ಕನ್ನಡದಲ್ಲಿ ವೆಬ್‌ಸೈಟ್‌ ನಿರ್ಮಿಸುವವರಿಗೆ ಸಂಪೂರ್ಣ ಗೈಡ್

By | 02/01/2020
kannada website guide karnatakbest

ಕನ್ನಡ ಭಾಷೆಯಲ್ಲಿ ಹಲವು ನೂರು ವೆಬ್‌ಸೈಟ್‌ಗಳು ಈಗ ನಿರ್ಮಾಣವಾಗುತ್ತಿದೆ ಎನ್ನುವುದು ಖುಷಿ ಪಡಬೇಕಾದ ಸಂಗತಿ. ಆದರೆ, ಈ ವರ್ಷ ಆರಂಭಿಸಿದ ಬಹುತೇಕ ಕನ್ನಡ ವೆಬ್‌ಸೈಟ್‌ಗಳು ಮುಂದಿನ ವರ್ಷ ಇರುವುದಿಲ್ಲ ಎನ್ನುವುದು ದುಃಖದ ಸಂಗತಿ. ಯಾಕೆ ಹೀಗೆ ಎಂದು ಯೋಚಿಸಿದರೆ “ವೆಬ್‌ ಸಮುದ್ರವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೆ ನೀರಿಗೆ ಇಳಿಯುವುದುʼʼ ಸರಿಯಾದ ಕಾರಣ ಆಗಿರಬಹುದು.

ಒಂದು ಕಾಲದಲ್ಲಿ ಕನ್ನಡ ಬ್ಲಾಗ್‌ ಜಗತ್ತು ತುಂಬಾ ಶ್ರೀಮಂತವಾಗಿತ್ತು. ಬ್ಲಾಗ್‌ ಬರಹಗಳನ್ನು ಓದುವುದು ಖುಷಿ ನೀಡುವ ವಿಚಾರವಾಗಿತ್ತು. ಕಾಲ ಬದಲಾದಂತೆ ಜನರು ಫೇಸ್‌ಬುಕ್‌ನಲ್ಲಿ ಬರೆಯಲು ಆರಂಭಿಸಿದರು. ಹೀಗಾಗಿ ಇಂದು ಬೆರಳೆಣಿಕೆಯ ಸಂಖ್ಯೆಯಲ್ಲಿ ಕನ್ನಡ ಬ್ಲಾಗಿಗರು ಇದ್ದಾರೆ. ಕೆಲವರು ಬ್ಲಾಗ್‌ಗೆ ಡೊಮೈನ್‌ ಜೋಡಿಸಿದ್ದಾರೆ. ಕೆಲವರು ಬ್ಲಾಗ್‌ ಅನ್ನು ಪೂರ್ಣ ಪ್ರಮಾಣದ ವೆಬ್‌ಸೈಟ್‌ ಮಾಡಿದ್ದಾರೆ. ಹೀಗೆ, ಈ ಮಾರ್ಗದರ್ಶಿಯ ವಿಷಯವು ಎಲ್ಲೆಲ್ಲೂ ಹೋಗುವ ಸಾಧ್ಯತೆ ಇರುವುದರಿಂದ ವಿಷಯಕ್ಕೆ ಬರುತ್ತೇನೆ.

ನನ್ನ ಸ್ನೇಹಿತರೊಬ್ಬರು ಜಿಲ್ಲಾ ಪತ್ರಿಕೆಯೊಂದನ್ನು ಮಾಡುತ್ತಿದ್ದರು. ಆ ಪತ್ರಿಕೆಯನ್ನು ನಿಲ್ಲಿಸಿ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌ ಆರಂಭಿಸುವ ಆಲೋಚನೆ ಅವರಿಗೆ ಬಂತು. ವೆಬ್‌ ಡಿಸೈನರ್‌ಗಳನ್ನು ಸಂಪರ್ಕಿಸಿದರು. ಆರಂಭದಲ್ಲಿ ಕಡಿಮೆ ಹಣದಿಂದ ಆರಂಭವಾಗಿ ನನಗೆ ವಿಷಯ ಗೊತ್ತಾಗುವ ವೇಳೆಗೆ (ಅವರು ವರ್ಡ್‌ ಪ್ರೆಸ್‌ ಮಾರ್ಗದರ್ಶಿ ಓದಿದ ಬಳಿಕ) ೫೦ ಸಾವಿರ ರೂ.ವರೆಗೆ ಖರ್ಚು ಮಾಡಿದ್ದರು. ಅವರಿಗೆ ಸುದ್ದಿಗಳನ್ನು ಅಪ್ಲೋಡ್‌ ಮಾಡುವುದು ಗೊತ್ತಿತ್ತು. ಬೇರೆ ಯಾವುದೇ ತಾಂತ್ರಿಕ ಅನುಭವ ಇರಲಿಲ್ಲ. ಪ್ರತಿಯೊಂದಕ್ಕೂ ವೆಬ್‌ ಡಿಸೈನರ್‌ಗಳನ್ನೇ ಅವಲಂಬಿಸಬೇಕಿತ್ತು. ಹೀಗಾಗಿ ನನ್ನ ಈ ಮಾರ್ಗದರ್ಶಿಯ ಮೊದಲ ಪಾಯಿಂಟ್…‌

೧. ಬೇಸಿಕ್‌ ಕಲಿತುಕೊಳ್ಳಿ‌

ನೀವು ಒಳ್ಳೆಯ ಬರಹಗಾರರಾಗಿರಬಹುದು. ಸುದ್ದಿ ಬರೆಯಲು ತಿಳಿದಿರಬಹುದು. ಆದರೆ, ನಿಮಗೆ ವೆಬ್‌ ಜಗತ್ತಿನ ಪರಿಚಯವಿದೆಯೇ? ಓಹ್‌, ಹೇಳಿಕೊಟ್ರೆ ನ್ಯೂಸ್‌ ಪಬ್ಲಿಸ್‌ ನಾನೇ ಮಾಡ್ತಿನಿ ಅನ್ನಬಹುದು. ಆದರೆ, ಇಷ್ಟು ಸಾಲದು. ಯಾವುದೇ ಉದ್ಯಮಕ್ಕೆ ಕಾಲಿಡುವ ಮೊದಲು ಬೇಸಿಕ್‌ ಕಲಿತುಕೊಳ್ಳಬೇಕು. ನೀವು ಸ್ವಂತ ನ್ಯೂಸ್‌ ಪೋರ್ಟಲ್‌ ಅಥವಾ ಇಕಾಮರ್ಸ್‌ ತಾಣ ಅಥವಾ ಸಾಮಾನ್ಯ ವೆಬ್‌ಸೈಟ್‌ ಹೊಂದುವ ಮೊದಲು ವೆಬ್‌ ಜಗತ್ತಿನ ಬೇಸಿಕ್‌ ಕಲಿತುಕೊಳ್ಳಿ. ಡೊಮೈನ್‌ ಎಲ್ಲಿ ಖರೀದಿಸಬಹುದು? ಎಲ್ಲಿಂದ ಹೋಸ್ಟಿಂಗ್‌ ಖರೀದಿಸಬೇಕು? ಕಡಿಮೆಗೆ ದೊರಕುತ್ತದೆ ಎಂದು ಎಲ್ಲೋ ಖರೀದಿಸಿದರೆ ಆಮೇಲೆ ನಿಮ್ಮ ವೆಬ್‌ ಸೈಟ್‌ ಸ್ಲೋ ಆಗುವುದು, ಪಲ್ಟಿ ಹೊಡೆಯುವುದು ಆಗಿ ನಿಮ್ಮ ವೆಬ್‌ ಸೈಟ್‌ ಕ್ಲಿಕ್‌ ಮಾಡುವುದನ್ನೇ ಜನರು ಬಿಡಬಹುದು.

ನಾ ಆಗಲೇ ಹೇಳಿದ ಸ್ನೇಹಿತ ಒಳ್ಳೆ ಬರಹಗಾರರು. ಆದರೆ, ಅವರಿಗೆ ತಾಂತ್ರಿಕ ಜ್ಞಾನ ಇರಲಿಲ್ಲ. ಹೀಗಾಗಿ ಸಾಕಷ್ಟು ಕಷ್ಟಪಟ್ಟರು. ನೀವು ಕನ್ನಡದಲ್ಲಿ ವೆಬ್‌ ಸೈಟ್‌ ನಿರ್ಮಿಸಲು ಉದ್ದೇಶಿಸಿದ್ದರೆ ಅಥವಾ ಈಗಾಗಲೇ ವೆಬ್‌ ಸೈಟ್‌ ನಿರ್ಮಿಸಿ ಮುಂದೇನು ಎಂದು ತೋಚದೆ ಕುಳಿತಿದ್ದರೆ ಈಗಲೇ ವೆಬ್‌ಸೈಟ್‌ ಜಗತ್ತಿನ ಬೇಸಿಕ್‌ ಕಲಿತುಕೊಳ್ಳಿ. ಡೊಮೈನ್‌ ಖರೀದಿಸುವುದು ಹೇಗೆ? ಹೇಗಿರಬೇಕು ಡೊಮೈನ್‌ ಹೆಸರು? ಹೋಸ್ಟಿಂಗ್‌ ಯಾವ ಪ್ಲ್ಯಾನ್‌ ಉತ್ತಮ? ಎಸ್‌ಇಒ, ಗೂಗಲ್‌ ಅನಾಲಿಟಿಕ್ಸ್‌ ಬಳಕೆ ಹೇಗೆ? ನೀವು ಬರೆದ ಲೇಖನವನ್ನು ಗೂಗಲ್‌, ಬಿಂಗ್‌ ಇತ್ಯಾದಿ ಸರ್ಚ್‌ ಎಂಜಿನ್‌ಗಳು ಪಿಕ್‌ ಮಾಡಿಕೊಳ್ಳುವುದು ಹೇಗೆ? ಹೀಗೆ ಸಾಕಷ್ಟು ಅಂಶಗಳನ್ನು ಕಲಿತುಕೊಳ್ಳಬೇಕು.

ಈಗಾಗಲೇ ವರ್ಡ್‌ಪ್ರೆಸ್‌ ಮೂಲಕ ವೆಬ್‌ಸೈಟ್‌ ರಚಿಸುವುದು ಹೇಗೆ ಎಂಬ ಸರಣಿ ಲೇಖನಗಳ ಮಾರ್ಗದರ್ಶಿಯನ್ನು ಕರ್ನಾಟಕ ಬೆಸ್ಟ್‌ ಪ್ರಕಟಿಸಿದೆ. ಆನ್‌ಲೈನ್‌ ಜಗತ್ತಿನಲ್ಲಿ ತಾಂತ್ರಿಕ ಪರಿಣತಿ ಇಲ್ಲದವರೂ ಹೇಗೆ ವೆಬ್‌ಸೈಟ್‌ ನಿರ್ಮಿಸಿಕೊಳ್ಳಬಹುದು ಎಂಬ ಮಾಹಿತಿಗಳನ್ನು ಒಳಗೊಂಡ ಸರಣಿ ಲೇಖನಗಳು ಅದರಲ್ಲಿವೆ.

೨. ಹೆಚ್ಚು ಹಣ ಖರ್ಚು ಮಾಡಬೇಡಿ.

ಸುದ್ದಿ ಪತ್ರಿಕೆಯಲ್ಲಿ ಅಥವಾ ಟೀವಿ, ರೇಡಿಯೋಗಳಲ್ಲಿ ಕೆಲಸ ಮಾಡುವವರಿಗೆ ಯಾವಾಗಲಾದರೂ ತಮ್ಮ ಕೆಲಸ ಅಸಹನೀಯ ಅನಿಸಬಹುದು. ಅಥವಾ ಕಂಪನಿಯೇ ಆ ಉದ್ಯೋಗಿಯನ್ನು ಕೆಲಸದಿಂದ ತೆಗೆಯಬಹುದು. ನ್ಯೂಸ್‌ ಅನುಭವ ಇರುವವರೇ ಆಗಬೇಕೆಂದಿಲ್ಲ. ಕೊಂಚ ಬರೆಯಲು ಬಲ್ಲವರಿಗೂ ಸ್ವಂತ ಆನ್‌ಲೈನ್‌ ಪತ್ರಿಕೆ ಮಾಡುವ ಮನಸ್ಸಾಗಬಹುದು. ಇಂತಹ ಸಮಯದಲ್ಲಿ ಆ ವ್ಯಕ್ತಿ “ನಾನೇ ಸ್ವಂತ ಆನ್‌ಲೈನ್‌ ಪೇಪರ್‌ ಮಾಡ್ತಿನಿʼʼ ಎಂಬ ಹುಮ್ಮಸ್ಸಿನಿಂದ ಹೊಸ ಕನ್ನಡ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌ ಆರಂಭಿಸಬಹುದು. ಆದರೆ, ದಿನ ಕಳೆದಂತೆ ಆ ಉತ್ಸಾಹ ತಗ್ಗುತ್ತ ಹೋಗುತ್ತದೆ. ಯಾಕೆಂದರೆ, ದಿನಕ್ಕೆ ಸಾವಿರಾರೂ ರೂಪಾಯಿ ಬಿಡಿ, ನೂರಾರು ರೂಪಾಯಿ ಆದಾಯ ತರುವುದು ಎಷ್ಟು ಕಷ್ಟ ಎಂಬ ಅರಿವು ಆಗುತ್ತದೆ. ಕಿಸೆ ಖಾಲಿಯಾಗುತ್ತ ಹೋದಂತೆ ಕನ್ನಡ ವೆಬ್‌ಸೈಟ್‌ ಎನ್ನುವುದು ಆನೆಯಂತೆ ಭಾಸವಾಗಬಹುದು.

ನಿಮ್ಮ ಸ್ವಂತ ಕನ್ನಡ ವೆಬ್‌ಸೈಟ್‌ ಕನಸು ನನಸಾಗಿಸಲು ಎಷ್ಟು ಹಣ ಹೂಡಿಕೆ ಮಾಡಲು ಸಿದ್ಧರಿದ್ದೀರಿ ಎಂದು ಯೋಚಿಸಿ. ಹಾಗಂತ, ೫೦ ಸಾವಿರ, ೧ ಲಕ್ಷ ರೂ. ಎಲ್ಲ ಆರಂಭದಲ್ಲಿಯೇ ಖರ್ಚು ಮಾಡಬೇಡಿ. ಮೊದಲು ನಿಮ್ಮ ವೆಬ್‌ಸೈಟ್‌ ಅನ್ನು ಪುಟ್ಟದಾಗಿ ಆರಂಭಿಸಿ. ಒಂದು ಹತ್ತು ಅಥವಾ ಇಪ್ಪತ್ತು ಸಾವಿರ ರೂ. ಖರ್ಚಿನಲ್ಲಿ ವೆಬ್‌ಸೈಟ್‌ ನಿರ್ಮಿಸಿಕೊಳ್ಳಿ. ನೀವು ಕಷ್ಟಪಟ್ಟು ದುಡಿದ ಹಣವನ್ನೆಲ್ಲ ವೆಬ್‌ಸೈಟ್‌ಗೆ ಸುರಿಯಬೇಡಿ. ನೀವು ಹಣ ನೀಡುತ್ತೀರಿ ಎಂದಾದರೆ ಕಸಿದುಕೊಳ್ಳಲು ಜನರು ಸಿದ್ಧರಾಗಿಯೇ ಇರುತ್ತಾರೆ. ಕಡಿಮೆ ಹಣದಲ್ಲಿ ವೆಬ್‌ಸೈಟ್‌ ರಚಿಸುವ ಕುರಿತು ನಾನು ಈಗಾಗಲೇ ಪ್ರತ್ಯೇಕ ಲೇಖನ ಬರೆದಿದ್ದೇನೆ. ಅದನ್ನು ಓದಬಹುದು. ವೆಬ್‌ಸೈಟ್‌ ನಿರ್ಮಾಣ ಎನ್ನುವುದು ಮನೆ ಕಟ್ಟಿದ್ದಂತಲ್ಲ. ಅದು ಗಿಡನೆಟ್ಟಂತೆ. ಈಗ ನನಗೆ ಹೊಳೆದ ಈ ವಿಶೇಷ ಗಾದೆಗೆ ವ್ಯಾಖ್ಯಾನ ಮುಂದೆ ನೀಡುತ್ತೇನೆ.

೩. ಆಫರ್‌ ನಂಬಿ ಮೋಸ ಹೋಗಬೇಡಿ

ಕನ್ನಡದಲ್ಲಿ ವೆಬ್‌ಸೈಟ್‌ ನಿರ್ಮಿಸಲು ನಾನು ನೀಡುವ ಮೂರನೇ ಸಲಹೆ ಇದು. ಯಾಕೆಂದರೆ, ೩ ಸಾವಿರ ರೂ.ಗೆ ವೆಬ್‌ಸೈಟ್‌ ನಿರ್ಮಿಸಿಕೊಡುತ್ತೇವೆ ಎಂಬ ಆಫರ್‌ಗಳು ನಿಮ್ಮನ್ನು ಮಾತ್ರವಲ್ಲ ಎಲ್ಲರನ್ನೂ ಸೆಳೆಯುತ್ತವೆ. ಯಾವುದೋ ಒಂದೆರಡು ಪುಟದ ಹೆಚ್ಚು ಕಂಟೆಂಟ್‌, ಫೋಟೊ ಇಲ್ಲದ ವೆಬ್‌ಸೈಟ್‌ ಆದರೆ ಓಕೆ. ನೀವು ಸುದ್ದಿ ಪೋರ್ಟಲ್‌, ಬ್ಲಾಗ್‌ , ಇ-ಕಾಮರ್ಸ್‌ ತಾಣ ಇತ್ಯಾದಿಗಳನ್ನು ನಿರ್ಮಿಸಲು ಉದ್ದೇಶಿಸಿದರೆ ಕಡಿಮೆ ದರದ ಆಫರ್‌ಗಳನ್ನು ಅನುಸರಿಸಬೇಡಿ. ಹೋಸ್ಟಿಂಗ್‌ ಕಂಪನಿಗಳು ನೀಡುವ ಆಫರ್‌ಗಳನ್ನು ಎಚ್ಚರಿಕೆಯಿಂದ ಗಮನಿಸಿ. ಹೆಚ್ಚಿನ ಆಫರ್‌ಗಳು ಮೊದಲ ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಎರಡನೇ ವರ್ಷ ದರ ಬೇರೆಯೇ ಇರುತ್ತದೆ. ನೀವು ಯಾವುದೋ ಹೋಸ್ಟಿಂಗ್‌ ಕಂಪನಿಯಿಂದ ಕಡಿಮೆ ದರಕ್ಕೆ ಹೋಸ್ಟಿಂಗ್‌ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ. ನಿಮ್ಮ ವೆಬ್‌ಸೈಟ್‌ಗೆ ೫೦ ಜನರು ಬಂದಾಗ ವೆಬ್‌ಸೈಟ್‌ ಸ್ಲೋ ಆದರೆ, ಆಗಾಗ ಪಲ್ಟಿ ಹೊಡೆದರೆ (ಡೌನ್‌ ಟೈಮ್‌) ಹೇಗಿರುತ್ತದೆ? ಈಗ ಹೆಚ್ಚು ವೇಗದಲ್ಲಿ ಲೋಡ್‌ ಆಗುವ ವೆಬ್‌ಸೈಟ್‌ಗಳಿಗೆ ಮಾತ್ರ ಜನರು ಪ್ರವೇಶಿಸುತ್ತಾರೆ.

೪. ಸರಳ ಸುಂದರಿಯಾಗಿರಲಿ

ಎರಡನೇ ಪಾಯಿಂಟ್‌ನಲ್ಲಿ ನಾನೊಂದು ಗಾದೆ ಸೃಷ್ಟಿಸಿದ್ದೆ. ವೆಬ್‌ಸೈಟ್‌ ನಿರ್ಮಾಣ ಎನ್ನುವುದು ಮನೆ ಕಟ್ಟಿದ್ದಂತಲ್ಲ. ಅದು ಗಿಡನೆಟ್ಟಂತೆ. ಮನೆ ಕಟ್ಟುವುದು ಎಂದರೆ ಒಂದು ಬಾರಿಯ ಹೂಡಿಕೆ. ಮನೆ ಚೆನ್ನಾಗಿರಬೇಕು ಎಂದು ಸಾಲ ಮಾಡಿಯಾದರೂ ಚೆನ್ನಾಗಿಯೇ ಕಟ್ಟಿಸುತ್ತೇವೆ. ಒಮ್ಮೆ ಮನೆ ಕಟ್ಟಿದ ನಂತರ ಅದಕ್ಕೆ ನಂತರ ಹೂಡಿಕೆ ಅಗತ್ಯವಿರುವುದಿಲ್ಲ. ಆದರೆ, ಗಿಡ ನೆಡುವುದು ಹೆಚ್ಚು ಹೂಡಿಕೆ ಬಯಸದ ಕೆಲಸ. ಒಳ್ಳೆಯ ಸ್ಥಳದಲ್ಲಿ ಜತನದಿಂದ ಬೀಜ ಹಾಕಿದರೆ ಅಥವಾ ಗಿಡ ನೆಟ್ಟರೆ ಆಯ್ತು. ಆ ಗಿಡವನ್ನು ಮುಂದೆ ಹೇಗೆ ನೋಡಿಕೊಳ್ಳುತ್ತೀರಿ ಎನ್ನುವ ಆಧಾರದಲ್ಲಿ ಆ ಗಿಡ ಆಕಾಶದತ್ತ ವ್ಯಾಪಿಸುತ್ತದೆ.

ನಾನು ಕೆಲವು ಕನ್ನಡ ವೆಬ್‌ಸೈಟ್‌ಗಳ ಆರಂಭವನ್ನು ಬೆರಗಿನಿಂದ ನೋಡಿದ್ದೇನೆ. ಆ ವೆಬ್‌ಸೈಟ್‌ ಅನ್ನು ಸುಂದರ ಮನೆ ಕಟ್ಟಿದಂತೆ ಕಟ್ಟಿರುತ್ತಿದ್ದರು. ಕಡಿಮೆಯೆಂದರೂ ಒಂದು ಲಕ್ಷ ಖರ್ಚು ಮಾಡಿ ಸುಂದರವಾದ ವೆಬ್‌ ಸೈಟ್‌ ನಿರ್ಮಿಸಿರುತ್ತಾರೆ. ನನ್ನ ವೆಬ್‌ಸೈಟ್‌ ಹಾಗಿರಬೇಕು, ಹೀಗಿರಬೇಕು ಎಂಬೆಲ್ಲ ಕನಸುಗಳನ್ನು ವೆಬ್‌ಡಿಸೈನರ್‌ಗಳು ಈಡೇರಿಸಿದ ಪರಿಣಾಮ ಇದು. ನಿಮ್ಮ ವೆಬ್‌ಸೈಟ್‌ಗೆ ಹೆಚ್ಚು ಮೇಕಪ್‌ ಮಾಡುವುದರಿಂದ ಉಪಯೋಗಕ್ಕಿಂತ ತೊಂದರೆಯೇ ಹೆಚ್ಚು. ಮೇಕಪ್‌ ಮಾಡುವುದೆಂದರೆ ವೆಬ್‌ಸೈಟ್‌ನೊಳಗೆ ಹೆಚ್ಚು ಹೆಚ್ಚು ಜಾವಸ್ಕ್ರಿಪ್ಟ್‌ಗಳನ್ನೋ, ಕೋಡ್‌ಗಳನ್ನು ತುಂಬಿಸುವುದಷ್ಟೇ. ಇದರಿಂದ ನಿಮ್ಮ ವೆಬ್‌ಸೈಟ್‌ನ ಪರ್ಫಾಮೆನ್ಸ್‌ ಡೌನ್‌ ಆಗುತ್ತದೆ. ಮುಂದಿನ ದಿನಗಳಲ್ಲಿ ಗೂಗಲ್‌ ಸಂಪೂರ್ಣವಾಗಿ ಎಎಂಪಿ (ಆಕ್ಸಿಲರೇಟೆಡ್‌ ಮೊಬೈಲ್‌ ಪೇಜಸ್‌)ಗೆ ಹೆಚ್ಚು ಗಮನ ನೀಡುತ್ತದೆ. ಅಲ್ಲಿ ನಿಮ್ಮ ಹೆಚ್ಚುವರಿ ಕೋಡ್‌ಗಳು ಕೆಲಸ ಮಾಡುವುದಿಲ್ಲ. ಸರಳವಾಗಿ ಒಂದೆರಡು ಸೆಕಂಡಿನಲ್ಲಿ ಲೋಡ್‌ ಆಗುವ ವೆಬ್‌ಸೈಟ್‌ಗಳಷ್ಟೇ ಉಳಿಯಬಹುದು. ಹೀಗಾಗಿ, ಮನೆಕಟ್ಟಿದಂತೆ ನಿಮ್ಮ ವೆಬ್‌ಸೈಟ್‌ನ ಮೇಲೆ ಹೆಚ್ಚು ಕಲ್ಲುಗಳನ್ನು ಇಡಬೇಡಿ.

೫. ನಿಮ್ಮ ಕಲ್ಪನೆಯಂತೆ ವೆಬ್‌ ಜಗತ್ತು ಇರುವುದಿಲ್ಲ

ನೀವು ಕನಸುಕಂಡಂತೆ, ನೀವು ಅಂದುಕೊಂಡಂತೆ ನಿಮ್ಮ ವೆಬ್‌ಸೈಟ್‌ ಇರುವುದಿಲ್ಲ. ನೀವು ಕಷ್ಟಪಟ್ಟು ಬರೆದ ಒಂದು ಲೇಖನಕ್ಕೆ ಹತ್ತು ಜನರೂ ಭೇಟಿ ನೀಡದೆ ಇರಬಹುದು. ನೀವು ಹಲವು ಸಾವಿರ ಖರ್ಚು ಮಾಡಿ ಆರಂಭಿಸಿದ ವೆಬ್‌ಸೈಟ್‌ಗೆ ದಿನಕ್ಕೆ ಇನ್ನೂರೂ ಜನರೂ ಬಾರದೆ ಇರಬಹುದು. ಅದಕ್ಕಾಗಿ ವೆಬ್‌ಜಗತ್ತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅದನ್ನು ಅರ್ಥ ಮಾಡಿಸುವ ಪ್ರಯತ್ನವೇ ಈ ಕರ್ನಾಟಕ ಬೆಸ್ಟ್‌ ಕನ್ನಡ ವೆಬ್‌ಸೈಟ್‌ ಗೈಡ್‌.

ಕರ್ನಾಟಕ ಬೆಸ್ಟ್‌ ವೆಬ್‌ಸೈಟ್‌ ಗೈಡ್ನಲ್ಲಿ ಪೂರ್ಣಗೊಂಡ ಲೇಖನಗಳು

ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಮುಂದಿನ ಅಧ್ಯಾಯದಲ್ಲಿ ಓದಲಿದ್ದೀರಿ.

ಕನ್ನಡ ವೆಬ್‌ಸೈಟ್‌ ಮಾರ್ಗದರ್ಶಿಯ ಮುಂದಿನ ಲೇಖನಗಳು (ಅಪ್ರಕಟಿತ)

  • ನಿಮ್ಮ ವೆಬ್‌ಸೈಟ್‌ನ ಕಮ್ಯುನಿಟಿ ರಚಿಸುವುದು ಹೇಗೆ?
  • ಕನ್ನಡ ವೆಬ್‌ಸೈಟ್‌ಗಳು ಹಣ ಗಳಿಸುವುದು ಹೇಗೆ?
  • ವೆಬ್‌ಸೈಟ್‌ ಜನರ ವಿಶ್ವಾಸರ್ಹತೆ ಗಳಿಸುವುದು ಹೇಗೆ?
  • ಕನ್ನಡ ವೆಬ್‌ಸೈಟ್‌ಗಳಲ್ಲಿ ಮಾಡಬಾರದ ತಪ್ಪುಗಳೇನು?
  • ಕನ್ನಡ ವೆಬ್‌ಸೈಟ್‌ಗಳ ಬಿಸ್ನೆಸ್‌ ಪ್ಲ್ಯಾನ್‌ ಹೇಗಿರಬೇಕು?
  • ಕನ್ನಡ ವೆಬ್‌ಸೈಟ್‌ಗಳ ಮುಂದಿರುವ ಸವಾಲುಗಳೇನು?

ಹೀಗೆ ಹತ್ತು ಹಲವು ಲೇಖನಗಳನ್ನು ಈ ಸರಣಿಯಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಬೆಸ್ಟ್.ಕಾಂನಲ್ಲಿ ಓದಲಿದ್ದೀರಿ.

Leave a Reply

Your email address will not be published. Required fields are marked *