ಕನ್ನಡ ಗೈಡ್: ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು?

ಬೆಳೆಬಾಳುವ ಫೋನ್ ಕಳೆದುಹೋದರೆ ಚಿಂತೆ ಆಗುವುದು ಸಹಜ. ನೀವು ದುಬಾರಿ ಫೋನ್ ಖರೀದಿಸಿದ್ದರೆ ಅಯ್ಯೋ ಹತ್ತಿಪ್ಪತ್ತು ಸಾವಿರ ರೂ. ವ್ಯರ್ಥವಾಯ್ತಲ್ಲ ಎಂದು ದುಃಖ ಪಡಬೇಕಾಗಬಹುದು. ಇದೇ ರೀತಿ, ಆಪ್ತರ ಸಂಪರ್ಕ ಸಂಖ್ಯೆಗಳನ್ನು ಕಳೆದುಕೊಳ್ಳಬೇಕಾಗಬಹುದು. ನೀವು ಆಂಡ್ರಾಯ್ಡ್ ಫೋನ್ ನಲ್ಲಿ ಸಂಪರ್ಕ ಸಂಖ್ಯೆಗಳನ್ನು ಸಿಂಕ್ ಮಾಡಿದ್ದರೆ ಮತ್ತೊಂದು ಫೋನ್ ಗೆ ಹೊಸ ಸಿಮ್ ಅಳವಡಿಸಿದಾಗ ಸಂಪರ್ಕ ಸಂಖ್ಯೆಗಳು ದೊರಕುತ್ತವೆ. ಅಥವಾ ಗೂಗಲ್ ಕಾಂಟ್ಯಾಕ್ಟ್ ವಿಭಾಗಕ್ಕೆ ಹೋಗಿ ಸಂಖ್ಯೆಗಳನ್ನು ಪಡೆಯಬಹುದು.

ಮೊಬೈಲ್ ಕಳೆದುಹೋದರೆ ಏನು ಮಾಡಬೇಕು?

ಮೊದಲಿಗೆ ಆ ಮೊಬೈಲ್ ನಲ್ಲಿರುವ ಸಂಖ್ಯೆಗೆ ಕರೆ ಮಾಡಿ. ಕಳ್ಳರ ಪಾಲಾಗಿದ್ದರೆ ಅದರಲ್ಲಿರುವ ಸಿಮ್ ತೆಗೆದಿರುತ್ತಾರೆ. ಈಗ ಕಳ್ಳರು ಸಾಕಷ್ಟು ಟೆಕ್ ಪರಿಣತರಾಗಿರುವ ಕಾರಣ, ಫೋನ್ ಅನ್ನು ರಿಸೆಟ್ ಮಾಡಿರಬಹುದು. ಎಲ್ಲಾದರೂ ಕಳ್ಳರ ಪಾಲಾಗದೆ ಇದ್ದರೆ ಆ ಸಂಖ್ಯೆ ರಿಂಗ್ ಆಗುತ್ತಿದ್ದರೆ ಮತ್ತೆ ಕರೆ ಮಾಡಿ. ಆ ಕಡೆಯವರು ಮಾತನಾಡಿದರೆ, ಕಳೆದುಹೋದ ಫೋನ್ ನೀಡುವುದಾಗಿ ತಿಳಿಸಿದರೆ ಹೋಗಿ. ದಯವಿಟ್ಟು ಆ ಕಡೆಯಲ್ಲಿದ್ದವರು ರಾತ್ರಿ ಹೊತ್ತಿನಲ್ಲಿ, ಹೆಚ್ಚು ಸುರಕ್ಷಿತವಲ್ಲದ ಸ್ಥಳಕ್ಕೆ ಕರೆದರೆ ಹೋಗಬೇಡಿ. ಸಾಧ್ಯವಾದರೆ ಫೋನ್ ಸಿಕ್ಕವರ ಹೆಸರು, ಬೇರೆ ಸಂಪರ್ಕ ಮಾಹಿತಿಯನ್ನು ಪಡೆಯಿರಿ. ಬಳಿಕ ಅವರು ಹೇಳಿದ ಸುರಕ್ಷಿತ ಸ್ಥಳಕ್ಕೆ ಹೋಗಿ ಫೋನ್ ಪಡೆಯಿರಿ. ಅವರಿಗೆ ಬಹುಮಾನ ನೀಡಲು ಮರೆಯಬೇಡಿ. ಅಟ್ ಲಿಸ್ಟ್ ಒಂದು ಕಪ್ ಟೀ ಆದರೂ ನೀಡಿ.

ಬಿಲ್ ಹುಡುಕಿ

ಫೋನ್ ಕಳೆದು ಹೋದಾಗ ಮೊದಲು ಅದನ್ನು ಖರೀದಿಸಿದ ಬಿಲ್ ಅನ್ನು ಹುಡುಕಿ. ಹೊಸ ಫೋನ್ ಖರೀದಿಸಿದಾಗ ತಕ್ಷಣ ಇವುಗಳನ್ನು ಜಾಗೃತೆಯಾಗಿ ಇಟ್ಟುಬಿಡಿ. ಅದರಲ್ಲಿ ಮೊಬೈಲ್ ಐಎಂಇಐ ಸಂಖ್ಯೆ, ಖರೀದಿ ಮಾಡಿದ ಶಾಪ್ ಹೆಸರು, ಇತ್ಯಾದಿ ಹಲವು ಮಾಹಿತಿಗಳು ಇರುತ್ತವೆ. ಫೋನ್ ಕಳೆದುಹೋದಾಗ ಪೊಲೀಸರಿಗೆ ದೂರು ನೀಡಲು ಇದು ಬೇಕಾಗುತ್ತದೆ. ಫೋನ್ ಅನ್ನು ಟ್ರ್ಯಾಕ್ ಮಾಡಲು ಸಹ ಇದು ನೆರವಾಗುತ್ತದೆ. ಫೋನ್ ಗೆ ವಿಮೆ ಮಾಡಿಸಿದ್ದರೂ ಈ ಸಂಖ್ಯೆ ಬೇಕಾಗುತ್ತದೆ.

ಕೆಲವೊಂದು ಫೋನ್ ನಲ್ಲಿ ಲಾಕ್ ಮಾಡುವ ವ್ಯವಸ್ಥೆ ಇರುತ್ತದೆ. ಫೋನ್ ಆಕ್ಟಿವೇಟ್ ಸಂದರ್ಭದಲ್ಲಿ ಇದನ್ನು ಬಳಸಿದ್ದರೆ ಫೋನ್ ಕಳೆದುಕೊಂಡ ತಕ್ಷಣ ಕಂಪ್ಯೂಟರ್ ಬಳಸಿ ನಿಮ್ಮ ಫೋನ್ ಅನ್ನು ಲಾಕ್ ಮಾಡಬಹುದು.

ಲಾಗೌಟ್ ಆಗಿ

ಮೊಬೈಲ್ ಕಳೆದು ಹೋದ ತಕ್ಷಣ ಡಿಸ್ ಕನೆಕ್ಟ್ ಆಗದೆ ಇದ್ದರೆ, ನೀವು ಎಷ್ಟು ಕಾಲ್ ಮಾಡಿದರೂ ರಿಸೀವ್ ಮಾಡದೆ ಇದ್ದರೆ, ನಿಮಗೆ ಆ ಫೋನ್ ಅನ್ನು ಸಿಕ್ಕವರು ಕೊಡದೆ ಇರುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಫೋನ್ ನಲ್ಲಿರುವ ಮಾಹಿತಿಗಳನ್ನು ಬಳಸುತ್ತಿರಬಹುದು. ಲಾಕ್ ಹಾಕದೆ ಇದ್ದರೆ ಅದರಲ್ಲಿರುವ ಫೋಟೋ, ಆಪ್ ಇತ್ಯಾದಿಗಳನ್ನು ಬಳಸಬಹುದು. ಇಂತಹ ಸಮಯದಲ್ಲಿ ನೀವು ನಿಮ್ಮ ಎಲ್ಲಾ ಲಾಗಿನ್ ಖಾತೆಗಳಿಂದ ಹೊರಗೆ ಬರುವುದು ಸೂಕ್ತ.

ಗೂಗಲ್ ಪ್ಲೇಸ್ಟೋರ್ ಸೇರಿದಂತೆ ಆ ಆಂಡ್ರಾಯ್ಡ್ ಫೋನ್ ನಲ್ಲಿರುವ ಎಲ್ಲಾ ಲಾಗಿನ್ ಗಳಿಂದ ಹೊರಬರಲು ನೀವು ತಕ್ಷಣ ಕಂಪ್ಯೂಟರ್ ಅಥವಾ ಬೇರೆ ಫೋನ್ ಗೆ ಹೋಗಿ ಗೂಗಲ್ ಅನ್ನು ತೆರೆಯಿರಿ.

  1. ಗೂಗಲ್ ಸರ್ಚ್ ಗೆ ಹೋಗಿ ಗೂಗಲ್ ಸೆಕ್ಯುರಿಟಿ ಎಂದು ಹುಡುಕಿ. ಅಥವಾ ನೇರವಾಗಿ ಈ ಲಿಂಕ್ ಕ್ಲಿಕ್ ಮಾಡಿ. ಗೂಗಲ್ ಸೆಕ್ಯುರಿಟಿ ಲಿಂಕ್: https://myaccount.google.com/intro/security
  2. ಗೂಗಲ್ ಸೆಕ್ಯುರಿಟಿಯಲ್ಲಿ ಕೊಂಚ ಕೆಳಭಾಗಕ್ಕೆ ಬನ್ನಿ. ಅಲ್ಲಿ ಯುವರ್ ಡಿವೈಸಸ್ ಎಂಬ ವಿಭಾಗ ದೊರಕುತ್ತದೆ.
  3. ಇಲ್ಲಿ ನಿಮ್ಮ ಕಳೆದುಹೋದ ಫೋನ್ ಮತ್ತು ನೀವು ಲಾಗಿನ್ ಆದ ಇತರೆ ಫೋನ್ ಮತ್ತು ಕಂಪ್ಯೂಟರ್ ಗಳ ವಿವರ ಇರುತ್ತದೆ.
  4. ಕೆಳಭಾಗದಲ್ಲಿ ಮ್ಯಾನೇಜ್ ಡಿವೈಸ್ ಎಂಬ ವಿಭಾಗ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ಅಲ್ಲಿ ನೀವು ಕಳೆದುಕೊಂಡ ಫೋನ್ ಅನ್ನು ಕ್ಲಿಕ್ ಮಾಡಿ.
  5. ನಿಮ್ಮ ಫೋನ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬ ಮಾಹಿತಿ ದೊರಕುತ್ತದೆ. ಕಳೆದುಹೋದ ಬಳಿಕ ಎಲ್ಲೂ ಬಳಕೆಯಾಗದೆ ಇದ್ದರೆ ನೀವು ಆ ಫೋನ್ ನ ಆಸೆ ಬಿಡಬೇಕಾಗುತ್ತದೆ. ಅಲ್ಲಿ ರಿಮೂವ್ ಎಂಬ ವಿಭಾಗ ಇರುತ್ತದೆ. ಅದನ್ನು ಕ್ಲಿಕ್ ಮಾಡಿ. ಗೂಗಲ್ ನಿಂದ ನಿಮ್ಮ ಫೋನ್ ಸೈನ್ ಔಟ್ ಆಗುತ್ತದೆ. ಮತ್ತೆ ಯಾರಿಗೂ ನಿಮ್ಮ ಖಾತೆಯ ಮೂಲಕ ಆ ಫೋನ್ ಬಳಕೆ ಮಾಡಲು ಆಗುವುದಿಲ್ಲ.
  6. ಫೋನ್ ಖರೀದಿ ಸಮಯದಲ್ಲಿ ಫೋನ್ ಕಳೆದುಕೊಂಡರೆ ಏನು ಮಾಡಬೇಕು ಎಂಬ ಗೈಡ್ ದೊರಕಿದ್ದರೆ ಅಥವಾ ಅದಕ್ಕಾಗಿ ಏನಾದರೂ ತಂತ್ರಜ್ಞಾನ ಇದ್ದರೆ ಅದನ್ನು ಬಳಸಿ.
  7. ಗೂಗಲ್ ನಲ್ಲಿಯೂ ಫೋನ್ ಲಾಸ್ ಆದರೆ ರಿಂಗ್ ಮಾಡುವ, ನಿಮ್ಮ ಫೋನ್ ನಲ್ಲಿ ಲೊಕೆಷನ್ ಆನ್ ಆಗಿದ್ದರೆ ಎಲ್ಲಿದೆ ಎಂದು ಮ್ಯಾಪ್ ಮೂಲಕ ಕಂಡುಹಿಡಿಯುವ ವಿಧಾನ ಇರುತ್ತದೆ.
  8. ಫೋನ್ ಹೇಗೆ ಬಳಸಬೇಕೆಂದು ತಿಳಿಯದೆ ಇದ್ದ ಕಳ್ಳರು ಅಥವಾ ನಿಮ್ಮ ಫೋನ್ ಪಡೆದವರು ನಿಮ್ಮ ಖಾತೆಯ ಮೂಲಕವೇ ಫೋನ್ ಬಳಸುವ ಸಾಧ್ಯತೆ ಇರುತ್ತದೆ. ಅವರು ನಿಮ್ಮ ಫೋನ್ ನಲ್ಲಿ ಫೊಟೊ ತೆಗೆದರೆ ಅದು ಗೂಗಲ್ ಫೋಟೋಸ್ ನಲ್ಲಿ ಸೇವ್ ಆಗುವ ಸಾಧ್ಯತೆ ಇರುತ್ತದೆ. ನೀವು ಬೇರೆ ಪೋನ್ ಅಥವಾ ಕಂಪ್ಯೂಟರ್ ಮೂಲಕ ಗೂಗಲ್ ಫೋಟೋಸ್ ಗೆ ಹೋಗಿ ಮಾಹಿತಿ ಪಡೆಯಬಹುದು. ನೀವು ಫೋನ್ ನಿಂದ ಸೈನ್ ಔಟ್ ಆಗಿದ್ದರೆ (ಮೇಲೆ ತಿಳಿಸಿದ ವಿಧಾನದ ಮೂಲಕ) ಈ ರೀತಿ ಮಾಡಲು ಸಾಧ್ಯವಾಗದು.

ಇವಿಷ್ಟು ಆದ ಬಳಿಕ ನಿಮ್ಮ ಗೂಗಲ್ ಖಾತೆಯ(ಜಿಮೇಲ್ ಇತ್ಯಾದಿ) ಪಾಸ್ ವರ್ಡ್ ಬಳಸಿ. ಫೇಸ್ಬುಕ್, ಟ್ವಿಟರ್ ಇತ್ಯಾದಿಗಳನ್ನು ಆ ಮೊಬೈಲ್ ನಲ್ಲಿ ಬಳಸುತ್ತಿದ್ದರೆ ಅದರ ಪಾಸ್ ವರ್ಡ್ ಗಳನ್ನು ಬಳಸಿ “ಎಲ್ಲಾ ಡಿವೈಸ್ ಗಳಿಂದಲೂ ಸೈನ್ ಔಟ್ ಆಗಿ’ ಎಂಬ ಆಯ್ಕೆಯನ್ನು ಬಳಸಿರಿ.

ಓದಿ: ಸಿಮ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು?