ ಪತ್ರಿಕೆಗಳಿಗೆ ಕಾರ್ಟೂನ್‍ಗಳನ್ನು ಬರೆದು ಕಳುಹಿಸುತ್ತಿದ್ದರು. “ನಿಮಗೆ ಕಾರ್ಟೂನ್ ರಚಿಸಲು ಬಾರದು’ ನಿಮ್ಮಲ್ಲಿ ಕ್ರಿಯಾಶೀಲತೆಯ ಕೊರತೆ ಇದೆ’ ಇತ್ಯಾದಿ ಹಣೆಪಟ್ಟಿಗಳನ್ನು ಹೊತ್ತು ಅವರ ಕಾರ್ಟೂನ್‍ಗಳು ವಾಪಸ್ ಬರುತ್ತಿದ್ದವು.

ದಿನಪತ್ರಿಕೆಗಳಲ್ಲಿ ಕೆಲಸ ಕೇಳುತ್ತ ಹೋದಾಗಲೂ “ನೀನು ನಾಲಾಯಕ್’ ಎಂಬರ್ಥದ ಮಾತುಗಳೇ ಕೇಳಿಬರುತ್ತಿದ್ದವು. ವಿವಿಧ ಸುದ್ದಿಪತ್ರಿಕೆಗಳಲ್ಲಿ ಕೆಲಸ ಮಾಡಲು ಬಯಸಿದರು. ಆದರೆ, ಹಲವು ನ್ಯೂಸ್‍ಪೇಪ ರ್ ಗಳು ಪತ್ರಿಕೆಯಲ್ಲಿ ದುಡಿಯುವಷ್ಟು ಕ್ರಿಯಾಶೀಲತೆ ಇಲ್ಲ’ ಎಂಬ ಕಾರಣ ನೀಡಿ ಕೆಲಸಕ್ಕೆ ತೆಗೆದಕೊಳ್ಳಲಿಲ್ಲ.

ನಂತರ ವಾಲ್ ಡಿಸ್ನಿ ಲಾಸ್ ಏಂಜೆಲ್ಸ್‍ಗೆ ಪ್ರಯಾಣ ಬೆಳೆಸಿದರು. ಆಗ ಅವರ ಕಿಸೆಯಲ್ಲಿ ಕೇವಲ 40 ಡಾಲರ್ ಹಣವಿತ್ತು. ಅವರ ಸೂಟ್‍ಕೇಸ್‍ನಲ್ಲಿ ಒಂದು ಶರ್ಟ್, ಎರಡು ಪ್ಯಾಂಟ್, ಒಂದು ಜೊತೆ ಸಾಕ್ಸ್ ಮತ್ತು ಚಿತ್ರ ಬಿಡಿಸುವ ಕೆಲವು ಪರಿಕರಗಳು ಇದ್ದವು. ತಾನು ಚಿತ್ರಕಾರ ಆಗದಿದ್ದರೆ ಹಾಲಿವುಡ್ ನಟನಾದರೂ ಆಗಬೇಕೆಂಬ ತುಡಿತವೂ ಡಿಸ್ನಿಗೆ ಇತ್ತು.

ಹಲವು ಪುಸ್ತಕಗಳನ್ನು ಓದುತ್ತ ಅನಿಮೇಷನ್ ಕಲಿತರು. ಕೆಲವು ಸಮಯದ ಬಳಿಕ ಸ್ವಂತ ಅನಿಮೇಷನ್ ವ್ಯವಹಾರ ಆರಂಭಿಸಬೇಕು ಎಂದುಕೊಂಡರು “Laugh-O-Grams’ ಹೆಸರಿನಲ್ಲಿ ಹಲವು ಸರಣಿ ಕಾರ್ಟೂನ್‍ಗಳನ್ನು ರಚಿಸಿದರು. ಅದು ಅಲ್ಲಿನ ಸ್ಥಳೀಯ ಥಿಯೇಟರ್‍ ಗಳಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಕಾನ್ಸಸ್ ಸಿಟಿಯಲ್ಲಿ ಈ ಅನಿಮೇಷನ್ ಸರಣಿ ಜನಪ್ರಿಯವಾದವು. ಇದರಿಂದಾಗಿ ಆತ ಸ್ವಂತ ಸ್ಟುಡಿಯೋ ಆರಂಭಿಸಿದ. ಆದರೆ, ಕೆಲವೇ ಸಮಯದಲ್ಲಿ ಆತನ ಸ್ಟುಡಿಯೋ ನಿರೀಕ್ಷಿತ ಆದಾಯ ಗಳಿಸದೆ ದಿವಾಳಿಯೆದ್ದು, ಬಾಗಿಲುಹಾಕಿತ್ತು.

ಬಳಿಕ ವಾಲ್ಟ್ ಮತ್ತು ಆತನ ಸಹೋದರ ರಾಯ್ ಜೊತೆಯಾಗಿ ಹಣ ಒಟ್ಟುಗೂಡಿಸಿ ಕ್ಯಾಲಿಫೋರ್ನಿಯಾದ ಹಾಲಿವುಡ್‍ನಲ್ಲಿ ಕಾರ್ಟೂನ್ ಸ್ಟುಡಿಯೋ ತೆರೆದರು. ಅಲ್ಲಿ ಅಲೈಸ್ ಕಾಮಿಡಿಗಳನ್ನು ವಿತರಣೆ ಮಾಡಿದರು. ಅದು ತಕ್ಕಮಟ್ಟಿಗೆ ಯಶಸ್ಸು ಕಾಣತೊಡಗಿತು.

1927ರಲ್ಲಿ ಯೂನಿವರ್ಸಲ್ ಫಿಕ್ಚರ್ಸ್ ಸಹಭಾಗಿತ್ವದಲ್ಲಿ  ಓಸ್ವಾಲ್ಡ್ ದಿ ಲಕ್ಕಿ ರ್ಯಾಬಿಟ್’ ಹೆಸರಿನ ಕಾರ್ಟೂನ್ ಆರಂಭಿಸಿದರು. ಈ ಕಾರ್ಟೂನ್ ನಿರೀಕ್ಷೆ ಮೀರಿ ಯಶಸ್ಸು ಗಳಿಸಿತು ಮತ್ತು ಕಂಪನಿಗೆ ಸಾಕಷ್ಟು ಆದಾಯ ತಂದುಕೊಟ್ಟಿತು. ಆದರೆ, ಶೀಘ್ರದಲ್ಲಿ ಸಾಕಷ್ಟು ಉದ್ಯೋಗಿಗಳು ಕೆಲಸ ಬಿಟ್ಟರು ಮತ್ತು ಓಸ್ವಾಲ್ಡ್ ದಿ ಲಕ್ಕಿ ರ್ಯಾಬಿಟ್’ ಪ್ರೊಡಕ್ಷನ್ ಮುಂದುವರೆಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ  Personality development: ಜೇಮ್ಸ್ ಬಾಂಡ್ ಜೀವನ ಪಾಠ

ಒಂದು ದಿನ ಕೆಲವು ವ್ಯಂಗ್ಯಚಿತ್ರಗಳನ್ನು ಬಿಡಿಸಲು ಚರ್ಚ್‍ನ ಪಾದ್ರಿಯೊಬ್ಬ ವಾಲ್ಟ್ ಡಿಸ್ನಿಯನ್ನು ಕರೆದ. ಚರ್ಚಿನ ಬಳಿ ಇದ್ದ ಇಲಿ ಹೆಗ್ಗಣಗಳ ವಾಸಸ್ಥಾನವಾಗಿದ್ದ ಷೆಡ್ ಒಂದರಲ್ಲಿ ಡಿಸ್ನಿ ಕೆಲಸ ಮಾಡುತ್ತಿದ್ದ. ಬಿಲ ಒಂದರಿಂದ ಹೊರಬಂದ ಪುಟ್ಟ ಇಲಿ ಮರಿಯನ್ನು ಕಂಡು ಪ್ರೇರೇಪಿತನಾಗಿ ಡಿಸ್ನಿ ಇಲಿಯ ಹೊಸ ವ್ಯಂಗ್ಯಚಿತ್ರ ಆರಂಭಿಸಿದ. ಅದೇ ಮಿಕಿ ಮೌಸ್ ಜನನಕ್ಕೆ ಕಾರಣವಾಯಿತು. ಮಿಕಿ ಮೌಸ್ ಕಾರ್ಟೂನ್ ಮತ್ತು ಅನಿಮೇಷನ್ ಯಶಸ್ಸಾಯಿತು. ಈಗ ವಾಲ್ಟ್ ಡಿಸ್ನಿ ಕಂಪನಿಯು ಹಲವು ಬಿಲಿಯನ್ ಡಾಲರ್ ಆದಾಯ ತಂದುಕೊಡುತ್ತದೆ. 

***

ಯಶಸ್ಸಿನ ಹಪಾತಪಿಯಲ್ಲಿರುವವರಿಗೆ ಹೆಜ್ಜೆಹೆಜ್ಜೆಗೂ ಸೋಲು, ಅಪಮಾನ, ಹಿನ್ನೆಡೆ ಸಾಮಾನ್ಯ. ಇವುಗಳನ್ನೆಲ್ಲ ಮೆಟ್ಟಿನಿಂತು ಮುಂದೆ ಸಾಗುವವರು ಖಂಡಿತವಾಗಿಯೂ ಯಶಸ್ಸು ಪಡೆಯುತ್ತಾರೆ ಎನ್ನುವುದಕ್ಕೆ ಕಾಮಿಕ್ ಜಗತ್ತಿನ ದಂತಕತೆ ವಾಲ್ಟ್ ಡಿಸ್ನಿ ಉದಾಹರಣೆ.

ಕರಿಯರ್ ಬದುಕಿನಲ್ಲಿ ಯಶಸ್ಸು ಪಡೆಯಲು ಬಯಸುವ ನಿಮಗೂ ಹಲವು ಅಡೆತಡೆಗಳು ಎದುರಾಗಬಹುದು. ಅವುಗಳನ್ನು ಮೆಟ್ಟಿನಿಂತು ಯಶಸ್ಸಿನೆಡೆಗೆ ಪ್ರಯಣ ಬೆಳೆಸಿರಿ.

ಇನ್ನಷ್ಟು ಸ್ಫೂರ್ತಿದಾಯಕ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಿಕಿ ಮೌಸ್ ತಮಾಷೆಯ ವಿಡಿಯೋ ಲಿಂಕ್ ಇಲ್ಲಿದೆ. ನೋಡಿ, ನಕ್ಕು ಹಗುರಾಗಿ